ಪಾರ್ಸಿಗಳ ಬ್ರಾಹ್ಮಣಿಕೆ
ಸೈರಸ್ ಮಿಸ್ತ್ರಿ ನಮ್ಮ ಕಾಲದ ಒಬ್ಬ ಒಳ್ಳೆಯ ಭಾರತೀಯ ಇಂಗ್ಲಿಷ್ ಲೇಖಕ. ಅವರ ಕಾದಂಬರಿಯ ಕನ್ನಡಾನುವಾದ ‘ಹೆಣಹೊರುವವನ ವೃತ್ತಾಂತ’ದ ಕುರಿತು ಹೇಳುವುದು ನನ್ನ ಉದ್ದೇಶ. ಅವರ ಜಾತಿ, ಮತ, ಧರ್ಮ, ಜನಾಂಗ ಓದುಗರಿಗೆ ಮುಖ್ಯವಾಗಬಾರದು. ಆದರೆ ಕೃತಿಯ ವಸ್ತು, ಕಾಲ, ನಿರೂಪಣೆ ಇವು ಸಾಮಾಜಿಕ ಆಯಾಮಗಳನ್ನು ಹೊಂದಿರುವುದರಿಂದ ಅವರು ಪಾರ್ಸಿ ಎನ್ನುವುದು ಸಂಗತವಾಗುತ್ತದೆ.
ಇದು ಅನುವಾದಗಳ ಕಾಲವೆೆನ್ನಬಹುದು. ಪ್ರಾಯಃ ಈ ದಶಕದಲ್ಲಿ ಪ್ರಕಟವಾದಷ್ಟು ಅನುವಾದಗಳು ಹಿಂದೆ ಕನಿಷ್ಠ 1950ರ ದಶಕದ ಆನಂತರ ಬಂದಿರಲಾರವು ಅನ್ನಿಸುತ್ತದೆ. ಹೀಗೆ ಭಾವಿಸುವುದಕ್ಕೆ ಕಾರಣಗಳಿವೆ. ಸ್ವಾತಂತ್ರ್ಯಪೂರ್ವ ಮತ್ತು ನಿಕಟ ಸ್ವಾತಂತ್ರ್ಯೋತ್ತರ ಕಾಲದಲ್ಲಿ ವಿವಿಧ ಭಾರತೀಯ ಭಾಷೆಗಳಿಂದ ಹಾಗೆಯೇ ಐರೋಪ್ಯ ಸಾಹಿತ್ಯದಿಂದ ಕನ್ನಡಕ್ಕೆ ನೇರವಾಗಿ ಅಥವಾ ವಿವಿಧ ಇತರ ಭಾಷೆಗಳ ಮೂಲಕ ಸಾಕಷ್ಟು ಕೃತಿಗಳು ಭಾಷಾಂತರ ಇಲ್ಲವೇ ಭಾವಾಂತರಗೊಂಡವು. ಹಿಂದೆ ಕನ್ನಡದ ಮಾಸಪತ್ರಿಕೆ ‘ಕಸ್ತೂರಿ’ಯ ‘ಪುಸ್ತಕ ವಿಭಾಗ’ದಲ್ಲಿ ಕೃತಿಗಳ ‘ಸಂಗ್ರಹ ರೂಪ’ ಪ್ರಕಟವಾಗುತ್ತಿತ್ತು. ಅದರಲ್ಲಿ ಕೆಲವು ಅನುವಾದಗಳೂ ಬಂದದ್ದಿತ್ತು. ಈ ರೀತಿಯ ಅನುವಾದಗಳೂ ಓದಿಸಿಕೊಂಡುಹೋಗಿವೆ. ಒಟ್ಟಿನಲ್ಲಿ ಓದುಗರಿಗೆ ಸಾಹಿತ್ಯದ ಪರಿಚಯ ಮತ್ತು ಶೋಧಕರಿಗೆ ಸೂಚನೆ ಇವು ಧಾರಾಳವಾಗಿ ಸಿಕ್ಕಿವೆ. ಇವನ್ನೆಲ್ಲ ಕನ್ನಡದ ಓದುಗರು ಸ್ವತಂತ್ರ ಕೃತಿಗಳಂತೆಯೇ ಮಡಿಲಿಗೆ ಹಾಕಿಕೊಂಡು ಓದಿದರು. ನವ್ಯದ, ನವ್ಯೋತ್ತರದ ಕಾಲದಲ್ಲಿ, ಅನುವಾದಗಳು ಬಂದವಾದರೂ ಅವು ಸೀಮಿತ ಕಾರಣಗಳಿಗೆ-ಮುಖ್ಯವಾಗಿ ನಿರ್ದುಷ್ಟ ಸೈದ್ಧಾಂತಿಕ ಪ್ರಸಾರಕ್ಕಾಗಿ ಬಂದವು.
