ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಸಿದ್ದುವಾದದೊಳಗಿನ ಮೋದಿವಾದವೇ?

ಈಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯದ ತೆರಿಗೆಯ ಪಾಲನ್ನು ಸರಾಸರಿ ಶೇ. 20ರಷ್ಟು ಹೆಚ್ಚಿಸಿರುವ ಸಿದ್ದರಾಮಯ್ಯ ಸರಕಾರವೂ ರಾಜ್ಯದ ಅಭಿವೃದ್ಧಿಗಾಗಿ ಸಂಪನ್ಮೂಲ ಸಂಗ್ರಹ ಮಾಡಿಕೊಳ್ಳಲು ತೆರಿಗೆ ಹೆಚ್ಚಿಸಲಾಗಿದೆಯೆಂದು ಮೋದಿ ಮಾತನ್ನೇ ಪುನರುಚ್ಚರಿಸಿದೆ. ಏನು ವ್ಯತ್ಯಾಸ? ಸಂಪನ್ಮೂಲವನ್ನು ಸಂಗ್ರಹಿಸಲು ತೆರಿಗೆ ಹಾಕಬೇಕಿರುವುದು ಸಂಪನ್ಮೂಲ ಇರುವವರ ಮೇಲೆಯೇ ಹೊರತು, ಇಲ್ಲದವರ ಮೇಲೆ ಇನ್ನಷ್ಟು ತೆರಿಗೆ ಹಾಕುವುದರ ಮೂಲಕವಲ್ಲ. ಅಂತಹ ಆರ್ಥಿಕ ನೀತಿಯನ್ನು ಮೋದಿ ಅನುಸರಿಸಿದರೂ, ಸಿದ್ದರಾಮಯ್ಯ ಅನುಸರಿಸಿದರೂ ಅದನ್ನು ಕಾರ್ಪೊರೇಟ್‌ವಾದಿ ನವ ಉದಾರವಾದಿ ಎನ್ನುತ್ತಾರೆಯೇ ಹೊರತು ಸಮಾಜವಾದಿ ಎನ್ನುವುದಿಲ್ಲ.

Update: 2024-06-19 04:36 GMT
Editor : Thouheed | Byline : ಶಿವಸುಂದರ್

ಭಾಗ- 1

ಈದುರಿತ ಕಾಲದಲ್ಲಿ, ಮೋದಿ ಯುಗದಲ್ಲಿ ಬಡವರಿಗೆ ಅಲ್ಪಸ್ವಲ್ಪ ಉಸಿರಾಡಲು ಅವಕಾಶ ಕೊಟ್ಟ ಗ್ಯಾರಂಟಿ ಯೋಜನೆಗಳ ಬಗ್ಗೆ ಲೋಕಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆ ಎಲ್ಲಾ ಕಡೆಗಳಿಂದಲೂ ನಿರೀಕ್ಷಿತ ಹಾಗೂ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಅದೇ ಹೊತ್ತಿನಲ್ಲೇ ಸಿದ್ದರಾಮಯ್ಯ ಸರಕಾರವೂ ಕೂಡ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಗಾಯದ ಮೇಲೆ ಬರೆ ಹಾಕಿದೆ. ಪರೋಕ್ಷವಾಗಿ ಒಂದಷ್ಟು ಭಾಗದ ಗ್ಯಾರಂಟಿಯನ್ನು ಹಿಂದೆಗೆದುಕೊಂಡಿದೆ.

ಏಕೆಂದರೆ ಪೆಟ್ರೊಲ್ ಬೆಲೆ ಏರಿಕೆ ಕೆಳಮಧ್ಯಮ ಹಾಗೂ ಮಧ್ಯಮವರ್ಗದ ವೆಚ್ಚಗಳನ್ನು ಹೆಚ್ಚಿಸಿ, ಆ ಮೂಲಕ ಗ್ಯಾರಂಟಿಗಳು ಕೊಟ್ಟ ಪರಿಹಾರದ ಲಾಭವನ್ನು ಕಡಿತಗೊಳಿಸುತ್ತದೆ. ಡೀಸೆಲ್ ಬೆಲೆ ಹೆಚ್ಚಳದಿಂದ ಎಲ್ಲಾ ಸರಕುಗಳ ಸಾಗಾಟ ದರಗಳೂ ಹೆಚ್ಚಾಗುತ್ತವೆ. ಆ ಮೂಲಕ ಡೀಸೆಲ್ ಬೆಲೆ ಏರಿಕೆಯು ನೇರವಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತದೆ. ಬೆಲೆ ಏರಿಕೆಯೆಂದರೆ ಬಡವರ ಮೇಲೆ ಹಾಕುವ ಪರೋಕ್ಷ ತೆರಿಗೆಯೇ ಆಗಿರುತ್ತದೆ. ಈ ಡೀಸೆಲ್ ಬೆಲೆ ಏರಿಸಿ ಗ್ಯಾರಂಟಿಗಳು ಕೊಟ್ಟ ಉಸಿರನ್ನು ಇದೇ ಸರಕಾರವೇ ಕಸಿದುಕೊಳ್ಳುತ್ತಿದೆ.

