ಎನ್‌ಡಿಎ ಸರಕಾರವೋ? ಮೋದಿ 3.0 ಸರಕಾರವೋ?

ಈ ಬಾರಿ 72 ಜನರ ಪೂರ್ಣ ಮಂತ್ರಿಮಂಡಲ ಮೋದಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸಿತು. 72 ಮಂತ್ರಿಗಳಲ್ಲಿ 60 ಮಂತ್ರಿಗಳು ಬಿಜೆಪಿಯವರು. ಮಿತ್ರ ಪಕ್ಷಗಳಾದ ಜೆಡಿಯು ಮತ್ತು ತೆಲುಗು ದೇಶಂಗೆ ತಲಾ ಎರಡು ಮಂತ್ರಿಗಳನ್ನು, ಉಳಿದ ಸಹಭಾಗಿ ಪಕ್ಷಗಳಿಗೆ ತಲಾ ಒಂದೊಂದು ಮಂತ್ರಿ ಪದವಿಯನ್ನು ಮೋದಿಯವರು ದಯಪಾಲಿಸಿದ್ದಾರೆ. ಹೀಗಾಗಿ ಈ ಮೋದಿ 3.0 ಮಂತ್ರಿಮಂಡಲ ಬಿಜೆಪಿ ಬಲಹೀನವಾಗಿರುವ ಯಾವ ಸೂಚನೆಯನ್ನು ನೀಡುತ್ತಿಲ್ಲ. ಈ ಸರಕಾರದ ಅತ್ಯಂತ ದುರ್ಬಲ ಸಹಭಾಗಿ ಪಕ್ಷಗಳಾಗಿರುವ ಶಿಂದೆಯ ಶಿವಸೇನೆ ಮತ್ತು ಅಜಿತ್ ಪವಾರ್‌ರ ಎನ್‌ಸಿಪಿಗಳು ತಮಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಗೊಣಗುಟ್ಟಿರುವುದು ಬಿಟ್ಟರೆ ಪ್ರಧಾನ ಮಿತ್ರಪಕ್ಷಗಳಾದ ಜೆಡಿಯು ಮತ್ತು ತೆಲುಗುದೇಶಂ ಯಾವ ಅಸಮಾಧಾನವನ್ನೂ ತೋರಿಲ್ಲ.

Update: 2024-06-12 04:32 GMT
Editor : Thouheed | Byline : ಶಿವಸುಂದರ್

ಭಾಗ- 1

2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಬಗ್ಗೆ ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿಕೊಳ್ಳುವ ಅವಕಾಶವು ಫಲಿತಾಂಶದ ಸ್ವರೂಪದಲ್ಲೇ ಇದೆ. ಈ ಬಾರಿ ನರೇಂದ್ರ ಮೋದಿಯವರ ಹತ್ತು ವರ್ಷದ ಆಡಳಿತಾವಧಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವ ಭಾರತದ ಜನತೆ, ಬಿಜೆಪಿಯನ್ನು ಏಕೈಕ ಅತಿ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿದ್ದರೂ ಸರಳ ಬಹುಮತವನ್ನೂ ನೀಡದೆ ಮಿತ್ರಪಕ್ಷಗಳ ಮುಲಾಜಿನೊಂದಿಗೆ ಸರಕಾರ ನಡೆಸಬೇಕೆಂಬ ಆದೇಶ ನೀಡಿದೆ.

ಬಿಜೆಪಿಗೆ ಈ ಬಾರಿ ಬಹುಮತ ಬಂದಿಲ್ಲವಾದ್ದರಿಂದ, ಮತ್ತು ಈ ಸರಕಾರ ತೆಲುಗುದೇಶಂ ಮತ್ತು ಜೆಡಿಯು ಬೆಂಬಲವನ್ನು ಆಶ್ರಯಿಸಿದೆಯಾದ್ದರಿಂದ ಹಾಗೂ ಮೋದಿಯವರಿಗೆ ಸಮ್ಮಿಶ್ರ ಸರಕಾರ ನಡೆಸಿ ಗೊತ್ತಿಲ್ಲವಾದ್ದರಿಂದ ಈ ಬಾರಿ ಮೋದಿ ಪ್ರಧಾನಿಯಾಗುವುದಿಲ್ಲ. ಬದಲಿಗೆ ಬಿಜೆಪಿಯಲ್ಲಿ ಇದ್ದಿದ್ದರಲ್ಲಿ ವ್ಯಕ್ತಿಗತ ಠೇಂಕಾರವಿಲ್ಲದೆ ಮತ್ತು ಇದ್ದಿದ್ದರಲ್ಲಿ ಮಿತ್ರ ಪಕ್ಷಗಳನ್ನು ಜೊತೆಗೆ ಕರೆದೊಯ್ಯಬಲ್ಲ ನಿತಿನ್ ಗಡ್ಕರಿಯಂಥವರು ಪ್ರಧಾನಿಯಾಗಬಹುದು ಎಂಬ ಅಂದಾಜನ್ನು ಕೆಲವರು ಮಾಡಿದ್ದರು. ಅಷ್ಟು ಮಾತ್ರವಲ್ಲದೆ ಬಹುಮತವಿಲ್ಲದ ಮೋದಿಯ ವಿರುದ್ಧ ಬಿಜೆಪಿಯೊಳಗೂ ಭಿನ್ನಮತ ಸ್ಫೋಟಗೊಳ್ಳುತ್ತದೆ, ಆರೆಸ್ಸೆಸ್ ಮತ್ತು ಬಿಜೆಪಿ ನಡುವೆಯೂ ಮುಸುಕಿನಲ್ಲಿರುವ ಸಂಘರ್ಷ ಬಯಲಿಗೆ ಬರುತ್ತದೆ ಎಂಬೆಲ್ಲಾ ವಾದಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದ್ದವು.

