ಕುಂದಾಪುರ, ಬೈಂದೂರಿನಲ್ಲಿ ಮುಂದುವರಿದ ಲಾರಿ, ಟೆಂಪೋ ಮುಷ್ಕರ

Update: 2023-09-28 14:38 GMT

ಕುಂದಾಪುರ, ಸೆ.28: ಉಡುಪಿ ಜಿಲ್ಲೆಯಾದ್ಯಂತ ಬುಧವಾರದಿಂದ ಪ್ರಾರಂಭಗೊಂಡಿರುವ ಲಾರಿ ಮತ್ತು ಟೆಂಪೊ ಚಾಲಕರು, ಮಾಲಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕುಂದಾಪುರ ಹಾಗೂ ಬೈಂದೂರು ವಲಯ ವ್ಯಾಪ್ತಿಯಲ್ಲಿ ಗುರುವಾರವೂ ಲಾರಿ ಚಾಲಕರು ಹಾಗೂ ಮಾಲಕರು ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಸ್ಥಗಿತಗೊಳಿಸಿ ಹೆದ್ದಾರಿ ಸಮೀಪ ನೂರಾರು ವಾಹನವಿಟ್ಟು ಧರಣಿ ಕೂತರು.

ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ಜಿಲ್ಲಾಡಳಿತ ಹೇರಿರುವ ಕಠಿನ ನಿಯಮಗಳನ್ನು ವಿರೋಧಿಸಿ ಉಡುಪಿ ಜಿಲ್ಲಾ ಲಾರಿ ಮತ್ತು ಟೆಂಪೋ ಮಾಲಕರ ಸಂಘದ ವತಿಯಿಂದ ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಸ್ಥಗಿತಗೊಳಿಸಿ ಈ ಮುಷ್ಕರ ನಡೆಯುತ್ತಿದೆ.

ಕೋಟೇಶ್ವರದಲ್ಲಿ ಲಾರಿ ಮತ್ತು ಟೆಂಪೊ ಚಾಲಕ- ಮಾಲಕರ ಸಂಘ ಕುಂದಾಪುರ ವಲಯದ ವತಿಯಿಂದ ಧರಣಿ ಕೈಗೊಂಡಿದ್ದಾರೆ. ಸಂಘದ ಪ್ರಮುಖರಾದ ಪ್ರಕಾಶ್ ಪೂಜಾರಿ ಬೀಜಾಡಿ, ಅಮರ್ ಶೆಟ್ಟಿ, ಗುಣಕರ ಶೆಟ್ಟಿ, ಅಭಿಷೇಕ್ ಪೂಜಾರಿ ಬೀಜಾಡಿ, ಕರುಣಾಕರ ದೇವಾಡಿಗ, ಸುರೇಶ್ ಪೂಜಾರಿ ಬಸ್ರೂರು, ಮಾತಶ್ರೀ ಶಿವರಾಮ್ ಇದ್ದರು. ಇಂದಿನ ಪ್ರತಿಭಟನೆ ಯಲ್ಲಿ ಬಿಜೆಪಿ ಕುಂದಾಪುರ ಕ್ಷೇತ್ರಾದ್ಯಕ್ಷ ಶಂಕರ ಅಂಕದಕಟ್ಟೆ, ಕೋಟೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ ಭಾಗವಹಿಸಿದರು.