ಆದರೆ ಈ ಹಿಂದಿನ ಹತ್ತು ವರ್ಷಗಳಲ್ಲಿ ಡೀಸೆಲ್ ಮತ್ತು ಪೆಟ್ರೊಲ್ ಬೆಲೆಯನ್ನು ಲೀಟರ್‌ಗೆ 40 ರೂ. ಯಿಂದ 100 ರೂ.ಗೆ ತಲುಪಿಸಿದ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ. ಈ ವಿಷಯದಲ್ಲಿ ಕೇಂದ್ರದ ಮೋದಿ ಸರಕಾರ ದೇಶದ ಬಡಜನರಿಗೆ ಮಾಡಿದ ಅನ್ಯಾಯಕ್ಕೆ ಎಣೆಯಿಲ್ಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಇದ್ದಾಗಲೂ ತೈಲ ಬೆಲೆಯನ್ನು ಕಡಿಮೆ ಮಾಡಲಿಲ್ಲ. ಬದಲಿಗೆ ಕೇಂದ್ರದ ತೆರಿಗೆ ಪಾಲನ್ನು ಕಳೆದ ಹತ್ತು ವರ್ಷಗಳಲ್ಲಿ 3 ರೂ.ಗಳಿಂದ 35 ರೂ.ಗಳಿಗೆ ಹೆಚ್ಚಿಸಿಕೊಂಡಿತು. ಅದರಲ್ಲಿ ರಾಜ್ಯದೊಂದಿಗೆ ಹಂಚಿಕೊಳ್ಳದ ಸೆಸ್ ಪಾಲೇ ಹೆಚ್ಚು. ಆದರೆ ದೇಶದ ಅಭಿವೃದ್ಧಿಗೆ ಬೇಕಿರುವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ಅಧಿಕ ತೆರಿಗೆ ಮತ್ತು ಸೆಸ್ ಎಂಬ ಸಬೂಬನ್ನು ಹೇಳಿತ್ತು.

ಆಗೆಲ್ಲಾ ದೇಶದ ಅಭಿವೃದ್ಧಿಗೆ ಅಗತ್ಯ ಎಂದು ಮೋದಿ ಭಜನೆ ಮಾಡಿದ ಬಿಜೆಪಿ ಈಗ ಸಿದ್ದರಾಮಯ್ಯ ಸರಕಾರದ ಕ್ರಮದ ವಿರುದ್ಧ ಬೀದಿಗಿಳಿದಿರುವುದು ಅದರ ರಾಜಕೀಯ ಧೂರ್ತತನ.

ಮೋದಿ ಇರಿದರೆ ಮಾತ್ರ ನೋವೇ?

ಆದರೆ ಅದು ಸಿದ್ದರಾಮಯ್ಯ ಸರಕಾರದ ತೆರಿಗೆ ಏರಿಕೆಗೆ ಸಮರ್ಥನೆಯಾಗಬಾರದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರದ ಮೋದಿ ಸರಕಾರ ಏರಿಸಿದರೂ ಬಡವರ ಬವಣೆ ಹೆಚ್ಚಾಗುತ್ತದೆ. ರಾಜ್ಯ ಸರಕಾರ ಏರಿಸಿದರೂ ಬಡವರ ಬವಣೆ ಹೆಚ್ಚುತ್ತದೆ.

ಈಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯದ ತೆರಿಗೆಯ ಪಾಲನ್ನು ಸರಾಸರಿ ಶೇ. 20ರಷ್ಟು ಹೆಚ್ಚಿಸಿರುವ ಸಿದ್ದರಾಮಯ್ಯ ಸರಕಾರವೂ ರಾಜ್ಯದ ಅಭಿವೃದ್ಧಿಗಾಗಿ ಸಂಪನ್ಮೂಲ ಸಂಗ್ರಹ ಮಾಡಿಕೊಳ್ಳಲು ತೆರಿಗೆ ಹೆಚ್ಚಿಸಲಾಗಿದೆಯೆಂದು ಮೋದಿ ಮಾತನ್ನೇ ಪುನರುಚ್ಚರಿಸಿದೆ. ಏನು ವ್ಯತ್ಯಾಸ?

