ಉತ್ತರ ಪ್ರದೇಶ | ಕ್ರಿಕೆಟ್ ಆಡುತ್ತಿದ್ದ ವೈದ್ಯರು ; ಚಿಕಿತ್ಸೆ ಸಿಗದೆ ಮೃತಪಟ್ಟ ಬಾಲಕಿ
ಬುದೌನ್ (ಉತ್ತರ ಪ್ರದೇಶ): ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ 5 ವರ್ಷದ ಬಾಲಕಿಯು ಜ್ವರದಿಂದ ಮೃತಪಟ್ಟಿದ್ದು, ಈ ಸಂದರ್ಭದಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಕ್ರಿಕೆಟ್ ಆಡುತ್ತಿದ್ದರು ಎಂದು ಮೃತ ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಈ ಘಟನೆಯ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಅರುಣ್ ಕುಮಾರ್, “ಮೃತ ಬಾಲಕಿ ಸೋಫಿಯಾಳನ್ನು ಆಕೆಯ ತಂದೆ ನಝೀಂ ಬುಧವಾರ ಮಧ್ಯಾಹ್ನ ಆಸ್ಪತ್ರೆಗೆ ಕರೆತಂದಿದ್ದರು” ಎಂದು ಹೇಳಿದ್ದಾರೆ.
“ನನ್ನ ಮಗಳನ್ನು ಆಸ್ಪತ್ರೆಗೆ ಕರೆ ತಂದಾಗ, ಆಸ್ಪತ್ರೆಯಲ್ಲಿ ಯಾವುದೇ ಮಕ್ಕಳ ತಜ್ಞರು ಲಭ್ಯವಿರಲಿಲ್ಲ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ವೈದ್ಯರು ಅಥವಾ ಸಿಬ್ಬಂದಿಗಳಿಲ್ಲದ ಹಲವಾರು ಕೋಣೆಗಳಿಗೆ ನಮ್ಮನ್ನು ಕಳಿಸಿದರು ಎಂದು ನಝೀಂ ಆರೋಪಿಸಿದ್ದಾರೆ” ಎಂದೂ ಅವರು ಹೇಳಿದ್ದಾರೆ.
“ನಾನು ವೈದ್ಯಕೀಯ ಕಾಲೇಜನ್ನು ತೊರೆಯುವಾಗ, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಕ್ರಿಕೆಟ್ ಆಡುತ್ತಿರುವುದನ್ನು ಕಂಡೆ. ನೆರವಿಗಾಗಿ ಮೊರೆ ಇಟ್ಟರೂ, ನನ್ನ ಪುತ್ರಿಗೆ ಯಾವುದೇ ವೈದ್ಯಕೀಯ ಗಮನ ದೊರೆಯದೆ ಇದ್ದುದರಿಂದ ಅವಳು ಕೆಲವೇ ಗಂಟೆಗಳಲ್ಲಿ ಮೃತಪಟ್ಟಳು” ಎಂದೂ ನಝೀಂ ಆರೋಪಿಸಿದ್ದಾರೆ.
ತಮ್ಮ ಆಸ್ಪತ್ರೆಯಲ್ಲಿ ನಡೆದಿರುವ ಈ ದುರಂತಮಯ ಘಟನೆಯನ್ನು ಒಪ್ಪಿಕೊಂಡಿರುವ ಪ್ರೊ. ಅರುಣ್ ಕುಮಾರ್, ಆರೋಪಗಳ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಶೋಧನೆಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ವೈದ್ಯರು ಕ್ರಿಕೆಟ್ ಆಡುತ್ತಿದ್ದರು ಎಂಬ ಆರೋಪವನ್ನು ಅಲ್ಲಗಳೆದಿರುವ ಅವರು, ಹೊರ ರೋಗಿ ವಿಭಾಗಕ್ಕೆ ಸಂಬಂಧಪಟ್ಟ ವೈದ್ಯರು ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ರಜೆಯಲ್ಲಿದ್ದ ವೈದ್ಯರು ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.