ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರಲ್ಲ

ಹೆಚ್ಚೆಂದರೆ ದೇವೇಗೌಡರೂ ಹಿಂದಿನ ಕಾಂಗ್ರೆಸ್ ಸರಕಾರದ ಮೀಸಲಾತಿ ಸೂತ್ರವನ್ನೇ ತಿದ್ದುಪಡಿ ಮಾಡದೆ ಮುಂದುವರಿಸಿದರು ಎಂದು ಹೇಳಬಹುದು. ಹಾಗೆಯೇ ವೀರಪ್ಪ ಮೊಯ್ಲಿ ಸರಕಾರ ಚುನಾವಣಾ ಉದ್ದೇಶದಿಂದಲೇ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದರು ಎಂದು ಆರೋಪಿಸಬಹುದು. ಅದೇನೇ ಇದ್ದರೂ ೨-ಬಿ ಮೀಸಲಾತಿ ಕಲ್ಪಿಸಿದ್ದು ದೇವೇಗೌಡರು ಎಂಬುದು ನಿಜವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಂದು ದೇವೇಗೌಡರ ಪೂರ್ಣ ಆಶೀರ್ವಾದದೊಂದಿಗೆ ಜೆಡಿಎಸ್ ಪಕ್ಷ ಮುಸ್ಲಿಮ್ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಘೋಷಿಸಿರುವ ಬಿಜೆಪಿಯ ಜೊತೆ ಮಾಡಿಕೊಂಡಿರುವ ವ್ಯೆಹಾತ್ಮಕ ಮೈತ್ರಿ ಕುಮಾರಸ್ವಾಮಿಯವರ ಸಾಮಾಜಿಕ ನ್ಯಾಯದ ಕಾಳಜಿ ಎಷ್ಟು ಸೋಗಲಾಡಿತನದ್ದು ಎಂಬುದನ್ನು ಸಾಬೀತು ಮಾಡುತ್ತದೆ.

Update: 2024-06-26 05:48 GMT

PC: PTI

ಬಿಜೆಪಿಯ ಸಹವಾಸ ಹೆಚ್ಚಾದ ಮೇಲೆ ಜೆಡಿಎಸ್ ಮತ್ತು ಅದರ ಮುಖ್ಯಸ್ಥ ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಗಿಂತ ದುರಹಂಕಾರಿ, ಫ್ಯೂಡಲ್ ಮತ್ತು ಕೋಮುವಾದಿಯಾಗುತ್ತಿರುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಅದಕ್ಕೆ ದೊಡ್ಡ ಉದಾಹರಣೆ ಜೂನ್ 23ರಂದು ಅವರು ಚನ್ನಪಟ್ಟಣದಲ್ಲಿ ನೀಡಿರುವ ಹೇಳಿಕೆ. ಮುಸ್ಲಿಮರಿಗೆ ತಮ್ಮ ತಂದೆ ಹಾಗೂ ತಾನು ಮೀಸಲಾತಿ ಸೌಲಭ್ಯ ನೀಡಿದರೂ ತಮ್ಮ ಮಗನಿಗೆ ರಾಮನಗರ ಚುನಾವಣೆಯಲ್ಲಿ ಮೋಸ ಮಾಡಿದರು ಎಂದು ದೂರಿದ್ದಾರೆ.