ಸಂಪನ್ಮೂಲವನ್ನು ಸಂಗ್ರಹಿಸಲು ತೆರಿಗೆ ಹಾಕಬೇಕಿರುವುದು ಸಂಪನ್ಮೂಲ ಇರುವವರ ಮೇಲೆಯೇ ಹೊರತು, ಇಲ್ಲದವರ ಮೇಲೆ ಇನ್ನಷ್ಟು ತೆರಿಗೆ ಹಾಕುವುದರ ಮೂಲಕವಲ್ಲ. ಅಂತಹ ಆರ್ಥಿಕ ನೀತಿಯನ್ನು ಮೋದಿ ಅನುಸರಿಸಿದರೂ, ಸಿದ್ದರಾಮಯ್ಯ ಅನುಸರಿಸಿದರೂ ಅದನ್ನು ಕಾರ್ಪೊರೇಟ್‌ವಾದಿ ನವ ಉದಾರವಾದಿ ಎನ್ನುತ್ತಾರೆಯೇ ಹೊರತು ಸಮಾಜವಾದಿ ಎನ್ನುವುದಿಲ್ಲ.

ಮುಖ್ಯಮಂತ್ರಿಯವರು ಕೊಟ್ಟಿರುವ ಪತ್ರಿಕಾ ಹೇಳಿಕೆಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪ್ರತೀ ವರ್ಷ 56 ಲಕ್ಷ ಕಿಲೋ ಲೀಟರ್ ಪೆಟ್ರೋಲ್ ಮತ್ತು 1.1 ಕೋಟಿ ಲೀಟರ್ ಡೀಸೆಲ್ ಖರೀದಿಯಾಗುತ್ತದೆ. ಈಗ ಸರಕಾರ ಪ್ರತೀ ಲೀಟರ್ ಪೆಟ್ರೊಲ್ ಮೇಲೆ 3 ರೂ. ಮತ್ತು ಪ್ರತೀ ಲೀಟರ್ ಡೀಸೆಲ್ ಮೇಲೆ 3.50 ರೂ. ಏರಿಸಿದೆ. ಹೀಗಾಗಿ ಇದರಿಂದ ಏನಿಲ್ಲವೆಂದರೂ 5,000 ಕೋಟಿ ರೂ. ಸಂಪನ್ಮೂಲವನ್ನು ಅಧಿಕವಾಗಿ ಸಂಗ್ರಹಿಸುವ ಉದ್ದೇಶ ಸರಕಾರಕ್ಕಿದೆ. ಅಂದರೆ ಸಿದ್ದರಾಮಯ್ಯ ಸರಕಾರ ಈ ನಾಡಿನ ಸಾಮಾನ್ಯ ಜನರ ಬರಿದಾದ ಕಿಸೆಗಳಿಂದ 5,000 ಕೋಟಿ ರೂ.ಗಳನ್ನು ಕಸಿಯುತ್ತದೆ ಎಂದರ್ಥ.

ಮುಖ್ಯಮಂತ್ರಿಗಳ ಪ್ರಕಾರ ಪ್ರತೀ ವರ್ಷ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚುವರಿಯಾಗಿ 56,000 ಕೋಟಿ ರೂಪಾಯಿಗಳು ಬೇಕು. ಕೇಂದ್ರ ಸರಕಾರ ರಾಜ್ಯಕ್ಕೆ ಮಾಡುವ ತಾರತಮ್ಯ, ಅನ್ಯಾಯಗಳ ಕಾರಣದಿಂದ ಮತ್ತು ಜಿಎಸ್‌ಟಿ ಜಾರಿಯಾದ ನಂತರ ರಾಜ್ಯಕ್ಕೆ ಇರುವ ಸಂಪನ್ಮೂಲಗಳು ಸೀಮಿತವಾದದ್ದು. ಅಬಕಾರಿ, ವಿದ್ಯುತ್, ಪೆಟ್ರೊಲ್- ಡೀಸೆಲ್ ತೆರಿಗೆ, ಮುದ್ರಾಂಕ ಮತ್ತು ಇತರ ತೆರಿಗೆಯೇತರ ಶುಲ್ಕ ಇತ್ಯಾದಿ ಆದಾಯಗಳು. ಹೀಗಾಗಿ ಗ್ಯಾರಂಟಿ ಸರಿದೂಗಿಸಲು ಮತ್ತು ರಾಜ್ಯದ ಅಭಿವೃದ್ಧಿ ಸಾಧಿಸಲು ಅನಿವಾರ್ಯವಾಗಿ ಪೆಟ್ರೊಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಳ ಮಾಡಬೇಕಾಗಿದೆ ಎನ್ನುವುದು ಸಿದ್ದು ಸರಕಾರದ ಸಬೂಬು. ಇದು ಸತ್ಯ. ಆದರೆ ಅರ್ಧ ಸತ್ಯ.

