ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಶೂಟರ್ ವಿಡಿಯೊ ಹೇಳಿಕೆ ವೈರಲ್ | ಮಥುರಾದ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು
ಮಥುರಾ (ಉತ್ತರ ಪ್ರದೇಶ ): ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಶಾರ್ಪ್ ಶೂಟರ್ ಯೋಗೇಶ್ ವಿಡಿಯೊ ಹೇಳಿಕೆ ವೈರಲ್ ಆದ ಬೆನ್ನಿಗೇ, ಮಥುರಾದ ಮೂವರು ಪೊಲೀಸ್ ಅಧಿಕಾರಿಗಳನ್ನು ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ ಅಮಾನತುಗೊಳಿಸಿದ್ದಾರೆ.
ರಿಫೈನರಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದಾಗ, ಶಾರ್ಪ್ ಶೂಟರ್ ಯೋಗೇಶ್ ಸ್ಥಳೀಯ ಮಾಧ್ಯಮ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವುದನ್ನು ಆ ವಿಡಿಯೊದಲ್ಲಿ ನೋಡಬಹುದಾಗಿದೆ. ವಿಡಿಯೊದಲ್ಲಿ ಮಥುರಾದಲ್ಲಿ ನಡೆದ ನನ್ನ ಎನ್ ಕೌಂಟರ್ ನಕಲಿ ಎಂದು ಆತ ಹೇಳಿದ್ದಾನೆ. ಅಲ್ಲದೆ, ಮುಂಬೈನಲ್ಲಿ ಗುಂಡೇಟಿಗೆ ಬಲಿಯಾದ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಕುರಿತೂ ಹೇಳಿಕೆ ನೀಡಿದ್ದಾನೆ.
ಈ ಸಂಬಂಧ, ರಿಫೈನರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸಬ್ ಇನ್ಸ್ ಪೆಕ್ಟರ್ ರಾಮ್ ಸನೇಹಿ, ಮುಖ್ಯ ಪೊಲೀಸ್ ಪೇದೆ ವಿಪಿನ್ ಹಾಗೂ ಪೊಲೀಸ್ ಪೇದೆ ಸಂಜಯ್ ರನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ ಅಮಾನತುಗೊಳಿಸಿದ್ದಾರೆ.
ದಿಲ್ಲಿಯ 35 ವರ್ಷದ ಜಿಮ್ ಮಾಲಕರೊಬ್ಬರ ಹತ್ಯೆ ಆರೋಪದ ಸಂಬಂಧ, ಲಾರೆನ್ಸ್ ಬಿಷ್ಣೋಯಿ-ಹಶೀಂ ಬಾಬಾ ಗ್ಯಾಂಗ್ ನ ಶೂಟರ್ ಆದ ಯೋಗೇಶ್ ಅನ್ನು ಗುರುವಾರ ದಿಲ್ಲಿ ಪೊಲೀಸ್ ಇಲಾಖೆಯ ವಿಶೇಷ ಘಟಕ ಹಾಗೂ ಮಥುರಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.