ಅನಿವಾರ್ಯರು
ಎಲ್ಲ ಆಡಳಿತಗಳು ಕಾಮರಾಜರಂತಿರುವುದಿಲ್ಲ. ಭ್ರಷ್ಟರ ಹೆಗಲ ಮೇಲೆ ಕುಳಿತಿರುವ ರಾಜಕಾರಣಿಗಳು, ದುಃಶಾಸನದ ಆಡಳಿತ, ಇರುವಾಗ ಶಕುನಿಗಳಿಗೆ ಸುಗ್ಗಿ. ಕೆಲವರು ಧೂರ್ತರಾದರೂ ಪ್ರಭಾವಶಾಲಿಗಳು. ಅಂಥವರನ್ನು ಸೂಕ್ಷ್ಮ ಹುದ್ದೆಗಳಿಗೆ ಆಯ್ಕೆಮಾಡುವುದೇ ವಿರೋಧಿಗಳನ್ನು ಬಗ್ಗುಬಡಿಯುವುದಕ್ಕೆ. ಕೆಲವು ರಾಜಕಾರಣಿಗಳ ನಾಲಗೆ ತೀರಾ ಹೊಲಸಾಗಿದ್ದು ಅಂಥವರನ್ನು ವಿರೋಧಿಗಳ ವಿರುದ್ಧ ಹಳಿಯುವುದಕ್ಕೆ ಬಳಸಿದ ಹಾಗೆ. ಇದು ಎಲ್ಲ ಕಾಲದ ಕ್ಷುದ್ರ ರಾಜಕಾರಣ.
ದಿವಂಗತ ಕಾಮರಾಜ್ (1903-1975) 1960ರ ದಶಕದಲ್ಲಿ ಭಾರತದ ರಾಜಕಾರಣದಲ್ಲಿ ಬಹುದೊಡ್ಡ ಹೆಸರು. ಆಗಿನ ಮದ್ರಾಸ್ ರಾಜ್ಯದ (ಈಗಿನ ತಮಿಳುನಾಡು ರಾಜ್ಯದ) ಮುಖ್ಯಮಂತ್ರಿಯಾಗಿ (1954-63), ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ (1964-67) ಅವರು ತೋರಿಸಿದ ರಾಜಕಾರಣದ ಕ್ಷಮತೆ, ಚಾಣಾಕ್ಷತೆ ತೀರಾ ಅಪರೂಪದ್ದು. ಅಷ್ಟೇನೂ ವಿದ್ಯಾರ್ಹತೆಯಿಲ್ಲದ ಕಾಮರಾಜ್ ಮನುಷ್ಯನಿಗೆ ವಿದ್ಯೆಗಿಂತ ಹೆಚ್ಚಾಗಿ ಬುದ್ಧಿಯ ಅವಶ್ಯಕತೆಯಿದೆಯೆಂಬುದನ್ನು ನಿರೂಪಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಬಾರಿ ಜೈಲು ಸೇರಿ ಒಟ್ಟಾರೆ ಸುಮಾರು 10 ವರ್ಷಗಳ ಅವಧಿಯ ಸೆರೆವಾಸ ಅನುಭವಿಸಿದವರು. ತಮಗೆ ಸಿಗದ ಶಿಕ್ಷಣ ಜನರಿಗೆ ಸಿಗಬೇಕೆಂಬುದಕ್ಕಾಗಿ ಸ್ವತಂತ್ರ ಭಾರತದ ಆಗಿನ ಮದ್ರಾಸ್ ರಾಜ್ಯದಲ್ಲಿ ಶಿಕ್ಷಣವನ್ನು ಅಭಿವೃದ್ಧಿಪಡಿಸಿದ ಸಾಧನೆ (ಶೇ.7ರಿಂದ ಶೇ.37) ಅವರದ್ದು. ಕಾಂಗ್ರೆಸ್ ವಿಭಜನೆಯಾದಾಗ ಸಂಸ್ಥಾ ಕಾಂಗ್ರೆಸಿನ ಅಧ್ಯಕ್ಷರಾದ ಮೇಲೆ ಪ್ರಾಯಃ ಅವರ ರಾಜಕೀಯ ಜೀವನ ಇಳಿಮುಖವಾದದ್ದು. ಕೊನೆಯ ವರೆಗೂ ಅವಿವಾಹಿತರಾಗಿ (ಅಟಲ್ ಬಿಹಾರಿ ವಾಜಪೇಯಿ, ಎ.