ಗಾಂಧಿ ಮತ್ತು ಜಾತ್ಯತೀತ ಹೊಣೆ
ಎಲ್ಲ ಕಾಲದಲ್ಲೂ ಮತೀಯ ಕಲಹಗಳು ರಾಜಕೀಯ ಪ್ರೇರಿತವೇ ಆಗಿದ್ದವು. ಅಧಿಕಾರ ಲಾಲಸೆಯೇ ಇಂತಹ ಅನಾಗರಿಕ ಪ್ರವೃತ್ತಿಯನ್ನು ಬೆಳೆಸಿದ್ದನ್ನು ಎಲ್ಲ ದೇಶಗಳ, ಸಮಾಜದ, ಜನಾಂಗಗಳ ಚರಿತ್ರೆಯಲ್ಲಿ ಕಾಣಬಹುದು. ಬುದ್ಧ, ಬಸವ, ಗಾಂಧಿಯಂತಹವರು ಇದಕ್ಕೆ ತಡೆಯೊಡ್ಡಲು ಪ್ರಯತ್ನಿಸಿದರಾದರೂ ಅದು ಫಲ ಕೊಟ್ಟಂತೆ ಕಾಣುವುದಿಲ್ಲ.
ಗಾಂಧಿಯ ಕುರಿತ ಓದಿನಲ್ಲಿ ಇಂತಹ ಘಟನೆಯು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ವರದಿಗಳಿವೆ. ಅವನ್ನು ವಿರೂಪಗೊಳಿಸುವ ಪ್ರಯತ್ನ ೧೯೪೮ರ ಜನವರಿ ೩೦ರಿಂದ ನಡೆಯುತ್ತಿದೆಯಾದರೂ ಅವು ಮತ್ತೆ ಮತ್ತೆ ನೆನಪಾಗುತ್ತಿವೆ; ನೆನಪಾಗಬೇಕು; ಆಗಷ್ಟೇ ವಿವೇಕದ ಉದಯ. ಇದು ಸಾಹಿತ್ಯ, ಸಂಸ್ಕೃತಿಯ ಹೆಸರಿನಲ್ಲಿ ಸರಿಯಾಗುವ ಸಂಗತಿಯಲ್ಲ. ಜೀವ-ಜೀವನ ಪ್ರೀತಿಯಿಂದಷ್ಟೇ ಆಗುವಂಥದ್ದು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದು ವರ್ಷವೂ ಗಾಂಧಿ ಬದುಕಿಲ್ಲವೆನ್ನುವುದು ಮಾರ್ಮಿಕ ಸತ್ಯ. ಅವರನ್ನು ಬದುಕಗೊಡುವುದು ಸ್ವತಂತ್ರ ಭಾರತದ ಆಶಯಗಳಲ್ಲೊಂದಾಗಿರಲಿಲ್ಲ. ವಿಶೇಷ ಸಂದರ್ಭಗಳಲ್ಲಿ ನಾಯಕರು ರಾಜಘಾಟಿಗೆ ಭೇಟಿ ನೀಡಿ ನಮನ ಸಲ್ಲಿಸುವುದು ಒಂದು ಔಪಚಾರಿಕ ಘಟನೆಯೂ ಅಲ್ಲ; ಪೊಳ್ಳು ನಟನೆಯಾಗುತ್ತಿದೆ. ಅದು ಇತಿಹಾಸದ ವಿಪರ್ಯಾಸ.
