ಚುನಾವಣೆಯಲ್ಲಿ ಅಕ್ರಮವೆಸಗಲು ಬಿಜೆಪಿಯಿಂದ ಜಿಲ್ಲಾಧಿಕಾರಿಗಳ ಮೇಲೆ ಬಹಿರಂಗವಾಗಿಯೇ ಒತ್ತಡ ಹೇರುವ ಯತ್ನ: ಟಿಎಂಸಿ ಸಂಸದ ಸಾಕೇತ್ ಗೋಖಲೆ ಆರೋಪ

Update: 2024-07-01 07:32 GMT

ಸಾಕೇತ್ ಗೋಖಲೆ (Photo: ANI)

ಕೋಲ್ಕತ್ತಾ: ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ಅಸಹಕಾರದಿಂದಾಗಿ ರಾಜ್ಯದಲ್ಲಿ ಪಕ್ಷವು ಹೀನಾಯ ಪ್ರದರ್ಶನ ತೋರುವಂತಾಯಿತು ಎಂದು ಬಿಜೆಪಿಯ ಆಂತರಿಕ ವರದಿಯಲ್ಲಿ ಹೇಳಲಾಗಿದೆ ಎಂಬ ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಟಿಎಂಸಿಯ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಶಾಸಕರು, ಸಚಿವರು ಹಾಗೂ ಜಿಲ್ಲಾ ಜಿಲ್ಲಾಧಿಕಾರಿಗಳ ಅಸಹಕಾರದಿಂದ ಉತ್ತರ ಪ್ರದೇಶದಲ್ಲಿನ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಯಿತು: ಬಿಜೆಪಿ ಕಾರ್ಯಪಡೆಯ ಶೋಧ" ಎಂಬ ಶೀರ್ಷಿಕೆಯಡಿ ಮುದ್ರಣಗೊಂಡಿರುವ ವರದಿಯೊಂದನ್ನು ಹಂಚಿಕೊಂಡಿರುವ ಗೋಖಲೆ, ಬಿಜೆಪಿಯು ತನ್ನ ಪರವಾಗಿ ಚುನಾವಣೆಯನ್ನು ತಿರುಚುವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿದೆ ಎಂದು ಆರೋಪಿಸಿದ್ದಾರೆ.

ಈ ವರದಿಯು ಬಿಜೆಪಿ ಕಾರ್ಯಪಡೆಯ ಶೋಧನೆಯನ್ನು ಆಧರಿಸಿದ್ದು, ಈ ವರದಿಯಲ್ಲಿ ಉತ್ತರ ಪ್ರದೇಶದಲ್ಲಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹಿನ್ನಡೆಗೆ ಹಲವು ಕಾರಣಗಳನ್ನು ಗುರುತಿಸಿತ್ತು. 40 ನಾಯಕರನ್ನೊಳಗೊಂಡಿದ್ದ ಈ ಕಾರ್ಯಪಡೆಯು, ತನ್ನ ಶೋಧನಾ ವರದಿಯನ್ನು ಹೈಕಮಾಂಡ್‌ನೊಂದಿಗೆ ಹಂಚಿಕೊಂಡಿತ್ತು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಗೋಖಲೆ, "ಇದು ಆಳಕ್ಕಿಳಿದಷ್ಟೂ ನಿರ್ಲಜ್ಜ ಸಂಗತಿಯಾಗಿದೆ. ಉತ್ತರ ಪ್ರದೇಶದಲ್ಲಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳನ್ನು ಪರಾಮರ್ಶೆ ಮಾಡಲು ರಚಿಸಲಾಗಿದ್ದ ಸಮಿತಿಯು, ಬಿಜೆಪಿಯ ಸೋಲಿಗೆ ಜಿಲ್ಲಾಧಿಕಾರಿಗಳ ಅಸಹಕಾರ ಕಾರಣ ಎಂದು ಆಂತರಿಕ ವರದಿ ನೀಡಿದೆ. ಜಿಲ್ಲಾಧಿಕಾರಿಗಳು ಎಂದೂ ಕರೆಯಲಾಗುವ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ತಮ್ಮ ವ್ಯಾಪ್ತಿಯ ಚುನಾವಣಾಧಿಕಾರಿಗಳೂ ಆಗಿರುತ್ತಾರೆ" ಎಂದು ಬರೆದುಕೊಂಡಿದ್ದಾರೆ.

"ಮೋದಿ ನೇಮಕ ಮಾಡಿದ್ದ ಚುನಾವಣಾ ಆಯೋಗದ ಮೂಗಿನಡಿ ಬಿಜೆಪಿಯು ಬಹಿರಂಗವಾಗಿಯೇ ಚುನಾವಣಾ ಅಕ್ರಮವೆಸಗಲು ಹಾಗೂ ಚುನಾವಣಾ ಫಲಿತಾಂಶವನ್ನು ತಿರುಚಲು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿರುವುದು ಸ್ಪಷ್ಟವಾಗಿದೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೆಯಲ್ಲಿ ಸಹಕಾರ ನೀಡದ ಹಲವು ಜಿಲ್ಲಾಧಿಕಾರಿಗಳನ್ನೀಗ ವರ್ಗಾವಣೆ ಮಾಡಲಾಗಿದೆ ಎಂದೂ ಅವರು ದೂರಿದ್ದಾರೆ.

ಉತ್ತರ ಪ್ರದೇಶದಲ್ಲಿನ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಪ್ರದರ್ಶನಕ್ಕೆ ಶಾಸಕರ ವಿಶ್ವಾಸ ದ್ರೋಹ, ಸರಕಾರಿ ಅಧಿಕಾರಿಗಳ ಅಸಹಕಾರ ಹಾಗೂ ಅಭ್ಯರ್ಥಿಗಳು ಮತ್ತು ಮತದಾರರ ನಡುವೆ ಸಂಪರ್ಕ ಕಡಿದು ಹೋಗಿದ್ದದ್ದು ಕಾರಣ ಎಂದು ಬಿಜೆಪಿ ಕಾರ್ಯಪಡೆಯು ಆಂತರಿಕ ವರದಿ ನೀಡಿದೆ ಎಂದು theprint.in ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News