ಇಂಡಿಯಾ ಅರ್ಥಾತ್ ಭಾರತದಲ್ಲಿ ಜಿ20 ಅಥವಾ 20ಜಿ?

ನಮ್ಮ ಪ್ರಧಾನಿ ಮಾತ್ರ ಇದು ತನಗೆ ದಕ್ಕಿದ ಗೌರವವೆಂದು ಭಾವಿಸಿದರು. ಎಲ್ಲಕಡೆಯಲ್ಲೂ ತಾನೇ ಮಿಂಚುವಂತೆ ಯೋಜಿಸಿದರು. ಅವರ ಕೆಲವು ಸಚಿವರು, ಅಧಿಕಾರಿಗಳು, ಬೆಂಬಲಿಗರು ಈ ಪ್ರಯತ್ನಕ್ಕೆ ಸಾಥ್ ಕೊಟ್ಟರು. ನಮ್ಮ ಮಾಧ್ಯಮಗಳು (ಕೆಲವರು ಗೊತ್ತಿದ್ದು, ಇನ್ನು ಕೆಲವರು ಗೊತ್ತಿಲ್ಲದೆ) ಇದೊಂದು ಮಹತ್ಸಾಧನೆಯೆಂದು ಚಿತ್ರಿಸಿದವು. ಸರಕಾರ ಜಿ೨೦ರ ಹೆಸರಿನಲ್ಲಿ ಪ್ರಚಾರವೈಭವ ಪಡೆಯಿತು. ಇದೊಂದು ವೈಯಕ್ತಿಕ ಜನಪ್ರಿಯತೆಯ ಮಾನದಂಡವೆಂಬಂತೆ ಜನಮನದಲ್ಲಿ ಬಿಂಬಿಸಿತು. ನಮ್ಮ ಮುಗ್ಧರನ್ನೂ ಮೂರ್ಖರನ್ನೂ ಭಾರತವು ಎಂದೂ ತಲುಪದ ಔನ್ನತ್ಯವನ್ನು ಸಾಧಿಸಿದಂತೆ ನಂಬಿಸಿತು.

Update: 2023-09-14 06:56 GMT

ಭಾರತದ ರಾಷ್ಟ್ರಪತಿಯವರು ಇತ್ತೀಚೆಗೆ ನಡೆದ ಜಿ20 ದಿಲ್ಲಿ ಶೃಂಗಸಭೆಯ ಆಹ್ವಾನಿತರನ್ನು ಆಮಂತ್ರಿಸುವಾಗ ಇಂಗ್ಲಿಷಿನಲ್ಲಿಯೂ ‘ಭಾರತದ ರಾಷ್ಟ್ರಪತಿ’ಯೆಂದು ಬಳಸಿದರು. ಮುಂದೆ ಜಿ20ರ ಶಿಖರ ಸಮ್ಮೇಳನದಲ್ಲಿ ನಮ್ಮ ಪ್ರಧಾನಿಯವರೆದುರು ‘ಭಾರತ್’ ಎಂಬ ಫಲಕ ರಾರಾಜಿಸುತ್ತಿತ್ತು. ಇಂಡಿಯಾಕ್ಕೆ ಬಂದ ಅತಿಥಿ ಗಣ್ಯರು ಇದನ್ನು ಗಮನಿಸದಿರಲಾರರು. ಹುಬ್ಬೇರಿಸಿದರೂ ಹೇಳಲಾರರು.

ಭಾರತದ ಸಂವಿಧಾನದಲ್ಲಿರುವ ಮತ್ತು ನಿತ್ಯ ಬಳಕೆಯ ‘ಇಂಡಿಯಾ’ ಮತ್ತು ‘ಭಾರತ’ವೆಂಬ ಈ ಅವಳಿ ಪದಗಳ ಮಹತ್ವ ಈಗ ಸಲ್ಲದ ಕಾರಣಗಳಿಗಾಗಿ ಎಂದಿಗಿಂತ ಹೆಚ್ಚಾಗಿದೆ.

