ಸರಕಾರದಿಂದ 400 ಕೋಟಿ ರೂ. ಬಾಕಿ: ʼಆಯುಷ್ಮಾನ್ ಭಾರತ್‌ʼ ಸೇವೆ ನಿಲ್ಲಿಸಲು ಹರ್ಯಾಣದ 600 ಖಾಸಗಿ ಆಸ್ಪತ್ರೆಗಳ ನಿರ್ಧಾರ

Update: 2025-01-27 18:14 IST
Ayushman Bharat Yojana

PC : Ayushman Bharat Yojana

  • whatsapp icon

ಗುರ್ಗಾಂವ್: ಸರಕಾರವು 400 ಕೋಟಿ ರೂ.ಗಳ ಬಾಕಿಯನ್ನು ಪಾವತಿಸಿಲ್ಲವಾದ್ದರಿಂದ ರಾಜ್ಯಾದ್ಯಂತ 600 ಖಾಸಗಿ ಆಸ್ಪತ್ರೆಗಳು ಫೆ.3ರಿಂದ ಕೇಂದ್ರದ ‌ʼಆಯುಷ್ಮಾನ್ ಭಾರತ್ʼ ಯೋಜನೆಯಡಿ ಚಿಕಿತ್ಸೆ ನೀಡುವುದನ್ನು ಸ್ಥಗಿತಗೊಳಿಸಲಿವೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಹರ್ಯಾಣ ಘಟಕವು ರವಿವಾರ ಪ್ರಕಟಿಸಿದೆ. 600 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಹರ್ಯಾಣದ ಸುಮಾರು 1,300 ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಯಡಿ ನೋಂದಣಿಯನ್ನು ಹೊಂದಿವೆ.

ರಾಜ್ಯದಲ್ಲಿಯ ಸುಮಾರು 1.2 ಕೋಟಿ ಜನರು ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಗಳಾಗಿದ್ದಾರೆ. 2.5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿರುವ ಕುಟುಂಬಕ್ಕೆ ಪ್ರತಿ ವರ್ಷ ಐದು ಲಕ್ಷ ರೂ.ವರೆಗೆ ಉಚಿತ ಆರೋಗ್ಯ ರಕ್ಷಣೆಯನ್ನು ಒದಗಿಸುವ ಈ ಯೋಜನೆಗೆ ನರೇಂದ್ರ ಮೋದಿ ನೇತೃತ್ವದ ಸರಕಾರವು 2018ರಲ್ಲಿ ಚಾಲನೆ ನೀಡಿತ್ತು.

ತಿಂಗಳುಗಳಿಂದಲೂ ಸರಕಾರವು ಬಾಕಿಯನ್ನು ಪಾವತಿಸಲು ವಿಳಂಬಿಸುತ್ತಿದೆ, ಹೀಗಾಗಿ ಆಸ್ಪತ್ರೆಗಳಿಗೆ ತಮ್ಮ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಯೋಜನೆಯಡಿ ಒದಗಿಸಲಾದ ಸೇವೆಗಳನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಐಎಂಎ ಹೇಳಿದೆ.

‘ಅಗತ್ಯ ಹಣವಿಲ್ಲದೆ ಆಸ್ಪತ್ರೆಗಳನ್ನು ನಡೆಸುವುದು ಅಸಾಧ್ಯವಾಗಿದೆ. ಸರಕಾರದಿಂದ ಮರುಪಾವತಿಯು ವಿಳಂಬವಾಗುತ್ತಿದೆ ಮತ್ತು ಹೊಸ ಬಿಲ್‌ಗಳು ಸೇರ್ಪಡೆಯಾಗುತ್ತಲೇ ಇವೆ. ನಮ್ಮ ಬಾಕಿಗಳನ್ನು ತಕ್ಷಣ ಪಾವತಿಸಬೇಕು ’ ಎಂದು ಗುರ್ಗಾಂವ್‌ನಲ್ಲಿಯ ನೋಂದಾಯಿತ ಆಸ್ಪತ್ರೆಯೊಂದರ ವೈದ್ಯರು ಹೇಳಿದರು.

