ರಾಜಕೀಯ ಪ್ರವೇಶಕ್ಕೆ ಸಿದ್ಧವಾಗಿರುವ ಸೂಪರ್ ಸ್ಟಾರ್ ದಳಪತಿ ವಿಜಯ್

Update: 2023-07-18 03:49 GMT
Editor : Safwan | By : ಆರ್. ಜೀವಿ

ಫೋಟೋ: twitter.com/actorvijay

ತಮಿಳುನಾಡಿನ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆಯೊಂದು ಆಗಲಿದೆಯೆ?. ಅಂಥ ಸೂಚನೆಗಳು ಕಾಣಿಸತೊಡಗಿವೆ. ಅದಕ್ಕೆ ಕಾರಣವಾಗಿರುವುದು, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯ ಪ್ರವೇಶ ವಿಚಾರ.

ತಮಿಳುನಾಡಿನಲ್ಲಿ ಸಿನಿಮಾ ನಟರ ರಾಜಕೀಯ ಪ್ರವೇಶ ಹೊಸದಲ್ಲ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಸಿನಿಮಾ ಹಿನ್ನೆಲೆಯಿಂದಲೇ ರಾಜಕೀಯ ಪ್ರವೇಶಿಸಿ ಭಾರೀ ಯಶಸ್ಸು ಸಾಧಿಸಿದವರು. ರಜನೀಕಾಂತ್ ಕೂಡ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಿತ್ತು. ರಾಜಕೀಯ ಪಕ್ಷ ಕಟ್ಟಬಯಸಿ, ಕಡೆಗೆ ಆರೋಗ್ಯದ ಕಾರಣದಿಂದ ಹಿಂದೆ ಸರಿದಿದ್ದರು. ಕಮಲ್ ಹಾಸನ್ ಕೂಡ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ.

ಈಗ ನಟ ವಿಜಯ್ ರಾಜಕೀಯ ಅಖಾಡಕ್ಕಿಳಿಯುವ ಹಾದಿಯಲ್ಲಿದ್ದಾರೆ. ವಿಜಯ್ ರಾಜಕೀಯ ಪ್ರವೇಶದ ಸುದ್ದಿ ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸುದ್ದಿಯೇ ನಿಜವಾದಲ್ಲಿ ತಮಿಳುನಾಡಿನ ಪ್ರಸ್ತುತ ರಾಜಕೀಯದ ಚಿತ್ರಣವೇ ಪೂರ್ತಿ ಬದಲಾಗಲಿದೆ ಎಂಬ ಮಾತುಗಳು ಕೇಳಿಬರತೊಡಗಿವೆ.

ಇಷ್ಟು ದಿನ ಗಾಳಿಸುದ್ದಿ ಮಾತ್ರವೇ ಆಗಿದ್ದ ವಿಜಯ್ ರಾಜಕೀಯ ಪ್ರವೇಶ ವಿಚಾರಕ್ಕೆ ಸ್ಪಷ್ಟ ರೂಪವೊಂದು ಇತ್ತೀಚೆಗೆ ಸಿಕ್ಕಿದೆ. ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿ ವಿಜಯ್ ತಮ್ಮ ಅಭಿಮಾನಿ ಬಳಗವಾದ ವಿಜಯ್ ಮಕ್ಕಳ್ ಇಯಕ್ಕಂ ಸದಸ್ಯರ ಜೊತೆ ಸಭೆ ನಡೆಸಿ ಚರ್ಚಿಸಿರುವ ಹಿನ್ನೆಲೆಯಲ್ಲಿ, ಅವರು ರಾಜಕೀಯಕ್ಕೆ ಬರುವುದು ಖಚಿತವಾಗಿದೆ.