ಭಾರತದ ಸಂವಿಧಾನವನ್ನು ಮಾಡಿದವರು ಮೂರ್ಖರಲ್ಲ. ಬ್ರಿಟಿಷರ ಗುಲಾಮರೂ ಅಲ್ಲ. ಪ್ರಾಯಃ ಇಂದು ಪ್ರಚಾರದಲ್ಲಿರುವ ಯಾವುದೇ ನಾಯಕರಿಗಿಂತ ಯೋಜನ ಮಿಗಿಲಾಗಿ ಸ್ವತಂತ್ರ ಭಾರತಕ್ಕಾಗಿ, ಭಾರತದ ಸಾರ್ವಭೌಮ ಅಸ್ತಿತ್ವಕ್ಕಾಗಿ ದುಡಿದವರೇ ನಮ್ಮ ಸಂವಿಧಾನವನ್ನು ಸಿದ್ಧಗೊಳಿಸಿದವರು. ಆದರೆ ಅವರು ನೆಲದಡಿಯ ಬೇರಿನಂತಿದ್ದು ಹೆಸರಿಗಾಗಿ, ಪ್ರತಿಷ್ಠೆಗಾಗಿ ಗೋಚರಿಸಿದವರಲ್ಲ. ಅವರ ಬೆವರಿನ ಫಲವಾಗಿ ಇಂದಿನ ಚಿಗುರುಗಳು ಎತ್ತರದಲ್ಲಿ ಹಾರಾಡುತ್ತಿವೆ.

ನಮ್ಮ ಸಂವಿಧಾನದ ೧ನೇ ವಿಧಿಯೇ ‘ಇಂಡಿಯಾ, ಅರ್ಥಾತ್ ಭಾರತವು ...’ ಎಂಬ ಒಕ್ಕಣೆಯನ್ನು ಹೊಂದಿದೆ. ಇಂಗ್ಲಿಷ್ ಮೂಲದಲ್ಲಿ ‘India, that is Bharath’ ಎಂದಿದೆ. ಇಂಡಿಯಾ ಎಂಬ ಪದವನ್ನು ನಿರುದ್ಯೋಗ ನಿವಾರಣೆಗಾಗಿ ಅಥವಾ ಅದು ಯಾವನೊಬ್ಬ ಬ್ರಿಟಿಷನನ್ನು ಮೆಚ್ಚಿಸುವುದಕ್ಕಾಗಿ, ಬಳಸಿದ ಪದವಲ್ಲ. ಅದಕ್ಕೂ ಐತಿಹಾಸಿಕ ಹಿನ್ನೆಲೆಯಿದೆಯೆಂಬುದನ್ನು ಭಾರತದ ಕುರಿತ ಸಾಮಾನ್ಯ ಜ್ಞಾನ ಮತ್ತು ಸದುದ್ದೇಶ ಹಾಗೂ ಸ್ವಲ್ಪ ವಿದ್ಯೆ ಮತ್ತು ಲೋಕಜ್ಞಾನ ಹೊಂದಿದ ಪ್ರತಿಯೊಬ್ಬನಿಗೂ ಗೊತ್ತಿರಬಹುದು. ಮುಂದೆ ಸಂವಿಧಾನದ ಎಲ್ಲ ಕಡೆಯೂ ‘ಇಂಡಿಯಾ’ ಎಂಬ ಪದವೇ ಬಳಸಲಾಗಿದೆ ವಿನಾ ಭಾರತವೆಂಬ ಪದವಲ್ಲ. ವಿಶ್ವಕ್ಕೆ ಇಂಡಿಯಾ ಎಂದೂ ದೇಶದೊಳಗೆ ಭಾರತ ಎಂದೂ ಉಲ್ಲೇಖಿಸುವ ಅನುಕೂಲವನ್ನು ಹಿರಿಯರು ಒದಗಿಸಿದರು. ಒಂದು ರೀತಿಯಲ್ಲಿ ಮನುಷ್ಯರಿಗೆ ಅವರ ಅಧಿಕೃತ ಹೆಸರಿದ್ದಾಗಲೂ ಮನೆಯಲ್ಲಿ ಬೇರೆ ಹೆಸರು ಹಿಡಿದು ಕರೆಯುವ, ಉಲ್ಲೇಖಿಸುವ ಪದ್ಧತಿಯ ಹಾಗೆ; ಅಥವಾ ಮದುವೆಯಾದ ಬಳಿಕ ಹೆಣ್ಣಿಗೆ ಗಂಡನ ಮನೆಯಲ್ಲಿ ಬೇರೆ ಹೆಸರನ್ನಿಟ್ಟ ಹಾಗೆ. ಇವೆಲ್ಲ ಸಂಪ್ರದಾಯಬದ್ಧ ನೀತಿಗಳೇ ಹೊರತು ಜಗಳ ಕಾಯುವ ವಿಚಾರಗಳಲ್ಲ.

ದೇಶದೊಳಗೆ ಭಾರತವೆಂಬ ಹೆಸರಿನ ಅನೇಕ ಸಂಸ್ಥೆಗಳಿವೆ.: ‘ಭಾರತ್ ಹೆವ್ವಿ ಇಲೆಕ್ಟ್ರಿಕಲ್ಸ್’, ‘ಭಾರತ್ ಇಲೆಕ್ಟ್ರಾನಿಕ್ಸ್’, ‘ಭಾರತ್ ಪೆಟ್ರೋಲಿಯಮ್’. ‘ಭಾರತರತ್ನ’ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಎಂದು ನಾಮಕರಣವಾಗಿದ್ದರೆ ಅದರಲ್ಲಿರುವ ಕೊನೆಯ ಪದ ‘ಇಂಡಿಯಾ’. ಆದರೂ ದೇಶದೊಳಗೂ ಇಂಡಿಯಾ ಎಂಬ ಪದವನ್ನು ಯಥೇಚ್ಛವಾಗಿ ಬಳಸಲಾಗಿದೆ. ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’, ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಅಥವಾ ‘ಏರ್ ಇಂಡಿಯಾ’, ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’, ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’, ‘ಇಂಡಿಯನ್ ಬ್ಯಾಂಕ್’, ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’, ‘ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ’ ಅಥವಾ ‘ಇಂಡಿಯನ್ ಆಯಿಲ್ ಕಂಪೆನಿ’ ಹೀಗೆ ನೂರಾರು ಸಂಸ್ಥೆಗಳು ಕಳೆದ ಹಲವಾರು ದಶಕಗಳಿಂದ ನಿರಾತಂಕವಾಗಿ ಕಾರ್ಯನಿರ್ವಹಿಸುತ್ತಿವೆ. ಈಗಿನ ಸರಕಾರ ಆಡಳಿತಕ್ಕೆ ಬರುವ ಎಷ್ಟೋ ಮೊದಲೇ ‘ಭಾರತ್ ಏಕ್ ಖೋಜ್’ ಎಂಬ ಧಾರಾವಾಹಿಯನ್ನು ದೂರದರ್ಶನವು ಪ್ರಸಾರ ಮಾಡಿತ್ತು. ಹೀಗೆ ಪರಸ್ಪರ ಭಿನ್ನತೆಯಿಲ್ಲದೆ, ಸಾಮರಸ್ಯದಿಂದ ಈ ಪದಗಳು ಬಳಕೆಯಾಗಿವೆ. ಹಾಗೆ ನೋಡಿದರೆ ‘ಭಾರತ’ ಎಂಬ ಪದ ನಮ್ಮ ಭಾಷಾ ವೈವಿಧ್ಯದಿಂದಾಗಿ ‘ಭಾರತ್’ ಎಂದೂ ಬಳಕೆಯಾಗಿದೆ. ವಿಶೇಷವೆಂದರೆ ‘ಭಾರತ’ ಎಂಬ ಬಳಕೆಯನ್ನು ಇಂಗ್ಲಿಷಿನಲ್ಲಿ ‘ಇಂಡಿಯಾ’ ಎಂದೂ ಮತ್ತು ‘ಇಂಡಿಯಾ’ ಎಂಬ ಪದವನ್ನು ದೇಶೀಭಾಷೆಯಲ್ಲಿ ‘ಭಾರತ್’ ಎಂದೂ ಯಾರೂ ಬಳಸುತ್ತಿಲ್ಲ. ಅಪವಾದಗಳನ್ನು ಹುಡುಕುವುದಾದರೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ವನ್ನು ‘ಭಾರತೀಯ ರಿಸರ್ವ್ ಬ್ಯಾಂಕ್’, ಅಥವಾ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ವನ್ನು ‘ಭಾರತೀಯ ಸ್ಟೇಟ್ ಬ್ಯಾಂಕ್’ ಎಂದು ಬಳಸುತ್ತಾರೆ. ನಮ್ಮ ಚಲಾವಣಾ ನೋಟುಗಳಲ್ಲಿ ಈ ಎರಡೂ ಪದಗಳಿವೆ. ಇವು ಅರ್ಥವಾಗುವುದಕ್ಕೆ ಮಾತ್ರವೇ ಹೊರತು ದೇಶ-ಭಾಷೆಯ ಅಭಿರುಚಿಯನ್ನು ಕೆಡಿಸುವುದಕ್ಕಲ್ಲ.

