ಭಾರತವೆಂಬ ದೇಶವೆಲ್ಲಿದೆ?

ಭಾಜಪವಲ್ಲದೆ ಇನ್ಯಾವುದಾದರೂ ಪ್ರತಿಪಕ್ಷವು ಮಣಿಪುರದಲ್ಲಿ ಆಡಳಿತದಲ್ಲಿರುತ್ತಿದ್ದರೆ ಅಲ್ಲೀಗ ರಾಷ್ಟ್ರಪತಿ ಆಡಳಿತವು ‘ಧರ್ಮಸಂಸ್ಥಾಪನೆ’ಯಂತೆ ಜಾರಿಯಾಗುತ್ತಿತ್ತು. ಆದರೆ ಡಬಲ್ ಇಂಜಿನ್ ಸರಕಾರವಾದ್ದರಿಂದ ಅಲ್ಲಿನ ಸಾವುನೋವುಗಳನ್ನು ಕೇಂದ್ರವು ತಾತ್ವಿಕವಾಗಿ ಸ್ವೀಕರಿಸಿದೆ. ಇವೆಲ್ಲ ಸಹಜ. ಮನುಷ್ಯ ಜೀವನವೇ ಕ್ಷಣಭಂಗುರ. ಈ ದುರಂತದಲ್ಲಿ ಅಲ್ಲದಿದ್ದರೂ ಅವರು ಎಂದಾದರೂ ಸಾಯಬೇಕಲ್ಲ, ಸಾಯಲಿ, ಎಂಬ ಆರ್ಷೇಯ ವೈರಾಗ್ಯ ಧೋರಣೆಯನ್ನು ಪ್ರಧಾನಿ ಮತ್ತು ಅವರ ಅಷ್ಟೂ ಕೋಟಿ ಅನುಚರರು ತಾಳಿದಂತಿದೆ.

Update: 2023-08-10 06:26 GMT

ವಾಹನ ಹೊಂದಿದವನು ಅಥವಾ ಚಾಲನೆ ಮಾಡುವವನು ಈ ರಸ್ತೆ ತನ್ನದು ಎಂದುಕೊಳ್ಳಬೇಕೇ ವಿನಾ ತನ್ನದು ಮಾತ್ರ ಎಂದುಕೊಳ್ಳಬಾರದು ಅಥವಾ ತಾನು ಮಾತ್ರ ವಾಹನಚಾಲಕ, ಇನ್ಯಾರೂ ವಾಹನವನ್ನು ಚಲಾಯಿಸಬಾರದು ಎಂದು ತಿಳಿದುಕೊಳ್ಳಬಾರದು. ಅಧಿಕಾರವು ಆತ್ಮವಿಶ್ವಾಸವನ್ನು ಕೊಡಬೇಕು; ಮತ್ತು ಇನ್ನೊಬ್ಬನಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸುವಂತಿರಬೇಕು. ಅದು ವಾಹನದಂತೆ. ಹೀಗಲ್ಲದಿದ್ದರೆ ಅದು ಮೂರ್ಖತನ.

ದುರದೃಷ್ಟವೆಂದರೆ ಈ ದೇಶದಲ್ಲಿ ಮೂರ್ಖರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹಿಂದೊಮ್ಮೆ ಶೇ. ೯೫ ಭಾರತೀಯರು ಮೂರ್ಖರು ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಹೇಳಿದಾಗ ಅವರಿಗೆ ಬೈಗುಳದ ಸುರಿಮಳೆಯಾಯಿತು. ಹೀಗೆ ಬೈದವರು ಇಂತಹ ಮೂರ್ಖರ ಸಂಖ್ಯೆಯನ್ನು ಹೆಚ್ಚಿಸಿದರೇ ಹೊರತು ಸಾಮಾಜಿಕ ಆರೋಗ್ಯವನ್ನು ಸುಧಾರಿಸಲಿಲ್ಲ. ಬೀರಬಲ್ಲನ ಕಥೆಯೊಂದರಲ್ಲಿ ಇಕ್ಕಟ್ಟಾದ ದಾರಿಯಲ್ಲಿ ಇಬ್ಬರು ಪರಸ್ಪರ ಎದುರಾಳಿಗಳು (ಅಥವಾ ವೈರಿಗಳು) ಎದುರಾದಾಗ ಅವರಲ್ಲೊಬ್ಬರು/ಅವರಲ್ಲೊಬ್ಬರಿಗೆ ದಾರಿಬಿಟ್ಟುಕೊಡಬೇಕಾದ ಅನಿವಾರ್ಯತೆ ಬಂತು. ಆಗ ಒಬ್ಬ ಇನ್ನೊಬ್ಬನಿಗೆ ‘‘ನಾನು ಮೂರ್ಖರಿಗೆ ದಾರಿ ಬಿಟ್ಟುಕೊಡುವುದಿಲ್ಲ’’ ಎಂದ. ಆ ಇನ್ನೊಬ್ಬ ‘‘ನಾನು ಮೂರ್ಖರಿಗೆ ದಾರಿ ಬಿಟ್ಟುಕೊಡುತ್ತೇನೆ’’ ಎಂದು ಹೇಳಿ ಪಕ್ಕಕ್ಕೆ ಸರಿದ. ಈಗ ಪರಿಸ್ಥಿತಿ ಹೆಚ್ಚುಕಡಿಮೆ ಹೀಗೆಯೇ ಇದೆ. ಸಮಾಜದ ವಿವೇಕಿವರ್ಗವು ಮೂರ್ಖರಿಗೆ ದಾರಿಬಿಟ್ಟುಕೊಟಿದೆ. ಇದರ ಶೋಚನೀಯ ಪರಿಣಾಮವೆಂದರೆ ಮೂರ್ಖರೇ ನಿಯಮಗಳನ್ನು ರೂಪಿಸುತ್ತಿದ್ದಾರೆ ಮತ್ತು ಅದು ಮಾರಕ ದುಷ್ಪರಿಣಾಮಗಳಿಗೆ ಎಡೆಮಾಡಿಕೊಟ್ಟಿದೆ.