ಈಚೆಗೆ ಬಂದ, ಬರುತ್ತಿರುವ ಅನೇಕ ಅನುವಾದಗಳಲ್ಲಿ ಮೂಲಕ್ಕೆ ಎಷ್ಟು ನಿಷ್ಠವಾಗಿವೆ ಎಂಬುದನ್ನು ಅನುವಾದಕರೇ ಹೇಳಬೇಕು. ಅನೇಕ ಓದುಗರು ಮೂಲಕೃತಿಯನ್ನು ಓದಿರುವುದಿಲ್ಲ. ಅಂತಹವರಿಗೆ ನ್ಯಾಯ ನೀಡಲು ಅನುವಾದಕರು ಪರಿಶ್ರಮಿಸಬೇಕು. ಅಪರೂಪಕ್ಕೆ ಕೆಲವು ಅನುವಾದಗಳು- ಉದಾಹರಣೆಗೆ ಟಿ.ಪಿ.ಅಶೋಕ್ ಅನುವಾದಿಸಿದ ‘ಎರಡು ರಶ್ಯನ್ ನೀಳ್ಗತೆಗಳು’(1999); ರಂ.ಶಾ.ಲೋಕಾಪುರ ಅವರು ಅನುವಾದಿಸಿ ಪ್ರಕಟಿಸಿದ ಜ್ಞಾನೇಶ್ವರರ ಓವಿ ಛಂದಸ್ಸಿನ ಮರಾಠಿ ಭಗವದ್ಗೀತೆ ‘ಕನ್ನಡ ಜ್ಞಾನೇಶ್ವರಿ’(2003)- (ಇದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಗಳಿಸಿದೆ); ಎಚ್.ಎಸ್.ರಾಘವೇಂದ್ರರಾವ್ ‘ಪ್ಲೇಗ್’ ಎಂದು ಅನುವಾದಿಸಿದ ಅಲ್ಬರ್ಟ್‌ಕಮೂ ವಿರಚಿತ ಕಾದಂಬರಿ ‘ದ ಪ್ಲೇಗ್’ (2020) ಮೂಲನಿಷ್ಠವಾಗಿಯೂ ಸ್ವತಂತ್ರ ಕೃತಿಯಾಗಿ ಓದಿಸಿವೆ. ಎಲ್ಲ ಅನುವಾದಗಳಿಗೆ ಇದನ್ನು ಹೇಳುವಂತಿಲ್ಲ. ಈ ಮಿತಿಯನ್ನು ಗುರುತಿಸಿಯೇ ಕೆಲವು ಅನುವಾದಕರು ತಮ್ಮ ಅನುವಾದಗಳಿಗೆ ಭಾವಾನುವಾದ ಎಂದೋ ಕೆಲವು ಕಾವ್ಯಗಳ ಅನುವಾದಗಳನ್ನು ಸರಳಗದ್ಯಾನುವಾದಗಳೆಂದೋ ರಕ್ಷಣಾಹೊದಿಕೆಯನ್ನು ಹಾಕಿಕೊಂಡಿದ್ದಾರೆ. ಅದೂ ಉಚಿತವೇ. ಏಕೆಂದರೆ ಮಿತಿ ಅರಿತವರು ಮತಿವಂತರು. ಸಾರ್ಥಕ ಅನುವಾದವು ಸಾರ್ಥಕ ಮೂಲ/ಸ್ವತಂತ್ರ ಕೃತಿಯಷ್ಟೇ ಮಹತ್ವದ್ದು.
ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್. ಜಯರಾಮರಾಜೇ ಅರಸ್ ಕೆಲವು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮೊದಮೊದಲು ಕಥೆಗಳನ್ನು ಅನುವಾದಿಸುತ್ತಿದ್ದ ಅವರು ಆನಂತರ ಕಾದಂಬರಿ ಅಥವಾ ಆ ಗಾತ್ರದ ಕೃತಿಗಳನ್ನು ಅನುವಾದಿಸತೊಡಗಿದರು. ಟಾಲ್‌ಸ್ಟಾಯ್ ಮುಂತಾದವರ ಕಥೆಗಳಲ್ಲದೆ ನನಗೆ ನಿರ್ದುಷ್ಟವಾಗಿ ಪರಿಚಯವಿರುವ ಅವರ ಅನುವಾದ ಕೃತಿಗಳೆಂದರೆ- ಪೌಲ್ ಕಾರೂಸ್‌ನ ಕೃತಿ ‘Nirvana’ದ ಅನುವಾದ ‘ನಿರ್ವಾಣ’(2009), ಥಿಯೋಡೋರ್ ಶೆರ್‌ಬಾತ್‌ಸ್ಕಿ ಅವರ ‘Central Conception of Buddhism’ ಕೃತಿಯ ಅನುವಾದ ‘ಬೌದ್ಧ ಧರ್ಮದ ಕೇಂದ್ರ ಪರಿಕಲ್ಪನೆ’(2011)- ಇವೆರಡನ್ನೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ; ಅರುಣ್ ಜೋಷಿಯವರ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಕಾದಂಬರಿ ‘ಖಿhe ಐಚಿsಣ ಐಚಿbಥಿಡಿiಟಿಣh’ನ ಅನುವಾದ ‘ಪ್ರಪಾತ’(2017) ಮತ್ತು ಸೈರಸ್ ಮಿಸ್ತ್ರಿ ಅವರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕಾದಂಬರಿ ‘Chronicle of a Corpse Bearer’ನ ಅನುವಾದ ‘ಹೆಣ ಹೊರುವವನ ವೃತ್ತಾಂತ’(2022). ಮೊದಲ ಎರಡು ಕೃತಿಗಳು ಬೌದ್ಧ ಧರ್ಮವನ್ನು ಕೇಂದ್ರೀಕರಿಸಿದರೆ ಆನಂತರ ದವು ಕಾದಂಬರಿಗಳು. ಇವುಗಳಲ್ಲಿ ನನ್ನನ್ನು ಹೆಚ್ಚು ಪ್ರಭಾವಿಸಿದ ಕೃತಿ ಕೊನೆಯದ್ದು. ಅದಕ್ಕೆ ಕಾರಣಗಳನ್ನು ಈ ನಂತರ ನೀಡಲು ಯತ್ನಿಸಿದ್ದೇನೆ.