ರಾಜಕೀಯ ಪ್ರವೇಶದ ಬಗ್ಗೆ ವಿಜಯ್ ಅವರು ರಜನೀಕಾಂತ್ ಜೊತೆಗೂ ಚರ್ಚೆ ನಡೆಸಿದ್ದಾರೆ. ರಜನೀಕಾಂತ್, ಅಜಿತ್ ಹಾಗೂ ಇನ್ನಿತರ ಕೆಲವು ನಾಯಕ ನಟರು ವಿಜಯ್ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಸುದ್ದಿಗಳೂ ಇವೆ. ಆ ನಟರ ಅಭಿಮಾನಿಗಳು ಸಹ ವಿಜಯ್ ಗೆ ಬೆಂಬಲವಾಗಿ ನಿಲ್ಲುವ ಸಾಧ್ಯತೆ ಸ್ಪಷ್ಟವಾಗುತ್ತಿದೆ.

ಒಟ್ಟಾರೆಯಾಗಿ ತೀರಾ ಅಳೆದು ತೂಗಿ, ಎಲ್ಲ ಪೂರ್ವತಯಾರಿಯನ್ನೂ ಮಾಡಿಕೊಂಡೇ ವಿಜಯ್ ಒಂದೊಂದೇ ಹೆಜ್ಜೆಗಳನ್ನು ಇಡುತ್ತಿರುವುದರ ಸುಳಿವುಗಳು ಸಿಗುತ್ತಿವೆ. ತಮಿಳುನಾಡಿನಲ್ಲಿ ವಿಜಯ್ ಗೆ ಅತಿ ದೊಡ್ಡ ಅಭಿಮಾನಿ ಬಳಗವಿದೆ. ವಿಜಯ್ ಮಕ್ಕಳ್ ಇಯಕ್ಕಂ ವತಿಯಿಂದ ಕಳೆದ ಜಿಲ್ಲಾ ಹಾಗೂ ತಾಲ್ಲೂಕು ಚುನಾವಣೆಗಳಲ್ಲಿ ಕೆಲ ಸದಸ್ಯರು ಗೆದ್ದಿದ್ದಾರೆ. ವಿಜಯ್ ರಾಜಕೀಯಕ್ಕೆ ಬರಬೇಕು ಎಂಬುದು ಅವರ ಅಭಿಮಾನಿಗಳ ಬಹು ಕಾಲದ ಒತ್ತಾಯ. ಈಗ ವಿಜಯ್ ಮನಸ್ಸು ಮಾಡಿದ್ದಾರೆನ್ನಲಾಗಿದೆ.

ಸೂಕ್ತ ಸಮಯಕ್ಕೆ ಕಾದಿರುವ ವಿಜಯ್, ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ವಿಜಯ್ ಮಕ್ಕಳ್ ಇಯಕ್ಕಂನ ಸದಸ್ಯರೊಟ್ಟಿಗೆ ಜುಲೈ 11ರಂದು ನಡೆಸಿದ ಸಭೆಯಲ್ಲಿ, ಹಲವು ವಿಷಯಗಳ ಚರ್ಚೆಯಾಗಿದೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಏನೆಲ್ಲ ತಯಾರಿಗಳು ಆಗಬೇಕೆಂಬುದರ ರೂಪುರೇಷೆಯ ಬಗ್ಗೆಯೂ ಮಾತುಕತೆ ನಡೆದಿದೆ.

ರಾಜಕೀಯ ಪ್ರವೇಶ ಘೋಷಿಸಿದ ಕೂಡಲೇ ರಾಜ್ಯದಾದ್ಯಂತ ಪಾದಯಾತ್ರೆ ವಿಜಯ್ ಯೋಜನೆ ಎನ್ನಲಾಗಿದೆ. ತಮಿಳುನಾಡಿನ ಪ್ರತಿ ಜಿಲ್ಲೆಗೂ ಪಾದಯಾತ್ರೆ ಮೂಲಕ ಭೇಟಿ ನೀಡುವುದು ವಿಜಯ್ ಉದ್ದೇಶ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಅವರು ತಮ್ಮ ಮುಂದಿನ ಚಿತ್ರ 'ಲಿಯೋ' ಬಿಡುಗಡೆಗೆ ಮುನ್ನವೇ ತಮಿಳುನಾಡಿನಾದ್ಯಂತ ಪಾದಯಾತ್ರೆ ನಡೆಸಲು ಯೋಜಿಸಿದ್ದಾರೆ.