ಭೋಪಾಲದ ಯೂನಿಯನ್ ಕಾರ್ಬೈಡ್ ವಿಷಾನಿಲ ದುರಂತ ಸಂಭವಿಸಿದಾಗ ಬಲಿಯಾದವರಿಗೆ ಪರಿಹಾರ ಕೊಡಿಸಲು ವಿಶ್ವಾದ್ಯಂತ ಕೂಗೆದ್ದಿತು. ಅದು ಎಷ್ಟು ಜನರಿಗೆ ಸಿಕ್ಕಿತೋ ಗೊತ್ತಿಲ್ಲ. ಆದರೆ ಅವರ ಹೆಸರಿನಲ್ಲಿ ಸಾಕಷ್ಟು ಮಂದಿ ಹಣಮಾಡಿದರೆಂಬ ಗುಲ್ಲೆದ್ದಿತು. ವಿಷಾನಿಲದ ಪರಿಣಾಮ ಇಂದಿಗೂ ಅಲ್ಲಿನ ಜನರನ್ನು ಕಾಡುತ್ತಿದೆ. ದಶಕಗಳ ಆನಂತರ ಈ ಕುರಿತು ಸರ್ವೋಚ್ಚ ನ್ಯಾಯಾಲಯವೂ ನ್ಯಾಯನಿರ್ಣಯದ ಬಾಗಿಲಿನ ಅಗಳಿ ಹಾಕಿತು.

ಇದು ಒಂದು ದುರಂತದ ಕಥೆಯಲ್ಲ. ಭೋಪಾಲದ ವಿಷಾನಿಲ ದುರಂತಕ್ಕಿಂತ ಸಾವಿರಪಟ್ಟು ಹೆಚ್ಚು ವಿಷಾನಿಲ ದೇಶದೆಲ್ಲೆಡೆ ಹಬ್ಬುತ್ತಿದೆ. ಈಗ ಭಾರತ ಭಾರತವಾಗುಳಿದಿಲ್ಲ; ಅದು ನಮ್ಮ ಪುರಾಣಕಾಲದ ರಾಕ್ಷಸರ ಆವಾಸ ಸ್ಥಾನವಾಗುತ್ತಿದೆ. ಸರಳ ಸಜ್ಜನ ಜನರ ಕಾಲ ಬಹುತೇಕ ನಶಿಸುತ್ತಿದೆ. ಒಳ್ಳೆಯ ಕೆಲಸವನ್ನು ಮಾಡಿ ತನ್ನ ಇರವನ್ನು ಸಾಬೀತು ಮಾಡುವ ಕಾಲ ಕಳೆದು ಪ್ರತಿಯೊಬ್ಬನೂ ಏನಾದರೂ ಕೇಡನ್ನು ಆರಂಭಿಸಿ ಆತನ ಸಹವ್ಯಸನಿಗಳು ಅದನ್ನು ಹಬ್ಬಿಸಿ ಅದು ಮಾಡುವ ದುಷ್ಪರಿಣಾಮಗಳನ್ನು ಆನಂದಿಸಿ ಅಂದನೋಡುವ ಕಾಲ ನಡೆಯುತ್ತಿದೆ.