ಒಬ್ಬ ಸಾಹಿತಿಯನ್ನು ಒಂದು ಜನಾಂಗ/ಜಾತಿ/ಧರ್ಮದ ಮೂಲಕ ಗುರುತಿಸುವುದು ತಪ್ಪು. ಪ್ರತಿಯೊಬ್ಬ ಸಾಹಿತಿಯೂ ಒಂದಲ್ಲ ಒಂದು ರೀತಿ ತನ್ನ ಪಾರಂಪರಿಕ ಆಚಾರ-ವಿಚಾರಗಳಿಂದ ಪ್ರಭಾವಿತನಾಗಿದ್ದಾನೆ ಮತ್ತು ಪ್ರಭಾವಿಸಿದ್ದಾನೆ. ಆದರೆ ಯಾವನೊಬ್ಬ ಬರಹಗಾರ ತನ್ನ ಜಾತಿಯ ಮೂಲಕ ಗುರುತಾಗುವುದು ಅವನಿಗೆ ಗೌರವ ತರುವ ವಿಚಾರವಲ್ಲ. ಮುಸ್ಲಿಮ್ ಬರಹಗಾರನೊಬ್ಬ ಮುಸ್ಲಿಮ್ ಸಂವೇದನೆಯನ್ನು ಹೊಂದಿದ್ದರೆ ಅದು ಸಹಜ. ಆದರೆ ಆತ ಮುಸ್ಲಿಮ್ ಸಂವೇದನೆಯನ್ನು ಹೊಂದಿದ್ದಾನೆಂದೂ ಅದು ಅವನ ವೈಶಿಷ್ಟ್ಯವೆಂದೂ ಹೇಳುವುದು ಆತನಿಗೂ ಆತನ ಜನಾಂಗಕ್ಕೂ ಎಸಗುವ ಅಪಚಾರ. ಇತರ ಧರ್ಮ, ಮತಗಳಿಗೂ ಇದು ಅನ್ವಯಿಸುತ್ತದೆ.
ಆದರೆ ಒಬ್ಬ ಲೇಖಕನ ಜನಾಂಗ ಮುಖ್ಯವಾಗುವುದು ಆತನ ಭಿನ್ನ ದೃಷ್ಟಿಕೋನದಲ್ಲಿ; ಪ್ರವಾಹದ ವಿರುದ್ಧ ಈಜುವುದರಲ್ಲಿ. ಹೀಗೆ ಪ್ರವಾಹದ ವಿರುದ್ಧ ಈಜುವವರೆಲ್ಲ ದೊಡ್ಡ ಲೇಖಕರೆಂದೇನಿಲ್ಲ. ಹೀಗೆ ಈಸಿ ಜೈಸುವವರು, ಅಂದರೆ ಶ್ರೇಷ್ಠತೆಯ ದಡವನ್ನು ಮುಟ್ಟುವವರು ಆ ಜನಾಂಗದ ಶ್ರೇಷ್ಠರೂ ಆಗುತ್ತಾರೆ. ಇದು ಸಾಹಿತ್ಯಕ್ಕೆ ಮಾತ್ರವಲ್ಲ, ಈ ಮೊದಲೇ ಪ್ರಸ್ತಾವಿಸಿದ ವಿವಿಧ ಕ್ಷೇತ್ರಗಳಿಗೂ ಅನ್ವಯಿಸುತ್ತದೆ, ಆದ್ದರಿಂದಲೇ ತಮ್ಮ ಕಾಲದಲ್ಲಿ ಮಹಾನ್ ವಿದ್ವಾಂಸರೆಂದು ಅನ್ನಿಸಿಕೊಂಡವರೂ ಕಲ್ಲುಬಂಡೆಯಂತೆ ತಮ್ಮ ಜಾತಿ, ಮತ, ಧರ್ಮದ ಅಂಧ ವಕ್ತಾರರಂತೆ ಕಂಡರೆ ಅವರ ರಸ್ತೆಯ ಬದಿಯ ಮೈಲಿಗಲ್ಲಾಗುತ್ತಾರೆಯೇ ಹೊರತು ಧ್ರುವತಾರೆಯರಾಗುವುದಿಲ್ಲ.
