ಪ್ರಜಾತಂತ್ರವಾದಿಯ ಮನೋಗತ

2024ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ಸತತ ಮೂರನೇ ಅವಧಿಗೆ ಬಹುಮತವನ್ನು ಪಡೆದರೆ, ಇದು ಭಾರತದಲ್ಲಿ ಪ್ರಜಾಪ್ರಭುತ್ವ, ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾನಿ ತರಬಹುದು. ವಿರೋಧ ಪಕ್ಷವನ್ನು ಮತ್ತಷ್ಟು ಕಡೆಗಣಿಸಬಹುದು, ಮುಕ್ತ ಪತ್ರಿಕಾ ಮಾಧ್ಯಮವನ್ನು ಮತ್ತಷ್ಟು ಹತ್ತಿಕ್ಕಬಹುದು. ಅಲ್ಪಸಂಖ್ಯಾತರು ಹೆಚ್ಚು ಅಸುರಕ್ಷಿತತೆಗೆ ತುತ್ತಾಗಿಯಾರು. ರಾಜ್ಯಗಳು ಕೇಂದ್ರದ ಮುಂದೆ ಇನ್ನಷ್ಟು ಹೀನಾಯವಾಗಿ ತಲೆಬಾಗುವಂತಾಗಬಹುದು. ಇಂಥ ಪರಿಸ್ಥಿತಿ ಬಹುಶಃ ಆರ್ಥಿಕತೆಯ ಹಾನಿಗೆ ಕಾರಣವಾಗಬಹುದು.

Update: 2023-07-01 06:40 GMT

2009ರ ಸಾರ್ವತ್ರಿಕ ಚುನಾವಣೆಗಳಿಗೆ ಕೆಲವು ತಿಂಗಳುಗಳ ಮುಂಚೆ ನಾನು ದಿಲ್ಲಿ ಮ್ಯಾಗಝಿನ್‌ಗೆ ಒಂದು ಪ್ರಬಂಧ ಬರೆದಿದ್ದೆ. ಭಾರತದಲ್ಲಿ ಪ್ರಜಾತಂತ್ರ ಪ್ರಕ್ರಿಯೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನಾನು ಹಂಬಲಿಸಿದ ನಾಲ್ಕು ವಿಚಾರಗಳನ್ನು ಅದರಲ್ಲಿ ವಿವರಿಸಿದ್ದೆ.

ಮೊದಲನೆಯದಾಗಿ, ಒಂದು ಕುಟುಂಬದ ಸಂಪೂರ್ಣ ಹಿಡಿತವಿಲ್ಲದ ಕಾಂಗ್ರೆಸನ್ನು ನಾನು ಬಯಸಿದ್ದೆ. ಎರಡನೆಯದಾಗಿ, ಆರೆಸ್ಸೆಸ್ ಮತ್ತು ಅದರ ಹಿಂದೂ ರಾಷ್ಟ್ರದ ಕಲ್ಪನೆಯಿಂದ ದೂರವಿರುವ ಬಿಜೆಪಿ ಬೇಕಿದೆ ಎನ್ನಿಸಿತ್ತು. ಮೂರನೆಯದಾಗಿ, ಆರ್ಥಿಕತೆಯ ಮೇಲಿನ ಹಿಡಿತದ ತಪ್ಪುನಂಬಿಕೆ ಮತ್ತು ಹಿಂಸಾಚಾರವನ್ನು ಸಂಪೂರ್ಣವಾಗಿ ತೊಡೆದುಹಾಕುವ, ಒಗ್ಗಟ್ಟಿನ ಮತ್ತು ಸುಧಾರಣೆಗೆ ಒತ್ತು ನೀಡುವ ಎಡಪಕ್ಷವನ್ನು ಇಷ್ಟಪಟ್ಟಿದ್ದೆ. ಕೊನೆಯದಾಗಿ, ವಿಸ್ತರಿಸಿಕೊಳ್ಳುತ್ತಿರುವ ಮಧ್ಯಮ ವರ್ಗದ ಆಕಾಂಕ್ಷೆಗಳನ್ನು ಆಧರಿಸಿದ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿರುವ ಮತ್ತು ಯಾವುದೇ ನಿರ್ದಿಷ್ಟ ಪಂಥ ಅಥವಾ ಸಮುದಾಯಕ್ಕೆ ಸೀಮಿತವಾಗಿರದ ರಾಜಕೀಯವನ್ನು ಉತ್ತೇಜಿಸುವ ಹೊಸದೇ ಪಕ್ಷವನ್ನು ಕಟ್ಟಬೇಕಿದೆಯೆಂಬುದು ನನ್ನ ಹಂಬಲವಾಗಿತ್ತು.