ಇದು ಈಗ ದೇಶಾದ್ಯಂತ ಬಿಜೆಪಿಗರು ತಮ್ಮ ಸೋಲಿಗೆ ಮುಸ್ಲಿಮರನ್ನು ದೂರುತ್ತಿರುವ ಕೋಮುವಾದಿ ಹುನ್ನಾರದ ಭಾಗವೂ ಆಗಿದೆ. ಅಷ್ಟು ಮಾತ್ರವಲ್ಲ. ಒಬ್ಬ ಜನಪರ ರಾಜಕಾರಣಿಗೆ ಸೋಲು ಆತ್ಮವಿಮರ್ಶೆಗೆ ಮತ್ತು ಬದಲಾವಣೆಗೆ ಒಂದು ಅವಕಾಶವಾಗಬೇಕು. ಎಚ್‌ಡಿಕೆ ಮುಸ್ಲಿಮರು ಏಕೆ ತಮ್ಮ ಮೇಲೆ ವಿಶ್ವಾಸ ಇಡುತ್ತಿಲ್ಲ ಎಂದು ಪ್ರಾಮಾಣಿಕವಾಗಿ ಚಿಂತನೆಗೆ ಹಚ್ಚಬೇಕಿತ್ತು. ಅದರ ಬದಲಿಗೆ ರಾಮನಗರದ ಸೋಲು ಅವರನ್ನು ಮತ್ತು ಅವರ ಪಕ್ಷದ ಮೇಲ್‌ಸ್ತರದ ನಾಯಕಮಣಿಗಳಲ್ಲಿ ಅಂತರ್ಧಾರೆಯಾಗಿ ಹರಿಯುತ್ತಿದ್ದ ಬ್ರಾಹ್ಮಣವಾದಿ ಹಿಂದುತ್ವದ ಧಾರೆಯನ್ನು ಗಟ್ಟಿಗೊಳಿಸಿ ಅಂತಿಮವಾಗಿ ಬಿಜೆಪಿಯ ಜೊತೆ ಸಹಜ ಸೈದ್ಧಾಂತಿಕ ಮತ್ತು ರಾಜಕೀಯ ಮೈತ್ರಿ ಮಾಡಿಕೊಳ್ಳುವಂತೆ ಮಾಡಿದೆ.

ಕುಮಾರಸ್ವಾಮಿಯವರ ಹೇಳಿಕೆಯಲ್ಲಿ ಬಿಜೆಪಿಯ ರಾಜಕೀಯ ಮಾತ್ರವಲ್ಲ, ಬಿಜೆಪಿಯ ಸಂಸ್ಕೃತಿಯೂ ಎದ್ದು ಕಾಣುತ್ತದೆ. ಪ್ರಜಾತಂತ್ರದಲ್ಲಿ ಜನರಿಗೆ ಸಂವಿಧಾನದಲ್ಲಿ ಕಲ್ಪಿಸಿರುವ ಅವಕಾಶಗಳನ್ನು ದೊರಕಿಸುವುದು ಜನಪ್ರತಿನಿಧಿಗಳ ಸಾಂವಿಧಾನಿಕ ಕರ್ತವ್ಯ ಎಂಬ ನಮ್ರ ಪ್ರಜಾತಾಂತ್ರಿಕ ಸಂಸ್ಕೃತಿಯ ಬದಲಿಗೆ ಜನರು ತಮಗೆ ಋಣಿಯಾಗಿ, ಕೃತಜ್ಞರಾಗಿ ಇರಬೇಕೆಂಬ ಫ್ಯೂಡಲ್ ಧೋರಣೆಯೂ ಎದ್ದು ಕಾಣುತ್ತದೆ.