ಆದರೆ ಈ ಬಾರಿ ನರೇಂದ್ರ ಮೋದಿ ಫಲಿತಾಂಶ ಬಂದಮೇಲೆ ಮೊದಲು ಮಾಡಬೇಕಾದ ಬಿಜೆಪಿಯ ಸಂಸದೀಯ ಪಕ್ಷದ ಸಭೆಯನ್ನೇ ಕರೆಯಲಿಲ್ಲ. ಅಲ್ಲಿ ಬಿಜೆಪಿಯ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾಗದೆ, ನೇರವಾಗಿ ಎನ್‌ಡಿಎ ಸಭೆಯನ್ನು ಕರೆದು ಅಲ್ಲಿ ಅವಿರೋಧವಾಗಿ ಎನ್‌ಡಿಎ ಕೂಟದ ನಾಯಕನಾಗಿ ಆಯ್ಕೆಗೊಂಡರು. ಆ ಮೂಲಕ ಬಿಜೆಪಿಯೊಳಗಿನ ಭಿನ್ನಮತೀಯರು ಈಗಲೂ ಎಷ್ಟು ಬಲಹೀನರು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.

ನಂತರ ಎನ್‌ಡಿಎಯ ಮಂತ್ರಿಮಂಡಲ ರಚನೆ. 2014ರಲ್ಲಿ ಬಿಜೆಪಿಗೆ ಬಹುಮತ ಬಂದಾಗಲೂ, ಎನ್‌ಡಿಎ ಸರಕಾರದಲ್ಲಿ ಮೊದಿಯೊಂದಿಗೆ 48 ಮಂತ್ರಿಗಳು, 2019ರಲ್ಲಿ 56 ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿ 72 ಜನರ ಪೂರ್ಣ ಮಂತ್ರಿಮಂಡಲ ಮೋದಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸಿತು. 72 ಮಂತ್ರಿಗಳಲ್ಲಿ 60 ಮಂತ್ರಿಗಳು ಬಿಜೆಪಿಯವರು. ಮಿತ್ರ ಪಕ್ಷಗಳಾದ ಜೆಡಿಯು ಮತ್ತು ತೆಲುಗು ದೇಶಂಗೆ ತಲಾ ಎರಡು ಮಂತ್ರಿಗಳನ್ನು, ಉಳಿದ ಸಹಭಾಗಿ ಪಕ್ಷಗಳಿಗೆ ತಲಾ ಒಂದೊಂದು ಮಂತ್ರಿ ಪದವಿಯನ್ನು ಮೋದಿಯವರು ದಯಪಾಲಿಸಿದ್ದಾರೆ. ಹೀಗಾಗಿ ಈ ಮೋದಿ 3.0 ಮಂತ್ರಿಮಂಡಲ ಬಿಜೆಪಿ ಬಲಹೀನವಾಗಿರುವ ಯಾವ ಸೂಚನೆಯನ್ನು ನೀಡುತ್ತಿಲ್ಲ. ಈ ಸರಕಾರದ ಅತ್ಯಂತ ದುರ್ಬಲ ಸಹಭಾಗಿ ಪಕ್ಷಗಳಾಗಿರುವ ಶಿಂದೆಯ ಶಿವಸೇನೆ ಮತ್ತು ಅಜಿತ್ ಪವಾರ್‌ರ ಎನ್‌ಸಿಪಿಗಳು ತಮಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಗೊಣಗುಟ್ಟಿರುವುದು ಬಿಟ್ಟರೆ ಪ್ರಧಾನ ಮಿತ್ರಪಕ್ಷಗಳಾದ ಜೆಡಿಯು ಮತ್ತು ತೆಲುಗುದೇಶಂ ಯಾವ ಅಸಮಾಧಾನವನ್ನೂ ತೋರಿಲ್ಲ.

ಎನ್‌ಡಿಎ ಮಂತ್ರಿಮಂಡಲವೋ?

ಮುಂದುವರಿದ ಮೋದಿಮಂಡಲವೋ?

ಇನ್ನು ಇಲಾಖಾ ಹಂಚಿಕೆಯನ್ನು ನೋಡಿದರೆ ಇದು ಮತ್ತಷ್ಟು ಗರ್ವಿಷ್ಟವಾಗಿರುವ ಮೋದಿ 3.0 ಸರಕಾರ ಎಂಬುದು ಸಾಬೀತಾಗಿದೆ.