ನಾನು ಹಂಬಲಿಸಿದ್ದನ್ನು ಹದಿನೈದು ವರ್ಷಗಳು ಮತ್ತು ಮೂರು ಸಾರ್ವತ್ರಿಕ ಚುನಾವಣೆಗಳ ಬಳಿಕ ನೆನಪಿಸಿಕೊಳ್ಳುವುದು ಮತ್ತು ಅದು ಕೈಗೂಡುವುದಕ್ಕೆ ಇನ್ನೂ ಎಷ್ಟು ಕಾಲ ಬೇಕೆಂದು ನೋಡುವುದು ಅಗತ್ಯವೆನ್ನಿಸುತ್ತಿದೆ. ಕಡೆಗೂ ಗಾಂಧಿ ಕುಟುಂಬಕ್ಕೆ ಹೊರತಾದವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ, ಪಕ್ಷವನ್ನು ಆ ಕುಟುಂಬವೇ ಇನ್ನೂ ಗಟ್ಟಿಯಾಗಿ ನಿಯಂತ್ರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದಾಗ, ರಾಹುಲ್ ಗಾಂಧಿ ಭಾರತದ ಮುಂದಿನ ಪ್ರಧಾನಿಯಾಗಬೇಕು ಎಂದು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ‘ರಾಹುಲ್ ಫಾರ್ ಪಿಎಂ’ ಹ್ಯಾಂಡಲ್‌ಗಳು ತೀವ್ರವಾಗಲು ಯಾತ್ರೆ ಕಾರಣವಾಯಿತು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರವಂತೂ ಇವು ಇನ್ನೂ ಹೆಚ್ಚಿದವು. ಪಕ್ಷದ ವಲಯಗಳಲ್ಲಿ ವಿಚಿತ್ರವಾದ ಭಿನ್ನಾಭಿಪ್ರಾಯದ ಧ್ವನಿ ಇದೆ ಎಂಬುದೇನೋ ನಿಜ. ಆದರೆ ಅದು ಆಗಾಗ ಪ್ರಧಾನಿ ಹುದ್ದೆಗೆ ಸೂಚಿಸುವ ಪರ್ಯಾಯ ಕಾಂಗ್ರೆಸ್ ಅಭ್ಯರ್ಥಿ, ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ.

ಭಾರತೀಯ ಜನತಾ ಪಕ್ಷದ ಬಗ್ಗೆ ಹೇಳುವುದಾದರೆ, ಆರೆಸ್ಸೆಸ್ ಮತ್ತು ಹಿಂದುತ್ವದಿಂದ ದೂರವಾಗದೆ ಉಳಿದಿದೆ. ಅದು ಹಿಂದೆಂದಿಗಿಂತಲೂ ಹೆಚ್ಚಾಗಿ ಅವುಗಳ ಹಿಡಿತಕ್ಕೆ ಬಂದಿದೆ. ಅದರ 300 ಸಂಸದರಲ್ಲಿ ಯಾರೊಬ್ಬರೂ ಮುಸ್ಲಿಮರಿಲ್ಲ. ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮರನ್ನು ಅದು ಹೇಗೆ ಇತರ ನಾಗರಿಕರಿಗೆ ಸಮಾನರಲ್ಲ ಎಂದು ನೋಡುತ್ತದೆ ಎಂಬುದರ ವಾಸ್ತವ ಇದು. ಪಠ್ಯಪುಸ್ತಕಗಳ ತಿದ್ದುವಿಕೆ ಮತ್ತು ಹೊಸ ಶೈಕ್ಷಣಿಕ ಪಠ್ಯಕ್ರಮಗಳ ರಚನೆ ಇವೆಲ್ಲ ಆಡಳಿತ ಪಕ್ಷದ ಬಹುಸಂಖ್ಯಾಕ ಮನಸ್ಥಿತಿ ವ್ಯಕ್ತಗೊಳ್ಳುತ್ತಿರುವ ಇತರ ಬಗೆಗಳಾಗಿವೆ.