ಇದೆಲ್ಲದರ ಜೊತೆಗೆ ಈ ಹೇಳಿಕೆಯ ಮೂಲಕ ಅವರು ಮತ್ತೊಂದು ದೊಡ್ಡ ಸುಳ್ಳಿಗೆ ಮರುಜೀವ ಕೊಟ್ಟಿದ್ದಾರೆ. ಅದು ಇಂದು ಮುಸ್ಲಿಮರಿಗೆ ಸಾಮಾಜಿಕ ಹಿಂದುಳಿದಿರುವಿಕೆಯ ವರ್ಗೀಕರಣದಡಿ ನೀಡಲಾಗಿರುವ 2-ಬಿ ಮೀಸಲಾತಿಯನ್ನು ದೇವೇಗೌಡರು ಕೊಟ್ಟಿದ್ದು ಎಂಬ ಸುಳ್ಳು ಹಾಗೂ ಮಿಥ್ಯಕಥನ. ಇದನ್ನು ಯಾವುದೇ ಪುರಾವೆಯಿಲ್ಲದೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಹೇಳುತ್ತಾ ಹೋಗುತ್ತಿದ್ದಾರೆ. ಮಾಧ್ಯಮಗಳು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಪ್ರಕಟಿಸುತ್ತಾ ಹೋಗುತ್ತಿವೆ. ಇದರ ಜೊತೆಗೆ ಕರ್ನಾಟಕ ಮೂಲದ ಕೆಲವು ಬುದ್ಧಿಜೀವಿಗಳು ಕೂಡ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆೆ ತಮ್ಮ ಇಂಗ್ಲಿಷ್ ವ್ಯಾಖ್ಯಾನ ಹಾಗೂ ಪುಸ್ತಕಗಳಲ್ಲಿ ಈ ಮಿಥ್ಯಕಥನವನ್ನೇ ಪ್ರಚುರ ಪಡಿಸುತ್ತಿರುವುದರಿಂದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಮೀಸಲಾತಿ ಕಲ್ಪಿಸಿದ್ದು ದೇವೇಗೌಡರು ಎಂಬ ಮಿಥ್ಯೆ ಹೊಸ ರೆಕ್ಕೆಪುಕ್ಕಗಳನ್ನು ಪಡೆದುಕೊಂಡು ಹರಡುತ್ತಲೇ ಇದೆ.

ವಾಸ್ತವವಾಗಿ ಇಂದು ಮುಸ್ಲಿಮರಿಗೆ ಸಾಮಾಜಿಕವಾಗಿ ಹಿಂದುಳಿದ ವರ್ಗದ ಮೀಸಲಾತಿ ವರ್ಗೀಕರಣದಡಿ ಪ್ರವರ್ಗ 2-ಬಿ ಮೀಸಲಾತಿಯನ್ನು ನ್ಯಾ. ಚಿನ್ನಪ್ಪರೆಡ್ಡಿಯವರ ವರದಿಯನ್ನು ಆಧರಿಸಿ 1994ರಲ್ಲಿ ಸರಕಾರಿ ಆದೇಶದ ಮೂಲಕ ಕಲ್ಪಿಸಿದ್ದು ಆಗಿನ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರಕಾರವೇ ವಿನಾ 1995ರಲ್ಲಿ ಅಧಿಕಾರಕ್ಕೆ ಬಂದ ದೇವೇಗೌಡರ ನೇತೃತ್ವದ ಜನತಾದಳ ಸರಕಾರವಲ್ಲ. ಆಸಕ್ತರು ಆ ಆದೇಶವನ್ನು ಈ ಕೆಳಗಿನ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು:

https://kscbc.karnataka.gov.in/storage/pdf-files/GO No SWD 150 BCA 94 Dated 17 09 1994.pdf

ಹೆಚ್ಚೆಂದರೆ ದೇವೇಗೌಡರೂ ಹಿಂದಿನ ಕಾಂಗ್ರೆಸ್ ಸರಕಾರದ ಮೀಸಲಾತಿ ಸೂತ್ರವನ್ನೇ ತಿದ್ದುಪಡಿ ಮಾಡದೆ ಮುಂದುವರಿಸಿದರು ಎಂದು ಹೇಳಬಹುದು. ಹಾಗೆಯೇ ವೀರಪ್ಪ ಮೊಯ್ಲಿ ಸರಕಾರ ಚುನಾವಣಾ ಉದ್ದೇಶದಿಂದಲೇ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದರು ಎಂದು ಆರೋಪಿಸಬಹುದು. ಅದೇನೇ ಇದ್ದರೂ 2-ಬಿ ಮೀಸಲಾತಿ ಕಲ್ಪಿಸಿದ್ದು ದೇವೇಗೌಡರು ಎಂಬುದು ನಿಜವಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಂದು ದೇವೇಗೌಡರ ಪೂರ್ಣ ಆಶೀರ್ವಾದದೊಂದಿಗೆ ಜೆಡಿಎಸ್ ಪಕ್ಷ ಮುಸ್ಲಿಮ್ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಘೋಷಿಸಿರುವ ಬಿಜೆಪಿಯ ಜೊತೆ ಮಾಡಿಕೊಂಡಿರುವ ವ್ಯೆಹಾತ್ಮಕ ಮೈತ್ರಿ ಅವರ ಸಾಮಾಜಿಕ ನ್ಯಾಯದ ಕಾಳಜಿ ಎಷ್ಟು ಸೋಗಲಾಡಿತನದ್ದು ಎಂಬುದನ್ನು ಸಾಬೀತು ಮಾಡುತ್ತದೆ.