ಹೀಗೆ ಹೇಳಿದರೆ ಅಸಂಗತವಾದೀತು. ಪ್ರತ್ಯಕ್ಷವಾಗಿ ಕಾಣುವುದೆಂದರೆ ನಂಬುವುದು ಎಂಬ ಮಾತಿತ್ತು. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಉಕ್ತಿಯೂ ಬಂತು. ಇಂದು ಪ್ರತ್ಯಕ್ಷವಾಗಿ ಕಾಣುವುದಕ್ಕೂ ಹತ್ತಾರು ಮುಖಗಳಿರುವಾಗ ವಿಚಾರಗಳಿಗೆ ಸಾವಿರಮುಖಗಳಿಲ್ಲವಾದೀತೇ? ಆದ್ದರಿಂದ ಸತ್ಯವು ಕೊರೋನ ಕಾಲದ ಜನರಂತೆ ಮುಖಗವಸು ಹಾಕಿಕೊಂಡು ಪಲಾಯನ ಮಾಡುತ್ತಿದೆ. ಸುಳ್ಳು ವೈಭವದ ಕಿರೀಟ ಧರಿಸಿ ಮೆರೆಯುತ್ತಿದೆ.

ಮಣಿಪುರದ ಬೆಂಕಿ ಆರುವ ಲಕ್ಷಣ ಕಾಣಿಸುತ್ತಿಲ್ಲ. ಅಶ್ವಮೇಧದ ಕುದುರೆ ನಡೆದ ಜಾಗದಲ್ಲಿ ನರಮೇಧ ನಡೆಯುತ್ತಿದೆ. ಬದಲಾಗಿ ಅದೀಗ ವಿಷಾನಿಲದಂತೆ ಹಬ್ಬುತ್ತಿದೆ. ಭಾರತದಲ್ಲಿಂದು ಭಾರತೀಯ ಜನತಾ ಪಕ್ಷದ ಮತಾಂಧ ಆಡಳಿತವಿರುವ ಎಲ್ಲ ರಾಜ್ಯಗಳೂ ಮಣಿಪುರವಾಗಲಿವೆ ಮತ್ತು ಅದರಲ್ಲೇ ಅವರ ಜೀವನ ಸಾರ್ಥಕ್ಯವಿರುವಂತಿದೆ. ಪ್ರಜಾಪ್ರಭುತ್ವವೆಂಬ ದ್ರೌಪದಿಯ ಉಡಿಗೆ ಅಧಿಕಾರದ ಅಹಂಕಾರವನ್ನು ಹೊತ್ತ ದುಃಶಾಸನ ತಾನೇ ಗೃಹಸಚಿವನೆಂಬ ಹಾಗೆ ಕೈಯಿಕ್ಕಿದ್ದಾನೆ. ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆ ಹೊತ್ತ ಮೂರುಲೋಕದ ಗಂಡಂದಿರು ನಿಯಮಬದ್ಧರಂತೆ ಹಂಗಿಗೆ ಒಳಗಾದವರಂತೆ ಮೌನವಾಗಿದ್ದಾರೆ. ಕವಿ ಹೇಳಿದ ‘ಎಲ್ಲು ಕೃಷ್ಣನ ಕಾಪು ಕಾಣಲಿಲ್ಲ’ ನಿಜವಾಗಿದೆ.