ನಮ್ಮ ಸಂವಿಧಾನದ ಕನ್ನಡ ಅವತರಣಿಕೆಯಲ್ಲಿ (‘ಭಾರತದ ಸಂವಿಧಾನ:’ ಭಾರತ ಸರಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಪ್ರಕಾಶಿತ-ಅಗಸ್ಟ್ ೧೯೮೫) ಎಲ್ಲೆಲ್ಲಿ ‘ಇಂಡಿಯಾ’ ಎಂಬ ಪದವಿದೆಯೋ ಅಲ್ಲೆಲ್ಲ ‘ಭಾರತ’ ಎಂಬ ಪದವನ್ನು ಬಳಸಲಾಗಿದೆ. ಆದರೆ ೧ (೧)ನೇ ವಿಧಿಯಲ್ಲಿ ಮಾತ್ರ ‘‘ಇಂಡಿಯಾ, ಅರ್ಥಾತ್ ಭಾರತವು...’’ ಎಂಬ ಪದ/ವಾಕ್ಯವಿದೆ. ಇದೊಂದು ನಾಮಪದವಾದ್ದರಿಂದ ಅನುವಾದದ ಈ ಬಳಕೆ ಕಾನೂನಿನಲ್ಲಿ ಎಷ್ಟು ಸರಿಯೆಂಬುದು ಪ್ರಶ್ನಾರ್ಹ. (ತುಸು ಅಸಮಂಜಸವೆನ್ನಿಸಿದರೂ ರವಿಪ್ರಕಾಶ ಎಂಬ ವ್ಯಕ್ತಿಯನ್ನು ಇಂಗ್ಲಿಷಿನಲ್ಲಿ ‘ಸನ್‌ಲೈಟ್’ ಎಂದು ಕರೆಯಬಹುದೇ?)

ಆದರೆ ಬಹುಭಾಷಾ ದೇಶವಾಗಿರುವ ಭಾರತದಲ್ಲಿ ಇದಕ್ಕಾಗಿ ಸಂವಿಧಾನದ ೩೪೩ನೇ ವಿಧಿಯಲ್ಲಿ ಅಧಿಕೃತ ಭಾಷೆಯಾಗಿ ಯಾವ ಭಾಷೆಯನ್ನು ಬಳಸಬೇಕೆಂದು ಸ್ಪಷ್ಟವಾದ ನಿಯಮಗಳನ್ನು ರೂಪಿಸಿದೆ. ಇಲ್ಲಿ ದೇವನಾಗರಿ ಲಿಪಿಯ ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆಯಾಗಿ ನಿಯಮಿಸಲಾಗಿದೆ. ಇಂಗ್ಲಿಷಿನ ಬಳಕೆಗೆ ಅವಧಿ ಬಾಧಕತನವನ್ನು ಹೇಳಿದರೂ ಅದನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ. ಇಂಗ್ಲಿಷ್ ಬಿಟ್ಟು ಸದ್ಯಕ್ಕೆ ವ್ಯವಹಾರ ನಡೆಯದು. ಇಂಗ್ಲಿಷಿನ ವಿರುದ್ಧ ದೇಶೀ ಭಾಷೆಗಳನ್ನು ಎಷ್ಟೇ ಎತ್ತಿಕಟ್ಟಿದರೂ ಪ್ರಧಾನಿಯಿಂದ ಆರಂಭಿಸಿ ಪ್ರಾಥಮಿಕ ಹಂತದ ಕಾರ್ಮಿಕರವರೆಗೂ ಟ್ವಿಟರ್, ಫೇಸ್‌ಬುಕ್, ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲಿಷನ್ನು ಬಳಸುವ ವಿಪರ್ಯಾಸವನ್ನು ಕಾಣುತ್ತಿದ್ದೇವೆ.

ಹಾಗೆಯೇ ೧೨೦ನೇ ವಿಧಿಯಲ್ಲಿ ಸಂಸತ್ತಿನ ವ್ಯಾಪ್ತಿಯಲ್ಲಿ ಹಿಂದಿ ಮತ್ತು ಇಂಗ್ಲಿಷಿನ ಬಳಕೆಯನ್ನು ನಿಯಮಿಸಿದರೆ, ೨೧೦ನೇ ವಿಧಿಯಲ್ಲಿ ವಿಧಾನಮಂಡಲದಲ್ಲಿ ಹಿಂದಿ ಮತ್ತು ಇಂಗ್ಲಿಷಿನ ಬಳಕೆಯೊಂದಿಗೆ ಆಯಾಯ ರಾಜ್ಯಗಳ ಅಧಿಕೃತ ಭಾಷೆಯನ್ನೂ ಸೇರಿಸಲಾಗಿದೆ. ಹೀಗೆ ಒಕ್ಕೂಟದ ಮಹತ್ವವಿರುವುದು ದ್ವಿಭಾಷಾ ಮತ್ತು ರಾಜ್ಯಗಳಲ್ಲಿ ತ್ರಿಭಾಷಾ ಬಳಕೆಯ ಅನುಕೂಲಗಳಿಂದ. ಇವನ್ನು ಜಾಗರೂಕತೆಯಿಂದ ರಚಿಸಲಾಗಿದೆಯೆಂದು ಮನಗಂಡರೆ ಇವನ್ನು ಭಾವನೆಗಳ ಮೂಲಕ ರಾಜಕಾರಣದ ಮೂಲಕ, ಬದಲಾಯಿಸಲು ಸಾಧ್ಯವಿಲ್ಲವೆಂಬುದು ಅರ್ಥವಾಗುತ್ತದೆ. ಹೀಗಿರುವಾಗ ಇಂಗ್ಲಿಷ್ ಎಂದು ನಾವು ತಿಳಿದುಕೊಂಡ ‘ಇಂಡಿಯಾ’ದ ನಿರ್ಮೂಲನೆ ಸಾಧ್ಯವಿಲ್ಲ ಮತ್ತು ಅದು ಸಾಧುವೂ ಅಲ್ಲ.