ಆದ್ದರಿಂದ ಈ ಕುಮಾರಸ್ವಾಮಿಯವರ ತಪ್ಪು ಹೇಳಿಕೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ದೇವೇಗೌಡರು ರಾಜಕೀಯಕ್ಕೆ ಕಾಲಿಡುವ ಮುಂಚಿನಿಂದಲೂ ಈ ನಾಡಿನಲ್ಲಿ ಸಾಮಾಜಿಕ ನ್ಯಾಯದ ಭಾಗವಾಗಿ ಒದಗಿಸುತ್ತಿದ್ದ ಮುಸ್ಲಿಮ್ ಮೀಸಲಾತಿಯ ಇತಿಹಾಸವನ್ನು, ಸ್ವಾತಂತ್ರ್ಯ ನಂತರದಲ್ಲಿ ಕರ್ನಾಟಕದಲ್ಲಿ ಮುಸ್ಲಿಮ್ ಮೀಸಲಾತಿ ಹಿನ್ನೆಲೆ ಮತ್ತು ಅದರ ಸಾಂವಿಧಾನಿಕ ನೆಲೆಯನ್ನೂ ಹಾಗೂ ಅಂತಿಮವಾಗಿ ಇಂದು ಮುಸ್ಲಿಮರಿಗೆ ಸಾಂವಿಧಾನಿಕವಾಗಿ ನೀಡಲಾಗುತ್ತಿರುವ 2-ಬಿ ಮೀಸಲಾತಿಯ ನಿರ್ಣಯಗಳನ್ನು ಗಮನಿಸೋಣ. ಈ ಮೂಲಕವಾದರೂ ಮುಸ್ಲಿಮರ ಮೀಸಲಾತಿಗೆ ದೇವೇಗೌಡರೇ ಕಾರಣವೆಂಬ ಮಿಥ್ಯಾಕಥನವು ನಿಲ್ಲಲಿ.

ಮುಸ್ಲಿಮರು ಹಿಂದುಳಿದ ವರ್ಗಗಳ ಭಾಗ

ಮೊದಲನೆಯದಾಗಿ ಮುಸ್ಲಿಮರನ್ನು ಇಡೀ ಸಮುದಾಯವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಕೂಡ ಈಗಲೂ ‘Other Backward Classes- ಇತರ ಹಿಂದುಳಿದ ವರ್ಗ’ಗಳ ಭಾಗವಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲೂ ಈಗಲೂ 20 ರಾಜ್ಯಗಳ ವಿವಿಧ ಮುಸ್ಲಿಮ್ ಸಮುದಾಯಗಳು ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ. 2013ರಲ್ಲಿ ಕರ್ನಾಟಕದ ಬಿಜೆಪಿಯ ಸದಾನಂದ ಗೌಡ ಸರಕಾರವು ಮುಸ್ಲಿಮರ ಒಂಭತ್ತು ಉಪ ಪಂಗಡಗಳನ್ನು ಬಿಟ್ಟು ಉಳಿದೆಲ್ಲಾ ಮುಸ್ಲಿಮರನ್ನು ಕೇಂದ್ರದ ಒಬಿಸಿ ಮೀಸಲಾತಿ ಒದಗಿಸುವಾಗ ‘ಹಿಂದುಳಿದ ವರ್ಗಗಳೆಂದೇ’ ಪರಿಗಣಿಸಬೇಕೆಂದು ಆದೇಶಿಸಿತ್ತು.