ಉತ್ತರಪ್ರದೇಶ ಬಿಡಿ, ಅದೀಗ ಮತಾಂಧತೆಯ ಪ್ರಯೋಗಶಾಲೆ. ಯೋಗಿಯೆಂಬ ಅಯೋಗಿಯಿಂದಾಗಿ ಪುರಾಣದ ಶ್ರೀಕೃಷ್ಣನನ್ನು ಮಾತ್ರವಲ್ಲ ಯೋಗಶಿಕ್ಷಣ ಪಡೆದ ಪತಂಜಲಿಯಂತಹ ಋಷಿಮುನಿಗಳನ್ನು, ಆಧುನಿಕ ಪ್ರಾಚಾರ್ಯರನ್ನೂ ಯೋಗಿಗಳೆಂದು ಕರೆದು ಅವರನ್ನು ಅವಮಾನಿಸಲಾಗದೆಂಬ ವಾತಾವರಣ ಮೂಡಿದೆ. ಯೋಗದ ನಿರೂಪಣೆ, ವ್ಯಾಖ್ಯಾನವು ಜೂನ್ ೨೧ರ ಅಂತರ್‌ರಾಷ್ಟ್ರೀಯ ಯೋಗದಿನವೆಂಬ ಸರ್ಕಸ್ ಪ್ರದರ್ಶನಕ್ಕೆ ಸೀಮಿತಗೊಂಡಿದೆ. ಯೋಗದ ಆವರಣದ ಹೊರಗಿರಬೇಕಾದ ಅಸಹನೆ, ದ್ವೇಷ, ಒಳಪ್ರವೇಶಿಸಿದೆ. ಮೈಯೂ ಮನಸ್ಸೂ ಕೆಸರು ತುಂಬಿ ಹೊಸಕಮಲಗಳ ಸೃಷ್ಟಿಗೆ ಕಾರಣವಾಗಲಿದೆ. ಯಾವ ಕೇಸರಿ ಬಣ್ಣ ಒಂದು ಕಾಲಕ್ಕೆ ಪ್ರೀತಿ, ವೈರಾಗ್ಯಗಳ ಬಣ್ಣವಾಗಿತ್ತೋ ಅದೀಗ ದ್ವೇಷದ, ವರ್ಣದ್ವೇಷದ ಲಾಂಛನವಾಗಿದೆ. ಕೇಸರಿ ಬಣ್ಣದ ಸಮೀಪ ಹೋಗುವುದೇ ಅಪಾಯವಾಗಿದೆ. ಅದೀಗ ಸಾವಿನ ವಿದ್ಯುತ್ ಹರಿಯುವ ತಂತಿಯಾಗಿದೆ. ಮನುಷ್ಯನ ಗುರುತು ಹಿಂಸಿಸುವುದರಲ್ಲಿ, ಹಿಂಸೆಗೆ ಬಲಿಯಾಗುವುದರಲ್ಲಿದೆ. ಶಕ್ತರು ಹಿಂಸಿಸುವುದಕ್ಕೂ ಅಬಲರು ಬಲಿಪಶುವಾಗುವುದಕ್ಕೂ ಸರಿಯೆನಿಸಿದೆ. ಕಾಡಿನ ನಿಯಮದ ಪರಿಪಾಲನೆ ನಾಡಿನಲ್ಲಿ ಘನಘೋರವಾಗಿದೆ. ಅಲ್ಲಾದರೂ ಒಂದು ಸಹಜ ನಿಯಮವಿದೆ: ಹಸಿವೆಯಾದಾಗ ಮಾತ್ರ ಹುಲಿ, ಸಿಂಹ, ಚಿರತೆಗಳು ಜಿಂಕೆಯನ್ನೋ ಇನ್ನೊಂದು ಪಾಪದ ಪ್ರಾಣಿಯನ್ನೋ ಕೊಲ್ಲುತ್ತದೆ. ಉಳಿದಂತೆ ಅವು ಸಹಬಾಳ್ವೆಯನ್ನು ಮಾಡುತ್ತವೆ. ಆದರೆ ನಾಡಿನಲ್ಲಿ ಇನ್ನೊಬ್ಬರನ್ನು ಹಿಂಸಿಸುವುದೇ ಮನುಷ್ಯತ್ವವೆನಿಸಿದೆ. ಯಶೋಧರನಿಗೆ ಹಿಟ್ಟಿನಹುಂಜವನ್ನು ಬಲಿಕೊಡುವಾಗ ಅದು ಕಿರುಚಿದಂತನ್ನಿಸಿ ಅದರ ಪರಿಹಾರಕ್ಕೆ ಏಳುಜನ್ಮ ತಳೆಯಬೇಕಾಯಿತೆಂದು ಪುರಾಣ, ಕಾವ್ಯ ಹೇಳುತ್ತದೆ. ಆಧುನಿಕ ಭಾರತೀಯರಿಗೆ ಹಾಗೂ ಅನ್ನಿಸುವುದಿಲ್ಲ. ತಪ್ಪು ಮಾಡುವುದು ತಪ್ಪಲ್ಲ; ಆದರೆ ತಪ್ಪು ಮಾಡಿಯೂ ಅದು ತಪ್ಪಲ್ಲವೆನ್ನಿಸಿ ಸುಮ್ಮನಿರುವುದೂ ತಪ್ಪಲ್ಲ. ಆದರೆ ತಪ್ಪು ಮಾಡಿ ಅದು ತಪ್ಪೆಂದು ಗೊತ್ತಿದ್ದೂ ಅದನ್ನು ಮುನ್ನಡೆಸುವುದು ಕಾಲದ ದುರಂತ. ಅದಕ್ಕೆ ಪರಿಹಾರವನ್ನು ಕಾಲವಷ್ಟೇ ಕೊಡಬಲ್ಲುದು. ಮನುಷ್ಯರು ಸ್ವಲ್ಪ ಪ್ರಾಣಿಗುಣಗಳನ್ನು ಕಲಿತರೆ ಹಿತ.

