ಬಿಜೆಪಿ ನನ್ನನ್ನು, ಅಭಿಷೇಕ್ ನನ್ನು ಗುರಿ ಮಾಡುತ್ತಿದೆ: ಮಮತಾ ಬ್ಯಾನರ್ಜಿ
ರಾಂಚಿ : ಬಿಜೆಪಿ ತನ್ನನ್ನು ಹಾಗೂ ತನ್ನ ಸೋದರ ಪುತ್ರ, ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಗುರಿಯಾಗಿಸುತ್ತಿದೆ. ನಾವು ಅಸುರಕ್ಷಿತರು ಎಂಬ ಭಾವನೆ ಮೂಡಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಆರೋಪಿಸಿದ್ದಾರೆ.
ಬಾಲುರ್ಘಾಟ್ ಲೋಕಸಭಾ ಕ್ಷೇತ್ರದ ಕುಮಾರ್ ಗಂಜ್ನಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ರಾಜ್ಯ ಸಚಿವ ಬಿಪ್ಲಬ್ ಮಿತ್ರಾ ಅವರ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿದರು.
ಸೋಮವಾರ ದೊಡ್ಡ ಸ್ಫೋಟ ಸಂಭವಿಸಲಿದೆ. ಇದು ಟಿಎಂಸಿ ಹಾಗೂ ಅದರ ಉನ್ನತ ನಾಯಕರನ್ನು ಕಂಪಿಸುವಂತೆ ಮಾಡಲಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸುವೇಂಧು ಅಧಿಕಾರಿ ಹೇಳಿದ ಒಂದು ದಿನಗಳ ಬಳಿಕ ಮಮತಾ ಬ್ಯಾನರ್ಜಿ ಅವರು ಈ ಆರೋಪ ಮಾಡಿದ್ದಾರೆ.
‘‘ಬಿಜೆಪಿ ನನ್ನನ್ನು ಹಾಗೂ ಅಭಿಷೇಕ್ ಅವರನ್ನು ಗುರಿ ಮಾಡುತ್ತಿದೆ. ನಾವು ಸುರಕ್ಷಿತರಲ್ಲ. ಆದರೆ, ಬಿಜೆಪಿಯ ಪಿತೂರಿಗೆ ನಾವು ಭಯಪಡಲಾರೆವು. ಟಿಎಂಸಿ ನಾಯಕರು ಹಾಗೂ ಪಶ್ಚಿಮಬಂಗಾಳದ ಜನರ ವಿರುದ್ಧ ಪಿತೂರಿಯ ಬಗ್ಗೆ ಎಚ್ಚರದಿಂದಿರಬೇಕು ಎಂದು ನಾವು ಪ್ರತಿಯೊಬ್ಬರನ್ನೂ ಆಗ್ರಹಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.
ಅಧಿಕಾರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ತನ್ನ ಕುಟುಂಬವನ್ನು ಹಾಗೂ ಅಕ್ರಮ ಸಂಪತ್ತನ್ನು ರಕ್ಷಿಸಲು ಬಿಜೆಪಿ ಸೇರಿದ ದ್ರೋಹಿಯೊಬ್ಬರು ಇದ್ದಾರೆ. ಚಾಕಲೇಟ್ ಬಾಂಬ್ ಸ್ಫೋಟಿಸುವ ಅವರ ಬೆದರಿಕೆಯನ್ನು ನಾವು ತಿರಸ್ಕಾರದಿಂದ ನೋಡುತ್ತೇವೆ ಎಂಬುದನ್ನು ನಾನು ಅವರಿಗೆ ಹೇಳುತ್ತೇನೆ ಎಂದರು.
ಟಿಎಂಸಿಯ ಮಾಜಿ ಸಚಿವರಾಗಿದ್ದ ಸುವೇಂಧು ಅಧಿಕಾರಿ ರಾಜ್ಯದಲ್ಲಿ 2021ರಲ್ಲಿ ನಡೆದ ವಿಧಾನ ಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.
‘‘ನಿಮಗೆ ಧೈರ್ಯಯವಿದ್ದರೆ ಸತ್ಯಗಳೊಂದಿಗೆ ಬನ್ನಿ. ಸಂಪೂರ್ಣ ಸುಳ್ಳು ನಿರೂಪಣೆಯನ್ನು ರೂಪಿಸಲು, ಸಂಪೂರ್ಣ ಪಿತೂರಿ ನಡೆಸಲು ನಿಮಗೆ ಕಾಲಾವಕಾಶ ಬೇಕಾಗುತ್ತದೆ ಎಂಬುದು ನನ್ನ ಊಹೆ. ಆದರೂ ನಾವು ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದೇವೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.