ಈಡಿ ಕಸ್ಟಡಿಯಿಂದ ದಿಲ್ಲಿ ಸರಕಾರಕ್ಕೆ ಕೇಜ್ರಿವಾಲ್ ನಿರ್ದೇಶನ: ಗಣನೆಗೆ ತೆಗೆದುಕೊಂಡ ಈಡಿ

Update: 2024-03-25 14:35 GMT

Photo : PTI

ಹೊಸದಿಲ್ಲಿ: ಸಾರ್ವಜನಿಕರ ಉಪಯೋಗದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿ ಅನುಷ್ಠಾನ ನಿರ್ದೇಶನಾಲಯ (ಈಡಿ)ದ ಕಸ್ಟಡಿಯಿಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿರ್ದೇಶನಗಳನ್ನು ಕಳುಹಿಸಿದ್ದಾರೆ ಎಂಬ ದಿಲ್ಲಿ ಸಚಿವೆ ಆತಿಶಿಯ ಹೇಳಿಕೆಯನ್ನು ಈಡಿ ಗಣನೆಗೆ ತೆಗೆದುಕೊಂಡಿದೆ ಎಂದು ಅಧಿಕೃತ ಮೂಲಗಳು ರವಿವಾರ ತಿಳಿಸಿದೆ.

ಬಂಧಿತ ಮುಖ್ಯಮಂತ್ರಿ ಅನುಷ್ಠಾನ ನಿರ್ದೇಶನಾಲಯದ ಕಸ್ಟಡಿಯಯಿಂದ ನಿರ್ದೇಶನಗಳನ್ನು ನೀಡಿರುವುದು ವಿಶೇಷ ಪಿಎಮ್ಎಲ್ಎ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿದೆಯೇ ಎನ್ನುವುದನ್ನು ಈಡಿ ಪರಿಶೀಲುಸುತ್ತಿದೆ ಎಂದು ಮೂಲಗಳು ಹೇಳಿವೆ.

ನ್ಯಾಯಾಲಯವು ಕೇಜ್ರಿವಾಲ್ ರನ್ನು ಮಾರ್ಚ್ 28ರವರೆಗೆ ಅನುಷ್ಠಾನ ನಿರ್ದೇಶನಾಲಯದ ಕಸ್ಟಡಿಗೆ ನೀಡಿತ್ತು. ಅವರನ್ನು ಪ್ರತಿದಿನ 6ರಿಂದ 7 ಗಂಟೆಯ ನಡುವೆ ತಲಾ ಅರ್ಧ ಗಂಟೆ ಭೇಟಿ ಮಾಡಲು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಆಪ್ತ ಸಹಾಯಕ ಬಿಭವ್ ಕುಮಾರ್ಗೆ ನ್ಯಾಯಾಲಯವು ಅನುಮತಿ ನೀಡಿತ್ತು. ಅದೂ ಅಲ್ಲದೆ, ವಕೀಲರನ್ನು ಭೇಟಿ ಮಾಡಲು ನ್ಯಾಯಾಲಯವು ಇನ್ನೊಂದು ಅರ್ಧ ಗಂಟೆ ನೀಡಿತ್ತು.

ನೀರು ಮತ್ತು ಚರಂಡಿಗೆ ಸಂಬಂಧಿಸಿದ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಂತೆ ನಿರ್ದೇಶನಗಳನ್ನು ಒಳಗೊಂಡ ದಾಖಲೆಯನ್ನು ಕೇಜ್ರಿವಾಲ್ ನನಗೆ ಕಳುಹಿಸಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವೆ ಆತಿಶಿ ರವಿವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದರು.

ಬೇಸಿಗೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ನೀರಿನ ಕೊರತೆ ತಲೆದೋರಿರುವ ಪ್ರದೇಶಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ನೀರಿನ ಟ್ಯಾಂಕರ್ಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ನನಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದ್ದರು. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳಿಗೂ ಸೂಚನೆಗಳನ್ನು ನೀಡುವಂತೆ ಕೇಜ್ರಿವಾಲ್ ನನಗೆ ನಿರ್ದೇಶನ ನೀಡಿದ್ದಾರೆ ಎಂದು ಸಚಿವೆ ಹೇಳಿದ್ದರು.

ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿ ಕೇಜ್ರಿವಾಲ್ರನ್ನು ಅನುಷ್ಠಾನ ನಿರ್ದೇಶನಾಲಯವು ಮಾರ್ಚ್ 21ರಂದು ಬಂಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News