ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರಲ್ಲ

Update: 2024-06-27 05:13 GMT

PC: PTI

ಜಾತಿ ಶ್ರೇಣೀಕರಣದಲ್ಲಿ ಕೆಳಗಿದ್ದಷ್ಟು ಜ್ಞಾನ ಮತ್ತು ಸಂಪತ್ತಿನಿಂದ ದೂರವಾಗುತ್ತಾ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯುತ್ತಾ ಹೋಗುವುದು ಭಾರತ ಸಮಾಜದ ನಿರ್ದಿಷ್ಟ ಲಕ್ಷಣ ಎಂದು ಚಿನ್ನಪ್ಪ ರೆಡ್ಡಿ ಆಯೋಗವು ಪರಿಗಣಿಸಿತು.

ಈ ಹಿಂದುಳಿದಿರುವಿಕೆಯನ್ನು ಅಳೆಯಲು ಪ್ರಧಾನವಾಗಿ ಮೂರು ಮಾನದಂಡಗಳನ್ನು ರೂಪಿಸಿತು ಮತ್ತು ಅದರ ಸುತ್ತ ಕ್ಷೇತ್ರ ಅಧ್ಯಯನ ಹಾಗೂ ಅಂಕಿಅಂಶಗಳನ್ನು ಸಂಗ್ರಹಿಸಿತು. 1) SSಐಅ ಪರೀಕ್ಷೆಯನ್ನು ತೆಗೆದುಕೊಂಡವರ ರಾಜ್ಯದ ಜನಸಂಖ್ಯೆಯ ಸರಾಸರಿಗೆ ಮತ್ತು ಪಾಸಾದವರ ಸರಾಸರಿಗೆ ಅಯಾ ಜಾತಿ ಮತ್ತು ಸಮುದಾಯಗಳ ಸರಾಸರಿಯನ್ನು ಹೋಲಿಸುವುದು, 2) ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರ ಜಾತಿವಾರು ಸರಾಸರಿ, 3) ಸರಕಾರದ ಎ,ಬಿ,ಸಿ,ಡಿ ಶ್ರೇಣಿಗಳ ಉದ್ಯೋಗಗಳಲ್ಲಿ, ಸರಕಾರಿ ಕಾರ್ಖಾನೆ, ವಿಶ್ವವಿದ್ಯಾನಿಲಯಗಳ ನೌಕರರ ಜಾತಿವಾರು ಪ್ರಮಾಣದ ಅಂಕಿಅಂಶ ..ಇತ್ಯಾದಿಗಳು. ಇವೆಲ್ಲದರ ಬಗ್ಗೆ ಅಧ್ಯಯನ ಮಾಡುವಾಗಲೂ ಹಿಂದೂ ಸಮುದಾಯದ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸುವುದರ ಜೊತೆಗೆ ಹಿಂದೂಯೇತರ ಸಮುದಾಯಗಳಾದ ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್ ಸಮುದಾಯಗಳ ಅಂಕಿಅಂಶಗಳನ್ನು ಆಯೋಗವು ಸಂಗ್ರಹಿಸಿತು. ಇವೆಲ್ಲಕ್ಕೂ 1988ರ ಅಂಕಿಅಂಶಗಳನ್ನು ಬಳಸಿಕೊಂಡಿತು.

ಈ ಅಂಕಿಅಂಶಗಳು : ‘JUSTICE: Journey Of The Karnataka Backward Classes’ ಎಂಬ ಶೀರ್ಷಿಕೆಯ ‘Report of the Karnataka Third Backward Classes Commission-Vol-1’ರಲ್ಲಿ ವಿಷದವಾಗಿ ದಾಖಲಾಗಿದೆ.

ಚಿನ್ನಪ್ಪರೆಡ್ಡಿ ಆಯೋಗವು ಮೇಲಿನ ಮೂರೂ ಪ್ರಶ್ನೆಗಳ ಸುತ್ತ ಕರ್ನಾಟಕದ 102 ಜಾತಿ ಮತ್ತು ಸಮುದಾಯಗಳಿಗೆ ಸಂಬಂಧಪಟ್ಟ ಅಂಕಿಅಂಶಗಳನ್ನೂ ಪ್ರತ್ಯೇಕವಾಗಿ ಸಂಗ್ರಹಿಸಿ ನಂತರ ಅವುಗಳನ್ನು ಸಾಪೇಕ್ಷ ತುಲನೆ ಮಾಡಿ ಹಿಂದುಳಿದಿರುವಿಕೆಯ ದೂರವನ್ನು ನಿಶ್ಚಿತಗೊಳಿಸಿ ತಲಾವಾರು ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿತು.