1998ರಿಂದ 2004ರವರೆಗಿನ ಮೊದಲ ಎನ್‌ಡಿಎ ಆಡಳಿತದ ಅವಧಿಯಲ್ಲಿ ಸರಕಾರದ ನೀತಿಗಳು ಮತ್ತು ಕಾರ್ಯಕ್ರಮಗಳು ಹಿಂದುತ್ವದ ಪ್ರಭಾವದಿಂದ ಮುಕ್ತವಾಗಿರಲಿಲ್ಲ. ಆದರೂ, ಈ ಪ್ರಭಾವಗಳು ತುಲನಾತ್ಮಕವಾಗಿ ಗೌಣವಾಗಿದ್ದವು. ಆದರೆ 2014ರಲ್ಲಿ ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದ ಅವು ಹೆಚ್ಚು ಸ್ಪಷ್ಟವಾಗಿವೆ. ಅಲ್ಲದೆ, ಹೆಚ್ಚು ಹಿಂದುತ್ವವಾದಿಯಾಗಿದ್ದರೂ, ಬಿಜೆಪಿ ವ್ಯಕ್ತಿಪೂಜೆಗೆ ಬೀಳುತ್ತಿರುವುದೂ ಹೆಚ್ಚಾಗಿದೆ. ಹಿಂದೆ ಪಕ್ಷ ಇಂದಿರಾ ಗಾಂಧಿಯವರ ಕಾಂಗ್ರೆಸ್‌ನಿಂದ ತನ್ನನ್ನು ಪ್ರತ್ಯೇಕಿಸಲು ಸ್ಪಷ್ಟವಾಗಿ ವ್ಯಕ್ತಿಪೂಜೆಯ ವಿರುದ್ಧವಿತ್ತು. ಈಗ ಆ ಕಟ್ಟುಪಾಡು ಇಲ್ಲವಾಗಿದೆ. ಸಂಸದರು ಮತ್ತು ಸಚಿವರು ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಲಾಭದ ದೃಷ್ಟಿಯಿಂದ ಹೊಗಳುವ ಪೈಪೋಟಿಯಲ್ಲಿದ್ದಾರೆ.

ಧಾರ್ಮಿಕ ಬಹುಸಂಖ್ಯಾತತೆ ಮತ್ತು ವ್ಯಕ್ತಿ ಆರಾಧನೆಯ ಈ ಸ್ವರೂಪ ಹೊಸ ಸಂಸತ್ ಭವನದ ಉದ್ಘಾಟನೆಯ ಹೊತ್ತಿನ ವಸ್ತು ಮತ್ತು ಸಾಂಕೇತಿಕತೆಯಲ್ಲಿ ಸ್ಪಷ್ಟವಾಗಿ ಕಾಣಿಸಿತ್ತು. ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಅನುಪಸ್ಥಿತಿಯಲ್ಲಿನ ಸಮಾರಂಭದಲ್ಲಿ ಕೇಂದ್ರ ಸಚಿವರೂ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡದ್ದು ಆಕಸ್ಮಿಕವಲ್ಲ. ಉದ್ದೇಶ ಒಬ್ಬ ವ್ಯಕ್ತಿ ಮಾತ್ರವೇ ಕಾಣಿಸಿಕೊಳ್ಳುವುದಾಗಿತ್ತು. ಪುರೋಹಿತರು ಈ ಸಂದರ್ಭಕ್ಕೆ ಹಿಂದುತ್ವದ ಕವಚವನ್ನು ಒದಗಿಸಿದ್ದರು. ಅವರ ಪಕ್ಷದ ಸದಸ್ಯರು ಮತ್ತು ವಿಸ್ತೃತ ಸಂಘಪರಿವಾರ ಪ್ರಧಾನಿಯನ್ನು ಹಿಂದೂ ಸಾಮ್ರಾಟನ ಸ್ಥಾನಮಾನಕ್ಕೆ ಏರಿಸಿತ್ತು.