ಇದ್ದಕ್ಕಿದ್ದಂತೆ ಈ ವಿಚಾರವನ್ನು ವಿವಾದವಾಗಿ ಒಕ್ಕೂಟ ಸರಕಾರವು ಪರಿವರ್ತಿಸುತ್ತಿದೆಯೆಂದು ಮೇಲ್ನೋಟಕ್ಕೇ ಕಂಡುಬರುತ್ತದೆ. ದೇಶದ ಮತ್ತು ಭವಿಷ್ಯದ ಪೀಳಿಗೆಗಾಗಿ ನಾಯಕರು, ರಾಜಕಾರಣಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಡಬೇಕು. ಇಷ್ಟಕ್ಕೂ ಕಳೆದ ೭೫ ವರ್ಷಗಳಿಂದ ಅನೂಚಾನವಾಗಿ ಬಂದ ರೂಢಿಯನ್ನು ಕಿತ್ತೆಸೆದು ‘ಇಂಡಿಯಾ’ಕ್ಕೆ ಹೊಸ ನಾಮಕರಣ ಮಾಡಿ ಅಲ್ಲಿ ‘ಭಾರತ’ವನ್ನು ಪ್ರತಿಷ್ಠಾಪಿಸುವುದು ಎಳ್ಳಷ್ಟೂ ಸಮಂಜಸವಲ್ಲ. ಹೀಗೆ ಅನಾಮತ್ತಾಗಿ ಹೊಸದನ್ನು ತರುತ್ತೇವೆಂದು ಹೇಳುವವರು ಹಳತನ್ನು ಮುರಿದು ಕಟ್ಟುವುದಿಲ್ಲ; ಬದಲಾಗಿ ಹಳತನ್ನು ಅವಮಾನಿಸುತ್ತಿದ್ದಾರೆ. ಇಂತಹ ಕುತ್ಸಿತ ರಾಜಕಾರಣ ಬದುಕಿನ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸುವ ಮೊದಲು ಜನರು ಎಚ್ಚರಾಗಬೇಕು.

ಇದರ ಒಂದು ಸರಳ ಆದರೆ ಕಹಿ ವ್ಯಾಯಾಮದಂತೆ ಭಾರತದ ರಾಷ್ಟ್ರಪತಿಯವರ ಆಹ್ವಾನದಲ್ಲಿ ಮತ್ತು ಪ್ರಧಾನಿಯವರೆದುರು ‘ಭಾರತ’ ಎಂಬ ಫಲಕದಲ್ಲಿ ‘ಇಂಡಿಯಾ’ ಎಂಬ ಪದವನ್ನು ಅಳಿಸುವ ಅಗ್ಗದ ಪ್ರಯತ್ನವೇ ಹೊರತು ಭಾರತದ ವೈಭವೀಕರಣವಲ್ಲ. ಇಂತಹ ಒಂದು ಸೂಚನೆಯೊಂದಿಗೆ ನಮ್ಮ ಪ್ರಧಾನಿ ಜಿ೨೦ ಶಿಖರ ಸಭೆಯನ್ನು ನಡೆಸಿದರು. ಮುಂದೆ ಇಂತಹ ಪ್ರಯೋಗಗಳು ನಡೆಯಬಹುದು. ಆದ್ದರಿಂದ ಈ ಆರಂಭೋತ್ಸವವನ್ನು ಮಂಜುಗಡ್ಡೆಯ ತುದಿಯೆಂದು ಬಣ್ಣಿಸಬಹುದು.