ಹೆಮ್ಮಾಡಿ: ಹೆಮ್ಮಾಡಿಯಲ್ಲಿ ಲಾರಿ ಹಾಗೂ ಟೆಂಪೋ ಮಾಲಕರ ಸಂಘದ ಪ್ರತಿಭಟನೆಯಲ್ಲಿ ಪ್ರಮುಖರಾದ ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು, ಶರತ್ ಕುಮಾರ ಶೆಟ್ಟಿ ಬಾಳಿಕೆರೆ, ಶಿವಾನಂದ ಆಲೂರು, ರಾಜು ಕುಲಾಲ್, ಸತೀಶ್ ದೇವಾಡಿಗ ಗುಡ್ಡೆಮನೆ, ಗೋಪಾಲ್ ನಾಯ್ಕ್, ರಾಘವೇಂದ್ರ ಶೆಟ್ಟಿ ಮುಳ್ಳಿಕಟ್ಟೆ, ರಾಜು ಗಾಣಿಗ ತ್ರಾಸಿ, ವಿನ್ಸೆಂಟ್ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ, ಕೋಟೇಶ್ವರದ ಹೆದ್ದಾರಿಯಲ್ಲಿ, ಹಾಲಾಡಿ ಮತ್ತಿತರ ಕಡೆಗಳಲ್ಲಿ, ಹೆಮ್ಮಾಡಿ, ಮುಳ್ಳಿಕಟ್ಟೆ, ಬೈಂದೂರು, ಉಪ್ಪುಂದ, ಮರವಂತೆ, ಆಲೂರು, ತ್ರಾಸಿ, ಹೆಮ್ಮಾಡಿ, ವಂಡ್ಸೆ, ನೇರಳಕಟ್ಟೆ, ಆಜ್ರಿ, ಜಡ್ಕಲ್, ಕೊಲ್ಲೂರು ಭಾಗದ ನೂರಾರು ಮಂದಿ ಲಾರಿ ಮಾಲಕರು ತಮ್ಮ ಟಿಪ್ಪರ್ ಹಾಗೂ ಟೆಂಪೋಗಳನ್ನು ರಸ್ತೆಯುದ್ದಕ್ಕೂ ನಿಲ್ಲಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು ಚಾಲಕರು ಕೂಡ ಅವರಿಗೆ ಸಾಥ್ ನೀಡಿದರು.

"ಉಡುಪಿ ಜಿಲ್ಲೆಗೆ ಹಲವಾರು ಅಧಿಕಾರಿಗಳು ಬಂದಿದ್ದಾರೆ. ಆದರೆ ನಿತ್ಯ ಜೀವನ ನಡೆಸಲು ಹೋರಾಡುವ ಶ್ರಮಿಕ ವರ್ಗಕ್ಕೆ ಎಂದೂ ಸಮಸ್ಯೆ ಆಗಿರಲಿಲ್ಲ. ಆದರೆ ಇದೀಗ ಲಾರಿ ಚಾಲಕರು-ಮಾಲಕರ ಸಹಿತ ಇವರನ್ನು ಅವಲಂಬಿಸಿದ ಕುಟುಂಬ ಗಳು ಚಿಂತೆಗೀಡಾಗಿವೆ. ಮಾತ್ರವಲ್ಲದೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ದುಡಿಯುವ ವರ್ಗಕ್ಕೂ ಈ ಬಿಸಿ ತಟ್ಟುತ್ತಿದ್ದು ಜಿಲ್ಲೆಯಲ್ಲಿ ಸರಪಣಿ ವ್ಯವಸ್ಥೆಯಡಿ ಆರ್ಥಿಕವಾಗಿ ಎಲ್ಲರಿಗೂ ಹಿನ್ನಡೆಯಾಗುತ್ತಿದೆ. ಜನ ಬೀದಿಗಿಳಿಯುವ ಮುನ್ನು ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಬೇಕು. ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಜಿಲ್ಲೆಯ ಐವರು ಶಾಸಕರು ಕೂತು ನ್ಯಾಯ ನೀಡುವ ಕೆಲಸ ಪಕ್ಷಾತೀತವಾಗಿ ಮಾಡಬೇಕು".

- ಪ್ರದೀಪ್‌ಕುಮಾರ್ ಶೆಟ್ಟಿ (ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ)

"ದಿನದ ಕೂಲಿ ಪಡೆಯುವ ಕಾರ್ಮಿಕನಾಗಿದ್ದು ಮನೆಮಂದಿಗೆ ಆಧಾರವಾಗಿದ್ದೆ. ಗಾಡಿಗಳು ನಿಂತು 16 ದಿನಗಳಾಗಿದ್ದು ಚಾಲಕನಾಗಿ ನನಗೆ ನಷ್ಟವಾಗಿದೆ. ನಮಗೆ ಮತ್ತು ಅನ್ನ ನೀಡುವ ದಣಿಗಳ ಕಷ್ಟಕ್ಕೆ ಸಂಬಂದಪಟ್ಟವರು ಸ್ಪಂದನೆ ನೀಡಬೇಕು".

-ಚಾಲಕ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News