ಆದರೆ ಈ ಲೇಖನದಲ್ಲಿ ಅವೆಲ್ಲದರ ವಿವರಗಳನ್ನು ಚರ್ಚಿಸಿಲ್ಲ. ಬದಲಿಗೆ ಈ ಎಲ್ಲಾ ಮಾನದಂಡಗಳಲ್ಲಿ ಸಮಾಜದಲ್ಲಿ ಅತ್ಯಂತ ಮುಂದುವರಿದ ಸಮುದಾಯವಾಗಿರುವ ಬ್ರಾಹ್ಮಣ ಜಾತಿಯ ಅಂಕಿಅಂಶಗಳನ್ನು ಹಾಗೂ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಪರಿಶಿಷ್ಟ ಜಾತಿಗಳ ಅಂಕಿಅಂಶಗಳನ್ನು ಒದಗಿಸಲಾಗಿದೆ ಮತ್ತು ಅದರ ಹೋಲಿಕೆಯಲ್ಲಿ ಮುಸ್ಲಿಮ್ ಸಮುದಾಯದ ಸಂಬಂಧಪಟ್ಟ ಅಂಕಿಅಂಶಗಳನ್ನು ನೀಡಲಾಗಿದೆ. ಮುಸ್ಲಿಮರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸರಿಯಾಗಿ ಗ್ರಹಿಸುವಲ್ಲಿ ಇದು ಒಂದು ಉತ್ತಮ ಸಾಧನವಾಗಬಹುದು ಎಂದು ನಾನು ಭಾವಿಸುತ್ತೇನೆ.

ಶೈಕ್ಷಣಿಕ ಹಿಂದುಳಿದಿರುವಿಕೆ

ಕರ್ನಾಟಕದ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಮಾತ್ರವಲ್ಲದೆ ಒಟ್ಟಾರೆ ಸಾಮಾಜಿಕ ಹಿಂದುಳಿದಿರುವಿಕೆಯ ಪ್ರಮಾಣವನ್ನು ಅಂದಾಜು ಮಾಡಲು ಚಿನ್ನಪ್ಪರೆಡ್ಡಿ ಆಯೋಗವು ರಾಜ್ಯದ ಜನಸಖ್ಯೆಯಲ್ಲಿ 1988 ರಲ್ಲಿ ಒಟ್ಟಾರೆಯಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಮತ್ತು ಪ್ರತೀ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಹೋಲಿಸುತ್ತದೆ. ಹಾಗೆಯೇ ಪಾಸಾದವರ ಪ್ರಮಾಣವನ್ನು ಹೋಲಿಸಿದರೂ ತೇರ್ಗಡೆಯಾಗಲು ಜಾತಿಯೊಳಗಿನ ವ್ಯಕ್ತಿಗಳ ಸಾಮರ್ಥ್ಯವೂ ಒಂದು ಪಾತ್ರ ವಹಿಸುವುದರಿಂದ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ಪ್ರಮಾಣವು ಅತ್ಯಂತ ಕೀಲಕವಾದದ್ದು ಎಂದು ಪರಿಗಣಿಸುತ್ತದೆ. ಆನಂತರದ ಉನ್ನತ ಶಿಕ್ಷಣ, ಅದರಿಂದ ಸಿಗುವ ಉದ್ಯೋಗಾವಕಾಶ ಎಲ್ಲಕ್ಕೂ ಎಸೆಸೆಲ್ಸಿ ಪರೀಕ್ಷೆ ಪ್ರಮುಖ ಹಂತವಾಗಿರುವುದರಿಂದ ಅದನ್ನು ಅತ್ಯಂತ ಪ್ರಮುಖ ಮಾನದಂಡವಾಗಿ ಚಿನ್ನಪ್ಪರೆಡ್ಡಿ ಆಯೋಗ ಪರಿಗಣಿಸುತ್ತದೆ.