ಜಿ೨೦ ಒಂದು ಒಕ್ಕೂಟ. ಅದಕ್ಕೆ ಆಡಳಿತವಾಗಲೀ ತನ್ನ ಸದಸ್ಯರಾಷ್ಟ್ರಗಳ ಮೇಲೆ ಶಿಸ್ತು ಮತ್ತು ಕಾನೂನಿನ ನಿರ್ವಹಣೆಯಿಲ್ಲ; ಹತೋಟಿಯೂ ಇಲ್ಲ. ವಿಶ್ವಸಂಸ್ಥೆಯ ಅಧ್ಯಕ್ಷರು ವಿಶ್ವದ ಅಧ್ಯಕ್ಷರಲ್ಲ. ಇಷ್ಟು ಅರ್ಥವಾದರೆ ಜಿ೨೦ರ ಅಧ್ಯಕ್ಷಸ್ಥಾನದ ಮಹತ್ವ ಅರಿಯಬಹುದು. ಹೆಚ್ಚೆಂದರೆ ಅವು ನಮ್ಮ ಸಂವಿಧಾನದಲ್ಲಿರುವ ರಾಜ್ಯನೀತಿಯ ನಿರ್ದೇಶಕ ತತ್ವಗಳಂತೆ ಉಪದೇಶಪೂರ್ವಕ ಮತ್ತು ಉಪದೇಶಪೂರಕವಾದವುಗಳು.

ಜಿ೨೦ಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಸರದಿಯಲ್ಲಿ ಅಧ್ಯಕ್ಷ ಸ್ಥಾನ ಲಭಿಸಿದೆ. ಅದೀಗ ಬ್ರೆಝಿಲ್ ದೇಶಕ್ಕೆ ಮುಂದುವರಿಯುತ್ತದೆ. ಅಂತಾರ್‌ರಾಷ್ಟ್ರೀಯ ಸಂಸ್ಥೆಗಳಾದ ರೋಟರಿ, ಲಯನ್ಸ್ ಮುಂತಾದ ಸಂಸ್ಥೆಗಳಂತೆ ಇಲ್ಲೂ ಅಧ್ಯಕ್ಷ ಸ್ಥಾನವು ಸರದಿಯಂತೆ ಮೇಲು-ಕೀಳು, ದೊಡ್ಡ-ಸಣ್ಣ ಎಂಬ ಅಂತರವಿಲ್ಲದೆ ಎಲ್ಲ ಸದಸ್ಯರಾಷ್ಟ್ರಗಳಿಗೂ ಲಭಿಸುತ್ತದೆ. ಯಾವುದೇ ರಾಷ್ಟ್ರವು ಹೀಗೆ ಸದಸ್ಯತನ ಪಡೆದದ್ದರಿಂದ ಅದರ ವೈಯಕ್ತಿಕ ವರ್ಚಸ್ಸು ಹೆಚ್ಚುವುದಿಲ್ಲ. ಹಾಗೆಯೇ ಸದಸ್ಯರಾಷ್ಟ್ರಕ್ಕೆ ಸ್ಥಾನವಲ್ಲದೆ ಅದರ ಮುಖ್ಯಸ್ಥರಿಗಲ್ಲ. ಇಂತಹ ಅನೇಕ ಸಂಸ್ಥೆಗಳಿವೆ. ತಮಾಷೆಯೆಂದರೆ ಭಿನ್ನ ಧೋರಣೆಗಳ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ರಾಷ್ಟ್ರಗಳು ಅನೇಕವಿವೆ.

ಆದರೆ ನಮ್ಮ ಪ್ರಧಾನಿ ಮಾತ್ರ ಇದು ತನಗೆ ದಕ್ಕಿದ ಗೌರವವೆಂದು ಭಾವಿಸಿದರು. ಎಲ್ಲಕಡೆಯಲ್ಲೂ ತಾನೇ ಮಿಂಚುವಂತೆ ಯೋಜಿಸಿದರು. ಅವರ ಕೆಲವು ಸಚಿವರು, ಅಧಿಕಾರಿಗಳು, ಬೆಂಬಲಿಗರು ಈ ಪ್ರಯತ್ನಕ್ಕೆ ಸಾಥ್ ಕೊಟ್ಟರು. ನಮ್ಮ ಮಾಧ್ಯಮಗಳು (ಕೆಲವರು ಗೊತ್ತಿದ್ದು, ಇನ್ನು ಕೆಲವರು ಗೊತ್ತಿಲ್ಲದೆ) ಇದೊಂದು ಮಹತ್ಸಾಧನೆಯೆಂದು ಚಿತ್ರಿಸಿದವು. ಸರಕಾರ ಜಿ೨೦ರ ಹೆಸರಿನಲ್ಲಿ ಪ್ರಚಾರವೈಭವ ಪಡೆಯಿತು. ಇದೊಂದು ವೈಯಕ್ತಿಕ ಜನಪ್ರಿಯತೆಯ ಮಾನದಂಡವೆಂಬಂತೆ ಜನಮನದಲ್ಲಿ ಬಿಂಬಿಸಿತು. ನಮ್ಮ ಮುಗ್ಧರನ್ನೂ ಮೂರ್ಖರನ್ನೂ ಭಾರತವು ಎಂದೂ ತಲುಪದ ಔನ್ನತ್ಯವನ್ನು ಸಾಧಿಸಿದಂತೆ ನಂಬಿಸಿತು.

ಎಲ್ಲ ಜಿ೨೦ ಗಣ್ಯರು ಗಾಂಧಿಯನ್ನು ಸ್ಮರಿಸಿದರು. ರಾಜಘಾಟ್‌ಗೆ ಹೋಗಿ ನಮಿಸಿದರು. ಎಂದೂ ಅಧಿಕಾರ ರಾಜಕೀಯದ ಬಳಿ ಸುಳಿಯದ ಗಾಂಧಿಗೆ ರಾಷ್ಟ್ರಗಳ ಪ್ರಥಮ ಪ್ರತಿನಿಧಿಗಳು ಗೌರವ ಸಲ್ಲಿಸಿದರು. ಪ್ರಾಯಃ ಒಬ್ಬ ಗಾಂಧಿ ಸಾಧಿಸಿದ್ದನ್ನು ಇಂತಹ ನೂರು ಜಿ೨೦ಗಳು ಸಾಧಿಸಲಾರವು. ನಮ್ಮ ಪ್ರಧಾನಿಗೆ ಇದು ಗೊತ್ತಿತ್ತು. ಆದ್ದರಿಂದ ಈ ಅಂತರ್‌ರಾಷ್ಟ್ರೀಯ ವೇದಿಕೆಯಿಂದ ಗಾಂಧಿಯನ್ನು ಮನಸಾರೆ ಹೊಗಳಿದರು. ಗಾಂಧೀಪ್ರಣೀತ ನೀತಿಯನ್ನು ಭಾರತವು ಅನುಸರಿಸುತ್ತಿದೆಯೆಂದು ಕೊಚ್ಚಿಕೊಂಡರು. ಹೀಗೆ ಮಾಡುವ ಮೂಲಕ ಅವರು ಭಾರತದೊಳಗೆ ಏನು ನಡೆಯುತ್ತಿದೆಯೆಂಬುದನ್ನು ಮುಚ್ಚಿಕೊಂಡರು. ಇದಕ್ಕೆ ರೂಪಕಾತ್ಮಕವಾಗಿ ಅವರು ಜಿ೨೦ ಶೃಂಗಸಭೆ ನಡೆಯುವ ದಿಲ್ಲಿಯ ಕೊಚ್ಚೆಪ್ರದೇಶಗಳನ್ನು ಬಡವರು ವಾಸಿಸುವ ಸ್ಥಾನಗಳನ್ನು ಬಲವಂತವಾಗಿ ಗೋಡೆಕಟ್ಟಿ, ಪರದೆ ಎಳೆದು ಒಂದು ರೀತಿಯ ಲಾಕ್‌ಡೌನ್ ನಡೆಸಿ ಅದೃಶ್ಯವಾಗಿಸಿದರು. ಮನುಷ್ಯರಷ್ಟೇ ಅಲ್ಲ, ಬೀದಿ ನಾಯಿಗಳೂ ಕೈಕಾಲುಕಟ್ಟಿಸಿಕೊಂಡು ಬಂಧನದಲ್ಲಿ ನರಳಿದವು. ಹಿಂದೆ ಡೊನಾಲ್ಡ್ ಟ್ರಂಪ್ ಬಂದಾಗ ಅಹಮದಾಬಾದ್ ಇಂತಹ ಚಿತ್ರಹಿಂಸೆಗೆ ಗುರಿಯಾಗಿತ್ತು. ಈಗ ದಿಲ್ಲಿ; ಮುಂದೆ ಇನ್ನೆಲ್ಲಿಯೋ? ಮಯನಿರ್ಮಿತವೊ ಅರಗಿನರಮನೆಯೋ ಅಂತು ಕಡ್ಡಿಗೀರುವ ತನಕ ಶಂಕೆಯಿಲ್ಲ.