ಪಿ.ಜೆ. ಅಬ್ದುಲ್ ಕಲಾಮ್ ಮುಂತಾದವರು ಈ ಪರಿಯ ವ್ಯಕ್ತಿಗಳು) ತಮಗಾಗಿ ಯಾವ ಆರ್ಥಿಕ ಸಂಪತ್ತನ್ನೂ ಸಂಪಾದಿಸದೆೆ, ಉಳಿಸದೆ ಹೋದ ಈ ರಾಜಕಾರಣಿ ಭಾರತದ ರಾಜಕೀಯ ಇತಿಹಾಸದಲ್ಲೇ ಒಬ್ಬ ಶ್ರೇಷ್ಠ. ಅಮೆರಿಕದ ಉಪಾಧ್ಯಕ್ಷರಾಗಿದ್ದ ಹ್ಯೂಬರ್ಟ್ ಹಂಫ್ರಿಯವರು ಕಾಮರಾಜ್ರನ್ನು ಒಬ್ಬ ವಿಶ್ವಶ್ರೇಷ್ಠ ಮಾದರಿಯೆಂದು ಕೊಂಡಾಡಿದ್ದರು. ವಿದೇಶಿಯರ ಹೊಗಳಿಕೆಯನ್ನು ಸತ್ಯವೆಂದು ನಂಬಬೇಕಾಗಿಲ್ಲವೆಂದು ಇಂದಿನ ರಾಜಕೀಯ ತೋರಿಸಿಕೊಟ್ಟಿದೆಯಾದರೂ ಆಗ ಅದೂ ಒಂದು ವಿಶ್ವಾತ್ಮಕ ಮೌಲ್ಯವಾಗಿತ್ತು.
ಇದು ಕಾಮರಾಜ್ ಕುರಿತ ಲೇಖನವಲ್ಲ. ಆದರೆ ಒಬ್ಬ ಮೌಲಿಕ ರಾಜಕಾರಣಿ ಆಗ ವ್ಯವಹರಿಸುತ್ತಿದ್ದ ರೀತಿಗೂ ಇಂದು ನಮ್ಮ ರಾಜಕಾರಣ ನಡೆಯುತ್ತಿರುವ ದರ್ಪದ ರೀತಿಗೂ ಇರುವ ವ್ಯತ್ಯಾಸವನ್ನು ಗುರುತಿಸಲು ಈ ಮೈಲುಗಲ್ಲನ್ನು ಗುರುತಿಸಲಾಗಿದೆ.
ಕಾಮರಾಜ್ ಮುಖ್ಯಮಂತ್ರಿಯಾಗಿದ್ದ ಕಾಲದ ಒಂದು ಘಟನೆ ಹೀಗಿದೆ: ಸರಕಾರದ ಉನ್ನತ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತಿದ್ದಾಗ ಅಲ್ಲಿನ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಯೊಬ್ಬ ಸುಮಾರು 10 ವರ್ಷಗಳಿಂದಲೂ ಅಲ್ಲೇ ಇದ್ದದ್ದು ಕಾಮರಾಜ್ ಗಮನಕ್ಕೆ ಬಂದಿತ್ತು. ಆ ವ್ಯಕ್ತಿ ಭ್ರಷ್ಟತನಕ್ಕೂ ಹಿರಿಯ ಅಧಿಕಾರಿಗಳನ್ನು ಮತ್ತು ಆಳುವ ರಾಜಕಾರಣಿಗಳನ್ನು ಸದಾ ‘ಖುಷ್’ ಆಗಿ ಇಟ್ಟುಕೊಳ್ಳುವುದಕ್ಕೂ ಹೆಸರುವಾಸಿಯಾಗಿದ್ದರು. ಸರಕಾರದ ಮುಖ್ಯ ಕಾರ್ಯದರ್ಶಿಯಂತೂ ಅವರ ಕಿಸೆಯಲ್ಲೇ ಇದ್ದಂತಿತ್ತು. ಇಂತಹ ಸಂದರ್ಭದಲ್ಲಿ ಕಾಮರಾಜ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬುಲಾವ್ ಕಳುಹಿಸಿ ಈ ಅಧಿಕಾರಿಯನ್ನು ಇಷ್ಟು ವರ್ಷ ಏಕೆ ವರ್ಗಾವಣೆ ಮಾಡಿಲ್ಲವೆಂದು ಪ್ರಶ್ನಿಸಿದರು. ಆ ಅಧಿಕಾರಿ ‘‘ಅವರು ಅದ್ಭುತ ವ್ಯಕ್ತಿ. ಆ ಇಲಾಖೆ ಅವರಿಲ್ಲದೆ ದಕ್ಷತೆಯಿಂದ ಕೆಲಸಮಾಡದು. ಅವರು ಅನಿವಾರ್ಯ (‘indispensable