ಮೊದಲನೆಯದಾಗಿ ಕಳೆದ ಹತ್ತು ವರ್ಷಗಳಲ್ಲಿ ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಈ ದೇಶದಲ್ಲಿ ಭಿನ್ನಾಭಿಪ್ರಾಯ ಮತ್ತು ಪ್ರತಿರೋಧಗಳನ್ನು ಹತ್ತಿಕ್ಕಿ, ಮುಸ್ಲಿಮರನ್ನು, ರೈತಾಪಿಯನ್ನು ಮತ್ತು ದಲಿತರನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ದಮನ ಮಾಡಿತ್ತು. ಈ ಚುನಾವಣೆಯಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಬಹಳಷ್ಟು ಸ್ಥಾನಗಳನ್ನು ಕಳೆದುಕೊಂಡಿದ್ದು ದಲಿತರು ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಮತ್ತು ಮುಸ್ಲಿಮರು ಹಿಂದೆಂದಿಗಿಂತಲೂ ಒಟ್ಟಾಗಿ ಮತ್ತು ವ್ಯೆಹಾತ್ಮಕವಾಗಿ ಪ್ರತಿ ಪಕ್ಷಗಳಿಗೆ ವೋಟು ಹಾಕಿದ್ದಕ್ಕಾಗಿ. ಈ ದಮನದ ರೂವಾರಿ ಗೃಹಮಂತ್ರಿ ಅಮಿತ್ ಶಾ. ಎಲ್ಲಿಯ ತನಕವೆಂದರೆ ಈಗ ಸರಕಾರದ ಮಿತ್ರ ಪಕ್ಷಗಳಾಗಿರುವ ತೆಲುಗು ದೇಶಂ ಮತ್ತು ಜೆಡಿಯು ಬಿಜೆಪಿಯ ಮಡಿಲಿಗೆ ಬರುವ ಮುನ್ನ ಅಮಿತ್ ಶಾ ಆ ಪಕ್ಷಗಳ ನಾಯಕರನ್ನೂ ಕಾಡಿದ್ದರಿಂದ, ಈ.ಡಿ., ಸಿಬಿಐ, ಐಟಿ ಸಂಸ್ಥೆಗಳನ್ನು ಬೇಕಾಬಿಟ್ಟಿ ಬಳಸಿದ್ದರಿಂದ ಮಿತ್ರಪಕ್ಷಗಳೂ ಕೂಡ ಈ ಬಾರಿ ಅಮಿತ್ ಶಾ ಮಂತ್ರಿ ಮಂಡಲದಲ್ಲಿ ಇರಬಾರದೆಂದು ಒತ್ತಡ ಹಾಕಬಹುದೆಂದು ಊಹಾಪೋಹಗಳನ್ನು ಹರಿಬಿಡಲಾಗಿತ್ತು. ಅಮಿತ್ ಶಾ ಮಂತ್ರಿಯಾದರೂ ಗೃಹಮಂತಿಯಾಗಲಾರರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವೆಲ್ಲವೂ ಕೇವಲ ಊಹಾಪೋಹಗಳೆಂದು ರುಜುವಾತಾಗಿ ಅಮಿತ್ ಶಾ ಅವರೇ ಸತತವಾಗಿ ಮೋದಿ 3.0 ಸರಕಾರದ ಗೃಹಮಂತ್ರಿಯಾಗಿದ್ದಾರೆ.

ಅದೇ ರೀತಿ ಈ ದೇಶದ ಆರ್ಥಿಕತೆ ದಿಕ್ಕಾಪಾಲಾಗಲು ಕಾರಣವೇ ಮೋದಿ ಸರಕಾರದ ಆರ್ಥಿಕ ನೀತಿ. ಈ ಚುನಾವಣೆಯಲ್ಲಿ ಮತದಾರರು ನಿರುದ್ಯೋಗ ಮತ್ತು ಹಣದುಬ್ಬರ ತಮ್ಮ ಪ್ರಧಾನವಾದ ಸಮಸ್ಯೆಗಳೆಂದು ಪಟ್ಟಿ ಮಾಡಿದ್ದರೆಂದು ಎಲ್ಲಾ ವರದಿಗಳೂ ಹೇಳುತ್ತವೆ. ಅದರಲ್ಲೂ ವಿಶೇಷವಾಗಿ ಸಿಎಸ್‌ಡಿಎಸ್ ವರದಿಗಳು. ಮೋದಿ ಸರಕಾರದ ಈ ಆರ್ಥಿಕ ನೀತಿಗಳನ್ನು ಜಾರಿ ಮಾಡಿದ ರೂವಾರಿ ನಿರ್ಮಲಾ ಸೀತಾರಾಮನ್. ಅವರೇ ಈ ಬಾರಿಯೂ ಹಣಕಾಸು ಮಂತ್ರಿಯಾಗಿ ಮುಂದುವರಿದಿದ್ದಾರೆ.