ಕರ್ನಾಟಕ ರಾಜ್ಯವು ದೇಶದ ಮೊದಲ ಏಳು ಅಭಿವೃದ್ಧಿಶೀಲ ರಾಜ್ಯಗಳಲ್ಲಿ ಒಂದಾಗಿದ್ದು ಅದರ ವಾರ್ಷಿಕ ಬಜೆಟ್‌ನ ಗಾತ್ರವೇ 3.75 ಲಕ್ಷ ಕೋಟಿ ರೂ. ರಾಜ್ಯದ ಜಿಡಿಪಿ 25.7 ಲಕ್ಷ ಕೋಟಿ ರೂಪಾಯಿ. ಹೀಗಾಗಿ ಗ್ಯಾರಂಟಿ ವೆಚ್ಚಕ್ಕೆ ಬೇಕಿರುವ ಸಂಪನ್ಮೂಲಕ್ಕೆ ಕೊರತೆಯೂ ಇಲ್ಲ. ಅದನ್ನು ಸಂಗ್ರಹಿಸಲು ಬಡವರ ಬೆನ್ನಿಗೆ ಬರೆ ಹಾಕುವ ಅಗತ್ಯವಿಲ್ಲ. ಸಮಸ್ಯೆ ಇರುವುದು ಅಲ್ಲಲ್ಲ.

ಕಾರ್ಪೊರೇಟ್ ಲಗಾಮು- ಗ್ಯಾರಂಟಿಯ ಮುಲಾಮು

ಗ್ಯಾರಂಟಿಗಳ ಅಗತ್ಯ ಉಂಟಾಗಿರುವುದೇ ನಾಡಿನ ಬಹುಪಾಲು ಜನರ ಬಳಿ ಬಡತನದ ಬವಣೆಯಿಂದ ಮುಕ್ತರಾಗಲು ಬೇಕಾದ ಸಂಪತ್ತುಗಳಾದ ಭೂಮಿ ಮತ್ತು ಬಂಡವಾಳ ಇರದಿರುವುದು. ಒಂದು ನೈಜ ಸಮಾಜವಾದಿ ಆರ್ಥಿಕ ನೀತಿಗಳನ್ನು ಅನುಸರಿಸುವ ಸರಕಾರ ಇಂತಹ ಸಂಪತ್ತನ್ನು ಜನರಿಗೆ ಹಂಚಿ ಜನರನ್ನು ಅಭಿವೃದ್ಧಿಯ ಮುಂಚೂಣಿ ಪಾತ್ರಧಾರಿಗಳನ್ನಾಗಿ ಮಾಡುತ್ತದೆ.

ಅದಕ್ಕೆ ತದ್ವಿರುದ್ಧವಾಗಿ 1991ರಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಇತರ ಎಲ್ಲಾ ಪಕ್ಷಗಳು ಸರ್ವ ಸಮ್ಮತಿಯಿಂದ ಜಾರಿಗೆ ತಂದಿರುವ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನೀತಿಗಳು ಜನರ ಬದಲಿಗೆ ಕಾರ್ಪೊರೇಟ್ ಉದ್ಯಮಿಗಳನ್ನು ಅಭಿವೃದ್ಧಿಯ ಏಜೆಂಟರುಗಳನ್ನಾಗಿ ಒಪ್ಪಿಕೊಂಡಿದೆ. ಭೂಮಿ, ಬಂಡವಾಳ ಮತ್ತು ಶ್ರಮ ಎಲ್ಲಾ ಸಂಪತ್ತುಗಳನ್ನು ಬಡವರ ಬದಲಿಗೆ ಕಾರ್ಪೊರೇಟ್ ಉದ್ಯಮಿಗಳಿಗೆ ಪರಭಾರೆ ಮಾಡುವ ನೀತಿಗಳನ್ನು ಅನುಸರಿಸುತ್ತಿದೆ. ಅವರ ಲಾಭಕ್ಕೆ ಅನುಕೂಲವಾಗುವ ರೀತಿಯಲ್ಲಿ ತೆರಿಗೆ, ರಿಯಾಯಿತಿ ಮತ್ತು ವಿನಾಯಿತಿ ನೀತಿಗಳನ್ನು ಪುನರ್ ರೂಪಿಸಿದೆ. ಉದ್ಯಮಿಗಳ ಮೇಲೆ ಹಾಕುತ್ತಿದ್ದ ನೇರ ತೆರಿಗೆಯನ್ನು ಕಡಿಮೆ ಮಾಡಿ, ಬಹುಸಂಖ್ಯಾತ ಸಾಮಾನ್ಯ ಜನರಿಂದ ಸುಲಿಯುವ ಪರೋಕ್ಷ ತೆರಿಗೆಯಾದ ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಜಾರಿ ಮಾಡಿರುವುದು ಕೂಡ ಕಾರ್ಪೊರೇಟ್ ಪರವಾದ ತೆರಿಗೆ ನೀತಿಯ ಭಾಗ.

ಇದಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಎಲ್ಲಾ ಪಕ್ಷಗಳ ಬೆಂಬಲವಿತ್ತು. ಈ ನೀತಿಗಳು ಜನರ ಬವಣೆಯನ್ನು ತಾರಕಕ್ಕೆ ಮುಟ್ಟಿಸಿ ನಿಭಾಯಿಸುವುದು ಕಷ್ಟವಾದಾಗ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಕಾರ್ಪೊರೇಟ್ ವಾದಿ ಸರಕಾರವೇ ಬವಣೆಯನ್ನು ತಾತ್ಕಾಲಿಕವಾಗಿ ನೀಗಿಸಲು ಗ್ಯಾರಂಟಿಗಳ ದಾರಿ ಹಿಡಿಯುತ್ತವೆ. ಆದರೆ ಇದು ತಾತ್ಕಾಲಿಕ ಮಿತಿಯನ್ನು ದಾಟಿ ಕಾರ್ಪೊರೇಟ್ ಸೌಕರ್ಯಕ್ಕೆ ಅಡ್ಡಿಯಾಗುತ್ತಿದ್ದಂತೆ ಅದನ್ನು ಒಳಗಿಂದ ಟೊಳ್ಳು ಮಾಡಲು ಅಥವಾ ಕಿತ್ತುಹಾಕುವ ಕ್ರಮಗಳು ಪ್ರಾರಂಭವಾಗುತ್ತವೆ. ದುರದೃಷ್ಟವಶಾತ್ ಗ್ಯಾರಂಟಿ ಪರ ಮತ್ತು ವಾದಗಳೆರಡೂ ಇಂದು ಅದೇ ಪಾತ್ರವನ್ನು ವಹಿಸುತ್ತಿವೆ.

ಗ್ಯಾರಂಟಿಯ ವಿರುದ್ಧ ಸರ್ವಸಮ್ಮತ ಸಮರ

ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದ ಕಾರಣ ಋಣಿಗಳಾಗದ ಜನರ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲೂ ಕಾಂಗ್ರೆಸ್ ಒಳಗೆ ಸುಪ್ತವಾಗಿದ್ದ ಗ್ಯಾರಂಟಿ ವಿರೋಧಿ ವಾದಗಳು ಅಭಿವ್ಯಕ್ತವಾಗುತ್ತಿದೆ. ಅದೇ ಬಗೆಯ ಬಡವ ವಿರೋಧಿ ಆಕ್ರೋಶಗಳುಳ್ಳ ಸಜ್ಜನರು ಗ್ಯಾರಂಟಿಗಳನ್ನು ಕೇವಲ ಅತ್ಯಂತ ಬಡವರ್ಗಕ್ಕೆ ಮಾತ್ರ ಸೀಮಿತಗೊಳಿಸಬೇಕು, ಎಲ್ಲಾ ವರ್ಗಗಳಿಗೂ ಅನ್ವಯಿಸುವ ಶಕ್ತಿ ಮತ್ತು ಗೃಹಜ್ಯೋತಿ ಯೋಜನೆಗಳನ್ನು ಸೀಮಿತ ಫಲಾನುಭವಿಗಳಿಗೆ ಕಡಿತಗೊಳಿಸಬೇಕೆಂಬ ಆಗ್ರಹಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯಂತೂ ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂಬ ಸಮಾಜದ ಬಲಿಷ್ಠ ವರ್ಗ ಮತ್ತು ಜಾತಿಗಳ ವಾದವನ್ನೇ ರಾಜಕೀಯ ಭಾಷೆಯಲ್ಲಿ ಮುಂದಿಡುತ್ತಾ ಪ್ರತೀ ಸಂದರ್ಭದಲ್ಲೂ ಗ್ಯಾರಂಟಿ ಯೋಜನೆಗಳನ್ನು ಅಮಾನ್ಯಗೊಳಿಸಲು ಪ್ರಯತ್ನಿಸುತ್ತಿದೆ. ಒಟ್ಟಾರೆಯಾಗಿ ನೋಡಿದರೆ ಈ ಎಲ್ಲಾ ಒಳಗಿನ ಮತ್ತು ಹೊರಗಿನ ದಾಳಿಗಳು, ಚುನಾವಣಾ ಫಲಿತಾಂಶಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಗಳು ಗ್ಯಾರಂಟಿ ಯೋಜನೆಗಳಲ್ಲಿ ಬಹಳಷ್ಟು ಮಾರ್ಪಾಡುಗಳು ಬರಲಿವೆ ಎಂಬ ಸಂದೇಶವನ್ನಂತೂ ನೀಡುತ್ತಿವೆ.