ಸೈರಸ್ ಮಿಸ್ತ್ರಿ ನಮ್ಮ ಕಾಲದ ಒಬ್ಬ ಒಳ್ಳೆಯ ಭಾರತೀಯ ಇಂಗ್ಲಿಷ್ ಲೇಖಕ. ಅವರ ಕಾದಂಬರಿಯ ಕನ್ನಡಾನುವಾದ ‘ಹೆಣಹೊರುವವನ ವೃತ್ತಾಂತ’ದ ಕುರಿತು ಹೇಳುವುದು ನನ್ನ ಉದ್ದೇಶ. ಅವರ ಜಾತಿ, ಮತ, ಧರ್ಮ, ಜನಾಂಗ ಓದುಗರಿಗೆ ಮುಖ್ಯವಾಗಬಾರದು. ಆದರೆ ಕೃತಿಯ ವಸ್ತು, ಕಾಲ, ನಿರೂಪಣೆ ಇವು ಸಾಮಾಜಿಕ ಆಯಾಮಗಳನ್ನು ಹೊಂದಿರುವುದರಿಂದ ಅವರು ಪಾರ್ಸಿ ಎನ್ನುವುದು ಸಂಗತವಾಗುತ್ತದೆ. ಆದ್ದರಿಂದ ಒಂದಿಷ್ಟು ವಿವರಗಳು:
ವಿಶ್ವರಂಗದಲ್ಲಿ ಯಹೂದಿಗಳು ಬಹಳ ಬುದ್ಧಿವಂತರೆಂದು ಪ್ರತೀತಿ. ಪ್ರಾಯಃ ಹಿಟ್ಲರ್‌ನ ಕ್ರೌರ್ಯವೇ ಅವರಿಗೆ ಈ ಸಹಾನುಭೂತಿಪರ ಮರ್ಯಾದೆಯನ್ನು ತಂದಿರಬೇಕು! ಆದರೆ ಯಾವುದೇ ಅಂತಹ ಚಂಡಮಾರುತಗಳಿಲ್ಲದೆ ಕಡಿಮೆ ಜನಸಮೂಹವಿದ್ದಾಗಲೂ ಸಮಕಾಲೀನರ ನಡುವೆ ಹಿರಿಮೆ-ಗರಿಮೆಗಳನ್ನು ಸಾಧಿಸಿದ ಜನಾಂಗ ಪಾರ್ಸಿ. ಜರಾತುಷ್ಟ್ರನನ್ನು ಅನುಸರಿಸುವ ಈ ಜನಾಂಗದ ಮಂದಿ ಪರ್ಶಿಯನರ ಉಪಟಳವನ್ನು ಸಹಿಸಲಾಗದೆ ಸುಮಾರು 7-8ನೇ ಶತಮಾನದಲ್ಲೇ ಭಾರತಕ್ಕೆ ಬಂದರು. ಪರಿಶ್ರಮ, ಪ್ರತಿಭೆಯಿಂದ ಬದುಕಿನ ಎಲ್ಲ ರಂಗಗಳಲ್ಲೂ ಉನ್ನತಿಯನ್ನು ಸಾಧಿಸಿದರು. ಜಮ್‌ಷೆಡ್‌ಜೀ ಟಾಟಾರಿಂದ ರತನ್‌ಟಾಟಾ ವರೆಗೆ ಬೆಳೆದು ಬಂದ ಟಾಟಾ, ಗೋಡ್ರೆಜ್, ನುಸ್ಲಿವಾಡಿಯಾ, ಪೂನಾವಾಲಾ ಮುಂತಾದವರ ಸಂಸ್ಥೆಗಳಿಂದ ಉದ್ದಿಮೆ, ಕೈಗಾರಿಕೆಗಳ ಮಹತ್ತನ್ನು ಸಾಧಿಸಿದ ಪಾರ್ಸಿಗಳು, ಪಾಲ್ಕೀವಾಲಾ, ಸೋಲಿ ಸೋರಾಬ್ಜೀ, ಸೆಟಲ್‌ವಾಡ್, ನರೀಮನ್ ಮುಂತಾದ ಶ್ರೇಷ್ಠ ವಕೀಲರ ಮೂಲಕ ಭಾರತದ ಕಾನೂನುಗಳ ಸರದಾರರಾದರು. ನಾರಿಕಂಟ್ರಾಕ್ಟರ್, ಪಾಲಿ ಉಮ್ರಿಗರ್, ಫಾರೂಕ್ ಇಂಜಿನಿಯರ್, ಸಲೀಮ್ ದುರಾನಿ, ರುಸಿಸುರ್ತಿ, ಡಯಾನಾ ಎದುಲ್ಜಿ ಮುಂತಾದ ಕ್ರಿಕೆಟಿಗರೂ ಈ ಜನಾಂಗದ ಕೀರ್ತಿಯನ್ನು ಹೆಚ್ಚಿಸಿದರು. ಯಾವ ರಂಗದಲ್ಲೇ ಆದರೂ ಪಾರ್ಸಿಗಳು ಎದ್ದು