’)’’ ಎಂದರು. ಕಾಮರಾಜ್ ತೀಕ್ಷ್ಣವಾಗಿ ‘‘ಆದರೆ ಅವರು ನಿವೃತ್ತಿಯಾಗುವುದು ಹೇಗೂ ಇದೆ; ಸೇವಾವಧಿಯಲ್ಲೇ ಅವರು ಸತ್ತು-ಗಿತ್ತು ಹೋಗುವುದೂ ಸಾಧ್ಯವಿದೆ; ಹೀಗಾದರೆ ಅ ಇಲಾಖೆಯನ್ನು ಏನು ಮಾಡುವುದು? ಮುಚ್ಚಬೇಕೇ?’’ ಎಂದರು. ಮುಖ್ಯ ಕಾರ್ಯದರ್ಶಿ ವಿವರ್ಣರಾದರು; ಮೌನವಾದರು. ಕಾಮರಾಜ್ ‘‘ಅವರನ್ನು ಅಲ್ಲಿಂದ ಕಿತ್ತು ಬೇರೆ ಯಾವುದಾದರೂ ನಿರುಪಯುಕ್ತ ಇಲಾಖೆಗೆ ಎಸೆೆಯಿರಿ; ಹಾಗೆಯೇ ನಿಮಗೂ ಹೊಸ ಜಾಗ ತೋರಿಸುತ್ತೇನೆ’’ ಎಂದರು. ಈ ಪ್ರಸಂಗವು ಭ್ರಷ್ಟರ ಕುರಿತ ಕಾಮರಾಜ್ ಆಡಳಿತವನ್ನು ನಿರೂಪಿಸುತ್ತದೆ ಮಾತ್ರವಲ್ಲ, ಸರಕಾರವೆಂಬ ಸಹಸ್ರಪದಿ ತ್ರಿವಿಕ್ರಮ ಜೀವಿಗೆ ಯಾವೊಂದು ಅಧಿಕಾರಿಯೂ ಅನಿವಾರ್ಯವಲ್ಲ ಎಂಬುದಕ್ಕೆ ಮಾರ್ಗದರ್ಶಿ. ಎಲ್ಲಿಯ ವರೆಗೆ ಹುಟ್ಟು-ಸಾವುಗಳು ಶಾಶ್ವತವೋ ಅಲ್ಲಿಯವರೆಗೆ ಯಾರೊಬ್ಬನೂ ಅನಿವಾರ್ಯವಲ್ಲ. ಕಾಮರಾಜ್ ಕೂಡಾ ಆನಂತರ ಅಧಿಕಾರದಿಂದ ಕೆಳಗಿಳಿದು ಅದೃಶ್ಯರಾದರು. ಆದರೂ ಎಲ್ಲ ಆಡಳಿತಗಳು ಕಾಮರಾಜರಂತಿರುವುದಿಲ್ಲ. ಭ್ರಷ್ಟರ ಹೆಗಲ ಮೇಲೆ ಕುಳಿತಿರುವ ರಾಜಕಾರಣಿಗಳು, ದುಃಶಾಸನದ ಆಡಳಿತ, ಇರುವಾಗ ಶಕುನಿಗಳಿಗೆ ಸುಗ್ಗಿ. ಕೆಲವರು ಧೂರ್ತರಾದರೂ ಪ್ರಭಾವಶಾಲಿಗಳು. ಅಂಥವರನ್ನು ಸೂಕ್ಷ್ಮ ಹುದ್ದೆಗಳಿಗೆ ಆಯ್ಕೆಮಾಡುವುದೇ ವಿರೋಧಿಗಳನ್ನು ಬಗ್ಗುಬಡಿಯುವುದಕ್ಕೆ. ಕೆಲವು ರಾಜಕಾರಣಿಗಳ ನಾಲಗೆ ತೀರಾ ಹೊಲಸಾಗಿದ್ದು ಅಂಥವರನ್ನು ವಿರೋಧಿಗಳ ವಿರುದ್ಧ ಹಳಿಯುವುದಕ್ಕೆ ಬಳಸಿದ ಹಾಗೆ. ಇದು ಎಲ್ಲ ಕಾಲದ ಕ್ಷುದ್ರ ರಾಜಕಾರಣ. ಈಚೆಗೆ ‘ಈ.ಡಿ.’ (Enforcement Directorate