ವಿಜಯ್ ರಾಜಕೀಯ ಪ್ರವೇಶಕ್ಕೆ ಕಾರಣ ಏನು ? ಈ ಬಗ್ಗೆಯೂ ಕೆಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿಜಯ್ ವಿರುದ್ಧ ಬಿಜೆಪಿ ಮಾಡಿದ್ದ ವೈಯಕ್ತಿಕ ಟೀಕೆ, ಐಟಿ ರೇಡ್ ಗಳೇ ರಾಜಕೀಯ ಪ್ರವೇಶದ ಕಿಚ್ಚನ್ನು ವಿಜಯ್ ಅವರೊಳಗೆ ಹೊತ್ತಿಸಿವೆ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವೂ ನೇರವಾಗಿ ವಿಜಯ್ ಅವರಿಂದಲೇ ಬಹಿರಂಗವಾಗುವರೆಗೂ ಕಾಯಬೇಕಿದೆ.

ಇತ್ತೀಚೆಗೆ ವಿಜಯ್ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ 10 ಮತ್ತು 12ನೇ ತರಗತಿಯ ಟಾಪರ್‌ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸುದ್ದಿಯಾಗಿದ್ದರು. ಅವರ ರಾಜಕೀಯ ಪ್ರವೇಶದ ಬಗ್ಗೆ ವದಂತಿಗಳು ಹೆಚ್ಚಿದ್ದು ಕೂಡ ಆಗಿನಿಂದಲೇ. ಅದಾದ ಬಳಿಕ ವಿಜಯ್ ಮಕ್ಕಳ್ ಇಯಕ್ಕಂ ಸದಸ್ಯರೊಂದಿಗೆ ಅವರ ಸಭೆ ಈ ವದಂತಿಗಳನ್ನು ಹೆಚ್ಚು ಖಚಿತವಾಗಿಸಿತು.

ರಾಜಕೀಯ ಪ್ರವೇಶದ ಬಳಿಕ ವಿಜಯ್ ಚಿತ್ರರಂಗ ಬಿಡುತ್ತಾರೆಯೇ? ಈ ವಿಚಾರವೂ ಹೆಚ್ಚು ಚರ್ಚೆಯಲ್ಲಿದೆ. ರಾಜಕೀಯ ಪ್ರವೇಶದ ಬಳಿಕ ಮೂರು ವರ್ಷ ಚಿತ್ರರಂಗದಿಂದ ದೂರವುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನವೆಂಬರ್‌ನಿಂದ, ಹೆಸರಿಡದ ಹೊಸ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಆ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ಅವರು ಪೂರ್ಣಾವಧಿ ರಾಜಕೀಯದತ್ತ ಗಮನ ಹರಿಸುವ ಸಾಧ್ಯತೆಯಿದೆ.

ಆದರೆ, ವಿಜಯ್ ಅವರಿಂದ ಈವರೆಗೂ ಯಾವ ಅಧಿಕೃತ ಹೇಳಿಕೆಗಳೂ ಬಂದಿಲ್ಲ. ಅವರು ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿ ಮಾಡಲಿರುವ ಘೋಷಣೆಗೆ ಎಲ್ಲರೂ ಕಾದಿದ್ದಾರೆ. ವಿಜಯ್ 2024ರಲ್ಲಿ ತಮ್ಮ ರಾಜಕೀಯ ಪಕ್ಷ ಘೋಷಿಸಲಿದ್ದು, 2026ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿತ್ತು.

ನಿರ್ದೇಶಕ ಲೋಕೇಶ್ ಕನಕರಾಜ್ ಅವರ 'ಲಿಯೋ' ಚಿತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 19ರಂದು ಇದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಜಯ್, ಸಂಜಯ್ ದತ್, ತ್ರಿಶಾ, ಅರ್ಜುನ್, ಗೌತಮ್ ಮೆನನ್ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಲಿಯೋ ನಂತರ ಅವರು ವೆಂಕಟ್ ಪ್ರಭು ಚಿತ್ರದ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ. ಅದರ ನಡುವೆ, ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ಶಂಕರ್ ಅವರೊಂದಿಗೆ ಕೈಜೋಡಿಸಬಹುದು ಎಂಬ ವರದಿಗಳೂ ಇವೆ.