ಇಷ್ಟೇ ಅಲ್ಲ, ಅತಿಥಿಗಳ ಪತ್ರಿಕಾಗೋಷ್ಠಿಗಳನ್ನು ಮನ್ನಾಮಾಡಲಾಗಿತ್ತು. ಆದ್ದರಿಂದ ಪ್ರಶ್ನೆಗಳೇ ಇಲ್ಲ; ಇನ್ನು ಉತ್ತರಿಸುವುದಾದರೂ ಏನನ್ನು? ಇಲ್ಲಿಂದ ತೆರಳಿದ ಬಳಿಕ ಅನೇಕ ಅತಿಥಿಗಳು ಭಾರತದಲ್ಲಿ ಮಾನವಹಕ್ಕುಗಳ ಸರ್ವಾಧಿಕಾರದ ಬಗ್ಗೆ, ಪರೋಕ್ಷವಾಗಿ ಮೊನಚನ್ನೆಸೆದಿದ್ದರು. ಮಣಿಪುರದಿಂದ ಕಾಶ್ಮೀರದ ವರೆಗೆ ಮಾತ್ರವಲ್ಲ, ಇಡೀ ಭಾರತದಲ್ಲಿರುವ ಪ್ರಕ್ಷುಬ್ಧ ವಾತಾವರಣ ವನ್ನು ಎಷ್ಟೇ ಮುಚ್ಚಿ ಹಾಕಿದರೂ ಅದರ ದುರ್ಗಂಧವು ಜಿ೨೦ನ್ನು ಆವರಿಸಿತ್ತು. ೨ಜಿ, ೩ಜಿ, ೪ಜಿ, ೫ಜಿ ಕಂಡ ಭಾರತೀಯರಿಗೆ ೨೦ಜಿ ಕಂಡರೆ ಗಾಬರಿಯಾಗದು.

ಇದನ್ನು ನಮ್ಮ ಹಿರಿಯರು ಎಂದೋ ಕಂಡಿದ್ದರು. ಅದಕ್ಕೆ ‘ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು’ ಎಂಬ ಮಾತು. ಕೂಡಲಿ ಚಿದಂಬರಂ ಎಂದು ನೆನಪು, ಒಂದು ಹೃದ್ಯ, ಮಾರ್ಮಿಕ ಕಥೆ ಬರೆದಿದ್ದರು. ಶ್ರೀಮಂತ ಮತ್ತು ಬಡ ಗೆಳೆಯರು ಸಂಧಿಸುವ ಸಂದರ್ಭ. ಶ್ರೀಮಂತನು ತಾನು ಬಡವನನ್ನು ಸಂಧಿಸುವಾಗ ಆತನಿಗೆ ತನ್ನ ಶ್ರೀಮಂತಿಕೆಯ ವೈಭವವು ನೋವುಂಟುಮಾಡಬಹುದೆಂಬ ಭಯದಿಂದ ತೀರಾ ಸರಳವಾದ ಧಿರಿಸಿನೊಂದಿಗೆ ಹೋದರೆ, ಬಡವನು ಇಷ್ಟು ಶ್ರೀಮಂತ ಗೆಳೆಯನ್ನು ಭೇಟಿಯಾಗುವಾಗ ತನ್ನ ಬಡತನ ಕಾಣಬಾರದೆಂದು ಅಷ್ಟೋ ಇಷ್ಟೋ ಸಾಲಮಾಡಿ ಭಾರೀ ಧಿರಿಸಿನಲ್ಲಿ ಹೋಗುತ್ತಾನೆ. ಭೇಟಿ ಮುಗಿದಾಗ ಶ್ರೀಮಂತ ಇವನಿಗೆ ಇಷ್ಟೊಂದು ದುಂದು ಯಾಕೆ ಬೇಕು? ಅದ್ದರಿಂದಲೇ ಇವನು ಇಷ್ಟು ಬಡವನಾಗಿ ಉಳಿದಿದ್ದಾನೆ ಎಂದುಕೊಂಡರೆ, ಬಡವನು ಶ್ರೀಮಂತನ ಬಗ್ಗೆ ಇವನು ಮೂತ್ರದಲ್ಲಿ ಮೀನು ಹಿಡಿಯುವವನು, ಜಿಪುಣ! ಎಂದುಕೊಳ್ಳುತ್ತಾನೆ.

ತೋರಿಕೆ ಮಾತ್ರವಲ್ಲ, ಇದು ಶುದ್ಧ ಆಷಾಢಭೂತಿತನ. ಪ್ರಾಯಃ ನಮ್ಮ ನಾಯಕರು ಅಂತರ್‌ರಾಷ್ಟ್ರೀಯ ಹೊಣೆಯನ್ನು ದೇಶೀಲಾಭಕ್ಕೆ ಬಳಸಲು ಚಿಂತನೆ ನಡೆಸಿರಬೇಕು! ನಾನು ಕೊನೆಗೆ ಹೇಳಬೇಕಾದ್ದನ್ನು ಒಬ್ಬ ವ್ಯಂಗ್ಯಚಿತ್ರಕಾರರು ಈಗಾಗಲೇ ಹೇಳಿದ್ದಾರೆ: ವಿದೇಶಕ್ಕೆ ಗಾಂಧಿ, ಸ್ವದೇಶಕ್ಕೆ ಗೋಡ್ಸೆ ಎಂಬ ಹಂತಕ್ಕೆ ನಾವು ತಲುಪಿದ್ದೇವೆಯೇ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News