) ಎಂದು ಖ್ಯಾತಿಗೊಂಡ ಒಕ್ಕೂಟ ಸರಕಾರದ ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿಯನ್ನು ವಿಸ್ತರಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ನ್ಯಾಯಪೀಠವು ಸರಕಾರದ ಪ್ರಶ್ನಿತ ಧೋರಣೆಯನ್ನು ಖಂಡಿಸಿ ಜುಲೈ 31, 2023ರಂದು ಅವರು ನಿವೃತ್ತಿಯಾಗಬೇಕೆಂದು ಆದೇಶಿಸಿತು. ಆದರೆ ಒಕ್ಕೂಟ ಸರಕಾರವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗೌಣವಾಗಿಸಲು ಈ ಅಧಿಕಾರಿಯನ್ನು ಅಕ್ಟೋಬರ್ 15ರ ವರೆಗೆ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕೆಂದು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿ ಕೋರಿತು. ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶವನ್ನೇ ನಗೆಪಾಟಲಾಗಿಸಿ ಸೆಪ್ಟಂಬರ 15ರ ವರೆಗೆ ಈ ಅಧಿಕಾರಿಯ ಸೇವಾವಧಿಯನ್ನು ವಿಸ್ತರಿಸಿ ಆದೇಶಿಸಿತು. ಸರಕಾರಕ್ಕೆ ಬೇಕಾಗಿದ್ದದ್ದೂ ಇದೇ. ಈ ಅಧಿಕಾರಿಯ ಮೂಲಕ ತನ್ನ ವ್ಯೆಹವನ್ನು ಒಂದಷ್ಟು ಕಾಲ ಬಿಗಿಗೊಳಿಸಿ ಬಾಕಿಯಿರುವ ಕೆಟ್ಟ ಕೆಲಸಗಳನ್ನು ಪೂರೈಸಿ ಪ್ರತಿಪಕ್ಷಗಳ ವಿರುದ್ಧ ಮೇಲ್ಗೈ ಸಾಧಿಸುವುದೇ ಅದರ ದುರುದ್ದೇಶವಾಗಿತ್ತು. ಅದೀಗ ಯಶಸ್ವಿಯಾಗಲಿದೆ. ಮಿಶ್ರಾ ಒಬ್ಬ ದಕ್ಷ ಅಧಿಕಾರಿಯೇ ಇರಬಹುದು. ಅದು ಪ್ರಶ್ನೆಯಲ್ಲ. 2018ರಲ್ಲಿ ಅವರನ್ನು 2 ವರ್ಷಗಳ ಅವಧಿಗೆ ಈ.ಡಿ.ಯ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಲಾಯಿತು. 