ಮೋದಿ ಅವಧಿಯಲ್ಲಿ ಚೀನಾ ದೇಶವು ಗಾಲ್ವಾನ್ ಪ್ರದೇಶದಲ್ಲಿ ಭಾರತದ 4,000 ಕಿ.ಮೀ. ಪ್ರದೇಶವನ್ನು ಕಬಳಿಸಿ ಕೂತಿದೆ. ಪಶ್ಚಿಮ ಮತ್ತು ಪೂರ್ವ ಹಾಗೂ ಉತ್ತರದ ಗಡಿಗಳೆಲ್ಲವೂ ಹೆಚ್ಚೂ ಕಡಿಮೆ ಮೋದಿ ಅವಧಿಯಲ್ಲಿ ಉದ್ವಿಘ್ನವಾಗಿತ್ತು. ಆದರೂ ಆಗಲೂ ಈಗಲೂ ರಕ್ಷಣಾ ಮಂತ್ರಿ ಅದೇ ರಾಜನಾಥ್ ಸಿಂಗ್. ಮೋದಿ ಅವಧಿಯಲ್ಲಿ ಭಾರತದ ನೆರೆಹೊರೆಯ ದೇಶಗಳೆಲ್ಲಾ ಭಾರತ ವಿರೋಧಿ ಮತ್ತು ಚೀನಾ ಪರ ಆದವು. ಇಸ್ರೇಲ್ ಮತ್ತು ರಶ್ಯಗಳು ಮಾಡಿರುವ ಆಕ್ರಮಣ ಹಾಗೂ ಅತಿಕ್ರಮಣಗಳನ್ನು ಸಮರ್ಥಿಸುತ್ತಾ ಭಾರತವು ಈ ಅವಧಿಯಲ್ಲಿ ಜಗತ್ತಿನ ಬಡರಾಷ್ಟ್ರಗಳೆಲ್ಲದರ ವಿಶ್ವಾಸ ಕಳೆದುಕೊಂಡಿತು. ಆದರೂ ಮೊದಿ. 2.0ನಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ ಜೈ ಶಂಕರ್ ಅವರೇ ಮೋದಿ 3.0ರಲ್ಲೂ ವಿದೇಶಾಂಗ ಮಂತ್ರಿ.

ಅಷ್ಟು ಮಾತ್ರವಲ್ಲ. ದೇಶದ ರಾಜಕೀಯ ಮತ್ತು ಆರ್ಥಿಕತೆಗಳ ದಿಕ್ಕನ್ನು ನಿರ್ಧರಿಸುವ ಮತ್ತು ಅನುಷ್ಠಾನಕ್ಕೆ ತರುವ ಎಲ್ಲಾ ಪ್ರಮುಖ ಹತ್ತು ಮಂತ್ರಿ ಸ್ಥಾನಗಳಲ್ಲೂ ಬಿಜೆಪಿಯ ಹಳೇ ಮಂತ್ರಿಗಳೇ ಮುಂದುವರಿದಿದ್ದಾರೆ.

ಅವೆಲ್ಲಕ್ಕೂ ಮುಕುಟವಾಗಿದ್ದಂತೆ ಯಾವ ಪ್ರಧಾನಿಯ ನೀತಿಗಳ ವಿರುದ್ಧ ಜನ ಅಸಮಾಧಾನ ತೋರಿದ್ದರೋ ಅದೇ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿದಿದ್ದಾರೆ.

ಹೀಗಾಗಿ ಇಂದು ರೂಪುಗೊಂಡಿರುವ ಸರಕಾರ ತಾಂತ್ರಿಕವಾಗಿ ಸಮ್ಮಿಶ್ರ ಎನ್‌ಡಿಎ ಸರಕಾರವಾಗಿದ್ದರೂ, ಸಾರದಲ್ಲಿ ಅದು ಮೊದಿ 1.0, 2.0ಗಳ ಮುಂದುವರಿಕೆಯೇ ಆಗಿರುವ ಮೋದಿ 3.0 ಸರಕಾರವೇ ಆಗಿದೆ. ಈ ಸರಕಾರದ ನೀತಿ, ರೀತಿಗಳಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲವೆಂಬುದು ಮಂತ್ರಿಮಂಡಲವನ್ನು ಮತ್ತು ಇಲಾಖೆಯನ್ನು ನೋಡಿದರೆ ಸ್ಪಷ್ಟವಾಗುತ್ತದೆ.