ಎರಡನೇ ಮಹಾಯುದ್ಧ ಮುಗಿದ ಸಂದರ್ಭದಿಂದ ಬ್ರಿಟಿಷರು ಭಾರತವನ್ನು ಭಾರತೀಯರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದರು. ಆದರೆ ಕೇಂದ್ರ ಮತ್ತು ಪ್ರಾದೇಶಿಕ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಪ್ರಧಾನ ಪಕ್ಷಗಳಾಗಿ ಹೊರಹೊಮ್ಮಿದವು. ಕ್ರೈಸ್ತರೇ ಮುಂತಾದ ಇತರ ಮತಗಳು ರಾಜಕೀಯದಲ್ಲಿ ಪ್ರಧಾನ ಪಾತ್ರವನ್ನು ವಹಿಸಿರಲಿಲ್ಲ. ಬ್ರಿಟಿಷರೂ, ಕಾಂಗ್ರೆಸೂ ಒಂದು ಸಂವಿಧಾನದಡಿ ಒಟ್ಟು ಭಾರತದ ನಿರ್ಮಾಣಕ್ಕೆ ಒಲವನ್ನು ತೋರಿಸಿದರಾದರೂ ಜಿನ್ನಾ ಪ್ರತ್ಯೇಕ ಪಾಕಿಸ್ತಾನಕ್ಕೆ ಪಟ್ಟುಹಿಡಿದರು. ಬ್ರಿಟಿಷರು ಹಿಂದೂ-ಮುಸ್ಲಿಮರನ್ನು ಒಡೆದು ಆಳಿದರು ಎಂಬವರು ಈ ವಿಚಾರವನ್ನು ಮನಗಾಣಬೇಕು. ಯಾವುದೇ ಹೊಂದಾಣಿಕೆಗೂ ಜಿನ್ನಾ ಒಪ್ಪದಾದಾಗ ನೆಹರೂ ಅವರ ನಾಯಕತ್ವದಲ್ಲಿ ಒಂದು ಮಧ್ಯಂತರ ಸರಕಾರವನ್ನು ರಚಿಸಲು ಬ್ರಿಟಿಷ್ ಆಡಳಿತವು ಕೋರಿತು. ಜಿನ್ನಾ ಅವರು ಸೂಚಿಸಿದ ಐವರನ್ನು ಇದರಲ್ಲಿ ಸೇರಿಸಿಕೊಳ್ಳಲು ಕಾಂಗ್ರೆಸ್ ಬಯಸಿದರೂ ಜಿನ್ನಾ ಅದನ್ನು ತಿರಸ್ಕರಿಸಿದರು. ಕೊನೆಗೆ ನೆಹರೂ ನಾಯಕತ್ವದಲ್ಲಿ ಮಧ್ಯಂತರ ಸರಕಾರ ರಚಿಸಿದಾಗ ಅದರಲ್ಲಿ ಇಬ್ಬರು ಮುಸ್ಲಿಮ್ ಸದಸ್ಯರಿದ್ದರು; ಆದರೆ ಅವರಿಬ್ಬರೂ ಮುಸ್ಲಿಮ್ ಲೀಗಿಗೆ ಸೇರಿದವಾಗಿರಲಿಲ್ಲ. ಇದನ್ನು ವಿರೋಧಿಸಿ ಜಿನ್ನಾ ೧೬/೦೮/೧೯೪೬ನ್ನು ನೇರಕ್ರಮದ ದಿನವೆಂದು ಘೋಷಿಸಿದರು. ಪರಿಣಾಮವಾಗಿ ಯಾವ ಬಂಗಾಳದಿಂದ ಸ್ವಾತಂತ್ರ್ಯ ಸಮರದಲ್ಲಿ ಅತೀ ಹೆಚ್ಚು ಬಲಿದಾನವಾಯಿತೋ ಆ ಬಂಗಾಳದ ಕೇಂದ್ರ ಕಲ್ಕತ್ತಾದಲ್ಲಿ ನಡೆದ ಹಿಂಸಾಕಾಂಡದಲ್ಲಿ ಅಂದಾಜು ೫,೦೦೦ ಮಂದಿ ಹತ್ಯೆಯಾದರು. ಅಸಮಾಧಾನದ ಈ ಬೆಳವಣಿಗೆಯನ್ನು ಗಾಂಧಿ ವಿಷಾದದಿಂದ ನೋಡಿದರು. ಇವೆಲ್ಲದರ ನಡುವೆ ೦೨/೦೯/೧೯೪೬ರಂದು ನೆಹರೂ ಮಧ್ಯಂತರ ಸರಕಾರದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಬಂಗಾಳದ ಮತೀಯ ಘರ್ಷಣೆಯ ಅಪಾಯವನ್ನು ತಾನು ಎದುರಿಸದ ಹೊರತು ಅದು ಶಮನವಾಗದೆಂದು ತಿಳಿದರು. ಗಾಂಧಿ ಮತೀಯ ಹಿಂಸೆಯ ದಟ್ಟ ಪರಿಣಾಮವನ್ನೆದುರಿಸಿದ ಬಂಗಾಳದ ಪೂರ್ವಭಾಗದಲ್ಲಿರುವ ನೌಖಾಲಿಗೆ ಹೋಗಲು ನಿರ್ಧರಿಸಿದರು. ೧೯೪೬ರ ನವೆಂಬರ್‌ನಿಂದ ೧೯೪೭ರ ಮಾರ್ಚ್ ನ ವರೆಗೆ ಅವರು ಅಲ್ಲಿ ಸುತ್ತಿದರು. ಇದಕ್ಕೆ ಸ್ವಲ್ಪ ಮೊದಲು ಅಸ್ಸಾಮಿನಲ್ಲಿ ಪ್ರವಾಹವೊದಗಿ ಸಾವಿರಾರು ಜನರು ನಿರ್ವಸಿತರಾಗಿದ್ದರು. ಅನೇಕರು ಜೀವ ಕಳೆದುಕೊಂಡಿದ್ದರು. ಅದನ್ನು ಗಾಂಧಿ ‘ದೇವರ ಆಟ’ವೆಂದಿದ್ದರು. ಆದರೆ ಇದು? ಇದು ಮನುಷ್ಯ ಮೃಗೀಯವಾಗಿ ವರ್ತಿಸಿದ ಕ್ಷಣಗಳು. ದೇವರು ತನಗೆ ದಾರಿ ತೋರಿಸುತ್ತಾನೆಂದು ಗಾಂಧಿ ಹೇಳಿಕೊಂಡಿದ್ದರು.