1988ರಲ್ಲಿ ಕರ್ನಾಟಕದ ಜನಸಂಖ್ಯೆ 4.4 ಕೋಟಿ ಎಂದು ಆಯೋಗ ವೈಜ್ಞಾನಿಕವಾಗಿ ಅಂದಾಜಿಸುತ್ತದೆ. ಅಲ್ಲದೆ ವೆಂಕಟಸ್ವಾಮಿ ಆಯೋಗವು 1984-86ರಲ್ಲಿ 60 ಲಕ್ಷ ಮನೆಗಳಿಗೆ ಭೇಟಿ ನೀಡಿ 1931ರ ಕೊನೆಯ ಜಾತಿ ಸೆನ್ಸಸ್ ಅನ್ನು ಗಮನದಲ್ಲಿಟ್ಟುಕೊಂಡು ಮುಂದಿರಿಸಿದ ಜಾತಿವಾರು ಜನಸಂಖ್ಯೆಯ ಅಂದಾಜನ್ನು ಸರಕಾರವು ಒಪ್ಪಿಕೊಂಡಿತ್ತು. ಚಿನ್ನಪ್ಪರೆಡ್ಡಿ ಆಯೋಗವು ಆ ಅಂದಾಜನ್ನು ಒಪ್ಪಿಕೊಳ್ಳುತ್ತದೆ. ಅದರಂತೆ 1988ರ ವೇಳೆಗೆ ಬ್ರಾಹ್ಮಣರು ಕರ್ನಾಟಕದ ಜನಸಂಖ್ಯೆಯ ಶೇ. 3.4ರಷ್ಟು (15.23 ಲಕ್ಷ), ಪರಿಶಿಷ್ಟ ಜಾತಿ -ಶೇ. 16.7 (73.7 ಲಕ್ಷ) ಮತ್ತು ಮುಸ್ಲಿಮರು ಕರ್ನಾಟಕದ ಜನಸಂಖ್ಯೆಯ ಶೇ. 11.67ರಷ್ಟು (51.47 ಲಕ್ಷ) ಇದ್ದರೆಂದು ಆಯೋಗವು ಅಂದಾಜಿಸುತ್ತದೆ.

1988ರಲ್ಲಿ ಕರ್ನಾಟಕದಲ್ಲಿ ಒಟ್ಟು 3.4 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದರು. ಅರ್ಥಾತ್ ಎಸೆಸೆಲ್ಸಿ ವರೆಗೆ ತಲುಪಿದರು. ಇದು ಕರ್ನಾಟಕದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.0.77ರಷ್ಟು. ಇದರಲ್ಲಿ 1,34,160 ವಿದ್ಯಾರ್ಥಿಗಳು ತೇರ್ಗಡೆಯಾದರು. ಎಂದರೆ ಶೇ. 0.39ರಷ್ಟು. ಇವು ರಾಜ್ಯದ ಒಟ್ಟಾರೆ ಸರಾಸರಿ.

ಯಾವ ಜಾತಿಗಳ ಸರಾಸರಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದ ರಾಜ್ಯದ ಸರಾಸರಿಯನ್ನು ಮೀರಿರುತ್ತದೋ ಆ ಜಾತಿಗಳು ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಮಾಣ ಇರುವ ಜಾತಿಗಳಿಗಿಂತ ಸಾಪೇಕ್ಷವಾಗಿ ಶೈಕ್ಷಣಿಕವಾಗಿ ಮುಂದುವರಿದ ಜಾತಿಗಳೆಂದು ಆಯೋಗವು ಪರಿಗಣಿಸಿತು.

ಅದರಂತೆ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರಲ್ಲಿ ರಾಜ್ಯದ ಸರಾಸರಿ ಶೇ.0.77 ಇದ್ದರೆ ಬ್ರಾಹ್ಮಣರ ಜಾತಿಯ ಸರಾಸರಿ ಶೇ. 1.41 ಅಂದರೆ ರಾಜ್ಯದ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಪರಿಶಿಷ್ಟ ಜಾತಿಗಳ ಸರಾಸರಿ 0.59. ಅಂದರೆ ರಾಜ್ಯದ ಸರಾಸರಿಗಿಂತ ಶೇ. 30ರಷ್ಟು ಕಡಿಮೆ.