ಇದರ ಜೊತೆಗೆ ಈ ಮೋದಿತ್ವದ ಮುಂದುವರಿಕೆಯನ್ನು ಎತ್ತಿ ತೋರಿಸುವ ಮತ್ತೊಂದು ಅಂಶವೆಂದರೆ ಸ್ವಾತಂತ್ರ್ಯಾನಂತರದಲ್ಲೇ ಮೊತ್ತ ಮೊದಲಬಾರಿಗೆ ಈ ಬಾರಿ ಕೇಂದ್ರ ಮಂತ್ರಿ ಮಂಡಲದಲ್ಲಿ ಈ ದೇಶದಲ್ಲಿ ಶೇ. 16ರಷ್ಟು ಜನಸಂಖ್ಯೆ ಇರುವ ಮುಸ್ಲಿಮ್ ಸಮುದಾಯದಿಂದ ಒಬ್ಬ ಮುಸ್ಲಿಮ್ ಮಂತ್ರಿಯೂ ಇಲ್ಲದಿರುವುದು. ಹಾಗೆ ನೋಡಿದರೆ ಮೋದಿ. 1.0ದಲ್ಲಿ ಇಬ್ಬರು ಮುಸ್ಲಿಮ್ ಮಂತ್ರಿಗಳಿದ್ದರು, ಮೋದಿ. 2.0ದಲ್ಲಿ ಒಬ್ಬರಾದರೂ ಇದ್ದರು. ಆದರೆ ಸಾಪೇಕ್ಷವಾಗಿ ಸಂಖ್ಯಾ ಶಕ್ತಿ ಕಳೆದುಕೊಂಡಿರುವ ಮೋದಿ 3.0 ಸರಕಾರದಲ್ಲಿ ಒಬ್ಬ ಮುಸ್ಲಿಮ್ ಮಂತ್ರಿಯೂ ಇಲ್ಲ. ಇದರ ಬಗ್ಗೆ ಮಿತ್ರ ಪಕ್ಷಗಳಿಗೂ ಯಾವುದೇ ಆಕ್ಷೇಪವಿಲ್ಲ ಎಂಬುದು ಈ ಸರಕಾರವು ಮೋದಿ 2.0 ರ ಮುಂದುವರಿಕೆಯೇ ಹೊರತು, ಬದಲಾದ ಸರಕಾರವಲ್ಲ ಎಂದು ಹೇಳುತ್ತದೆ.

ಮಿತ್ರ ಪಕ್ಷಗಳು ಕೋಮುವಾದಕ್ಕೆ

ಕಾರ್ಪೊರೇಟ್ ವಾದಕ್ಕೂ ಮಿತ್ರರೇ!

ಮೋದಿ 3.0 ಸರಕಾರದಲ್ಲಿ ಈ ಹಿಂದಿನ ಮೋದಿ ಅವಧಿಗಳಂತೆ ಹೆಚ್ಚಿನ ಕೋಮುವಾದ ಮತ್ತು ಅದಾನಿ-ಅಂಬಾನಿ ಪರತೆಗಳು ಇರುವುದಿಲ್ಲ ಹಾಗೂ ನಿಧಾನವಾಗಿ ಪ್ರಜಾತಂತ್ರ ಹಿಂದಿರುಗುವ ಸಾಧ್ಯತೆಗಳಿವೆ ಎಂದು ಅಸಹಾಕ ಆಶಾವಾದಿಗಳು ಭಾವಿಸುತ್ತಾರೆ. ಅದಕ್ಕೆ ಇರುವ ಮತ್ತೊಂದು ಕಾರಣ ಈ ಬಾರಿ ಬಿಜೆಪಿಗೆ ಬಹುಮತ ಇಲ್ಲದಿರುವುದು ಮತ್ತು ಪ್ರಧಾನವಾಗಿ ಸರಕಾರ ತೆಲುಗು ದೇಶಂ ಮತ್ತು ಜೆಡಿಯು ಪಕ್ಷಗಳನ್ನು ಅವಲಂಬಿಸಬೇಕಿರುವುದು.

ಆದರೆ ಕೇಳಬೇಕಿರುವ ಪ್ರಶ್ನೆ ತೆಲುಗು ದೇಶಂ ಆಗಲೀ ಅಥವಾ ಜೆಡಿಯು ಆಗಲೀ ಕೋಮುವಾದ ಮತ್ತು ಕಾರ್ಪೊರೇಟ್ ವಾದದ ವಿರೋಧಿಗಳೇ ಎಂಬುದು?

ತೆಲುಗು ದೇಶಂ, ಜೆಡಿಯು ಮತ್ತು ಬಿಜೆಪಿಗಳ ಮೈತ್ರಿಕೂಟ ಚುನಾವಣೋತ್ತರ ಮೈತ್ರಿಕೂಟವಲ್ಲ. ಚುನಾವಣಾಪೂರ್ವ ಎನ್‌ಡಿಎ ಮೈತ್ರಿಕೂಟ. ಹೀಗಾಗಿ ಈ ಪಕ್ಷಗಳು ಬಿಜೆಪಿಯ ಕೋಮುವಾದ ಮತ್ತು ಕಾರ್ಪೊರೇಟ್ ವಾದಗಳನ್ನು ಒಪ್ಪಿಕೊಂಡೇ ಈ ಮೈತ್ರಿಯನ್ನು ಮಾಡಿಕೊಂಡಿವೆ. ಹೀಗಾಗಿಯೇ ಪ್ರಧಾನಿಯನ್ನು ಒಳಗೊಂಡಂತೆ ಬಿಜೆಪಿಯ ನಾಯಕರು ಚುನಾವಣಾ ಪ್ರಚಾರದುದ್ದಕ್ಕೂ ಮುಸ್ಲಿಮ್ ವಿರೋಧಿ ವಿಷವನ್ನು ಕಕ್ಕುತ್ತಿದ್ದರೂ ನಾಯ್ಡು ಆಗಲೀ, ನಿತೀಶ್ ಆಗಲೀ ಅದರ ಬಗ್ಗೆ ಸಣ್ಣ ಕೊಂಕನ್ನೂ ತೆಗೆದಿಲ್ಲ. ನಾಯ್ಡುವಂತೂ ಆಂಧ್ರದಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿಯನ್ನು ಒದಗಿಸುವ ಭರವಸೆಯನ್ನು ಕೊಡುತ್ತಿದ್ದರೂ, ಮುಸ್ಲಿಮ್ ಮೀಸಲಾತಿಯನ್ನು ಕಿತ್ತುಹಾಕುವ ಘೋಷಣೆ ಮಾಡುತ್ತಿದ್ದ ಮೋದಿ ಮತ್ತು ಶಾ ಅವರುಗಳ ಜೊತೆ ಯಾವುದೇ ಎಗ್ಗುಸಿಗ್ಗಿಲ್ಲದೆ ವೇದಿಕೆ ಹಂಚಿಕೊಳ್ಳುತ್ತಿದ್ದರು.