ಹಿಂಸೆ ನಡೆದ ನೌಖಾಲಿ ಮತ್ತು ಬಂಗಾಳದ ಇತರ ಭಾಗಗಳು ಮುಸ್ಲಿಮ್ ಪ್ರಾಬಲ್ಯದ ಇಲ್ಲವೇ ಮುಸ್ಲಿಮರು ಬಹುಸಂಖ್ಯಾತರಾಗಿದ್ದ ಭೂಪ್ರದೇಶಗಳು. ಸಾಕಷ್ಟು ಸಂಖ್ಯೆಯ ಹಿಂದೂಗಳು ಮುಸಲ್ಮಾನರ ಹಲ್ಲೆಗೆ ಗುರಿಯಾಗಿದ್ದರು. ಗಾಂಧಿ ಪ್ರತಿಪಾದಿಸಿದ ಅಹಿಂಸೆ ದ್ವೇಷದ ಕಿಡಿಯಿಂದಾಗಿ ಭಗ್ನವಾಗಿತ್ತು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸಿನ ಹಿಂದೂಗಳು ಮುಸ್ಲಿಮರ ಮೇಲೆ ದಾಳಿ ನಡೆಸಲು ಸಿದ್ಧವಾಗಿದ್ದರು. ಆದರೆ ಗಾಂಧಿಯ ಕಾಂಗ್ರೆಸ್ ಅಹಿಂಸೆಯ ಪಕ್ಷ. ಅದು ಬ್ರಿಟಿಷರ ವಿರುದ್ಧ ಸೆಣಸಬಲ್ಲ ಆಯುಧ ಮಾತ್ರವಲ್ಲ, ಭಾರತೀಯರೊಳಗೂ ಮತಾಧಾರಿತವಾಗಿ ಪರಸ್ಪರ ಭಿನ್ನಾಭಿಪ್ರಾಯವು ಎದುರಾದಾಗಲೂ ಪ್ರಬಲವಾಗಿ ಬಳಸಬೇಕಾದ ಅಸ್ತ್ರ. ಇದನ್ನು ಬಳಸುವುದಕ್ಕಿಂತಲೂ ಅಲ್ಲಿನ ಹಿಂದೂಗಳ ಶಕ್ತಿ ಸಾಕಷ್ಟಿರಲಿಲ್ಲ ಎಂಬುದು ಗಮನಾರ್ಹ.