ಏಕೆಂದರೆ ಸಂವಿಧಾನದ ಆರ್ಟಿಕಲ್ 15 (4) ಮತ್ತು 16(4)ರ ಪ್ರಕಾರ ಪ್ರಭುತ್ವವು ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಿ ಅವರ ಏಳಿಗೆಗೆ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸರಕಾರಗಳು ಸಮಾಜದಲ್ಲಿ ಈ ಬಗೆಯ ಹಿಂದುಳಿದಿರುವಿಕೆಗೆ ಬಲಿಯಾಗಿರುವ ಯಾವುದೇ ವರ್ಗಗಳು, ಅವರು ಯಾವುದೇ ಧರ್ಮ, ಸಮುದಾಯ, ಜಾತಿಗಳಿಗೆ ಸೇರಿದ್ದರೂ, ಪತ್ತೆ ಹಚ್ಚಿ ಅವರಿಗೆ ಮೀಸಲಾತಿ ಕಲ್ಪಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಯಾವುದೇ ಸರಕಾರ ಈ ಕಾರಣಗಳಿಗಾಗಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲೇ ಬೇಕು. ಅದಕ್ಕೆ ಧರ್ಮದ ಅಡ್ಡಗೋಡೆಯಿಲ್ಲ.

ಕರ್ನಾಟಕದಲ್ಲಿ ಮುಸ್ಲಿಮ್ ಮೀಸಲಾತಿಯ ಇತಿಹಾಸ

ಹಾಗೆ ನೋಡಿದರೆ ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1918ರ ಮಿಲ್ಲರ್ ಸಮಿತಿಯಿಂದ ಮೊದಲುಗೊಂಡು, 1960ರ ನಾಗನಗೌಡ ಸಮಿತಿ, 1977ರ ದೇವರಾಜ ಅರಸು ಸರಕಾರದ ಮೀಸಲಾತಿ ಸೂತ್ರ, 1986ರ ವೆಂಕಟಸ್ವಾಮಿ ಆಯೋಗದ ವರದಿ ಮತ್ತು 1990ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ಮೂರನೇ ಹಿಂದುಳಿದ ಆಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ಞಾನಿಕ ಅಧ್ಯಯನ ಹಾಗೂ ದತ್ತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಮ್ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ.

1974ರಲ್ಲಿ ಹಾವನೂರ್ ನೇತೃತ್ವದ ಮೊದಲ ಹಿಂದುಳಿದ ವರ್ಗಗಳ ಆಯೋಗ ಲಿಂಗಾಯತರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಸಾಮಾಜಿಕವಾಗಿ ಹಿಂದುಳಿದಿದ್ದರೂ ಹಿಂದೂ ಜಾತಿ ಶ್ರೇಣೀಕರಣದ ಭಾಗವಲ್ಲ ಎಂಬ ಕಾರಣಕ್ಕೆ ಮೀಸಲಾತಿಯನ್ನು ಒದಗಿಸಿರಲಿಲ್ಲ. ಹಾಗಿದ್ದರೂ ದೇವರಾಜ ಅರಸು ಸರಕಾರ ಆ ಸಮುದಾಯಗಳಿಗೆ ಮೀಸಲಾತಿ ಒದಗಿಸಿತು. ಸರಕಾರದ ಈ ನಿರ್ಧಾರವನ್ನು ಕೂಡಲೇ ಕರ್ನಾಟಕದ ಹೈಕೋರ್ಟಿನಲ್ಲಿ ಕೆಲವರು ಪ್ರಶ್ನಿಸಿದರು.

