ಕೊಳವೆ ಬಾವಿಯೊಳಗೆ ಬಿದ್ದ ಆರು ವರ್ಷದ ಬಾಲಕ; ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ

Update: 2024-04-13 07:27 GMT

Photo credit: livemint.com

ರೇವಾ (ಮಧ್ಯಪ್ರದೇಶ): ಆರು ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಶುಕ್ರವಾರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯು ಉತ್ತರ ಪ್ರದೇಶದ ಗಡಿಯ ಬಳಿ ಇರುವ ಮನಿಕಾ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆದಿದ್ದು, ಆಟವಾಡುತ್ತಿದ್ದ ಬಾಲಕನು ತೆರೆದಿದ್ದ ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.

ರೇವಾ ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಪ್ರಕಾರ, ಬಾಲಕನೊಬ್ಬ ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ. ಘಟನೆಯ ಬೆನ್ನಿಗೇ ರಾಜ್ಯ ವಿಪತ್ತು ತುರ್ತು ಸ್ಪಂದನಾ ಪಡೆಯು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ವಾರಣಾಸಿಯಿಂದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯನ್ನು ಕರೆಸಲಾಗುತ್ತಿದೆ. ಪ್ರಾಧಿಕಾರಗಳು ಕೊಳವೆಯ ಮೂಲಕ ಆಮ್ಲಜನಕವನ್ನು ಪೂರೈಸುತ್ತಿವೆ. ಇದರೊಂದಿಗೆ, ಬಾಲಕನ ಸ್ಥಿತಿಯ ಮೇಲೆ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾವನ್ನು ಬಾವಿಯೊಳಗೆ ಇಳಿ ಬಿಡಲಾಗಿದೆ. ಆದರೆ, ಕೆಲವು ಅಡಚಣೆಗಳಿಂದ ಈಗಲೂ ಕ್ಯಾಮೆರಾ ಆತನನ್ನು ಸಮೀಪಿಸಲು ಸಾಧ್ಯವಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕೊಳವೆ ಬಾವಿಯು 70 ಅಡಿ ಆಳವಿದ್ದು, ಬಾಲಕನನ್ನು ರಕ್ಷಿಸಲು ಸಮಾನಾಂತರ ಗುಂಡಿಯನ್ನು ತೋಡಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ ಇಂತಹುದೇ ಘಟನೆಯೊಂದು ಕರ್ನಾಟಕದ ವಿಜಯಪುರದಲ್ಲಿ ನಡೆದು, ಎರಡು ವರ್ಷದ ಮಗುವೊಂದು ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿತ್ತು. ನಂತರ ಸುಮಾರು 20 ಗಂಟೆಗಳ ಯಶಸ್ವಿ ಕಾರ್ಯಾಚರಣೆಯ ನಂತರ ಆ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News