ಮಣಿಪಾಲ: ಗರುಡ ಗ್ಯಾಂಗ್ ತಂಡದ ಇಸಾಕ್ ಬಂಧನಕ್ಕೆ ಕಾರ್ಯಾಚರಣೆ

Update: 2025-03-05 13:30 IST
ಮಣಿಪಾಲ: ಗರುಡ ಗ್ಯಾಂಗ್ ತಂಡದ ಇಸಾಕ್ ಬಂಧನಕ್ಕೆ ಕಾರ್ಯಾಚರಣೆ
  • whatsapp icon

ಮಣಿಪಾಲ, ಮಾ.5: ಮಣಿಪಾಲದಲ್ಲಿ ಮಂಗಳವಾರ ತಡರಾತ್ರಿ ಸಿನಿಮೀಯ ರೀತಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ಗರುಡ ಗ್ಯಾಂಗ್‌ನ ಸದಸ್ಯ ಇಸಾಕ್, ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ತನ್ನ ಕಾರನ್ನು ಬಿಟ್ಟು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಆತನ ಗೆಳತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರ ಆರೋಪಿ, ಗರುಡ ಗ್ಯಾಂಗ್‌ನ ಸದಸ್ಯ ಇಸಾಕ್ ಮಣಿಪಾಲದಲ್ಲಿರುವ ಮಾಹಿತಿ ನೆಲಮಂಗಲ ಪೊಲೀಸರಿಗೆ ದೊರೆತಿತ್ತು. ಅದರಂತೆ ನೆಲಮಂಗಲ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ತನ್ನ ಗೆಳತಿ ಜೊತೆ ಕಾರಿನಲ್ಲಿದ್ದ ಇಸಾಕ್‌ನನ್ನು ನೆಲಮಂಗಲ ಪೊಲೀಸರು ಬೆನ್ನಟ್ಟಿದರು. ಆಗ ಆತ ತನ್ನ ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ರಸ್ತೆ ಬದಿ ಇದ್ದ ವಾಹನಗಳಿಗೆ ಢಿಕ್ಕಿ ಹೊಡೆದು, ಪರಾರಿಯಾದನು. ಇದೇ ವೇಳೆ ನೆಲಮಂಗಲ ಪೊಲೀಸರು ಸ್ಥಳೀಯ ಮಣಿಪಾಲ ಪೊಲೀಸರಿಗೂ ಮಾಹಿತಿ ನೀಡಿದರು.

ಎರಡು ಕಡೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಇಸಾಕ್ ಕಾರನ್ನು ಬೆಂಬಿಡದೆ ಚೇಸ್ ಮಾಡಿದರು. ಮಣ್ಣಪಳ್ಳದ ಬಳಿ ಇಸಾಕ್ ಕಾರಿನ ಟಯರ್ ಪಂಚರ್ ಆಗಿದ್ದು, ಆತ ಅಲ್ಲೇ ಕಾರನ್ನು ಬಿಟ್ಟು ಪರಾರಿಯಾದನು. ಅದರಲ್ಲಿದ್ದ ಆತನ ಗೆಳತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆ ವೇಳೆ ಪೊಲೀಸ್ ಜೀಪು ಸಹಿತ ಸಾರ್ವಜನಿಕರ ಕೆಲವು ವಾಹನಗಳು ಜಖಂಗೊಂಡಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾರಿನಲ್ಲಿದ್ದ ಯುವತಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಆಕೆಯನ್ನು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ತಲೆಮರೆಸಿಕೊಂಡಿರುವ ಇಸಾಕ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News