2020ರಲ್ಲಿ ಅವರು ನಿವೃತ್ತಿಯಾಗಬೇಕಾಗಿತ್ತು. ಆದರೆ ಒಕ್ಕೂಟ ಸರಕಾರವು ಅವರ ಸೇವಾವಧಿಯನ್ನು ಪೂರ್ವಾನ್ವಯವಾಗಿ 3 ವರ್ಷಗಳಿಗೆ ವಿಸ್ತರಿಸಿತು. ಹೀಗಾಗಿ 2021ರಲ್ಲಿ ಅವರು ನಿವೃತ್ತಿಯಾಗುವುದಿತ್ತು. ಆದರೆ ಒಕ್ಕೂಟ ಸರಕಾರವು 2021ರಲ್ಲಿ ಒಂದು ಅಧ್ಯಾದೇಶವನ್ನು ಜಾರಿಗೊಳಿಸಿ ಈ.ಡಿ. ಮತ್ತು ಸಿಬಿಐ ಮುಖ್ಯಸ್ಥರ ಸೇವಾವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿತು. ಈ ಗೀಳು ಮುಂದಿನ ವರ್ಷವೂ ನಡೆಯಿತು. 2022ರಲ್ಲಿ ಇನ್ನೊಂದು ಆದೇಶದ ಮೂಲಕ ಮಿಶ್ರಾ ಅವರ ಸೇವೆಯನ್ನು ಮತ್ತೊಂದು ವರ್ಷಕ್ಕೆ ಅಂದರೆ 2023ರ ನವೆಂಬರ್ ವರೆಗೆ ವಿಸ್ತರಿಸಲಾಯಿತು. ಇದನ್ನು ಮೇಲೆ ಹೇಳಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ರದ್ದುಗೊಳಿಸಿತು. ಈ ಎಲ್ಲ ಸಂದರ್ಭಗಳಲ್ಲೂ ಒಕ್ಕೂಟ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯೆಂಬ ಗುರಾಣಿಯನ್ನು ಹಿಡಿದು ತನ್ನನ್ನು ಸಮರ್ಥಿಸಿಕೊಂಡಿತು. ಆದರೆ ಸರ್ವೋಚ್ಚ ನ್ಯಾಯಾಲಯವು ಈ ಅವಧಿಯನ್ನು ಇನ್ನು ಮುಂದೆ ವಿಸ್ತರಿಸದಂತೆ ಆದೇಶಿಸಿತು. ಇಷ್ಟಾಗಿಯೂ ಈಗ ಮತ್ತೆ ಮಿಶ್ರಾ ಅವಧಿಯು ವಿಸ್ತಾರಗೊಂಡದ್ದು ಸಾರ್ವಜನಿಕ ಜೀವನದ, ಹೊಣೆಗಾರಿಕೆಯ ದೊಡ್ಡ ದುರಂತ. ಸಮಾಜಕ್ಕಾಗಿ ವ್ಯಕ್ತಿಯಿರಬೇಕೇ ಹೊರತು ವ್ಯಕ್ತಿಗಾಗಿ ಸಮಾಜವಲ್ಲ. ಈ.ಡಿ. ಎಂಬ ಸಂಸ್ಥೆ ಸ್ವಾಯತ್ತವಾದದ್ದು. 1956ರಲ್ಲಿ ಆರ್ಥಿಕ ಅಪರಾಧಗಳನ್ನು ನಿಯಂತ್ರಿಸುವ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಯೋಜಿತವಾದ ಸಂಸ್ಥೆಯಿದು. ಇದರ ಕಕ್ಷೆಗೆ ಆರ್ಥಿಕ ಅಪರಾಧಗಳ ನಿರ್ವಹಣೆ, ಕಾನೂನಿಗೆ ವಿರುದ್ಧವಾಗಿ ಹಣದ ದುರ್ವಿನಿಯೋಗ ಮತ್ತು ದೇಶಭ್ರಷ್ಟರ ಅಕ್ರಮ ಚಟುವಟಿಕೆಗಳು ಮುಂತಾದ ವಿಷಯಗಳು ಬರುತ್ತವೆ. ಸಾಕಷ್ಟು ಪ್ರಕರಣಗಳು ದಾಖಲಾಗಿದ್ದರೂ ಭಾರತದ ಎಲ್ಲ ಕಾನೂನುಗಳ ಹಾಗೆ ಇದೂ ವಿಶೇಷವಾಗಿ ಮತ್ತು ಗಮನಾರ್ಹವಾಗಿ ತನ್ನ ಛಾಪನ್ನು ಮೂಡಿಸಲಿಲ್ಲ. ಆದರೆ ಕಳೆದ 8-9 ವರ್ಷಗಳಿಂದ ಅಂದರೆ ಮೋದಿ ಸರಕಾರ ಬಂದಾಗಿನಿಂದ ಇದನ್ನು ರಾಜಕೀಯ ಅಸ್ತ್ರವಾಗಿ ಬೇಕಾಬಿಟ್ಟಿ ಬಳಸುವುದು ಹೆಚ್ಚಾಗಿದೆ. ಇದಕ್ಕೆ ಸಿಬಿಐ, ಎನ್ಐಎ, ಆದಾಯಕರ ಇಲಾಖೆ ಮತ್ತಿತರ ಇಲಾಖೆಗಳು ಯಥಾನುಶಕ್ತಿ ಕ್ರಮಕೈಗೊಂಡು ಸಾಥ್ ನೀಡಿವೆ. ಇವೆಲ್ಲ ಬೆರೆಬೇರೆ ಕಾಯ್ದೆಗಳನುಸಾರ ಕ್ರಮ ಕೈಗೊಳ್ಳುತ್ತವೆಯಾದರೂ ಅವುಗಳ ಈಗಿನ ಸಮುಷ್ಟಿ ಯೋಜನೆ ಒಂದೇ ಎಂಬಂತಿದೆ; ರಾಜಕೀಯ ಸೇಡು. ದೇಶದೆಲ್ಲೆಡೆ ರಾಜಕೀಯ ಸೇಡಿನಂತೆ ಬಂಧಿತರಾದವರ ಸಂಖ್ಯೆಯೇ ಹೆಚ್ಚು. ಎಲ್ಲವೂ ಸುಳ್ಳು ಪ್ರಕರಣಗಳಲ್ಲ. ಆದರೆ ಇವುಗಳ ಹಿಂದಿನ ಹುನ್ನಾರ ಕೆಟ್ಟದ್ದು. ಮಿಶ್ರಾ ಅವಧಿಯಲ್ಲಿ ಈ.ಡಿ.ಯು ಭಾಜಪ ಮತ್ತು ಮೋದಿ-ಶಾದ್ವಯರ ರಾಜಕೀಯ ಪ್ರತಿಸ್ಪರ್ಧಿಗಳ ಅಥವಾ ವಿರೋಧಿಗಳ ವಿರುದ್ಧ ಸಮರವನ್ನೇ ಸಾರಿದಂತಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯ ಪತಿ ರಾಬರ್ಟ್ ವಾದ್ರಾರ ವಿರುದ್ಧ ತನಿಖೆ ಕೈಗೊಂಡಿತು. ಬಳಿಕ ಕರ್ನಾಟಕದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಮಹಾರಾಷ್ಟ್ರದ (ಆಗಿನ) ಗೃಹ ಮಂತ್ರಿ ಅನಿಲ್ ದೇಶಮುಖ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಮುಂತಾದವರು ಈ ಜೇಡರಬಲೆಗೆ ಸಿಕ್ಕಿಬಿದ್ದ ಪ್ರಮುಖರು. ವಿಶೇಷವೆಂದರೆ ವಿಜಯ ಮಲ್ಯ, ನೀರವ್ ಮೋದಿ, ಸಂಜಯ ಭಂಡಾರಿ ಮುಂತಾದ ದೇಶಭ್ರಷ್ಟರನ್ನು ತರುವುದಕ್ಕೆ ಇಷ್ಟು ಉತ್ಸಾಹವನ್ನು ಈ.ಡಿ. ತೋರಿಸಲಿಲ್ಲ. ಅದಿನ್ನೂ ಪ್ರಯಾಸಕರ ಹಂತದಲ್ಲಿದೆ. ಸದ್ಯ ಅದು ಸಾರ್ವಜನಿಕರ, ದೇಶದ ಕಣ್ಣಿಗೆ ಮಣ್ಣು ಹಾಕುವ ತಂತ್ರದಂತಿದೆ.