ಎಡಪಂಥೀಯರ ವಿಚಾರಕ್ಕೆ ಬರುವುದಾದರೆ, ಭಾರತೀಯ ರಾಜಕೀಯದಲ್ಲಿ ಈ ಅಂಶವು ನಾನು ನಿರೀಕ್ಷಿಸಿದ ರೀತಿಯಲ್ಲಿ ತನ್ನನ್ನು ತಾನು ಸುಧಾರಿಸಿಕೊಂಡಿಲ್ಲ. ನಕ್ಸಲೀಯರು ಹೊರಗೆ ಕಾಣಿಸಿಕೊಂಡು ಬಹು ಪಕ್ಷೀಯ ಪ್ರಜಾಪ್ರಭುತ್ವದೊಂದಿಗೆ ಶಾಂತಿ ಸಂಧಾನ ಮಾಡಿಕೊಳ್ಳುವ ಬದಲು ತಮ್ಮ ಪ್ರಭಾವವಿರುವ ಜಿಲ್ಲೆಗಳಲ್ಲಿ ವಿವೇಚನಾ ಹೀನ ಹಿಂಸಾಚಾರ ಮುಂದುವರಿಸಿದ್ದಾರೆ. ಸಂಸದೀಯ ಎಡಪಕ್ಷಗಳ ವಿಚಾರವೂ ಅಷ್ಟೆ. ಅಧಿಕಾರದಲ್ಲಿರುವ ಒಂದೇ ರಾಜ್ಯವಾದ ಕೇರಳದಲ್ಲಿ ಅವರು ತಮ್ಮ ಆಡಳಿತ ವಿಧಾನವನ್ನು ಗಮನಾರ್ಹವಾಗಿ ಬದಲಿಸಿಕೊಂಡಿಲ್ಲ. ಹೆಚ್ಚಿನ ಮಾನವ ಅಭಿವೃದ್ಧಿ ಸೂಚ್ಯಂಕಗಳು ಹೊರಗಿನವರ ಖಾಸಗಿ ಹೂಡಿಕೆಯನ್ನು ಆಕರ್ಷಿಸಬೇಕು. ಆದರೆ ಇಲ್ಲಿ ಅದು ಆಗುತ್ತಿಲ್ಲ. ಏಕೆಂದರೆ ಸಿಪಿಐ(ಎಂ) ಇನ್ನೂ ಆರ್ಥಿಕತೆ ತನ್ನಿಚ್ಛೆ ಮತ್ತು ಹಿಡಿತದಲ್ಲಿ ಇರಬೇಕೆಂದೇ ಬಯಸುತ್ತಿದೆ.

ಹದಿನೈದು ವರ್ಷಗಳ ಹಿಂದೆ ನಾನು ಬಯಸಿದ್ದರಲ್ಲಿನ ಕೊನೆಯ ಅಂಶವೆಂದರೆ, ಪೂರ್ತಿಯಾಗಿ ಬೇರೆಯದೇ ಪಕ್ಷವನ್ನು ಕಟ್ಟುವುದು. 2012ರಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷದ ಭಾರತೀಯ ರಾಜಕೀಯ ವೇದಿಕೆ ಪ್ರವೇಶದ ಮೂಲಕ ಸೈದ್ಧಾಂತಿಕವಾಗಿ ಈ ಆಶಯ ಪೂರ್ತಿಯಾಗಿದೆ. ಆದರೂ, ವಾಸ್ತವದಲ್ಲಿ ಆಪ್ ತನ್ನ ಬೆಂಬಲಿಗರು ಹಿಂದೆ ಬಯಸಿದ್ದ ಆಮೂಲಾಗ್ರ ಬೆಳವಣಿಗೆಯನ್ನು ಕಾಣಿಸಿಲ್ಲ. ದಿಲ್ಲಿಯಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯವನ್ನು ಒದಗಿಸುವಲ್ಲಿ ಅದರ ಸಾಧನೆ ಗಮನಾರ್ಹವಾಗಿದ್ದರೂ, ಇನ್ನೊಂದೆಡೆ ಋಣಾತ್ಮಕವಾಗಿ, ಅರವಿಂದ ಕೇಜ್ರಿವಾಲ್ ಸುತ್ತಲೂ ವ್ಯಕ್ತಿಪೂಜೆಯ ಪ್ರಭಾವಳಿ ಮತ್ತು ಬಲಿಪಶುಗಳಾಗುತ್ತಿರುವ ಅಲ್ಪಸಂಖ್ಯಾತರ ಪರವಾಗಿ ನಿಲ್ಲಲು ಪಕ್ಷದ ನಿರಾಕರಣೆ ಢಾಳಾಗಿದೆ.