ಇದು ನಿರೀಕ್ಷಿತವೂ ಮತ್ತು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಒಟ್ಟಾರೆ ಆರ್ಥಿಕ ನೀತಿಗಳನ್ನು ನೋಡಿದರೆ ಸಹಜವೂ ಆಗಿರುವುದು ಸ್ಪಷ್ಟ.

ಏಕೆಂದರೆ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳು ಬಡವರ ತಾತ್ಕಾಲಿಕ ಬವಣೆಗಳನ್ನು ನೀಗಿಸುತ್ತಿದ್ದರೂ, ಅದು ಜಾರಿಯಾಗುತ್ತಿರುವುದು ಕಾರ್ಪೊರೇಟ್ ಕುಬೇರರ ಧನಿಕತನವನ್ನು ಜಾಸ್ತಿ ಮಾಡುವ ನವ ಉದಾರವಾದಿ ಆರ್ಥಿಕ ಚೌಕಟ್ಟಿನೊಳಗೇ. ಸಿದ್ದು ಆಗಲೀ, ಮೋದಿಯಾಗಲೀ ಅನುಸರಿಸುತ್ತಿರುವ ಈ ನವ ಉದಾರವಾದಿ ಆರ್ಥಿಕ ನೀತಿಗಳ ಪ್ರಕಾರ ಸಮಾಜದಲ್ಲಿ ಅಭಿವೃದ್ಧಿಯಾಗಬೇಕು ಎಂದರೆ ಉದ್ಯಮಿಗಳು ಸಲೀಸಾಗಿ ಹೂಡಿಕೆ ಮಾಡಿ ಲಾಭ ಮಾಡುವಂತಾಗಬೇಕು. ಅದಕ್ಕಾಗಿ ಬಡವರ ಬಡತನವನ್ನು ನೀಗಿಸುವ ದೇಶದ ಭೌತಿಕ ಸಂಪತ್ತಾದ ಭೂಮಿ, ಬಂಡವಾಳ ಇತ್ಯಾದಿಗಳನ್ನು ಬಡವರಿಂದ ಕಸಿದು ಕಾರ್ಪೊರೇಟ್‌ಗಳ ಪಾಲು ಮಾಡಬೇಕು. ಅವರ ಅಭಿವೃದ್ಧಿಯ ಫಲವು ನಿಧಾನವಾಗಿ ತೊಟ್ಟಿಕ್ಕುತ್ತಾ ಸಾಮಾನ್ಯ ಜನರಿಗೆ ಉದ್ಯೋಗ ಮತ್ತು ಆದಾಯಗಳ ಲಾಭ ದಕ್ಕುತ್ತದೆ ಎಂಬುದು ಈ ಅಭಿವೃದ್ಧಿ ನೀತಿಯ ಸಾರ.

ಮೋದಿಯ ಬಿಜೆಪಿಯದ್ದು ಈ ನೀತಿಯನ್ನು ಎರಡೂ ಕತ್ತಿಗಳ ಮೂಲಕ ಆಕ್ರಮಣ ಮಾಡಿ ಜಾರಿಗೊಳಿಸುವ ಕ್ರಮ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರದ್ದು ಒಂದು ಕೈಯಲ್ಲಿ ಕಾರ್ಪೊರೇಟ್ ಕತ್ತಿಯ ಮೂಲಕ ಅಕ್ರಮಣ, ಮತ್ತೊಂದು ಕೈಯಲ್ಲಿ ಆ ಕತ್ತಿ ಮಾಡಿದ ಗಾಯಕ್ಕೆ ಹಚ್ಚುವ ಮುಲಾಮು.