ವಾಸ್ತವಕ್ಕೆ ಕಾಲಿಡೋಣ: ದೇಶದ ಆಡಳಿತದ ಸೂತ್ರ ಹಿಡಿದ ಪ್ರಧಾನಿ ಮಣಿಪುರದ ಬೆಂಕಿ ಆರಂಭವಾಗಿ ಮೂರು ತಿಂಗಳು ಕಳೆಯುತ್ತಿದ್ದರೂ ೩೯ ಸೆಕೆಂಡುಗಳ ಅಭಿವ್ಯಕ್ತಿ ಬಿಟ್ಟರೆ ಬಾಯಿಗೆ ಬೀಗ ಹಾಕಿ ತನ್ನ ಕಿರಿಯ ಸೋದರನಂತಿರುವ ಗೃಹಮಂತ್ರಿಯನ್ನು ಛೂಬಿಟ್ಟದ್ದು ವಿಪರ್ಯಾಸ. ‘ವಿಪರ್ಯಾಸ’ವೆಂಬ ಪದ ನಿಧಾನವಾಗಿ ತನ್ನ ಅರ್ಥ ಮತ್ತು ಘನತೆಯನ್ನು ಕಳೆದುಕೊಳ್ಳುತ್ತಿದೆ. ಅಲ್ಲೀಗ ಕುರುಕ್ಷೇತ್ರದ ಕೊನೆಯಂತೆ ಹೆಣಗಳ ರಾಶಿ, ಉರಿವ ಮನೆಗಳು, ಕುದಿಯುವ ಕ್ಷಣಗಳು ಇವೆಲ್ಲದರ ನಡುವೆ ಪೊಲೀಸರ, ಅಧಿಕಾರಿಗಳ, ಜನಪ್ರಾತಿನಿಧ್ಯದ ಸೋಗು ಹಾಕಿದವರ ಅಟ್ಟಹಾಸವೇ ಕೇಳಿಬರುತ್ತಿದೆ. ಗುರುತು ಸಿಗದ ಹೆಣಗಳನ್ನು ನುಸುಳುಕೋರರೆಂದೇ ಬಿಂಬಿಸಿ ಪಾರಾಗುವ ವ್ಯವಸ್ಥೆ ನಮ್ಮಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆಯಿದೆಯೆಂಬ ಸುಲಭ ವಿವರಣೆಯಿದೆ. ಪಾಕಿಸ್ತಾನ ಸದಾ ಭಾಜಪದ ಗುರಾಣಿ. ಅದು ಸದಾ ನಮ್ಮ ಆಡಳಿತವನ್ನು ರಕ್ಷಿಸಬಲ್ಲುದು. ಭಾಜಪವಲ್ಲದೆ ಇನ್ಯಾವುದಾದರೂ ಪ್ರತಿಪಕ್ಷವು ಮಣಿಪುರದಲ್ಲಿ ಆಡಳಿತದಲ್ಲಿರುತ್ತಿದ್ದರೆ ಅಲ್ಲೀಗ ರಾಷ್ಟ್ರಪತಿ ಆಡಳಿತವು ‘ಧರ್ಮಸಂಸ್ಥಾಪನೆ’ಯಂತೆ ಜಾರಿಯಾಗುತ್ತಿತ್ತು. ಆದರೆ ಡಬಲ್ ಇಂಜಿನ್ ಸರಕಾರವಾದ್ದರಿಂದ ಅಲ್ಲಿನ ಸಾವುನೋವುಗಳನ್ನು ಕೇಂದ್ರವು ತಾತ್ವಿಕವಾಗಿ ಸ್ವೀಕರಿಸಿದೆ. ಇವೆಲ್ಲ ಸಹಜ. ಮನುಷ್ಯ ಜೀವನವೇ ಕ್ಷಣಭಂಗುರ. ಈ ದುರಂತದಲ್ಲಿ ಅಲ್ಲದಿದ್ದರೂ ಅವರು ಎಂದಾದರೂ ಸಾಯಬೇಕಲ್ಲ, ಸಾಯಲಿ, ಎಂಬ ಆರ್ಷೇಯ ವೈರಾಗ್ಯ ಧೋರಣೆಯನ್ನು ಪ್ರಧಾನಿ ಮತ್ತು ಅವರ ಅಷ್ಟೂ ಕೋಟಿ ಅನುಚರರು ತಾಳಿದಂತಿದೆ. ಕುಂಚದಲ್ಲಿ ಪ್ರಕೃತಿಯ ಕಲೆಯನ್ನು ಹಿಡಿದಿಡಬೇಕಾದ ಕೈ ಕೋವಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಅಲ್ಲಿದೆ. ವ್ಯಂಗ್ಯವಾಗಿ ಹೇಳುವುದಾದರೆ ಬೆಂಕಿಯಲ್ಲಿ ಕಮಲದ ಹೂ ಅರಳುತ್ತಿದೆ. ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ ಮಣಿಪುರದ ಕ್ರೀಡಾಪಟುಗಳು, ಕಲಾವಿದರು, ತಜ್ಞರು ಹೇಳುವ ಯಾವ ಹಿತವಚನವೂ ಪ್ರಧಾನಿಯನ್ನು ಕಾಡದು. ಅವರು ಕಿವಿಗೆ ಸೀಸದ ಮಾತ್ರವಲ್ಲ, ಲಾವಾರಸವನ್ನೂ ಹಾಕಿಕೊಂಡು ನವಿಲನ್ನಾಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಯಜ್ಞ ಈ ಬೆಂಕಿಯಲ್ಲಿ ನಡೆಯುತ್ತಿದೆ. ಮಣಿಪುರದ ಅಸಹಾಯಕ ಯಕ್ಷರು ದುರಂತ ಸಾವಿಗೀಡಾಗುವ ಕ್ಷಣದಲ್ಲಿ ಆಳುವವರ ಕುರಿತು ‘‘ಅಲ್ಲಿ ಕುಣಿಸುವರು ನವಿಲ ನಮ್ಮವರು ಸಂಜೆಯಲ್ಲಿ’’ ಎಂದು ಹಾಡಬೇಕಾದ್ದು ಭವಿಷ್ಯದಲ್ಲಿ ಇತಿಹಾಸದ ಮೈಲಿಗಲ್ಲಾದೀತು. ಈ ಆಟ ಸಂಜೆಯಲ್ಲಿ ಮಾತ್ರವಲ್ಲ, ಇಡೀ ದಿನ ಮಾತ್ರವಲ್ಲ, ೨೪x೭ ನಡೆಯುತ್ತಿದೆ. ಪ್ರಜೆಗಳೂ ಪ್ರಜಾಪ್ರಭುತ್ವವೂ ಅಸಹಾಯಕರು. ಜನಸಂಖ್ಯೆಯನ್ನು ಇಷ್ಟು ಸುಲಭವಾಗಿ ಇಳಿಸಬಹುದೆಂಬುದು ನಮ್ಮ ಆಡಳಿತ ಸೂತ್ರಧಾರರಿಗೆ ಮಾತ್ರ ಗೊತ್ತು. ಶೇ. ೩೧ ಮತಗಳಿಕೆಯಿಂದ ಆಡಳಿತದ ಚುಕ್ಕಾಣಿ ಹಿಡಿದವರು ೧೪೦ ಕೋಟಿ ಜನರ ಪ್ರತಿನಿಧಿಗಳಾದಾಗ ಇಂತಹ ಸ್ಥಿತಿ ಅನಿವಾರ್ಯ.