ಭಾರತೀಯ ಪಕ್ಷ ವ್ಯವಸ್ಥೆಯನ್ನು ಮರುನಿರ್ಮಿಸಲು ನಾನು ಇದಿಷ್ಟನ್ನೂ ಹೇಳಿದ ನಂತರದ ಈ ಹದಿನೈದು ವರ್ಷಗಳ ಅವಧಿಯಲ್ಲಿ ದೇಶ ಮೂರು ಸಾರ್ವತ್ರಿಕ ಚುನಾವಣೆಗಳಿಗೆ ಸಾಕ್ಷಿಯಾಗಿದೆ. 2009ರ ನನ್ನ ಈ ಹಂಬಲ ಬಹುತೇಕ ಅವಾಸ್ತವಿಕವಾಗಿ ಉಳಿದಿದ್ದರೆ, ಅದರ ಪ್ರತಿಪಾದಕ ನಿಷ್ಕಪಟಿ, ಯುಟೋಪಿಯನ್ ಕೂಡ ಎಂದು ಅರ್ಥೈಸಬೇಕು. ನಾನೀಗ ಸಾಕಷ್ಟನ್ನು ಕಲಿತಿದ್ದೇನೆ. ಕಾಂಗ್ರೆಸ್ ಗಾಂಧಿಗಳನ್ನು ತ್ಯಜಿಸಲಿ, ಬಿಜೆಪಿ ಆರೆಸ್ಸೆಸ್‌ನಿಂದ ತನ್ನನ್ನು ಕಳಚಿಕೊಳ್ಳಲಿ, ಭಾರತೀಯ ಎಡಪಕ್ಷಗಳು ಮಾವೋ ಮತ್ತು ಲೆನಿನ್‌ಗೆ ವಿಮುಖವಾಗಲಿ, ಆಮ್ ಆದ್ಮಿ ಪಕ್ಷ ಮುಂದಾಲೋಚನೆಯ, ಪರಿಸರ ಹೊಣೆಗಾರಿಕೆಯ ಮತ್ತು ಮಹಿಳಾ ಪರವಿದ್ದ ಜರ್ಮನ್‌ನ ಗ್ರೀನ್ ಪಾರ್ಟಿಯ ದೇಸಿ ರೂಪದ್ದಾಗಲಿ ಎಂದು ನಾನೀಗ ಕೇಳುವುದೂ ಇಲ್ಲ, ಬಯಸುವುದೂ ಇಲ್ಲ.

ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಕೂಡ ಇಲ್ಲ. ನಾನು ಆ ಪ್ರಮುಖ ವಿದ್ಯಮಾನದ ನಿರೀಕ್ಷೆಯಲ್ಲಿ ಒಂದು ತಾಜಾ ಆಶಯದ ಪಟ್ಟಿಯನ್ನು ನೀಡುತ್ತೇನೆ. ಇದು ಹಿಂದಿನದ್ದಕ್ಕಿಂತ ಹೆಚ್ಚು ಸಾಧಾರಣವಾಗಿದೆ. ಲೋಕಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಬಾರದು ಎಂಬುದು ಈಗ ನನ್ನ ಆಶಯ. ವಾಸ್ತವವಾಗಿ, ಏಕೈಕ ಅತಿ ದೊಡ್ಡ ಪಕ್ಷದ ಬಹುಮತಕ್ಕೆ ಗಣನೀಯ ಕೊರತೆಯಾಗಬೇಕು. ಏಕೆಂದರೆ ನಮ್ಮ ಪ್ರಸಕ್ತ ಪ್ರಧಾನಿ ಪ್ರವೃತ್ತಿಯಿಂದ ಸರ್ವಾಧಿಕಾರಿಯಾಗಿದ್ದರೂ, ಅವರ ವ್ಯಕ್ತಿತ್ವದ ಈ ಅನಪೇಕ್ಷಿತ ಅಂಶಕ್ಕೆ ಕಾರಣ, ಸಾರ್ವತ್ರಿಕ ಚುನಾವಣೆಗಳಲ್ಲಿ ಅವರ ಪಕ್ಷ ಸತತ ಎರಡು ಬಾರಿ ಬಹುಮತ ಗಳಿಸಿರುವುದು. ಮೋದಿಗಿಂತ ಮೊದಲು ಇಂದಿರಾ ಗಾಂಧಿ 1971ರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸಿಕ್ಕ ಪ್ರಚಂಡ ಬಹುಮತದಿಂದ ಸರ್ವಾಧಿಕಾರಿ ಧೋರಣೆ ತೋರುವಂತಾಯಿತು. ಮೋದಿ ಮತ್ತು ಇಂದಿರಾ ಅವಧಿಯ ಮಧ್ಯೆ, ಮತದಾರರು ಬುದ್ಧಿವಂತಿಕೆಯಿಂದಲೋ ಅಥವಾ ಅದರ ಕೊರತೆಯಿಂದಲೋ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ 1984ರ ಚುನಾವಣೆಯಲ್ಲಿ 400 ಸ್ಥಾನಗಳನ್ನು ನೀಡಿದ್ದು ರಾಜಕೀಯ ಮತ್ತು ಆಡಳಿತದ ಪಾಲಿಗೆ ದುರದೃಷ್ಟಕರ ಪರಿಣಾಮ ತಂದಿತ್ತು.