ನಿಲ್ಲುವವರು; ಎದ್ದು ಕಾಣುವವರು. ದಾದಾಭಾಯೀ ನವರೋಜಿ, ಮಿನೂಮಸಾನಿ, ಪಿಲೂ ಮೋದಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪತಿ ಫಿರೋಝ್ ಗಾಂಧಿಯೂ ಪಾರ್ಸಿಗಳೇ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀರಿಕೊಂಡ ಸೈರಸ್ ಮಿಸ್ತ್ರಿ ಟಾಟಾ ಕೈಗಾರಿಕಾ ಸಮೂಹದ ಅಧ್ಯಕ್ಷರಾಗಿದ್ದವರು. ಅಣುವಿಜ್ಞಾನಿ ಹೋಮಿಭಾಭಾ, ಹೋಮಿಸೇತ್ನಾ ಪಾರ್ಸಿಗಳು. ಖ್ಯಾತ ಸಂಗೀತಗಾರ ಝುಬಿನ್‌ಮೆಹ್ತಾ, ಸಾಹಿತಿಗಳಾದ ರೋಹಿನ್‌ಟನ್ ಮಿಸ್ತ್ರಿ, ಸೈರಸ್ ಮಿಸ್ತ್ರಿ ಈ ಜನಾಂಗದ ಪ್ರಮುಖರು.
ಇಷ್ಟಾದರೂ ಪಾರ್ಸಿ ಜನಾಂಗ ಕೆಲವೇ ಸಾವಿರ ಸಂಖ್ಯೆಯನ್ನು ಹೊಂದಿದೆ. ಈಗಿನ ಲೆಕ್ಕಾಚಾರದಂತೆ ಸುಮಾರು 60-70 ಸಾವಿರದ ಆಸುಪಾಸು. ಇವರಲ್ಲಿ 50 ಸಾವಿರಕ್ಕೂ ಮಿಕ್ಕಿ ಮುಂಬೈ ಮಹಾನಗರದಲ್ಲೇ ಇದ್ದಾರೆ. ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ತೀರ ಸಣ್ಣಸಂಖ್ಯೆಯವರೆಂಬ ಅಭಿದಾನಕ್ಕೊಳಗಾದ ಬ್ರಾಹ್ಮಣರು-(ವರ್ಣಾಶ್ರಮ, ಮಡಿವಂತಿಕೆ, ಸ್ವಘೋಷಿತ ಮೇಲ್ಮೆ, ಅಸ್ಪಶ್ಯತೆ ಮುಂತಾದ ‘ಸನಾತನ’ ಗುಣಗಳನ್ನು ಇತರರಿಗಿಂತ ಹೆಚ್ಚೇ ಬೆಳೆಸಿಕೊಂಡ ಬ್ರಾಹ್ಮಣರು ಇಂತಹ ಟೀಕೆಗೆ ಅರ್ಹತೆಯನ್ನು ಸಂಪಾದಿಸಿದ್ದು ಉಚಿತವೇ ಆಗಿದೆ. ಕೇಡು ಯಾವತ್ತೂ ಸನಾತನವೇ ಆಗಿತ್ತು!) ತಮ್ಮ ಸಂಖ್ಯೆಗೆ ಅತಿಯೆಂದೇ ಕಾಣುವಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದಾರೆಂದು ಎಲ್ಲರೂ ಕಣ್ಣು ಕೆಂಪಾಗಿಸುವ ವೇಳೆಯಲ್ಲಿ ಬ್ರಾಹ್ಮಣರಿಗಿಂತಲೂ ಬಹುಪಾಲು ಕಡಿಮೆ ಜನಸಂಖ್ಯೆಯ ಪಾರ್ಸಿಗಳ ಕುರಿತು ಈ ಪ್ರಮಾಣದ ದ್ವೇಷ, ಟೀಕೆಗಳಿಲ್ಲದಿರುವುದು ಸೋಜಿಗವೇ ಸರಿ. ವರ್ಷಕ್ಕೆ 90 ಸಾವಿರಕ್ಕೆ ಕಡಿಮೆ ಆದಾಯವಿರುವ ಪಾರ್ಸಿಗಳು ಕಡು ಬಡವರೆಂದು ಪರಿಗಣಿಸಲ್ಪಡುತ್ತಾರೆಂದು ಓದಿದ್ದೇನೆ.