1977ರ ಕರ್ನಾಟಕದ ಹೈಕೋರ್ಟ್ ತೀರ್ಪು:

ಇದನ್ನು ಕರ್ನಾಟಕದ ಹೈಕೋರ್ಟಿನ ವಿಭಾಗೀಯ ಪೀಠ 1979ರ ಎಪ್ರಿಲ್ 9 ರಂದು WP 4371/77 ಪ್ರಕರಣದಲ್ಲಿ ಇತ್ಯರ್ಥ ಮಾಡುತ್ತಾ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ:

‘‘.. So far as the Muslims are concerned, the commission was unwise in excluding them from the list of Backward Classes solely on the ground that they belong to a religious minority. The Commission has however found that the Muslims are socially and educationally backward and also do not have adequate representation in the service . The fact that they are religious minority is no ground to exclude them from the list of backward classes . The government in our opinion was perfectly justified in listing the Muslims in the list of Backward classes’’

(ಮುಸ್ಲಿಮರ ಕುರಿತಾಗಿ ಹೇಳಬೇಕೆಂದರೆ ಮುಸ್ಲಿಮರು ಧಾರ್ಮಿಕ ಅಲ್ಪ ಸಂಖ್ಯಾತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಹಿಂದುಳಿದ ವರ್ಗಗಳಿಂದ ಆಯೋಗವು ಹೊರಗಿಟ್ಟಿದ್ದು ಸಮಂಜಸವಾದ ಕ್ರಮವಲ್ಲ. ಅದೇನೇ ಇದ್ದರೂ ಆಯೋಗವು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರಕಾರಿ ಸೇವೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎಂಬುದನ್ನು ಗುರುತಿಸಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಕಾರಣವೇ ಅಲ್ಲ. ಆದ್ದರಿಂದ ಸರಕಾರವು ಮುಸ್ಲಿಮರನ್ನು ಮತ್ತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಸರಿಯಾದುದನ್ನೇ ಮಾಡಿದೆ ಎಂದು ನಾವು ಪರಿಗಣಿಸುತ್ತೇವೆ.)

ಇದನ್ನು ಅಪೀಲುದಾರರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಕೂಡ ೧೯೮೫ರಲ್ಲಿ ಮುಸ್ಲಿಮರು ಒಂದು ಸಮುದಾಯವಾಗಿಯೇ ಹಿಂದುಳಿದಿದ್ದಾರೆ ಎಂದು ಕಂಡುಬಂದಲ್ಲಿ ಇಡೀ ಸಮುದಾಯವೇ ಮೀಸಲಾತಿಗೆ ಅರ್ಹ ಎಂದು ಘೋಷಿಸಿತು. ಆದರೆ ಕರ್ನಾಟಕ ಸರಕಾರ ಈ ಮಧ್ಯೆ ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ಎರಡನೇ ಹಿಂದುಳಿದ ಆಯೋಗವನ್ನು ರಚಿಸುವ ತೀರ್ಮಾನ ತಿಳಿಸಿತು. ವೆಂಕಟಸ್ವಾಮಿ ಕಮಿಷನ್ ಸಹ ಮುಸ್ಲಿಮರು ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಮತ್ತು ಮೀಸಲಾತಿಗೆ ಅರ್ಹ ಎಂದು ಘೋಷಿಸಿತು.

ಹಾಗೆಯೇ 1992ರಲ್ಲಿ ಮಂಡಲ್ ವರದಿಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಒಂಭತ್ತು ನ್ಯಾಯಾಧೀಶರ ಪೀಠವು ಇಂದ್ರಾ ಸಹಾನಿ ಪ್ರಕರಣದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿಸ್ಸಂದಿಗ್ಧವಾಗಿ ಹೀಗೆ ಸ್ಪಷ್ಟಪಡಿಸಿದೆ:

“This inadequate representation is not confined to any specific section of the people, but all those who fall under the group of social backwardness whether they are Shudras of Hindu community or similarly situated other backward classes of people in other communities, namely, Muslims, Sikhs, Christians etc.’’