ನೌಖಾಲಿಗೆ ಗಾಂಧಿ ಹೊರಡುವ ಸಂದರ್ಭದಲ್ಲಿ ಅವರನ್ನು ಅವರ ಮುಸ್ಲಿಮ್ ಅಭಿಮಾನಿಯೊಬ್ಬ ‘‘ನಿಮಗೇಕೆ ನೌಖಾಲಿಗೆ ಹೋಗುವ ಆಸಕ್ತಿ? ನೀವು ಇದಕ್ಕಿಂತ ಹೆಚ್ಚು ಹಿಂಸೆ ನಡೆದ ಬಾಂಬೆ, ಅಹಮದಾಬಾದ್ ಅಥವಾ ಛಾಪ್ರಾಗಳಿಗೇಕೆ ಹೋಗಲಿಲ್ಲ? ನೀವು ಅಲ್ಲಿಗೆ ಹೋಗುವುದು ಈಗಿರುವ ಸಂಘರ್ಷವನ್ನು ಹೆಚ್ಚಿಸಲು ಅಲ್ಲವೇ?’’ ಎಂದು ಕೇಳಿದನಂತೆ. ಆತ ಉಲ್ಲೇಖಿಸಿದ ಈ ಮೂರೂ ಸ್ಥಳಗಳಲ್ಲಿ ಹಿಂದೂ ಪ್ರಾಬಲ್ಯವಿದ್ದು, ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು. ಅದಕ್ಕಾಗಿ ಗಾಂಧಿ ಅಲ್ಲಿಗೆ ಹೋಗಲಿಲ್ಲವೇ? ನೌಖಾಲಿಯಲ್ಲಿ ಹಿಂದೂಗಳು ಹಿಂಸೆಗೊಳಗಾಗುತ್ತಾರೆಂಬ ಕಾರಣಕ್ಕಲ್ಲವೇ ಗಾಂಧಿ ಅಲ್ಲಿಗೆ ಹೋಗುತ್ತಿರುವುದು? ಈ ಪ್ರಶ್ನೆಗಳು ಗಾಂಧಿಗೆದುರಾಗಿದ್ದವು. ಗಾಂಧಿ ಅದಕ್ಕೆ ತಾನು ಎಂದೂ ಹಿಂದೂ-ಮುಸ್ಲಿಮರೆಂದು ಭೇದ ಮಾಡಲಿಲ್ಲ, ಮತ್ತು ನೌಖಾಲಿಯಲ್ಲಿ ನಡೆದಂತೆ ಆ ಸ್ಥಳಗಳಲ್ಲೂ ನಡೆದಿದ್ದರೆ ತಾನು ಅಲ್ಲಿಗೂ ಧಾವಿಸುತ್ತಿದ್ದೆ, ತಾನು ಅಲ್ಲಿಗೆ ಹೋಗದೆ ಏನೂ ಮಾಡಲಾಗದೆಂಬ ಸಂದರ್ಭ ನೌಖಾಲಿಯಲ್ಲಿದೆ, ಇತರ ಸ್ಥಳಗಳಲ್ಲಿರಲಿಲ್ಲ ಎಂದು ವಿಷದಪಡಿಸಿದರು.
ಗಾಂಧಿ ನೌಖಾಲಿಗೆ ಬಂದವರೇ ತಾನು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಬಂದಿಲ್ಲವೆಂದು ಹೇಳಿದರು. ತನಗೆ ವೈರಿಗಳಿಲ್ಲ. ಬದುಕಿಡೀ ಬ್ರಿಟಿಷರ ವಿರುದ್ಧ ಹೋರಾಡಿದ್ದೇನೆ. ಆದರೂ ಅವರು ತನಗೆ ಗೆಳೆಯರು. ಅವರಿಗೆ ತಾನೆಂದೂ ಕೇಡು ಬಯಸಲಿಲ್ಲವೆಂದು ಹೇಳಿದರು. ತಾನು ಪವಿತ್ರ ಕುರ್‌ಆನ್‌ನ್ನು ಅಧ್ಯಯನ ಮಾಡಿದ್ದೇನೆ. ಇಸ್ಲಾಮ್ ಎಂದರೆ ಶಾಂತಿ. ಇಸ್ಲಾಮ್ ಎಂದೂ ಈಗ ನೌಖಾಲಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬೋಧಿಸಿಲ್ಲ. ಕೆಲವೇ ಪುಂಡರಿಂದ ಹೀಗಾಗುತ್ತಿದೆ ಎಂದರು. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿ ಮುಸ್ಲಿಮರು ಬಹುಸಂಖ್ಯಾತರು; ಆದ್ದರಿಂದ ಅವರು ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸುವ ಹೊಣೆ ಹೊರಬೇಕೆಂದೂ ನೌಖಾಲಿಯಲ್ಲಿ ಬಹುಸಂಖ್ಯಾತ ಮುಸ್ಲಿಮರು ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸಬೇಕೆಂದೂ ಹೇಳಿದರು. ಗಾಂಧಿಯ ಈ ನಡೆ ಅಲ್ಲಿಗೆ ಮಾತ್ರ ಸೀಮಿತವಾಗಿರಲಿಲ್ಲ. ಎಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೋ (ಭಾರತದ ಬಹುಭಾಗಗಳಲ್ಲಿ ಹಿಂದೂಗಳೇ ಆಗಲೂ ಈಗಲೂ ಬಹುಸಂಖ್ಯಾತರು) ಅಲ್ಲಿ ಹಿಂದೂಗಳು ಮುಸ್ಲಿಮರ ರಕ್ಷಣೆಯ ಹೊಣೆಯನ್ನು ನಿಭಾಯಿಸಬೇಕೆಂಬುದು ಅವರ ತರ್ಕವಾಗಿತ್ತು.