ಬಹುತೇಕ ಎಲ್ಲ ಆರೋಪಿಗಳೂ ತಮ್ಮ ರಕ್ಷಣೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗಿದೆ. ಸರಕಾರ ವೆಚ್ಚ ಮಾಡುವುದು ನಮ್ಮ-ನಿಮ್ಮ ತೆರಿಗೆ ಹಣ. ಅದರ ಪ್ರಯೋಜನ ಆಳುವ ರಾಜಕಾರಣಿಗಳಿಗೆ. ಈ ಆರೋಪಿಗಳ ಪೈಕಿ ಕೆಲವರು ಜಾಮೀನು ಪಡೆದು ಹೊರಗಿದ್ದಾರೆ. ಇನ್ನು ಕೆಲವರು ಬಂಧನದಲ್ಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಮೆಟ್ಟಲು ಏರದೆ ಜಾಮೀನಾಗಲೀ ಇತರ ಪರಿಹಾರವಾಗಲೀ ದಕ್ಕದ ರೀತಿಯ ವ್ಯವಹರಣೆ ನಮ್ಮ ಅಧೀನ ನ್ಯಾಯಾಲಯಗಳಲ್ಲೂ ಉಚ್ಚ ನ್ಯಾಯಾಲಯಗಳಲ್ಲೂ ಇದೆ. ಇದರಿಂದ ಬೇಸತ್ತ ಕೆಲವರಾದರೂ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಆಡಳಿತಕ್ಕೆ ಶರಣು ಹೋಗಿ ಭಾಜಪ ಸೇರಿದ್ದಾರೆ. ಅಸ್ಸಾಮಿನ ಮುಖ್ಯಮಂತ್ರಿ ಡಾಹಿಮಂತ ಬಿಸ್ವಾ ಶರ್ಮಾ, ಮಹಾರಾಷ್ಟ್ರದ ಈಗಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮುಂತಾದವರು ಹೀಗೆ ಪಕ್ಷಾಂತರಗೊಂಡು ರಕ್ಷಣೆಪಡೆದರು. ಒಬ್ಬರು ಕಾಂಗ್ರೆಸ್ ಪಕ್ಷದಿಂದ, ಇನ್ನೊಬ್ಬರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಲಸೆ ಹೋದವರು. ಅವರ ವಿರುದ್ಧದ ಪ್ರಕರಣಗಳು ಗೆದ್ದಲು ಹಿಡಿಯುವುದು ಬಹುತೇಕ ನಿಶ್ಚಿತ. ಈಗಿರುವ ವರದಿಗಳಂತೆ 363 ಸಂಸದರ, ಶಾಸಕರ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳಿದ್ದು ಅವುಗಳ ಪೈಕಿ 83 ಪ್ರಕರಣಗಳು ಭಾಜಪದ ಸದಸ್ಯರ ವಿರುದ್ಧವೇ ಇದೆಯಾದರೂ ಬಂಧಿತರಾದವರೆಲ್ಲ ವಿರೋಧ ಪಕ್ಷದವರೇ. ಇಷ್ಟೇ ಅಲ್ಲ, ಸರಕಾರವನ್ನು ಟೀಕಿಸಿದ ಅನೇಕ ಸ್ವಯಂಸೇವಾ ಸಂಸ್ಥೆಗಳ ವಿರುದ್ಧವೂ ಈ.ಡಿ. ಯುದ್ಧ ಸಾರಿದೆ. ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು, ಕಚೇರಿಗಳನ್ನು ಜಪ್ತಿಮಾಡುವುದು, ಮುಂತಾದ ನಿರ್ಬಂಧಕ ಕ್ರಮಗಳ ಮೂಲಕ ಆರೋಪಿಗಳನ್ನು ಅಸಹಾಯಕರನ್ನಾಗಿ ಮಾಡುವುದು ಇದರ ಉದ್ದೇಶ. ಮಿಶ್ರಾ ಬಾಹುಬಲಿಯ ಕಟ್ಟಪ್ಪನ ಹಾಗೆ ಆಳುವವರ ಮುಂದೆ ಮಂಡಿಯೂರಿ ಯಾವ ಕಾರ್ಯವನ್ನು ಬೇಕಾದರೂ ಮಾಡಲು ಸಜ್ಜಾಗಿದ್ದಾರೆಂಬಂತೆ ತೋರುತ್ತಿದ್ದಾರೆ. ಇದರಲ್ಲಿ ದೇಶದ ಹಿತಾಸಕ್ತಿ ಎಷ್ಟು, ಪಕ್ಷದ ಹಿತಾಸಕ್ತಿ ಎಷ್ಟು, ವೈಯಕ್ತಿಕ ಹಿತಾಸಕ್ತಿ ಎಷ್ಟು ಎಂಬುದು ಈ ಆಡಳಿತ ಇರುವವರೆಗೆ ಅರಿವಾಗದು. ಇದು ಒಬ್ಬ ಅಧಿಕಾರಿಯ ಪ್ರಶ್ನೆಯಲ್ಲ. ಒಂದು ಉನ್ನತ ಹುದ್ದೆಯಲ್ಲಿ ಒಬ್ಬ ಅಧಿಕಾರಿ ಮಾತ್ರ ಅನಿವಾರ್ಯ ಎಂಬ ಅಸಂಗತ ಮತ್ತು ದುರುದ್ದೇಶಪೂರ್ವಕ ದುಷ್ಟ ಅಭಿಮತವನ್ನು ದೇಶದ ಮೇಲೆ ಹೇರುವ ಸಂಚಿದು. ಒಕ್ಕೂಟ ಸರಕಾರದ ತರ್ಕವನ್ನು ಅನ್ವಯಿಸಿದರೆ, ಮೋದಿಯೂ ಅನಿವಾರ್ಯವೆಂಬ ನೆಪಹೂಡಿ 2024ರ ಸಂಸತ್ ಚುನಾವಣೆಗಳನ್ನು ಮುಂದೆ ಹಾಕುವುದು ಸಾಧ್ಯವಿದೆ. ಗಾಂಧಿ-ನೆಹರೂ ಸಹಿತ ಯಾವ ಮಹಾ ನಾಯಕರೂ ಅನಿವಾರ್ಯವಲ್ಲವೆಂಬ ಸತ್ಯವನ್ನು ಚರಿತ್ರೆ ತೊರಿಸಿಕೊಟ್ಟಿದೆ. ಇನ್ನು ಈ ಪುಟಗೋಸಿ (ಈ ಪದವನ್ನು ಬಳಸಲು ವಿಷಾದವಿದೆ. ಆದರೆ ಅದರ ಗುಣ ಮಟ್ಟ ಹಾಗಿದೆ!) ಹುದ್ದೆಗಳಲ್ಲಿರುವ ಅಧಿಕಾರಿಗಳು ಏನು ಮಹಾ? ದೇಶದಲ್ಲಿನ್ನೂ ಸೇಡಿನ ರಾಜಕೀಯಕ್ಕೆ ಪ್ರತಿಸೇಡು ಹುಟ್ಟಿಕೊಂಡಿಲ್ಲ. ಅಕಾಸ್ಮಾತ್ ಅಂತಹ ಪ್ರವೃತ್ತಿಯೇನಾದರೂ (ಬಾರದಿರಲಿ!) ಜನಿಸಿತಾದರೆ ಇಂತಹ ನಿಷ್ಠಾವಂತ ಅಧಿಕಾರಿಗಳ ಗತಿಯೇನಾಗಬಹುದು? ತಾವು ಸರ್ವಸಮ್ಮತ ಸಾರ್ವಜನಿಕರ ಸೇವಕರೇ ವಿನಾ ಜೋಳವಾಳಿಗೆಗಾಗಿ ಅಧರ್ಮವನ್ನು ಮಾಡುವವರಲ್ಲವೆಂದು ಈ ಅಧಿಕಾರಿಗಳು ನಿರೂಪಿಸುವುದು ಯಾವಾಗ?
ಅಂತಹ ಕಾಲ ಬೇಗನೇ ಬರಲಿ.