(https://indiankanoon.org/doc/1363234/)

(ಸರಕಾರಿ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೋ ಒಂದು ಜನವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ. ಅವರು ಹಿಂದೂಗಳೊಳಗಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು ಅಥವಾ ಅದೇ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಮ್, ಸಿಖ್ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ)

ಹೀಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದರೆ ಅವರಿಗೆ ಒಬಿಸಿ ಮೀಸಲಾತಿ ನೀಡಬೇಕಾದ್ದು ಸರಕಾರದ ಸಾಂವಿಧಾನಿಕ ಕರ್ತವ್ಯ. ಅದನ್ನು ಧರ್ಮದ ಆಧಾರದಲ್ಲಿ ನಿರಾಕರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂಬುದು ನ್ಯಾಯಾಲಯದ ಅತ್ಯುನ್ನತ ಹಂತಗಳಲ್ಲಿ ಇತ್ಯರ್ಥವಾಗಿದೆ. ಅದು ದೇವೇಗೌಡರ ಕೊಡುಗೆ ಎಂದು ಪ್ರಚಾರ ಮಾಡುವುದು ನ್ಯಾಯಾಲಯದ ಅಪಮಾನವಾಗುತ್ತದೆ.

ಈ ಎಲ್ಲಾ ಹಿನ್ನೆಲೆಯಲ್ಲಿ 1988ರಲ್ಲಿ ಆಗಿನ ಜನತಾ ಪಕ್ಷದ ಕರ್ನಾಟಕ ಸರಕಾರ ನ್ಯಾ. ಚಿನ್ನಪ್ಪರೆಡ್ಡಿ ಅವರ ನೇತೃತ್ವದಲ್ಲಿ ಮೂರನೇ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಿಸಿತು. ಇಂದು ಮುಸ್ಲಿಮರಿಗೆ ನೀಡಲಾಗುತ್ತಿರುವ 2-ಬಿ ವರ್ಗೀಕರಣದ ಮೀಸಲಾತಿ ಈ ವೈಜ್ಞಾನಿಕ ವರದಿಯನ್ನು ಆಧರಿಸಿದ್ದು.

ಇದನ್ನು ಯಾರು ಜಾರಿಗೆ ತಂದಿದ್ದು ಎಂಬುದನ್ನು ತಿಳಿಯುವ ಮುನ್ನ ಮುಸ್ಲಿಮ್ ಸಮುದಾಯವು ಏಕೆ ಮತ್ತು ಹೇಗೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಅರ್ಹವಾಗುತ್ತದೆ ಎಂಬ ಬಗ್ಗೆ ನ್ಯಾ. ಚಿನ್ನಪ್ಪರೆಡ್ಡಿಯವರ ವೈಜ್ಞಾನಿಕ ವರದಿಯ ಸಾರಾಂಶವನ್ನೊಮ್ಮೆ ಗಮನಿಸೋಣ