ಗಾಂಧಿಯ ಅಹಿಂಸೆಯು ಈಗ ಅಗ್ನಿಪರೀಕ್ಷೆಗೊಳಪಟ್ಟಿತ್ತು. ನೌಖಾಲಿಯಲ್ಲಿ ಹಿಂದೂಮಹಿಳೆಯರ ಮಾನ ಹರಣವಾಗುತ್ತಿತ್ತು. ತಾನು ಅಲ್ಲಿ ಪರಿಸ್ಥಿತಿ ಸುಧಾರಿಸದ ಹೊರತು ಮರಳುವುದಿಲ್ಲ; ತಾನು ಅಲ್ಲೇ ಸಾಯುವುದಕ್ಕೂ ಸಿದ್ಧನೆಂದು ನಿರ್ಧರಿಸಿದರು. ತಮ್ಮ ಅನುಯಾಯಿಗಳಿಗೆ ಮತ್ತು ಅಭಿಮಾನಿಗಳಿಗೆ (ಈ ಪೈಕಿ ಹಿಂದೂ-ಮುಸ್ಲಿಮರು ಸಮಾನ ಸಂಖ್ಯೆಯಲ್ಲಿದ್ದರು) ಅವರು ಘರ್ಷಣೆ ನಡೆಯುವಲ್ಲಿ ಎಲ್ಲ ಆರ್ತರನ್ನು ರಕ್ಷಿಸುವ ಹೊಣೆಯನ್ನು ನಿರ್ವಹಿಸಬೇಕಾಗಿದೆಯೆಂದೂ, ಅದಕ್ಕೆ ತಯಾರಿದ್ದವರು ಬರಬಹುದೆಂದೂ ಕರೆಕೊಟ್ಟರು. ಆದರೆ ಗಾಂಧಿ ಅವರಲ್ಲಿ ನೀವು ನಿಮ್ಮದಲ್ಲದ ಇನ್ನೊಂದು ಮತೀಯರನ್ನು ದ್ವೇಷಿಸುತ್ತೀರಾದರೆ ಬರಬೇಡಿ ಎಂದೂ ಎಚ್ಚರಿಕೆ ನೀಡಿದರು. ಯಾರು ಪರಮತೀಯರನ್ನು ದ್ವೇಷಿಸುತ್ತಾರೋ ಅವರಿಗೆ ತನ್ನ ಮತದವರನ್ನು ರಕ್ಷಿಸಲು ಸಾಧ್ಯವಿಲ್ಲ. ಪರಮತಸಹಿಷ್ಣುತೆ ಈ ನೆಲದ ಗುಣವಾಗಬೇಕು ಎಂದರು. ಕಾಂಗ್ರೆಸಿನ ಅನೇಕ ಮುಸ್ಲಿಮ್ ನಾಯಕರು ಅವರಿಗೆ ಸಾಥ್ ನೀಡಿದರು. ಅವರೂ ಈ ವರದಿಗಳಲ್ಲಿ ಸತ್ಯಾಂಶವಿದೆಯೆಂದು ಒಪ್ಪಿಕೊಂಡಿದ್ದರು. ಆದರೆ ತಮ್ಮ ಮತದ ಭ್ರಾಂತಜನರನ್ನು ನಿಯಂತ್ರಿಸಲು ಕಷ್ಟವೆಂದು ಅವರಿಗೆ ಅನ್ನಿಸುತ್ತಿತ್ತು.
