ಯಾದಗಿರಿ | ಏಪ್ರಿಲ್ 15ರವರೆಗೆ ಕಾಲುವೆಗಳಿಗೆ ನೀರು ಹರಿಸದಿದ್ದರೆ ಹೋರಾಟ : ಅಯ್ಯಣ್ಣ ಹಾಲಬಾವಿ

ಸುರಪುರ : ಏಪ್ರಿಲ್ 15 ರವರೆಗೆ ಕೃಷ್ಣಾ ಎಡದಂಡೆ ಕಾಲುವೆಗಳಿಗೆ ನೀರು ಹರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ತಿಳಿಸಿದರು.
ನಗರದ ಟೈಲರ್ ಮಂಜಿಲ್ ಪ್ರವಾಸಿ ಮಂದಿರ ಆವರಣದಲ್ಲಿ ಸಭೆ ನಡೆಸಿ ಮಾತನಾಡಿ, ಸರಕಾರ ಏಪ್ರಿಲ್ 1 ರಿಂದ 6 ರವರೆಗೆ ನೀರು ಬಿಡುವುದಾಗಿ ಹಾಗೂ 22 ರಿಂದ 30 ರವರೆಗೆ ಬಂದ್ ಮಾಡುವುದಾಗಿ ಸಭೆಯ ಮೂಲಕ ಘೋಷಿಸಲಾಗಿದೆ. ಇದು ಅವೈಜ್ಞಾನಿಕವಾಗಿದೆ, ಏಪ್ರಿಲ್ 6 ರವರೆಗೆ ನೀರು ಬಿಡುವುದರಿಂದ ರೈತರ ಬೆಳೆಗಳು ಬರುವುದಿಲ್ಲ, ಅಲ್ಲದೆ ಕೊನೆ ಭಾಗದ ರೈತರಿಗೆ ನೀರು ತಲುಪುವುದಿಲ್ಲ, ಇದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಆದ್ದರಿಂದ ಈಗ ಕೈಗೊಂಡಿರುವ ನಿರ್ಣಯವನ್ನು ರದ್ದುಗೊಳಿಸಿ ಏಪ್ರಿಲ್ 15ರ ವರೆಗೆ ಯಾವುದೇ ವಾರಬಂದಿ ಇಲ್ಲದೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪುರ ಮಾತನಾಡಿ, ಈಗಾಗಲೇ ಸರಕಾರಕ್ಕೆ ನಮ್ಮ ಸಂಘಟನೆಯಿಂದ ಹಲವು ಬಾರಿ ಮನವಿ ಸಲ್ಲಿಸಿ ಏಪ್ರಿಲ್ 15 ರವರೆಗೆ ನೀರು ಬಿಡುವಂತೆ ಆಗ್ರಹಿಸಲಾಗಿದೆ. ಆದರೆ ಸರಕಾರ ಏಪ್ರಿಲ್ 6 ರವರೆಗೆ ನೀರು ಬಿಡುವುದಾಗಿ ಘೋಷಿಸಿರುವುದು ನಮ್ಮ ಸಂಘಟನೆ ಒಪ್ಪುವುದಿಲ್ಲ, ರೈತರ ಸಮಸ್ಯೆಯನ್ನು ಅರಿತುಕೊಂಡು ಏಪ್ರಿಲ್ 15 ರವರೆಗೆ ನಿರಂತರವಾಗಿ ನೀರು ಹರಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕ ಘಟಕದ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.