ನ್ಯಾ. ಚಿನ್ನಪ್ಪರೆಡ್ಡಿ ವರದಿ

ಕರ್ನಾಟಕ ಸರಕಾರವು ಮೂರನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನ್ಯಾ. ಚಿನ್ನಪ್ಪರೆಡ್ಡಿಯವರನ್ನು ನೇಮಿಸಿ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಗೆ ಅರ್ಹವಾಗಿರುವ ವರ್ಗಗಳನ್ನು ಗುರುತಿಸಿ ಅವರಿಗೆ ಯಾವ ಬಗೆಯ ಮೀಸಲಾತಿಯನ್ನು ಕಲ್ಪಿಸಬೇಕೆಂದು ಶಿಫಾರಸು ಮಾಡಲು ಕೋರಿಕೊಂಡಿತ್ತು. ನ್ಯಾ. ಚಿನ್ನಪ್ಪರೆಡ್ಡಿಯವರು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದು ‘ವಸಂತ್ ಕುಮಾರ್ ವರ್ಸಸ್ ಕರ್ನಾಟಕ ಸರಕಾರ’ ಪ್ರಕರಣದಲ್ಲಿ ದೇವರಾಜ ಅರಸು ಸರಕಾರದ ಮೀಸಲಾತಿ ಸೂತ್ರವನ್ನು ಪರಿಶೀಲಿಸಿದ ಸಾಂವಿಧಾನಿಕ ಪೀಠದಲ್ಲಿ ಒಬ್ಬರಾಗಿದ್ದರು. ಹಾಗೆಯೇ ದೇಶದಲ್ಲಿ ಹಿಂದುಳಿದ ವರ್ಗಗಳನ್ನು ಪತ್ತೆ ಹಚ್ಚುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಒದಗಿಸಿದವರಲ್ಲಿ ಒಬ್ಬರಾಗಿದ್ದರು. ೧೯೮೮ರಲ್ಲಿ ತನ್ನ ಅಧ್ಯಯನವನ್ನು ಪ್ರಾರಂಭಿಸಿದ ನ್ಯಾ. ಚಿನ್ನಪ್ಪರೆಡ್ಡಿ ಆಯೋಗವು ಎರಡು ವರ್ಷಗಳ ಕಾಲ ವಿಸ್ತೃತವಾದ ಅಂಕಿಅಂಶಗಳನ್ನು ಸಂಗ್ರಹಿಸಿತು. ೫೪೩ ಹಳ್ಳಿಗಳಲ್ಲಿ ಪ್ರತ್ಯಕ್ಷ ಸರ್ವೇ ಅಧ್ಯಯನ ನಡೆಸಿತು ಹಾಗೂ ಜಾತಿವಾರು ಜನಸಂಖ್ಯೆ, SSLC ಪರೀಕ್ಷೆಯನ್ನು ತೆಗೆದುಕೊಂಡವರ ಮತ್ತು ಪಾಸಾದವರ ಜಾತಿವಾರು, ಸಮುದಾಯವಾರು ಮಾಹಿತಿ, ಉನ್ನತ ಶಿಕ್ಷಣಕ್ಕೆ ಹೋದವರ ಜಾತಿ-ಸಮುದಾಯವಾರು ಮಾಹಿತಿ, ಆದಾಯ ಮಾಹಿತಿ, ಸರಕಾರಿ ಸೇವೆಗಳಲ್ಲಿ ಜಾತಿವಾರು-ಸಮುದಾಯವಾರು ಪ್ರಾತಿನಿಧ್ಯ ಇತ್ಯಾದಿಗಳ ಬಗ್ಗೆ ಕೂಲಂಕಷ ಮಾಹಿತಿಯನ್ನು ಒಟ್ಟು ಮಾಡಿತು.

ಭಾರತೀಯ ಸಮಾಜದಲ್ಲಿ ‘ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಡತನಕ್ಕೆ ದೂಡಲ್ಪಟ್ಟಿರುವುದು ಹಾಗೂ ಅಧಿಕಾರ-ಸಂಪತ್ತುಗಳ ನಿರಾಕರಣೆಯು’ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣ ಎಂದು ಚಿನ್ನಪ್ಪರೆಡ್ಡಿ ಆಯೋಗವು ಪರಿಗಣಿಸಿತು ಮತ್ತು ಈ ಹಿಂದುಳಿದಿರುವಿಕೆಯು ಜ್ಞಾನ ಮತ್ತು ಸಂಪತ್ತಿನ ಸಾಪೇಕ್ಷ ಕೊರತೆಯಲ್ಲಿ ವ್ಯಕ್ತವಾಗುತ್ತದೆ. ಇವೆಲ್ಲಕ್ಕೂ ಬಡತನ ಕಾರಣವಾಗಿದ್ದರೆ ಜಾತಿಯು ಅದರ ಮುಖವಾಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News