ನೌಖಾಲಿಯಲ್ಲಿ ಗಾಂಧಿ ಅಹಿಂಸೆಯ ಬಗ್ಗೆ ಸತ್ಯದೊಂದಿಗಿನ ತಮ್ಮ ಪ್ರಯೋಗದ ಬಗ್ಗೆ ಭ್ರಮನಿರಸನಗೊಂಡಂತಿದ್ದರು. ಪರಸ್ಪರ ದ್ವೇಷವೇ ಬದುಕಿನ ಸ್ಥಾಯೀಭಾವವಾದರೆ, ಹಳೆಯ ಸ್ನೇಹಿತರ ಸಂಬಂಧ ಕಡಿದರೆ, ತನ್ನ ಆರು ದಶಕಗಳ ಅರಿವು ವಿಫಲವಾಗುತ್ತಿದೆಯೆಂದು ತೋಡಿಕೊಂಡರು. ಈ ಹಿನ್ನೆಲೆಯಲ್ಲಿ ಅವರು ನೆರೆಯ ಶ್ರೀರಾಮಪುರವೆಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದರು. ಭಾಷಾಂತರಕಾರ ಮತ್ತು ಶೀಘ್ರಲಿಪಿಕಾರ ಹೀಗೆ ಒಂದಿಬ್ಬರನ್ನು ಹೊರತುಪಡಿಸಿ ಉಳಿದವರೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳಲು ನಿರ್ಧರಿಸಿದರು. ಸಾಧ್ಯವಾದರೆ ತಾನು ಒಬ್ಬ ಮುಸ್ಲಿಮನ ಮನೆಯಲ್ಲಿ ಉಳಿಯುವುದಾಗಿ ಹೇಳಿದರು. ಆದರೆ ಆ ಸಂದರ್ಭದಲ್ಲಿ ಅವರನ್ನು ಉಳಿಸಿಕೊಳ್ಳುವ ಮುಸ್ಲಿಮ್‌ಬಂಧು ಅವರಿಗೆ ಸಿಗಲಿಲ್ಲ.
ಸ್ವಾತಂತ್ರ್ಯ ಹೋರಾಟದಲ್ಲಿ ದೇಶದಲ್ಲೇ ವಿಶಿಷ್ಟ ಕೊಡುಗೆಯನ್ನು ನೀಡಿದ, ಗುರುದೇವ ಟಾಗೋರರ ನೆಲೆಯಾದ ಬಂಗಾಳ ಈ ರೀತಿಯಲ್ಲಿ ವರ್ತಿಸಿದ್ದು ಗಾಂಧಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಇದು ಸಾಲದೆಂಬಂತೆ ಆ ವರ್ಷ ಬಂಗಾಳದಲ್ಲಿ ಸಮೃದ್ಧವಾಗಿ ಕೃಷಿಬೆಳೆ ಬೆಳೆದಿತ್ತು. ಭೂಮಿತಾಯಿ ಸಮೃದ್ಧಿಯನ್ನು ನೀಡಿದರೂ ಮನುಷ್ಯ ಕ್ರೂರಪ್ರಾಣಿಗಳಿಗಿಂತಲೂ ಕೀಳಾಗಿ ವರ್ತಿಸುತ್ತಿದ್ದಾನಲ್ಲ ಎಂದು ಅವರಿಗೆ ಅನ್ನಿಸುತ್ತಿತ್ತು. ಇದು ಮನುಷ್ಯನ ವಿಕೃತಿಯೇ ಹೊರತು ಹಿಂದೂ-ಮುಸ್ಲಿಮ್ ಎಂಬ ಮತೀಯ ವಿಕೃತಿಯಲ್ಲವೆಂಬುದನ್ನು ಅವರು ಕಂಡಿದ್ದರು. ರಾಜಕೀಯ ಪ್ರೇರಿತ ಹಿಂಸೆ ಮಾತ್ರ ಹೀಗೆ ಮತೀಯವಾಗಿ ವರ್ತಿಸಬಲ್ಲುದು, ಅದನ್ನು ನಿವಾರಿಸದ ಹೊರತು ತನ್ನ ಕನಸಿನ ಭಾರತ ನೆಲೆಗೊಳ್ಳದು ಎಂದು ಅವರು ಖಚಿತವಾಗಿ ಭಾವಿಸಿದ್ದರು.
