ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ: ʼಸುಳ್ಳು ಸುದ್ದಿʼ ಸಂಬಂಧ ಬಿಜೆಪಿ ನಾಯಕಿ, ಇಬ್ಬರು ವೈದ್ಯರಿಗೆ ನೋಟಿಸ್ ಜಾರಿಗೊಳಿಸಿದ ಪೊಲೀಸರು
ಕೋಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ತರಬೇತಿ ನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ ಎಂಬ ಆರೋಪದಲ್ಲಿ ನಟಿ, ರಾಜಕಾರಣಿ ಹಾಗೂ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ಹಾಗೂ ಇಬ್ಬರು ವೈದ್ಯರಾದ ಕುನಾಲ್ ಸರ್ಕಾರ್ ಮತ್ತು ಸುಬ್ರನೊ ಗೋಸ್ವಾಮಿ ಅವರಿಗೆ ಕೋಲ್ಕತ್ತಾ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆಯೊಳಗೆ ಪೊಲೀಸರೆದುರು ಹಾಜರಾಗುವಂತೆ ಅವರಿಗೆ ಈ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಆಗಸ್ಟ್ 9ರಂದು ಸರಕಾರಿ ಆಸ್ಪತ್ರೆಯಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ 31 ವರ್ಷದ ತರಬೇತಿ ನಿರತ ವೈದ್ಯ ವಿದ್ಯಾರ್ಥಿನಿಯೋರ್ವಳ ಮೃತದೇಹವು ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆಯು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದು, ಈ ನಡುವೆ ತಪ್ಪು ಮಾಹಿತಿಗಳೂ ಭಾರಿ ಪ್ರಮಾಣದಲ್ಲಿ ಹರಿದಾಡುತ್ತಿವೆ.
ಡಾ.ಗೋಸ್ವಾಮಿ ನೀಡಿರುವ ಹೇಳಿಕೆಗಳು ಹಾಗೂ ಹಲವಾರು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಅವರು ನಾನು ಮರಣೋತ್ತರ ಪರೀಕ್ಷಾ ವರದಿಯನ್ನು ನೋಡಿರುವುದಾಗಿ ಹೇಳಿಕೊಂಡಿದ್ದರು. ಆ ಮರಣೋತ್ತರ ಪರೀಕ್ಷಾ ವರದಿಯಲ್ಲಿ 150 ಗ್ರಾಂನಷ್ಟು ವೀರ್ಯ, ಸೊಂಟದ ಮೂಳೆ ಮುರಿದಿರುವ ಆಘಾತಕಾರಿ ಅಂಶ ಕಂಡು ಬಂದಿದ್ದು, ಇದು ಸಾಮೂಹಿಕ ಅತ್ಯಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿಕೊಂಡಿದ್ದರು.
ಆದರೆ, ಈ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ಕೋಲ್ಕತ್ತಾ ಪೊಲೀಸರು, ಇವು ಸುಳ್ಳು ಸುದ್ದಿಗಳು ಎಂದು ಸ್ಪಷ್ಟನೆ ನೀಡಿದ್ದಾರೆ. ಅಧಿಕೃತ ಪ್ರಕಟಣೆಯ ಪ್ರಕಾರ, ಅಂತಹ ಯಾವುದೇ ಅಂಶಗಳು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ಹರಡಿ ಸಾರ್ವಜನಿಕರ ಆಕ್ರೋಶಕ್ಕೆ ತುಪ್ಪ ಸುರಿದಿರುವ ಈ ವದಂತಿಗಳು ಆಧಾರರಹಿತ ಮತ್ತು ದಾರಿ ತಪ್ಪಿಸುವಂಥವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆಯ ಭಾವಚಿತ್ರ ಹಾಗೂ ಹೆಸರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಲಾಕೆಟ್ ಚಟರ್ಜಿ ಅವರ ಕ್ರಮವನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ನಡುವೆ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಬದಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡುವುದನ್ನು ಕೋಲ್ಕತ್ತಾ ಪೊಲೀಸರು ಆದ್ಯತೆಯನ್ನಾಗಿಸಿಕೊಂಡಿದ್ದಾರೆ ಎಂದು ಲಾಕೆಟ್ ಚಟರ್ಜಿ ಆರೋಪಿಸಿದ್ದಾರೆ.