ಕಳೆದ 5 ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಕೋರ್ಸುಗಳನ್ನು ಅರ್ಧದಲ್ಲಿಯೇ ಕೈಬಿಟ್ಟ 13,600ಕ್ಕೂ ಅಧಿಕ ಒಬಿಸಿ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು
ಹೊಸದಿಲ್ಲಿ: ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ 13,600ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಂದ್ರೀಯ ವಿವಿಗಳು, ಐಐಟಿಗಳು ಮತ್ತು ಐಐಎಂಗಳಲ್ಲಿ ತಾವು ಕಲಿಯುತ್ತಿರುವ ಕೋರ್ಸುಗಳನ್ನು ಕಳೆದ ಐದು ವರ್ಷ ಅವಧಿಯಲ್ಲಿ ಅರ್ಧಕ್ಕೆ ಕೈಬಿಟ್ಟಿದ್ದಾರೆ ಎಂದು ಲೋಕಸಭೆಯಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ ಅವರು ಪ್ರಸ್ತುತಪಡಿಸಿದ ಅಂಕಿಅಂಶಗಳಿಂದ ತಿಳಿದು ಬಂದಿದೆ. ಸಚಿವರು ಬಹುಜನ ಸಮಾಜ ಪಕ್ಷದ ಸಂಸದ ರಿತೇಶ್ ಪಾಂಡೆ ಅವರು ಕೇಳಿದ ಪ್ರಶ್ನೆಯೊಂದಿಗೆ ಉತ್ತರಿಸುವ ವೇಳೆ ಮೇಲಿನ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಬೇರೆ ವಿಭಾಗ ಅಥವಾ ಸಂಸ್ಥೆಯಲ್ಲಿ ಸೀಟು ಲಭಿಸಿದ ಕಾರಣ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಕೋರ್ಸುಗಳನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.
ಕೇಂದ್ರೀಯ ವಿವಿಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಇತರ ಹಿಂದುಳಿದ ವರ್ಗಗಳ 4,596 ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿಗಳ 2,424 ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಪಂಗಡಗಳ 2,622 ವಿದ್ಯಾರ್ಥಿಗಳು ಕೋರ್ಸುಗಳನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದಾರೆ.
ಐಐಟಿಗಳಲ್ಲಿ 2,066 ಒಬಿಸಿ ವಿದ್ಯಾರ್ಥಿಗಳು, 1,068 ಪರಿಶಿಷ್ಟ ಜಾತಿ ಹಾಗೂ 408 ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಕೋರ್ಸುಗಳನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದರೆ, ಐಐಎಂಗಳಿಂದ ಇತರ ಹಿಂದುಳಿದ ವರ್ಗಗಳ 163, ಪರಿಶಿಷ್ಟ ಜಾತಿಗಳ 188 ಹಾಗೂ ಪರಿಶಿಷ್ಟ ಪಂಗಡಗಳ 91 ವಿದ್ಯಾರ್ಥಿಗಳು ಕೋರ್ಸುಗಳನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.