ಇದಲ್ಲದೆ ಮೋದಿ 1.0 ಮತ್ತು ಮೋದಿ. 2.0 ಅವಧಿಯಲ್ಲೂ ಮೋದಿ ಸರಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿರಲಿಲ್ಲ. ಆಗೆಲ್ಲಾ ಬಿಜೆಪಿಯ ಅತ್ಯಂತ ಕೋಮುವಾದಿ ಮಸೂದೆಗಳಾದ ಯುಎಪಿಎ ತಿದ್ದುಪಡಿ, ಆರ್ಟಿಕಲ್ 370 ರದ್ದು, ತ್ರಿವಳಿ ತಲಾಕ್, ದಿಲ್ಲಿ ಸ್ಥಾನಮಾನ, ಚುನಾವಣಾ ಆಯೋಗ ಪುನರ‌್ರಚನೆ ಮಸೂದೆ ಇನ್ನಿತ್ಯಾದಿ ಜನವಿರೋಧಿ ಮಸೂದೆಗಳಿಗೆ ರಾಜ್ಯ ಸಭೆಯಲ್ಲಿ ಬಹುಮತ ಸಿಗುವಂತಾದದ್ದು ಜೆಡಿಯು ಮತ್ತು ತೆಲುಗು ದೇಶಂ ಪಕ್ಷಗಳ ಬೆಂಬಲದಿಂದಾಗಿಯೇ. ಈ ಬಾರಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಒಕ್ಕೂಟದ ಪ್ರಥಮ ಸಭೆಗೆ ಬಂದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸೀದಾ ಮೋದಿಯ ಕಾಲಿಗೆ ಬಗ್ಗಿ ನಮಸ್ಕಾರ ಮಾಡಿದ್ದು ಜೆಡಿಯು ಅಧಿಕಾರಕ್ಕಾಗಿ ಎಷ್ಟು ಬಗ್ಗಬಹುದು ಎಂಬುದಕ್ಕೂ ಉದಾಹರಣೆಯಾಗಿದೆ.

ಚಂದ್ರಬಾಬು ನಾಯ್ಡುವಂತೂ ವಿಶ್ವಬ್ಯಾಂಕ್ ಆದೇಶದಂತೆ ರಾಜ್ಯದಲ್ಲಿ ಆಮೂಲಾಗ್ರವಾಗಿ ಕಾರ್ಪೊರೇಟ್ ಪರ ಬದಲಾವಣೆಗಳನ್ನು ತಂದ ಪ್ರಪ್ರಥಮ ಮುಖ್ಯಮಂತ್ರಿ. ಒಂದು ಸರಕಾರ ಹೇಗೆ ಕಾರ್ಪೊರೇಟ್ ಶಕ್ತಿಗಳ ಅಡಿಯಾಳಾಗಬಹುದು ಎಂಬುದಕ್ಕೆ ನಾಯ್ಡು ಆಡಳಿತ ಇದೇ ದೇಶಕ್ಕೆ ಒಂದು ಕೆಟ್ಟ ಉದಾಹರಣೆಯಾಗಿತ್ತು. ಹೀಗಾಗಿ ಅವರ ಆಂಧ್ರ ಮಾದರಿ ಗುಜರಾತ್ ಮಾದರಿಯ ತಾಯಿ. ಅವರು 1999-2004ರ ನಡುವೆ ಕೇಂದ್ರದಲ್ಲಿ ರೂಪುಗೊಂಡಿದ್ದ 24 ಪಕ್ಷಗಳ ವಾಜಪೇಯಿ ನೇತೃತ್ವದ ಎನ್‌ಡಿಎ ಒಕ್ಕೂಟದ ಸಂಚಾಲಕರಾಗಿದ್ದರು. ಅದೇ ಅವಧಿಯಲ್ಲಿ ಗುಜರಾತಿನಲ್ಲಿ ಮೋದಿ ನೇತೃತ್ವದಲ್ಲಿ ಮುಸ್ಲಿಮರ ನರಮೇಧ ನಡೆದರೂ ನಾಯ್ಡು ಪಕ್ಷ ಅದರ ಬಗ್ಗೆ ವಿರೋಧವನ್ನೇನೂ ವ್ಯಕ್ತಪಡಿಸಿರಲಿಲ್ಲ. ಹಾಗೆಯೇ ನಾಯ್ಡು ಅವಧಿಯಲ್ಲಿ ನಕ್ಸಲೈಟರ ಹೆಸರಲ್ಲಿ ಆಂಧ್ರದ ಆದಿವಾಸಿಗಳನ್ನು ದಮನ ಮಾಡಿ, ಎನ್‌ಕೌಂಟರ್ ನಡೆಸಿ ಆ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಗಣಿ ಉದ್ಯಮವನ್ನು ನಡೆಸಲು ಪರವಾನಿಗೆ ಕೊಡುತ್ತಿದ್ದ ನೀತಿಗೆ ಬಿಜೆಪಿಯೂ ಸದಾ ಬೆಂಬಲವನ್ನು ವ್ಯಕ್ತಪಡಿಸಿತ್ತು.