ಮುಸ್ಲಿಮರ ಸರಾಸರಿ ಶೇ. 0.48 ಮಾತ್ರ. ಅಂದರೆ ಶೈಕ್ಷಣಿಕವಾಗಿ ಮುಸ್ಲಿಮರ ಪರಿಸ್ಥಿತಿ ಪರಿಶಿಷ್ಟ ಜಾತಿಗಳಿಗಿಂತ ಹೀನಾಯ ಮತ್ತು ಬ್ರಾಹ್ಮಣರ ಸರಾಸರಿಗಿಂತ ನಾಲ್ಕುಪಟ್ಟು ಕಡಿಮೆ. ಅಂದರೆ ಮುಸ್ಲಿಮರಿಗಿಂತ ಬ್ರಾಹ್ಮಣರು ನಾಲ್ಕುಪಟ್ಟು ಶೈಕ್ಷಣಿಕವಾಗಿ ಮುಂದುವರಿದ ಜಾತಿಯಾಗಿದೆ. ಈಗ ಅವರೊಡನೆ ಸರಿಸಮಾನವಾಗಿ ಪೈಪೋಟಿ ಮಾಡಲು ಮುಸ್ಲಿಮರನ್ನು ದೂಡಲಾಗಿದೆ.

ಹಾಗೆಯೇ ರಾಜ್ಯದ ಜನಸಂಖ್ಯೆಗೆ ಹೋಲಿಸಿದಲ್ಲಿ ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. 3.4 ಮಾತ್ರ ಇದ್ದರೂ, ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಪ್ರಮಾಣ ಶೇ. 6.37. ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ರಾಜ್ಯದ ಜನಸಂಖ್ಯೆಯ ಶೇ. 16.7ರಷ್ಟಿದ್ದರೂ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಪರಿಶಿಷ್ಟ ಜಾತಿಗಳ ಪ್ರಮಾಣ ಕೇವಲ ಶೇ. 7.41ರಷ್ಟು.

ಆದರೆ ಮುಸ್ಲಿಮರು ಜನಸಂಖ್ಯೆಯ ಶೇ. 11.6ರಷ್ಟಿದ್ದರೂ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಕೇವಲ ಶೇ. 7.41 ಮಾತ್ರ ಮುಸ್ಲಿಮರು.

ಹಾಗೆಯೇ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿಗಳನ್ನು ಅಧ್ಯಯನ ಮಾಡುತ್ತಿರುವವರ ಜಾತಿವಾರು ತಲಾವಾರು ಪ್ರಮಾಣವನ್ನು ಆಯೋಗವು ಪರಿಶೀಲಿಸಿತು. ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. 3.4 ಇದ್ದರೂ ಈ ಒಟ್ಟಾರೆ ಉನ್ನತ ಶಿಕ್ಷಣದಲ್ಲಿ ಬ್ರಾಹ್ಮಣರ ಸಂಖ್ಯೆ ಶೇ. 21.46, ಲಿಂಗಾಯತರ ಜಾತಿವಾರು ಪ್ರಮಾಣ ಶೇ. 15.3 ಇದ್ದರೆ ಉನ್ನತ ಶಿಕ್ಷಣದಲ್ಲಿ ಶೇ. 15.68ರಷ್ಟು ವಿದ್ಯಾರ್ಥಿಗಳು ಆ ಸಮುದಾಯಕ್ಕೆ ಸೇರಿದವರು. ಒಕ್ಕಲಿಗರು ರಾಜ್ಯದ ಜನಸಂಖ್ಯೆಯ ಶೇ. 10.8ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಅವರ ಪಾಲು ಶೇ. 11.63.

ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಶೇ. 16.7ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟರ ಪ್ರಮಾಣ 14.44. ಅಂದರೆ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಕಡಿಮೆ.

ಆದರೆ ಇದರಲ್ಲೂ ಮುಸ್ಲಿಮರ ಪರಿಸ್ಥಿತಿ ತುಂಬಾ ದಾರುಣ. ಮುಸ್ಲಿಮರ ಜನಸಂಖ್ಯೆ ಶೇ. 11.6ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಪಾಲು ಕೇವಲ 5.71. ಇದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ದೊರಕುತ್ತಿದ್ದಾಗ ಇದ್ದ ಪರಿಸ್ಥಿತಿ. ಇನ್ನು ಪ್ರತ್ಯೇಕ ಮೀಸಲಾತಿ ಕಿತ್ತುಹಾಕಿ ಬ್ರಾಹ್ಮಣರೊಂದಿಗೆ ಸ್ಪರ್ಧಿಸುವಂತೆ ಮಾಡಿದರೆ!?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News