ಪಾರ್ಸಿ ಜನಾಂಗದ ರೀತಿ-ರಿವಾಜುಗಳ, ಆಚರಣೆಗಳಲ್ಲಿ ಹಲವು ವೈಶಿಷ್ಟ್ಯಗಳಿವೆ. ಅವರ ಪ್ರಾರ್ಥನಾ ವಿಧಾನ ಇತರರಿಗಿಂತ ಭಿನ್ನವಾದದ್ದು. ಹುಟ್ಟು, ಮದುವೆ, ಸಾವು, ಇವುಗಳನ್ನು ಅವರು ಆಚರಿಸುವ ರೀತಿ ಸಹಜವಾಗಿಯೇ ಪ್ರತ್ಯೇಕವಾಗಿದೆ. ಪಾರ್ಸಿಗಳ ಶವಸಂಸ್ಕಾರವು ಇತ್ತೀಚೆಗಿನ ತಲೆಮಾರಿನ ವರೆಗೂ ವಿಚಿತ್ರವಾಗಿತ್ತು. ಅವರು ಅಗ್ನಿಯ ಆರಾಧಕರು. ಹಾಗೆಂದು ಶವಗಳನ್ನು ದಹನಕ್ರಿಯೆಗೊಳಪಡಿಸುವುದಿಲ್ಲ. ಸತ್ತವರನ್ನು ಮೌನಗೋಪುರವೆಂಬ ಎತ್ತರದ ಸ್ಥಾನವೊಂದರ ಮೇಲೆ ಮಲಗಿಸಿ ಹೋಗುತ್ತಾರೆ; ಅವನ್ನು ಕೆಲವೇ ಗಂಟೆಗಳಲ್ಲಿ ಹದ್ದುಗಳು ಕುಕ್ಕಿ, ಕಚ್ಚಿ, ತಿಂದು ಮುಗಿಸುತ್ತವೆ; ಉಳಿದ ಅಸ್ಥಿಪಂಜರವನ್ನು ಬಾವಿಯೊಂದರಲ್ಲಿ ಎಸೆದರೆ ಮೃತರಿಗೆ ಶುದ್ಧೀಕರಣವಾಯಿತೆಂದು ಅವರ ನಂಬಿಕೆ! ಈಚೆಗೆ ಎಲ್ಲರೊಂದಿಗೆ ಅವರೂ ಆಧುನಿಕರಾಗಿ ತಮ್ಮ ಈ ಪಳೆಯುಳಿಕೆಗಳನ್ನು ಕಳಚಿಕೊಂಡಿದ್ದಾರೆ. ಅದೊಂದೇ ಕಾರಣವಲ್ಲ; ಅಳಿಯುತ್ತಿರುವ ಪಾರ್ಸಿ ಜನಾಂಗಕ್ಕಿಂತಲೂ ವೇಗವಾಗಿ ಹದ್ದುಗಳು ಈ ದೇಶದಲ್ಲಿ ಅಳಿಯುತ್ತಿರುವುದೇ ಇದಕ್ಕೆ ಕಾರಣ. ಕಾಗೆ ಗೋಗೆಗಳು ಈ ಕೆಲಸವನ್ನು ದಕ್ಷತೆಯಿಂದ ಮಾಡಲಾರವು! ಈಗ ದಫನದ ಮೂಲಕ ಮರಳಿ ಮಣ್ಣಿಗೆ; ಇಲ್ಲವೇ ಬೆಂಕಿಯ ಅಣಕದಂತಿರುವ ವಿದ್ಯುತ್ ಚಿತಾಗಾರ!
ಪಾರ್ಸಿಗಳಲ್ಲಿ ಹೆಣಹೊರುವುದಕ್ಕೆಂದೇ ಒಂದು ವರ್ಗವಿದೆ. ಇವರು ಪಾರ್ಸಿ ಜನಾಂಗದ ಕೆಳವರ್ಗ. ಬ್ರಾಹ್ಮಣಿಕೆಯನ್ನು ಅಣಕಿಸುವಂತೆ ವರ್ಣಾಶ್ರಮ ಧರ್ಮ ಅವರಲ್ಲಿಯೂ ಇದೆ. ಅವರ ಪಾಲಿಗೆ ಅದು ಸನಾತನ. ಈ ಕೃತಿಯ ನಾಯಕ ಫಿರೋಝ್. ಈತ ಪಾರ್ಸಿಗಳಲ್ಲಿ ತಕ್ಕಮಟ್ಟಿನ ಮೇಲ್ವರ್ಗ-ಜಾತಿಯವನು. ಈತನ ತಂದೆ ಪಾರ್ಸಿ ಜನಾಂಗದ ಧಾರ್ಮಿಕ ರೀತಿ-ರಿವಾಜುಗಳನ್ನು ನಿರ್ವಹಿಸುವವರು. ಗೌರವದ ಸ್ಥಾನ. ಒಬ್ಬ ಮಗ ವಿದ್ಯಾವಂತನಾದರೆ ಎರಡನೆಯ ಫಿರೋಝ್ ಕಲಿಯುವಿಕೆಯಲ್ಲಿ ಹಿಂದೆ. ಫಿರೋಝ್ ಈ ಸನಾತನಿಕೆಯ ಮುಂದುವರಿಕೆಯಾಗುವುದರ ಬದಲಿಗೆ ಹೆಣಹೊರುವ ವರ್ಗದ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಾನೆ. ಮಹಾಭಾರತದಲ್ಲಿ ಶಂತನುವಿಗೆ ಸತ್ಯವತಿಯ ಪಿತ ದಾಶರಾಜ ಷರತ್ತು ಹಾಕಿದಂತೆ ಈ ಹುಡುಗಿಯ ತಂದೆಯೂ ಫಿರೋಝ್ ತನ್ನ ಮಗಳನ್ನು ಮದುವೆಯಾಗಬೇಕಾದರೆ ತಮ್ಮ ವರ್ಗವನ್ನು ಸೇರಬೇಕೆಂದು ಮತ್ತು ತಮ್ಮೊಂದಿಗೇ ಬದುಕಬೇಕೆಂದು ಆಗ್ರಹಿಸುತ್ತಾನೆ. ಹೆತ್ತವರ ಪ್ರತಿರೋಧದ ನಡುವೆಯೂ ಫಿರೋಝ್ ಇದನ್ನು ಒಪ್ಪಿಕೊಂಡು ವರ್ಣಾಶ್ರಮದಲ್ಲಿ ಕೆಳಹಂತಕ್ಕೆ ಕುಸಿಯುತ್ತಾನಾದರೂ ಪ್ರೀತಿಗಾಗಿ ತನ್ನ ಪೌರೋಹಿತ್ಯ ಪರಂಪರೆಯ ಅಹಮಿಕೆಯನ್ನು ತೊರೆಯುತ್ತಾನೆ. ಹಾಗೆ ನೋಡಿದರೆ ಅವನ ತಂದೆತಾಯಿಗಳಿಬ್ಬರೂ ತಮ್ಮ ಮಟ್ಟಿಗೆ ಪ್ರಗತಿಪರರೇ. ಅಂತರಂಗದ ಅಭಿಲಾಷೆಯನ್ನು ಒಳಗೇ ಇಟ್ಟು ಸಾರ್ವಜನಿಕ ವ್ಯಕ್ತಿತ್ವಕ್ಕೆ ಆಡಂಬರವನ್ನು ಹಚ್ಚಿಕೊಂಡವರು. ಆತ ಪ್ರೀತಿಸಿದಾಕೆ ಒಂದು ಮಗುವನ್ನು ಆತನಿಗಿತ್ತು ಬೇಗನೆ ಸಾಯುತ್ತಾಳೆ. ತನ್ನವರಿಂದ ಅಕ್ಷರಶಃ ಹೊರಹಾಕಲ್ಪಟ್ಟ ಫಿರೋಝ್ ಹೆಣಹೊರುವವರ ನಡುವೆಯೂ ವ್ಯವಸ್ಥೆಯ ಕುಂದುಕೊರತೆಗಳನ್ನು ನೀಗಿಸಲು ಹೋರಾಡುತ್ತಾನೆ. ಕ್ರಾಂತಿಯನ್ನು ಸೃಷ್ಟಿಸುತ್ತಾನೆ. ಇದಕ್ಕಾಗಿ ಆತ ತೆರುವ ಬೆಲೆ ಅಪಾರ.
ಕೃತಿ ಪ್ರಥಮ ಪುರುಷವಾಚಿಕೆ. ವರ್ತಮಾನದಿಂದ ಗತಕ್ಕೆ ಮರಳಿ ಮತ್ತೆ ವರ್ತಮಾನಕ್ಕೆ ಬರುವ ನಿರೂಪಣೆ. ಎಲ್ಲೂ ನಾಯಕನ ಅನಗತ್ಯ ಪ್ರಶಂಸೆಯಿಲ್ಲ. ತನ್ನ ಬಗ್ಗೆ ಅನೇಕ ಬಾರಿ ನಾಚಿಕೊಳ್ಳುತ್ತಾನೆ. ಕೃತಿಗೆ ಆತ ನಾಯಕನಾದರೂ ಹೆಣಹೊರುವ, ಅಂತ್ಯಸಂಸ್ಕಾರದ ವಸ್ತುವೇ ನಾಯಕ. ಹೆಣಗಳನ್ನಿಡುವ ಜಾಗ ‘ಮೌನಗೋಪುರ’ ಅರ್ಥಪೂರ್ಣ. ಮೂಳೆಗಳಷ್ಟೇ ಉಳಿಯುವ ಈ ಪ್ರಕ್ರಿಯೆ ಸಾಂಕೇತಿಕವಾಗಿ ಅರ್ಥ ಕಂಡುಕೊಳ್ಳುವುದು ‘ಅಂತಿಮವಾಗಿ ಮನುಷ್ಯ ಅಂದರೆ ಏನು ಫಿರೋಝ್ ಬರಿ ಕೆಲವು ಒಣಗಿದ ಮೂಳೆಗಳ ಪುಡಿ ಅಷ್ಟೆ...?’ ಇಲ್ಲಿನ ಕುಡುಕುತನ ಅನಿವಾರ್ಯ. ತಾವು ಮಾಡುವ ಕೊಳಕು ಕಾಯಕವನ್ನು ಮರೆಯಬೇಕಾದರೆ ಮೈಮರೆಯುವುದು, ಅಮಲು ಅಗತ್ಯ.