ಒಳ್ಳೆಯ ಗಾಯಕರೂ ಆಗಿರುವ ವಿಜಯ್ ಗೆ ತಮಿಳುನಾಡಿನಲ್ಲಿ ಇನ್ನಿಲ್ಲದ ಜನಪ್ರಿಯತೆ ಇದೆ. ಜೊತೆಗೆ ದೇಶಾದ್ಯಂತ ಅವರನ್ನು ಮೆಚ್ಚುವವರು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಅವರ ಐಟಿ ತನಿಖೆಯಾದಾಗ ಅವರು ಅಭಿಮಾನಿಗಳ ಜೊತೆಗೆ ಹಾಕಿದ್ದ ಸೆಲ್ಫಿ 2020 ರಲ್ಲಿ ದೇಶದಲ್ಲೇ ಅತಿಹೆಚ್ಚು ರೀ ಟ್ವೀಟ್ ಆಗಿದ್ದ ಟ್ವೀಟ್ ಆಗಿತ್ತು.

ವಿಜಯ್ ರಾಜಕೀಯ ಪ್ರವೇಶ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗಲೇ, ಅದರ ಬಗ್ಗೆ ಟೀಕೆಗಳೂ ಕೇಳಿಬಂದಿವೆ. ನಿರ್ಮಾಪಕ ಕೆ ರಾಜನ್ ಇತ್ತೀಚೆಗೆ ಮಾತನಾಡಿ, ತಮ್ಮ ಸಿನಿಮಾದ ಟಿಕೆಟ್ ಬೆಲೆಯನ್ನೇ ಇಳಿಸಲು ಆಗದ ವಿಜಯ್, ರಾಜಕೀಯಕ್ಕೆ ಬಂದು ಜನರಿಗೆ ಏನು ತಾನೆ ಸಹಾಯ ಮಾಡಿಯಾರು ಎಂದು ವ್ಯಂಗ್ಯವಾಡಿದ್ದು ಸುದ್ದಿಯಾಗಿದೆ.

ಕೆಲ ಸಮಯ ಹಿಂದೆ ಅವರೇ ವಿಜಯ್ ರಾಜಕೀಯ ಪ್ರವೇಶವನ್ನು ಸ್ವಾಗತಿಸಿ ಮಾತನಾಡಿದ್ದೂ ಇತ್ತು.

ರಾಜಕೀಯಕ್ಕೆ ಪ್ರವೇಶಿಸಲು ಬಯಸಿದಲ್ಲಿ ಅವರನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅದು ಅವರ ಇಚ್ಛೆ. ಒಳ್ಳೆಯ ರಾಜಕಾರಣ ಮಾಡಿದರೆ ಜನರೇ ಅವರ ಬೆನ್ನಿಗೆ ನಿಲ್ಲುತ್ತಾರೆ. ಆದರೆ ರಾಜಕೀಯಕ್ಕಾಗಿ ಸಿನಿಮಾ ವೃತ್ತಿಯನ್ನು ಬಿಡುವುದು ಒಳ್ಳೆಯದಲ್ಲ. ಅವರು ಒಳ್ಳೆಯ ನಟ. ಅವರು ಇನ್ನೂ ಹೆಚ್ಚು-ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದೂ ರಾಜನ್ ಹೇಳಿದ್ದಾರೆ.