ಗ್ಯಾರಂಟಿ ನೀತಿಗಳು ತಾನೇ ಅವಕಾಶ ಮಾಡಿಕೊಟ್ಟ ಕಾರ್ಪೊರೇಟ್ ದಾಳಿಯಿಂದಾದ ಗಾಯಕ್ಕೆ ಸರಕಾರ ಹಚ್ಚುವ ಮುಲಾಮಷ್ಟೆ. ಬಿಜೆಪಿ ಮುಲಾಮು ಕೂಡ ಹಚ್ಚುತ್ತಿರಲಿಲ್ಲ ಎನ್ನುವುದು ಮಾತ್ರ ಅವೆರಡರ ನಡುವಿನ ವ್ಯತ್ಯಾಸ.

ಹೀಗಾಗಿ ಈ ಗ್ಯಾರಂಟಿಗಳು ಕಾರ್ಪೊರೇಟ್ ಪರ ಬಂಡವಾಳಶಾಹಿ ನೀತಿಗಳ ಚೌಕಟ್ಟಿನಲ್ಲೇ ಇರುವ ಆಳುವವರ ಔದಾರ್ಯ. ಚುನಾವಣೆಯ ಸಂದರ್ಭದಲ್ಲಿ ತಾತ್ಕಾಲಿಕ ಅನಿವಾರ್ಯ. ಅದು ಕಾರ್ಪೊರೇಟ್ ಅಭಿವೃದ್ಧಿಗೆ ತೊಡಕಾದರೆ ಅದನ್ನು ಒಳಗಿಂದಲೇ ಟೊಳ್ಳು ಮಾಡುವ ನೀತಿಗಳನ್ನು ಕಾಂಗ್ರೆಸ್ ಪಕ್ಷವೇ ಅನುಸರಿಸುತ್ತದೆ ಮತ್ತು ಅದಕ್ಕೆ ಬೇಕಾದ ಸಾಮಾಜಿಕ ಸಮ್ಮತಿಯನ್ನು ರೂಪಿಸಲು ಬೇಕಾದ ಜನಾಭಿಪ್ರಾಯವನ್ನು ಒಟ್ಟುಹಾಕುತ್ತದೆ.

ಸಿದ್ದರಾಮಯ್ಯ ಮಾದರಿ ಖಾಸಗೀಕರಣ ಸಮ್ಮತವೇ?

ಏಕೆಂದರೆ, ಚುನಾವಣೆಯ ನಂತರ ಕಾಂಗ್ರೆಸ್ ಆರ್ಥಿಕ ನೀತಿಯ ಕಾರ್ಪೊರೇಟ್ ಪಂಜುಗಳು ಹೊರಗೆ ಬರುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯ ಅಪಾರ ಹೆಚ್ಚಳ ಒಂದು ಕಡೆಯಾದರೆ, ರಾಜ್ಯದ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು Consultation Group (ಬಿಸಿಜಿ) ಸಂಸ್ಥೆ ಹಲವಾರು ಕಾರ್ಪೊರೇಟ್‌ವಾದಿ ಸಲಹೆಗಳನ್ನು ಕೊಟ್ಟಿರುವುದನ್ನು ಪತ್ರಿಕೆಯೊಂದು ನಿನ್ನೆ ವರದಿ ಮಾಡಿದೆ.

ಅದರಲ್ಲಿ ಪ್ರಮುಖವಾದುದು ಬೆಂಗಳೂರಿನ ಆಸುಪಾಸಿನ ನಂದಗುಡಿ, ಬಿಡದಿ ಇತ್ಯಾದಿ ಪ್ರದೇಶಗಳಲ್ಲಿ ರಾಜ್ಯ ಸರಕಾರಕ್ಕೆ ಸೇರಿರುವ 25,000 ಎಕರೆ ಜಮೀನನ್ನು ಖಾಸಗಿಯವರಿಗೆ ಮಾರಿ 5,000 ಕೋಟಿ ರೂ. ಸಂಪಾದಿಸುವುದು ಒಂದು. ರಾಜ್ಯದ ಹಣಕಾಸು ಇಲಾಖೆ ಕಾರ್ಯದರ್ಶಿಯವರು ಈ ಯೋಜನೆಯನ್ನು ಸರಕಾರ ಒಪ್ಪಿಕೊಂಡಿರುವ ಇಂಗಿತವನ್ನು ನೀಡಿದ್ದಾರೆ.