ಹೀಗಾಗಿ ಬಿಜೆಪಿ, ಜೆಡಿಯು ಮತ್ತು ತೆಲುಗುದೇಶಂ ಮೈತ್ರಿಯಲ್ಲಿ ಬಿಜೆಪಿ ಪರವಾದ ಕೋಮುವಾದಿ ಮತ್ತು ಕಾರ್ಪೊರೇಟ್‌ವಾದಿ ರಾಜಕೀಯದ ಅಂಟು ಮತ್ತು ನಂಟೂ ಇದೆ.

ಇದಲ್ಲದೆ ನಾಯ್ಡು ಮತ್ತು ನಿತೀಶ್ ಇಬ್ಬರಿಗೂ ತಮ್ಮ ತಮ್ಮ ರಾಜ್ಯಗಳಿಗೆ ಹೆಚ್ಚು ಅಧಿಕಾರ ಮತ್ತು ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಅಗತ್ಯದ ಮುಂದೆ ಮಿಕ್ಕಿದ್ದೆಲ್ಲ ಸದ್ಯಕ್ಕೆ ಅಮುಖ್ಯವಾಗಿದೆ. ಆಂಧ್ರಕ್ಕೆ ವಿಶೇಷ ವರ್ಗದ ರಾಜ್ಯ ಸ್ಥಾನಮಾನ ಪಡೆದುಕೊಳ್ಳುವುದು ನಾಯ್ಡುವಿನ ತುರ್ತು ಕಾಳಜಿ. 2014ರಲ್ಲಿ ಅವಿಭಜಿತ ಆಂಧ್ರಪ್ರದೇಶ ತೆಲಂಗಾಣ ಮತ್ತು ಆಂಧ್ರವೆಂದು ವಿಭಜನೆಯಾದ ಮೇಲೆ ಆಂಧ್ರ ತನ್ನ ಪ್ರಮುಖ ತೆರಿಗೆ ಮೂಲವಾಗಿದ್ದ ಹೈದರಾಬಾದನ್ನು ಕಳೆದುಕೊಂಡಿತು. ಆಗಿನಿಂದಲೂ ಸ್ಪೆಶಲ್ ಕೆಟಗರಿ ಸ್ಟೇಟ್ ಸ್ಥಾನಕ್ಕೆ ನಾಯ್ಡು ಒತ್ತಾಯಿಸುತ್ತಿದ್ದರು. 2014ರಲ್ಲಿ ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಅದನ್ನು ಕೊಡುವುದಾಗಿ ಭರವಸೆ ಇತ್ತಿದ್ದರೂ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತು. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿ ನಾಯ್ಡು ಮಿತ್ರಪಕ್ಷವಾಗಿದ್ದರೂ ವಿಶೇಷ ಸ್ಥಾನಮಾನ ನಿರಾಕರಿಸಿತು. 2018ರಲ್ಲಿ ವಿಭಜಿತ ಆಂಧ್ರದ ಚುನಾವಣೆಗೆ ಒಂದು ವರ್ಷವಿರುವಾಗ ನಾಯ್ಡು ಬಿಜೆಪಿಯ ಈ ನಿಲುವನ್ನು ವಿರೋಧಿಸಿ ಹೊರಬಂದರು. ಈಗ ಮತ್ತೊಮ್ಮೆ ಒಕ್ಕೂಟದಲ್ಲಿರುವ ನಾಯ್ಡುವಿನ ಪ್ರಧಾನ ಕಾಳಜಿ ಕೋಮುವಾದವೂ ಅಲ್ಲ. ಜನಪರ ನೀತಿಗಳೂ ಆಲ್ಲ. ಕೇಂದ್ರದಿಂದ ಹೆಚ್ಚು ಹಣಪಡೆದುಕೊಂಡು ಆಂಧ್ರವನ್ನು ಕಾರ್ಪೊರೇಟ್‌ಗಳ ಹೊಸ ರಾಜಧಾನಿಯನ್ನಾಗಿ ಮಾಡುವುದು. ಆ ಮೂಲಕ ತನ್ನ ಹಾಗೂ ಪಕ್ಷದ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದೇ ಆಗಿದೆ.