ಈ ಹಿಂದೆಯೇ ವಿಜಯ್ ಅವರ ತಂದೆ ಚಂದ್ರಶೇಖರ್, ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷದ ನೊಂದಣಿ ಮಾಡಿಸಿದ್ದರು. ಆದರೆ ವಿಜಯ್, ತಮಗೂ ಅದಕ್ಕೂ ಸಂಬಂಧವಿಲ್ಲವೆಂದಿದ್ದರು. ಆದರೆ ಈಗ ಸ್ವತಃ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧರಿಸಿದ್ದಾರೆ. ತಮಿಳುನಾಡಿನಲ್ಲಿ ಈಗ ಡಿಎಂಕೆ ಅಧಿಕಾರದಲ್ಲಿದೆ. ಕರುಣಾನಿಧಿ ಪುತ್ರ ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದಾರೆ. ಜಯಲಲಿತಾ ಬಳಿಕ ಅವರ ಪಕ್ಷ ಎ ಐ ಡಿ ಎಂ ಕೆ ಬಣ ರಾಜಕೀಯದಲ್ಲಿ ದುರ್ಬಲವಾಗಿದೆ.

ರಾಜ್ಯದಲ್ಲಿ ತೀರಾ ದುರ್ಬಲವಾಗಿರುವ ಬಿಜೆಪಿ ತಳಮಟ್ಟದಲ್ಲಿ ಬೇರೂರಲು ಅಣ್ಣಾಮಲೈ ಮೂಲಕ ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಸಂಸತ್ತಿನಲ್ಲಿ ಸೆಂಗೋಲ್ ಇಟ್ಟು ತಮಿಳರನ್ನು ಸೆಳೆಯಲು ಪ್ರಯತ್ನಿಸಿದೆ. ಪ್ರಧಾನಿ ತಮಿಳುನಾಡಿನ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರಂತೆ ಎಂದು ಸುದ್ದಿಯಾಗುತ್ತಿದೆ. ಕಮಲ್ ಹಾಸನ್ ಅವರ ರಾಜಕೀಯ ಪಕ್ಷ ಅಷ್ಟೊಂದು ಪ್ರಭಾವ ಬೀರಿಲ್ಲ. ಈಗ ವಿಜಯ್ ಎಂಟ್ರಿಯಾಗಲಿದೆ ಎಂಬ ಸುದ್ದಿ ಬರ್ತಾ ಇದೆ.

ವಿಜಯ್ ಈವರೆಗೆ ನೇರವಾಗಿ ರಾಜಕೀಯಕ್ಕೆ ಬರದೇ ಇದ್ದರೂ ಪ್ರಗತಿಪರ , ಜಾತ್ಯತೀತ ನಿಲುವನ್ನೇ ಪ್ರತಿಪಾದಿಸುತ್ತಾ ಆ ಸಿದ್ಧಾಂತಗಳ ಪಕ್ಷಗಳನ್ನೇ ಪರೋಕ್ಷವಾಗಿ ಬೆಂಬಲಿಸುತ್ತಾ ಬಂದವರು. ಅದಕ್ಕಾಗಿ ಬಿಜೆಪಿ ಮುಖಂಡರಿಂದ ಟ್ರೋಲ್ ಗೂ ಒಳಗಾಗಿದ್ದಾರೆ. ವಿಜಯ್ ಕ್ರೈಸ್ತ ಧರ್ಮಕ್ಕೆ ಸೇರಿದವರು , ಹಾಗಾಗಿ ಅವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾರೆ ಎಂದು ತಮಿಳು ನಾಡು ಬಿಜೆಪಿ ನಾಯಕ ಎಚ್ ರಾಜಾ ಒಮ್ಮೆ ಹೇಳಿ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದರು. ಇತ್ತೀಚಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತಾಡಿದ್ದ ವಿಜಯ್" ಎಷ್ಟು ಸಾಧ್ಯವೋ ಅಷ್ಟು ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅಂತಹವರ ಬಗ್ಗೆ ಓದಿ " ಎಂದು ಹೇಳಿದ್ದು ಸುದ್ದಿಯಾಗಿತ್ತು. ತಮಿಳುನಾಡಿನ ರಾಜಕಾರಣದಲ್ಲಿ ನಿಜವಾಗಿಯೂ ವಿಜಯ್ ರಂಗಪ್ರವೇಶ ಹೊಸ ಸಾಧ್ಯತೆ ತೆರೆಯಲಿದೆಯೆ? ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಆರ್. ಜೀವಿ

contributor

Similar News