ಈ ದ್ವೇಷರಾಜಕಾರಣವು ಇತರ ಪ್ರದೇಶಗಳಿಗೆ ಅವ್ಯಕ್ತವಾಗಿ ಹಬ್ಬಿದೆ. ಎಲ್ಲಕಡೆ ಮತಾಂಧ ಶಕ್ತಿಗಳು ಮೆರೆಯುತ್ತಿವೆ. ಹರ್ಯಾಣ, ಹಿಮಾಚಲ ಪ್ರದೇಶಗಳಲ್ಲಿ ಅದೀಗ ಫಲಕೊಡುತ್ತಿದೆ. ಕರ್ನಾಟಕದಂತಹ ರಾಜ್ಯಗಳಲ್ಲಿ ಅವುಗಳಿಗೆ ಸ್ವಲ್ಪ ಕಡಿವಾಣವಿದೆಯೆಂದು ಅನ್ನಿಸುತ್ತಿದೆಯಾದರೂ ಇದು ಎಷ್ಟು ಕಾಲವೆಂಬ ಸಂಶಯವೂ ಜೊತೆಗಿದೆ. ಏಕೆಂದರೆ ಮೂಲತಃ ನಮ್ಮ ಎಲ್ಲ ರಾಜಕಾರಣಿಗಳೂ ಅವಕಾಶವಾದಿಗಳು. ಅಗತ್ಯಬಿದ್ದಾಗ ಯಾರೊಡನೆಯೂ ಸಂಬಂಧವಿಟ್ಟುಕೊಳ್ಳಬಹುದು ಮತ್ತು ಆಗ ಯಾವ ಕೀಚಕನೂ ಸ್ವಂತ ಭಾವನೇ ಆಗಬಲ್ಲ. ಆದ್ದರಿಂದ ವಿವೇಕವುಳ್ಳ ಪ್ರಜೆಗಳು ಹಾವಿನ ಹೆಡೆಯಡಿ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ದಿಲ್ಲಿಯ ಆಡಳಿತಕ್ಕೆ ಒಕ್ಕೂಟದ ಹತೋಟಿಯನ್ನು ಸ್ಥಾಪಿಸಬಲ್ಲ ಕಾಯ್ದೆಯನ್ನು ಒಕ್ಕೂಟ ಸರಕಾರವು ಸಂಸತ್ತಿನಲ್ಲಿ ತಂದಾಗ ಅದಕ್ಕೆ ಒಡಿಶಾದಲ್ಲಷ್ಟೇ ಅಧಿಕಾರದಲ್ಲಿರುವ ನವೀನ್ ಪಟ್ನಾಯಕ್ ಅವರ ಬಿಜೆಡಿ ಪಕ್ಷವು ಬೆಂಬಲ ನೀಡಿದ್ದು ಅವಕಾಶವಾದಕ್ಕೆ ಜ್ವಲಂತ ಸಾಕ್ಷಿ. ಮುಂದೆ ನಡೆಯುವ ಅವಿಶ್ವಾಸ ನಿಲುವಿನ ಸಂದರ್ಭದಲ್ಲಿ ಯಾವುದೇ ಪಕ್ಷವಾಗಲೀ ಒಕ್ಕೂಟ ಸರಕಾರವನ್ನು ಬೆಂಬಲಿಸಿದರೆ ಅದು ಅವರ ಸಾಮುದಾಯಿಕ ಇಲ್ಲವೇ ಪ್ರಾದೇಶಿಕ ಹಿತಾಸಕ್ತಿಯೆಂದು ಸುಮ್ಮನಾಗಬಹುದು. ಆದರೆ ತನಗೆ ಏನೂ ಸಂಬಂಧವಿಲ್ಲದ ಮತ್ತು ತನ್ನಂತೆಯೇ ಅಧಿಕಾರದಲ್ಲಿರುವ ಇನ್ನೊಂದು ಪಕ್ಷದ (ಬಿಜೆಡಿ ಪ್ರಾದೇಶಿಕ ಪಕ್ಷವಾದರೆ ಆಪ್ ರಾಷ್ಟ್ರೀಯ ಪಕ್ಷವಾಗಿದೆ!) ರಕ್ಷಣೆಯ ಸಂದರ್ಭದಲ್ಲಿನ ವಿಚಾರದಲ್ಲಿ ಒಂದು ಪ್ರಾದೇಶಿಕ ಶಕ್ತಿಯು ಒಕ್ಕೂಟ ಸರಕಾರದ ಈ ನಿಲುವಿನ ಸಂದರ್ಭದಲ್ಲಿ ತಟಸ್ಥವಾಗಬೇಕು ಇಲ್ಲವೇ ಒಕ್ಕೂಟ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ಯಾವುದೇ ನಿಲುವನ್ನು ವಿರೋಧಿಸಬೇಕು. ಆದರೆ ಅಧಿಕಾರದ ಅವಕಾಶವಾದವು ಒಕ್ಕೂಟ ವ್ಯವಸ್ಥೆಯ ಎಲ್ಲ ತಾರ್ಕಿಕ ಸಿದ್ಧಾಂತಗಳನ್ನು ತಲೆಕೆಳಗು ಮಾಡಬಲ್ಲುದೆಂಬುದನ್ನು ನವೀನ್ ಪಟ್ನಾಯಕ್ ಅವರ ರಾಜಕೀಯ ಹೇಳಿದೆ. ಪ್ರಾಯಃ ಆಪ್ ಕುರಿತ ಅಸೂಯೆಯೇ ಈ ನಿಲುವಿಗೆ ಕಾರಣವಾಗಿರಬಹುದು. ಯಾವ ಹುತ್ತದಲ್ಲಿ ಯಾವ ಹಾವಿದೆಯೆಂಬುದನ್ನು ನವೀನ್ ಪಟ್ನಾಯಕ್ ತೋರಿಸಿ ಕೊಟ್ಟರು. ಇದರ ದುಷ್ಪರಿಣಾಮಗಳು ಮುಂದಿನ ದಿನಗಳಲ್ಲಿ ಅವರಿಗೆ ಅರ್ಥ ವಾಗಬಹುದು. ಆಗ ತೀರ ತಡವಾಗಿರುತ್ತದೆಯೆಂಬುದು ಇದರ ಅನರ್ಥ.