ಭಾರತ ತುಂಬಾ ದೊಡ್ಡ ಮತ್ತು ವೈವಿಧ್ಯಮಯ ದೇಶವಾಗಿದ್ದು, ಸಹಯೋಗ ಮತ್ತು ಸಮಾಲೋಚನೆಯ ಮೂಲಕವಲ್ಲದೆ ಇನ್ನಾವ ರೀತಿಯಲ್ಲಿಯೂ ನಡೆಸಲಾಗದು. ಆದರೂ, ಸಂಸತ್ತಿನಲ್ಲಿನ ಬಹುಮತ ಆಡಳಿತ ಪಕ್ಷದಲ್ಲಿ ದುರಹಂಕಾರವನ್ನು ತುಂಬುತ್ತದೆ. ಅಂಥ ಬಹುಮತವನ್ನು ಹೊಂದಿರುವ ಪ್ರಧಾನಿ ತನ್ನ ಸಂಪುಟ ಸಹೋದ್ಯೋಗಿಗಳ ಮೇಲೆ ಒರಟಾಗಿ ಸವಾರಿ ಮಾಡಲು, ಪ್ರತಿಪಕ್ಷಗಳನ್ನು ಅಗೌರವಿಸಲು, ಮಾಧ್ಯಮವನ್ನು ತನ್ನಿಷ್ಟಕ್ಕೆ ಪಳಗಿಸಲು, ಸಂಸ್ಥೆಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಲು ಮತ್ತು ರಾಜ್ಯಗಳ, ಅದರಲ್ಲೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ್ದಲ್ಲದ ಸರಕಾರವಿರುವ ರಾಜ್ಯಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಡೆಗಣಿಸಲು ಮುಂದಾಗುವ ಸನ್ನಿವೇಶವಿರುತ್ತದೆ.