ಇದಾದ ಬಳಿಕ ಇದಕ್ಕೆ ಪ್ರತಿಯಾಗಿ ಎಂಬಂತೆ ೧೯೪೭ರ ಮಾರ್ಚ್‌ನಲ್ಲಿ ಬಿಹಾರದಲ್ಲಿ ಮುಸ್ಲಿಮರ ಮೇಲೆ ಹಿಂದೂಗಳ ಹಿಂಸೆ ನಡೆಯಿತು. ಗಾಂಧಿ ಅಲ್ಲಿಗೆ ಧಾವಿಸಿದರು. ಅಲ್ಲಿಂದ ದಿಲ್ಲಿಗೆ ಹೋದರಾದರೂ ಮತ್ತು ಮರಳಿ ಬಿಹಾರಕ್ಕೆ ಬಂದರು. ಈ ಹೊತ್ತಿಗೆ ಕಲ್ಕತ್ತಾದಲ್ಲಿ ಭೀಕರ ಕೋಮು ಗಲಭೆ ತನ್ನ ಉತ್ತುಂಗದಲ್ಲಿತ್ತು. ಆಗಸ್ಟ್ ೧೫, ೧೯೪೭ರಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಾಗ, ಗಾಂಧಿ ಕಲ್ಕತ್ತಾದಲ್ಲಿದ್ದರು. ಅವರು ಬಳಲಿದಂತಿದ್ದರು. ಆ ಸಂದರ್ಭದಲ್ಲಿ ನಡೆದ ಮತೀಯ ಗಲಭೆ ಮತ್ತು ಗೊಂದಲಗಳು ನಭೂತೋ ಎಂಬಂತಿದ್ದವು. ಇವೆಲ್ಲ ಮತೀಯ ರಾಜಕೀಯದ ಕೌಟಿಲ್ಯಕಾರಣವಾದರೂ ಅದರ ಅಪವಾದ ಗಾಂಧಿಯ ಮೇಲೆ ಬಿದ್ದದ್ದಂತೂ ಸತ್ಯ. ಮುಂದೆ ಕೆಲವೇ ತಿಂಗಳುಗಳಲ್ಲಿ ಅವರು ಸತ್ಯದೊಂದಿಗಿನ ತನ್ನ ಪ್ರಯೋಗದ ಬಲಿಪಶುವಾಗಲಿದ್ದರು.
ಪ್ರಾಯಃ ೨೦ನೇ ಶತಮಾನದ ಭಾರತದ ಇತಿಹಾಸದಲ್ಲಿ ಗಾಂಧಿಯ ಆನಂತರ ಆ ಪ್ರಮಾಣದ ನಾಯಕರು ತಲುಪದೆ ಇರುವುದಕ್ಕೆ ಅಧಿಕಾರದ ಹೊರತು ಯಾರೇ ಆಗಲಿ ನಾಯಕನಾಗಲಾರ ಎಂಬ ತಪ್ಪು ತಿಳಿವಳಿಕೆಯೇ ಕಾರಣ. ನೆಹರೂ, ಪಟೇಲ್ ಮುಂತಾದ ಗಾಂಧಿಯ ನಿಕಟ ಅನುಯಾಯಿಗಳು ಅವರ ಜಾತ್ಯತೀತತೆ ಮತ್ತು ಅಹಿಂಸೆಯನ್ನು ಅನುಸರಿಸಲು ಪ್ರಯತ್ನಿಸಿದರೂ ಪಟೇಲ್ ಬೇಗ ಅಗಲಿದರು; ನೆಹರೂ ಕಾಶ್ಮೀರ, ಚೀನಾ ಆಕ್ರಮಣ ಮುಂತಾದ ಸನ್ನಿವೇಶಗಳಲ್ಲಿ ಅಂತರ್‌ರಾಷ್ಟ್ರೀಯ ಶಾಂತಿ, ಪಂಚಶೀಲ ಮುಂತಾವುಗಳ ಮೂಲಕ ಗಾಂಧಿ ಪ್ರಣೀತ ತತ್ವಗಳನ್ನು ಅನುಸರಿಸಲು ಪ್ರಯತ್ನಿಸಿ ವೈಫಲ್ಯವನ್ನನುಭವಿಸಿ ಹತಾಶರಾದರು. ಈ ಪೈಕಿ ಡಾ. ಅಂಬೇಡ್ಕರ್ ಮಾತ್ರ ಯಾರ ಪ್ರಭಾವಕ್ಕೂ ಒಳಗಾಗದೆ ವೈಯಕ್ತಿಕ ವರ್ಚಸ್ಸನ್ನು ಬೀರಿ ಜಾತಿ ಮತ್ತು ವರ್ಗ ವ್ಯತ್ಯಾಸದ ಹಿಂದೂ ಮತದ ಅಸಮಾನತೆಯನ್ನು ನಿವಾರಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಅದನ್ನು ಮೀರಿ ಮತೀಯತೆ, ಜಾತಿ-ವರ್ಗಗಳ ಅಸಮಾನತೆ, ಅಸ್ಪಶ್ಯತೆ ಬೆಳೆಯಿತು. ಸ್ವಲ್ಪ ಮಟ್ಟಿಗೆ ಜಯಪ್ರಕಾಶ ನಾರಾಯಣರು ಗಾಂಧಿಯ ಹಾದಿಯಲ್ಲಿ ನಡೆದರೂ ಅವರೂ ನಿರಾಶೆಯನ್ನೇ ಅನುಭವಿಸುವಂತೆ ಅವರ ಸಹಚರರು ನಡೆದುಕೊಂಡರು. ಉಳಿದ ನಾಯಕರು ಜನಮಾನಸವನ್ನು ತಲುಪಲು ಅಧಿಕಾರದ ಅಗತ್ಯವಿಲ್ಲವೆಂಬುದನ್ನು ಕಾಣಲು ವಿಫಲರಾದರು. ಈ ಪೈಕಿ ಒಕ್ಕೂಟ ಸರಕಾರದ ಸಚಿವಸಂಪುಟವನ್ನು ಸೇರಿದವರೆಲ್ಲರೂ ತಮ್ಮ ತಮ್ಮ ಖಾತೆಯನ್ನೇ ನಂಬಿ ಬದುಕಿದರೇ ವಿನಾ ಭವಿಷ್ಯದ ಭಾರತಕ್ಕೆ ತಾವು ನೀಡುವ ಕೊಡುಗೆಯೇನಿರಬೇಕೆಂದು ಚಿಂತಿಸಿದಂತೆ ಕಾಣುವುದಿಲ್ಲ.
ಸತ್ಯ, ಅಹಿಂಸೆಗೆ ಸಾವಿಲ್ಲವೆಂದು ನಂಬಿದವರೆಲ್ಲರೂ ಈಗ ಅಸತ್ಯ ಮತ್ತು ಹಿಂಸೆಗೆ ಸಾವಿಲ್ಲವೆಂದು ತಿಳಿಯಬೇಕಾಗಿದೆ. ಏಕಕಾಲಕ್ಕೆ ಹಿಂದೂ ಮತ್ತು ಮುಸ್ಲಿಮ್ ಆಗಿದ್ದ ಗಾಂಧಿ ಈ ಎರಡೂ ಮತೀಯರನ್ನು ತನ್ನ ಜೊತೆಗೆ ಎರಡು ಕಣ್ಣುಗಳಂತೆ ನಂಬಿ ಕರೆದುಕೊಂಡುಹೋದ ಕಾಲವೇ ಭಾರತದ ಪುಣ್ಯಕಾಲ. ನೌಖಾಲಿಯ, ಬಂಗಾಳದ, ಪ್ರಸಂಗವನ್ನೇ ಉದಾಹರಿಸಿ ಹೇಳುವುದಾದರೆ ಆ ಸಂದರ್ಭದಲ್ಲಿ ಗಾಂಧಿ ಅಲ್ಲಿಗೆ ಹೋಗಿ ಹಿಂದೂಗಳಿಗೆ ರಕ್ಷಣೆ ನೀಡಲು ಸಂಕಲ್ಪಿಸಿದ್ದನ್ನು ಮುಸ್ಲಿಮರು ವಿರೋಧಿಸಬೇಕಾಗಿತ್ತು; ಗಾಂಧಿಯನ್ನು ಅವರಲ್ಲೊಬ್ಬ ಹತ್ಯೆಮಾಡಬೇಕಾಗಿತ್ತು. ಆದರೆ ವ್ಯಂಗ್ಯವೆಂದರೆ ಅವರನ್ನು ಅದಾದ ಎಷ್ಟೋ ತಿಂಗಳುಗಳ ಬಳಿಕ, ಭಾರತಕ್ಕೆ ಸಿಗಬೇಕಾದ ಸ್ವಾತಂತ್ರ್ಯ ಸಿಕ್ಕಿದ ಆನಂತರದಲ್ಲಿ ‘ಹಿಂದೂ’ ಎಂದು ಹೇಳಿಕೊಂಡ ಒಬ್ಬ ಮೃಗ ಹತ್ಯೆ ಮಾಡಿದ್ದು ಮತ್ತು ಅಂತಹವನನ್ನೂ ಆರಾಧಿಸುವ ಒಂದು ಹೊಸ ಜನಾಂಗ ಹುಟ್ಟಿದ್ದು!