ಇವೆಲ್ಲ ೨೦೨೪ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಯೋಜನೆಗಳೆಂದರೆ ನಂಬುವುದು ಕಷ್ಟ. ಸಂಘಪರಿವಾರವು ಈ ಪೀಡೆಗಳನ್ನು ಭಾಜಪದ ರಕ್ತಕ್ಕೆ ಸೇರಿಸಿದೆಯೆಂದು ಕಾಣಿಸುತ್ತದೆ. ‘‘ನಮಸ್ತೇ ಸದಾ ವತ್ಸಲೇ ಮಾತೃಭೂಮಿ’’ ಎನ್ನುತ್ತಿದ್ದ ಸಂಘಪರಿವಾರ ಈಗ ರಕ್ತದಾಹದಲ್ಲಿದೆ. ಹಿಂದೂರಾಷ್ಟ್ರವನ್ನು ಸ್ಥಾಪಿಸುವ ಕನಸಿನೊಂದಿಗೆ ಹೊರಟ ಈ ಜೈತ್ರಯಾತ್ರೆಯ ಕೊನೆ ಸರಯೂ ನದಿಯಲ್ಲೋ, ದ್ವಾರಕೆಯ ಬೇಡನ ಬಾಣದಲ್ಲೋ ಗೊತ್ತಿಲ್ಲ. ಇತರ ಎಲ್ಲ ಧರ್ಮೀಯರು (ಮುಖ್ಯವಾಗಿ ಮುಸ್ಲಿಮರೂ ಕ್ರೈಸ್ತರೂ) ಪರಕೀಯರಾಗತೊಡಗಿದ್ದು ಇತ್ತೀಚೆಗೆ. ನಿಧಾನವಾಗಿ ನಕ್ವಿ, ಶಹನವಾಝ್‌ಹುಸೇನ್ ಅಧಿಕಾರರಾಜಕೀಯದಿಂದ ದೂರವಾಗುತ್ತಿದ್ದಾರೆ. ವೆಂಕಯ್ಯನಾಯ್ಡು ಎಂಬ ಮಾಜಿ ಉಪರಾಷ್ಟ್ರಪತಿಯೇ ಮಾರ್ಗದರ್ಶಕ ಮಂಡಳಿಯ ಸದಸ್ಯತ್ವಕ್ಕೆ ಅರ್ಜಿಹಾಕಿ ಕುಳಿತಿದ್ದಾರೆ.