ಮಂದೆ ಬರೆಯಲಿರುವ ಇತಿಹಾಸಕಾರರು ಬಹುಶಃ ಹೀಗೆ ಹೇಳಲು ಸಾಧ್ಯ: ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ನರೇಂದ್ರ ಮೋದಿಯವರಿಗಿಂತ ಉತ್ತಮ ಪ್ರಧಾನಿಗಳಾಗಿದ್ದರು. ಮೊದಲ ಮೂವರು ಎರಡನೆಯವರಿಗಿಂತ ಬುದ್ಧಿವಂತರು ಅಥವಾ ಹೆಚ್ಚು ಸಮರ್ಥರಾಗಿದ್ದರು. ರಾವ್, ವಾಜಪೇಯಿ ಮತ್ತು ಸಿಂಗ್ ಅವರು ಅಧಿಕಾರದಲ್ಲಿದ್ದ ಸಂದರ್ಭಗಳು ಅವರು ತಮ್ಮ ಸಚಿವರಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುವಂತೆ, ಮೈತ್ರಿಪಕ್ಷಗಳ (ತಮ್ಮನ್ನು ಪ್ರತಿನಿಧಿಸುವ ವಿವಿಧ ಗುಂಪುಗಳು, ಪ್ರದೇಶಗಳು ಮತ್ತು ಹಿತಾಸಕ್ತಿಗಳ) ಮಾತಿಗೆ ಕಿವಿಗೊಡುವಂತೆ, ಪ್ರತಿಪಕ್ಷಗಳೊಂದಿಗೆ ಹೆಚ್ಚು ಸಮಾಲೋಚಿಸುವಂತೆ, ಸ್ವತಂತ್ರ ಪತ್ರಿಕಾ ಮಾಧ್ಯಮವನ್ನು ಪ್ರತಿಬಂಧಿಸದಂತೆ, ನ್ಯಾಯಾಂಗದ ಮೇಲೆ ಒತ್ತಡ ಹೇರದಂತೆ, ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತತೆಯಲ್ಲಿ ಅನಗತ್ಯವಾಗಿ ಮೂಗು ತೂರಿಸದಂತೆ ಮತ್ತು ರಾಜ್ಯಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಗೌರವಿಸುವಂತೆ ಮಾಡಿದ್ದವು. ಈ ಸಮ್ಮಿಶ್ರ ಸರಕಾರಗಳು ಅಧಿಕಾರದಲ್ಲಿದ್ದಾಗ ಆರ್ಥಿಕ ಬೆಳವಣಿಗೆ, ಒಕ್ಕೂಟ ವ್ಯವಸ್ಥೆ, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸ್ವತಂತ್ರ ಸಂಸ್ಥೆಗಳೆಲ್ಲವೂ ದರ್ಪಿಷ್ಠ ಪ್ರಧಾನಿಯಿರುವ ಪ್ರಬಲ ಪಕ್ಷದ ಹತೋಟಿಯಲ್ಲಿ ನಲುಗುವುದು ತಪ್ಪಿತ್ತು.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ಸತತ ಮೂರನೇ ಅವಧಿಗೆ ಬಹುಮತವನ್ನು ಪಡೆದರೆ, ಇದು ಭಾರತದಲ್ಲಿ ಪ್ರಜಾಪ್ರಭುತ್ವ, ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾನಿ ತರಬಹುದು. ವಿರೋಧ ಪಕ್ಷವನ್ನು ಮತ್ತಷ್ಟು ಕಡೆಗಣಿಸಬಹುದು, ಮುಕ್ತ ಪತ್ರಿಕಾ ಮಾಧ್ಯಮವನ್ನು ಮತ್ತಷ್ಟು ಹತ್ತಿಕ್ಕಬಹುದು. ಅಲ್ಪಸಂಖ್ಯಾತರು ಹೆಚ್ಚು ಅಸುರಕ್ಷಿತತೆಗೆ ತುತ್ತಾಗಿಯಾರು. ರಾಜ್ಯಗಳು ಕೇಂದ್ರದ ಮುಂದೆ ಇನ್ನಷ್ಟು ಹೀನಾಯವಾಗಿ ತಲೆಬಾಗುವಂತಾಗಬಹುದು. ಇಂಥ ಪರಿಸ್ಥಿತಿ ಬಹುಶಃ ಆರ್ಥಿಕತೆಯ ಹಾನಿಗೆ ಕಾರಣವಾಗಬಹುದು. (ಸಮ್ಮಿಶ್ರ ಸರಕಾರದ ಯಾವ ಪ್ರಧಾನಿಗೂ ನೋಟು ಅಮಾನ್ಯದಂತಹ ವಿನಾಶಕಾರಿ ಪ್ರಯೋಗವನ್ನು ಹೇರುವಷ್ಟು ಸೊಕ್ಕಿರಲಿಲ್ಲ.)

ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಇದು ನನ್ನ ಏಕೈಕ, ಸಾಧಾರಣ, ಆಶಯ: ಯಾವುದೇ ಪಕ್ಷ 250ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಬಾರದು; ಇನ್ನೂ ಒಳ್ಳೆಯದೆಂದರೆ, 200ಕ್ಕಿಂತ ಮೀರಬಾರದು.

ಅದು ಸಾಧ್ಯವಾದರೆ, ಅತಿ ಬುದ್ಧಿವಂತಿಕೆ ತಲೆದೋರದಿದ್ದರೆ, ಆಗ ಸರಕಾರ ಖಂಡಿತವಾಗಿಯೂ ಕಡಿಮೆ ಅಹಂಕಾರದಿಂದ, ಒಂದೇ ಪಕ್ಷವಾಗದೆ, ಕಡಿಮೆ ವ್ಯಕ್ತಿಗತವಾಗಿ, ನಮ್ಮೆಲ್ಲರ ಪರವಾಗಿ ಮಾತನಾಡಲು ಮುಂದಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ರಾಮಚಂದ್ರ ಗುಹಾ

contributor

Similar News