ಇದು ನರೇಂದ್ರ ಮೋದಿಯವರು 2022ರಲ್ಲಿ ಅಕ್ರಮವಾಗಿ ಜಾರಿ ಮಾಡಿದ National Monetisation Pipeline (NMP) ಎಂಬ ದೇಶದ ಸಂಪತ್ತನ್ನು ಮಾರಿಕೊಳ್ಳುವ ಯೋಜನೆಯ ನಕಲೇ ಆಗಿದೆ. ಮೋದಿ ಮಾಡಿದ್ದೂ ತಪ್ಪೇ. ಈಗ ಸಿದ್ದರಾಮಯ್ಯ ಮಾಡುತ್ತಿರುವುದೂ ತಪ್ಪೇ. ಸರಕಾರದ ಭೂಮಿಯನ್ನು ವಸತಿ ಮತ್ತು ಕೃಷಿಗಾಗಿ ಕೊಡಬೇಕೆಂದು ಸ್ವಾತಂತ್ರ್ಯ ಬಂದಾಗಿನಿಂದಲೂ ಹೋರಾಡುತ್ತಿರುವ ಜನತೆಗೆ ದೇಶದ ಸಂಪತ್ತನ್ನು ನಿರಾಕರಿಸಿ ಉದ್ಯಮಿಗಳಿಗೆ ಪರಭಾರೆ ಮಾಡುವುದು ಸಮಾಜವಾದವೇ?

ಹಾಗೆಯೇ ಇದೇ ಸಂಪನ್ಮೂಲ ಸಂಗ್ರಹ ಯೋಜನೆಯ ಭಾಗವಾಗಿ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ನೌಕರರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಇಲಾಖೆಯಲ್ಲಿ ಸರಕಾರದಿಂದಾಗುತ್ತಿರುವ ವೆಚ್ಚವನ್ನು ಕಡಿಮೆ ಮಾಡಲು ಜಲಸಂಪನ್ಮೂಲ, ಪಂಚಾಯತ್ ರಾಜ್, ಲೋಕೋಪಯೋಗಿ, ನಗರಾಭಿವೃದ್ಧಿ ಮತ್ತು ಇಂಧನ ಇಲಾಖೆಗಳನ್ನು ಗುರುತಿಸಲಾಗಿದೆ. ಇಂಧನ ಇಲಾಖೆಯಲ್ಲಿ ವೆಚ್ಚ ತಗ್ಗಿಸಿ ಮತ್ತು ಆದಾಯ ಹೆಚ್ಚಿಸುವ ಒಂದು ಕ್ರಮವೇ ಪೆಟ್ರೊಲ್ ಮತ್ತು ಡೀಸೆಲ್ ತೆರಿಗೆ ಏರಿಕೆ. ಇದೇ ರೀತಿಯ ಕ್ರಮಗಳು ಎಲ್ಲಾ ಇಲಾಖೆಗಳಲ್ಲೂ ಬರಲಿದೆ. ಈಗಾಗಲೇ ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲೇ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಸರಕಾರ ಪರಿಗಣಿಸುತ್ತಿದೆ. ಹಾಗೆಯೇ ಇತರ ಎಲ್ಲಾ ಇಲಾಖೆಗಳಲ್ಲೂ.

ಈ ಒಟ್ಟಾರೆ ಕ್ರಮಗಳಲ್ಲಿ ಎರಡು ಆಯಾಮಗಳಿವೆ. ಒಂದೋ ಗ್ಯಾರಂಟಿಗಳ ವ್ಯಾಪ್ತಿಯನ್ನು ತಗ್ಗಿಸಲಾಗುತ್ತದೆ ಅಥವಾ ಕೊಟ್ಟ ಗ್ಯಾರಂಟಿಯ ಹಣವನ್ನು ಫಲಾನುಭವಿಗಳ ಮತ್ತೊಂದು ಕಿಸೆಯ ಮೂಲಕ ತುಂಬಿಕೊಳ್ಳುವ ಆಯಾಮ ಒಂದಿದ್ದರೆ, ಒಟ್ಟಾರೆ ಆರ್ಥಿಕತೆಯನ್ನೇ ಸ್ಪರ್ಧಾತ್ಮಕವಾಗಿ ಕಾರ್ಪೊರೇಟ್ ಲಾಭದ ಪರವಾಗಿ ಮಾಡುವ ಆಯಾಮವೂ ಇದೆ. ಇದೆಲ್ಲವೂ ಗ್ಯಾರಂಟಿ ಮತ್ತು ಸಿದ್ದರಾಮಯ್ಯ ಸಮಾಜವಾದ ಕರ್ನಾಟಕದ ಮಾದರಿ ಇತ್ಯಾದಿಗಳ ಹೆಸರಿನಲ್ಲಿ ನಡೆಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News