ಮಹಾಭಾರತದ ಕುಂತಿಗೆ ೬ ಮಕ್ಕಳು. ಪಂಚಪಾಂಡವರು ಮತ್ತು ಕರ್ಣ. ಕರ್ಣನು ಇವರೆಲ್ಲರಿಗಿಂತ ಹಿರಿಯ. ನಿಜಾರ್ಥದಲ್ಲಿ ಕುಂತಿಯ ಸ್ವಾತಂತ್ರ್ಯಪೂರ್ವ ಕೌಮಾರ್ಯದಲ್ಲಿ ಹುಟ್ಟಿದವನು. ಆದರೆ ಪಂಚಪಾಂಡವರು ಔರಸಪುತ್ರರೆಂದು ಲೆಕ್ಕ. (ಸತ್ಯ ಬೇರೆ; ಲೆಕ್ಕ ಬೇರೆ!) ಇವರ ಸಂಬಂಧ ಸಂಖ್ಯೆ ೫:೧ ನಿಷ್ಪತ್ತಿಯದು. ಬಹುಮತ ಪಾಂಡವರದ್ದು. ಕುಂತಿಯ ವೈವಾಹಿಕ ಸ್ಥಾನಮಾನ ಈ ಅಧಿಕಾರಯುತ ಅಧಿಕೃತತೆಗೆ ಕಾರಣವಾಯಿತು. ಈಗ ಅವಳಿಗೆ ಪಂಚಪಾಂಡವರಿಗೆ ರಾಜ್ಯವನ್ನು ಕೊಡಿಸುವ ಕರ್ತವ್ಯ. ಅದಕ್ಕಾಗಿ ಕರ್ಣನನ್ನು ಬಲಿತೆಗೆದುಕೊಳ್ಳದೆ ನಿರ್ವಾಹವಿಲ್ಲ. ಹಿಂದೂರಾಷ್ಟ್ರದ ವಿಕಾಸದ ಕಥೆ ಇಷ್ಟೇ: ಬದಲಾವಣೆಯೆಂದರೆ ಬೆಂಕಿಹಚ್ಚಿದ ಬಳಿಕ ಅರಗಿನಮನೆಯ ನಿರ್ಮಾಣವಾಗಬಹುದು.

ಪ್ರಧಾನಿಯೊಬ್ಬರೇ ನವಿಲನ್ನಾಡಿಸುತ್ತ ಕುಳಿತರೆ ಚಿಂತೆಯಿರಲಿಲ್ಲ. ಅವರ ಶೇ. ೩೧ ಅನುಯಾಯಿಗಳೂ ನವಿಲನ್ನಾಡಿಸುತ್ತ ಕುಳಿತಿರುವುದು ಮತ್ತು ಮಾತೃಭೂಮಿ ಏಕಕಾಲಕ್ಕೆ ರಕ್ತಪಿಪಾಸುವಾಗಿಯೂ, ಕ್ಷಮಯಾ ಧರಿತ್ರೀಃಯಾಗಿಯೂ ಇರುವುದು ಈ ನೆಲದ ದುರಂತ.

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News