ಬಿಹಾರದಲ್ಲಿ ಜೆಡಿಯು ಜಾತಿ ಜಗಣತಿಯನ್ನು ದೇಶಾದ್ಯಂತ ನಡೆಸಲು ಮತ್ತು ಅಗ್ನಿಪಥ ಯೋಜನೆಯನ್ನು ಮರು ಪರಿಶೀಲಿಸಲು ಒತಾಯವನ್ನೇನೋ ಮಾಡಿದೆ. ಆದರೆ ಮರುದಿನವೇ ಅದರ ಬಗ್ಗೆ ಸಮಜಾಯಿಶಿ ಕೊಟ್ಟಿರುವ ಆ ಪಕ್ಷದ ಹಿರಿಯ ನಾಯಕ ತ್ಯಾಗಿಯವರು ತಾವು ಅಗ್ನಿಪಥದ ಕೆಲವು ನಿಯಮಗಳ ಮರು ಪರಿಶೀಲನೆಯನ್ನು ಮಾತ್ರ ಒತ್ತಾಯಿಸುತ್ತಿದ್ದೇವೆಯೆಂದೂ, ಸಮಾನ ನಾಗರಿಕ ಸಂಹಿತೆಯ ಬಗ್ಗೆ ವಿಶಾಲ ಸಮಾಲೋಚನೆ ನಡೆಸಬೇಕು ಎಂಬುದು ತಮ್ಮ ಪಕ್ಷದ ನಿಲುವೇ ಹೊರತು ತಮ್ಮ ಪಕ್ಷಕ್ಕೆ ಯುಸಿಸಿಗೆ ವಿರೋಧವಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ 2025ರಲ್ಲಿ ಬಿಹಾರದಲ್ಲಿ ಶಾಸನಾ ಸಭಾ ಚುನಾವಣೆ ನಡೆಯಲಿದೆ. ಅದರಲ್ಲಿ ಗೆಲ್ಲಬೇಕೆಂದರೂ ನಿತ್ರಾಣವಾಗಿರುವ ಜೆಡಿಯುಗೆ ಬಿಜೆಪಿಯ ಸಹಕಾರ ಮತ್ತು ಸಂಪನ್ಮೂಲಗಳ ಅಗತ್ಯವಿದೆ. ಹೇಗಿದ್ದರೂ ನಿತೀಶ್‌ರ ನಂತರ ಇಡೀ ಜೆಡಿಯುವನ್ನು ಗೌರವಾನಿತ್ವವಾಗಿ ಕಬಳಿಸುವ ದೂರಗಾಮಿ ಯೋಜನೆ ಬಿಜೆಪಿಗೆ ಇದ್ದೇ ಇದೆ.

ಹೀಗಾಗಿ ಮೋದಿ 3.0 ಸರಕಾರಕ್ಕೆ ಈ ಮೈತ್ರಿ ಪಕ್ಷಗಳಿಂದ ಯಾವುದೇ ತಾತ್ವಿಕ ಅಥವಾ ರಾಜಕೀಯ ವಿರೋಧವಿರುವುದಿಲ್ಲ.

ಮೇಲಾಗಿ ಎನ್‌ಡಿಎ ಒಕ್ಕೂಟವನ್ನು ತೊರೆದರೂ ಈ ಅವಕಾಶವಾದಿ ಪಕ್ಷಗಳಿಗೆ ಇರುವ ಪರ್ಯಾಯವಾದರೂ ಏನು? ಈ ಎಲ್ಲಾ ಪಕ್ಷಗಳು ಇಂಡಿಯಾ ಒಕ್ಕೂಟವನ್ನು ಸೇರಿದರೂ ಅದು ಸರಕಾರ ರಚಿಸುವುದು ಕಷ್ಟ.ಈ ಎಲ್ಲಾ ಅವಕಾಶವಾದಗಳು ಎನ್‌ಡಿಎ ಸರಕಾರವನ್ನು ಮೋದಿ 3.0 ಸರಕಾರವಾಗಿಯೇ ಮುಂದುವರಿಯುವಂತೆ ಮಾಡುತ್ತಿದೆ.

ಆದರೂ ಅಗತ್ಯವಿರುವಷ್ಟು ಸಂಪನ್ಮೂಲ ಸಿಗದಿದ್ದರೆ, ಬಿಜೆಪಿಯೇ ತನ್ನ ಮೂಲ ಚಾಳಿಯಂತೆ ಮಿತ್ರಪಕ್ಷಗಳನ್ನು ಒಡೆದು ನುಂಗಿ ಸಂಖ್ಯಾ ಬಲ ಹೆಚ್ಚಿಸಿಕೊಳ್ಳುವ ಸಂಚು ಮಾಡಿದರೆ ಅಥವಾ ಬಿಜೆಪಿಯೇ ತನ್ನದೇ ಕಾರಣಗಳಿಗಾಗಿ ಮಧ್ಯಂತರ ಚುನಾವಣೆಗೆ ಹೋದರೆ ಈ ಸರಕಾರಕ್ಕೆ ಈ ಅವಕಾಶವಾದಿ ಪಕ್ಷಗಳು ಬೆಂಬಲ ಹಿಂದೆಗೆದುಕೊಳ್ಳುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News