ಅನುವಾದ ಮೂಲನಿಷ್ಠವೂ ಸಹಜವೂ ಆಗಿದೆ. ಉದಾಹರಣೆಗೆ ಮೂಲದಲ್ಲಿ ಇರುವ ‘‘A wretched fatigue hugged every inch of my body like a lover.’’ ಅನುವಾದದಲ್ಲಿ ‘‘ಈ ದರಿದ್ರ ಆಯಾಸ ಪ್ರಿಯಕರನಂತೆ ನನ್ನ ದೇಹದ ಪ್ರತಿ ಇಂಚಿಂಚನ್ನು ತಬ್ಬಿಕೊಂಡಿದೆ.’’ ಎಂದಿದೆ. ‘‘Perhaps life is like that: slippery, elusive, impossible to get a hold on. The difference between this moment and the next is only one of awareness... Yet we drift from morn till night, from day through week through month and years distracted, inattentive, and completely unprepared for the ambush- the moment of our inevitable extinction’’ ಎಂಬ ವಾಕ್ಯಗಳು ‘‘ಬಹುಷಃ ಬದುಕೇ ಹಾಗೆ: ಹಿಡಿತಕ್ಕೆ ಸಿಕ್ಕುವುದಿಲ್ಲ, ಗ್ರಹಿಕೆಗೆ ನಿಲ್ಲುವುದಿಲ್ಲ. ಅದರ ಮೇಲೆ ಹಿಡಿತ ಸಾಧಿಸಲು ಆಗುವುದಿಲ್ಲ. ಈ ಕ್ಷಣ ಹಾಗೂ ಮುಂದಿನ ಕ್ಷಣಕ್ಕೆ ಇರುವ ವ್ಯತ್ಯಾಸ ಎಂದರೆ ಅರಿವು. ಆದಾಗ್ಯೂ ಬೆಳಗಿನಿಂದ ರಾತ್ರಿಯವರೆಗೆ, ತಿಂಗಳಿಂದ ವರ್ಷದ ವರೆಗೆ ವಿಚಲಿತರಾಗಿ ಗಮನವಿಲ್ಲದೆ ಕಾಲಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೇವೆ. ಹೊಂಚಿನ ದಾಳಕ್ಕೆ, ನಶಿಸುವ ಅನಿವಾರ್ಯತೆಯ ಕ್ಷಣಕ್ಕೆ ನಾವು ಯಾವ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಂಡಿಲ್ಲ.’’ ಎಂದು ಅನುವಾದಗೊಂಡಿವೆ. (ವಾರ ಎಂಬ ಪದ ಉಲ್ಲೇಖವಾಗಿಲ್ಲವಾದರೂ ಭಾವ ಸ್ಪಷ್ಟ.)
ಅರಸು ಅವರು ಈ ಕೃತಿಯನ್ನು ಸಹಜವಾಗಿ ಕಾಣುವಂತೆ ನಿರೂಪಿಸುವುದಕ್ಕಾಗಿ ಸಾಕಷ್ಟು ಶ್ರಮಿಸಿದ್ದು ಕೃತಿಯಲ್ಲಿ ಗೊತ್ತಾಗುತ್ತದೆ. ಕೆಲವೆಡೆ ಕರಡನ್ನು ಸರಿಯಾಗಿ ಪರಿಷ್ಕರಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುವಂತಿದೆ. ಮೇಲೆ ಹೇಳಿದ ‘ಬಹುಷಃ’ (‘ಬಹುಶಃ’ ಆಗಬೇಕಿತ್ತು) ಎಲ್ಲ ಕಡೆ ಹಾಗೆಯೇ ಮುದ್ರಿತವಾಗಿದೆ. (‘ಪ್ರಶ್ನಾರ್ತಕ’, ‘ಅಸ್ಥಿತ್ವ’ ಮುಂತಾದ ಇನ್ನೂ ಕೆಲವು ಮುದ್ರಣ ದೋಷಗಳಿವೆ.)
ಸೈರಸ್ ಮಿಸ್ತ್ರಿ ಅಳಿದುಹೋಗುವ ಸಂಸ್ಕಾರದ ಒಳಿತುಕೆಡುಕುಗಳಿಗೆ ಕನ್ನಡಿ ಹಿಡಿದಿದ್ದಾರೆ. ಅದನ್ನು ಅರಸು ಕನ್ನಡಿಗರಿಗೂ ರೋಮಾಂಚ ಅನುಭವವಾಗಿಸಿದ್ದಾರೆ.