ಸರಕಾರದಿಂದ ಸುಮಾರು 400 ಕೋಟಿ ರೂ.ಗಳಷ್ಟು ಹಣ ಬಾಕಿಯಿದ್ದು, ಇದನ್ನು ತಕ್ಷಣ ಬಿಡುಗಡೆ ಮಾಡಬೇಕು. ಯೋಜನೆಯಡಿ ಈಗಾಗಲೇ ಆಸ್ಪತ್ರೆಗಳು ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿಗಳನ್ನು ನೀಡಿವೆ. ಕನಿಷ್ಠ ಮೊತ್ತವನ್ನಾದರೂ ಬಿಡುಗಡೆ ಮಾಡದಿದ್ದರೆ ಈ ಆಸ್ಪತ್ರೆಗಳು ನಡೆಯುವುದು ಹೇಗೆ ಎಂದು ಐಎಂಎ ಹರ್ಯಾಣ ಘಟಕದ ಅಧ್ಯಕ್ಷ ಡಾ.ಮಹಾವೀರ ಜೈನ್ ಪ್ರಶ್ನಿಸಿದರು.

ಹರ್ಯಾಣದಲ್ಲಿ ನೋಂದಣಿಯನ್ನು ಹೊಂದಿರುವ ಪ್ರತಿ ಖಾಸಗಿ ಆಸ್ಪತ್ರೆ ಸರಕಾರಕ್ಕೆ ಕಳುಹಿಸಿದ್ದ ಬಿಲ್‌ಗಳ ಪೈಕಿ ಕೇವಲ ಶೇ.10ರಿಂದ ಶೇ.15ರಷ್ಟು ಮರುಪಾವತಿಯನ್ನು ಸ್ವೀಕರಿಸಿದೆ ಎಂದರು.

ಈ ವಿಷಯವನ್ನು ಹರ್ಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿಯವರ ಗಮನಕ್ಕೆ ತರಲಾಗಿದ್ದು,ತಕ್ಷಣ ಹಣ ಬಿಡುಗಡೆಗೆ ಅವರು ಆದೇಶಿಸಿದ್ದಾರೆ. ಆದರೆ ಆಸ್ಪತ್ರೆಗಳು ಬಾಕಿ ಇರುವ ಮೊತ್ತದ ಒಂದು ಭಾಗವನ್ನಷ್ಟೇ ಸ್ವೀಕರಿಸಿವೆ ಎಂದು ಐಎಂಎ-ಹರ್ಯಾಣದ ಕಾರ್ಯದರ್ಶಿ ಧೀರೇಂದ್ರ ಕೆ.ಸೋನಿ ತಿಳಿಸಿದರು.

ಆಯುಷ್ಮಾನ್ ಭಾರತ(ಹರ್ಯಾಣ) ಯೋಜನೆಯ ಜಂಟಿ ಸಿಇಒ ಅಂಕಿತಾ ಅಧಿಕಾರಿ ಅವರನ್ನು ಸುದ್ದಿಸಂಸ್ಥೆಯು ಸಂಪರ್ಕಿಸಿದ್ದು,ಸೇವೆಗಳನ್ನು ಸ್ಥಗಿತಗೊಳಿಸುವ ಐಎಂಎ ಪ್ರಕಟಣೆಯ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ಹೇಳಿದರು.

‘ನಾವು ಈಗಾಗಲೇ ಹಣ ಬಿಡುಗಡೆಯನ್ನು ಆರಂಭಿಸಿದ್ದೇವೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಯಲಿದೆ ಮತ್ತು ಇಂತಹ ಕಠಿಣ ಕ್ರಮವು ಅಗತ್ಯವಾಗುವುದಿಲ್ಲ ಎಂದು ನಾವು ಆಶಿಸಿದ್ದೇವೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News