ನಟ ಅಮಿತಾಭ್‌ ಬಚ್ಚನ್‌, ಫ್ಲಿಪ್‌ಕಾರ್ಟ್‌ ವಿರುದ್ಧ ವ್ಯಾಪಾರಿಗಳ ಒಕ್ಕೂಟದಿಂದ ದೂರು

Update: 2023-10-04 10:17 GMT

 ಅಮಿತಾಭ್‌ ಬಚ್ಚನ್‌ (PTI)

ಬೆಂಗಳೂರು: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಜಾಹೀರಾತಿನಲ್ಲಿ ಚಿಲ್ಲರೆ ವ್ಯಾಪಾರಸ್ಥರನ್ನು ಅವಮಾನಿಸಲಾಗಿದೆ ಎಂಬ ಆರೋಪ ಬಾಲಿವುಡ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ವಿರುದ್ಧ ಕೇಳಿ ಬಂದಿದೆ.

ಫ್ಲಿಪ್‌ಕಾರ್ಟ್ ಮತ್ತು ಅಮಿತಾಬ್ ಬಚ್ಚನ್ ವಿರುದ್ಧ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.

"ಮೊಬೈಲ್ ಫೋನ್‌ಗಳ ಡೀಲ್‌ಗಳು ಮತ್ತು ರಿಯಾಯಿತಿಗಳು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿಲ್ಲ ಕೇವಲ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯವಿರುತ್ತವೆ" ಎಂಬ ತಪ್ಪುದಾರಿಗೆಳೆಯುವ ಮತ್ತು ನಿಷ್ಪ್ರಯೋಜಕ ಹೇಳಿಕೆಯನ್ನು ಅಮಿತಾಭ್‌ ಬಚ್ಚನ್‌ ಅವರು ಬಹಿರಂಗವಾಗಿ ಅನುಮೋದಿಸಿದ್ದಾರೆ ಎಂದು ಸಿಎಐಟಿ ಹೇಳಿದೆ.

ಜಾಹೀರಾತನ್ನು ತೆಗೆದುಹಾಕಲು ಸಿಎಐಟಿ ಆಗ್ರಹಿಸಿದ್ದು, ಅಲ್ಲದೆ, ಫ್ಲಿಪ್‌ಕಾರ್ಟ್ ಮತ್ತು ಬಚ್ಚನ್‌ ರಿಗೆ ತಲಾ 10 ಲಕ್ಷ ರೂಪಾಯಿ ದಂಡವನ್ನು ವಿಧಿಸುವಂತೆ ಸಚಿವಾಲಯವನ್ನು ಕೇಳಿದೆ.

ಫ್ಲಿಪ್‌ಕಾರ್ಟ್ ಜಾಹೀರಾತಿನ ಮೂಲಕ ಅನ್ಯಾಯದ ವ್ಯಾಪಾರದಲ್ಲಿ ತೊಡಗಿದೆ ಎಂದು ಸಂಸ್ಥೆ ಹೇಳಿದೆ.

"ತಪ್ಪುದಾರಿಗೆಳೆಯುವ ಜಾಹೀರಾತುಗಳು ಕೇವಲ ಅನೈತಿಕ ಮಾತ್ರವಲ್ಲ, ಅದು ಸ್ಪರ್ಧೆಯನ್ನು ವಿರೂಪಗೊಳಿಸುತ್ತವೆ ಮತ್ತು ಗ್ರಾಹಕರ ಆಯ್ಕೆಯನ್ನು ಗೊಂದಲಕ್ಕೀಡುಮಾಡುತ್ತದೆ. ಅಮಿತಾಬ್ ಅವರ ಈ ಜಾಹೀರಾತು ಅನೈತಿಕವಾಗಿದೆ, ಈ ಜಾಹಿರಾತು ಸುಳ್ಳು ಮಾತ್ರವಲ್ಲ ತಪ್ಪು ಮಾಹಿತಿ ನೀಡುವ ಮೂಲಕ ಸ್ಪರ್ಧೆಯನ್ನು ತಿರುಚಿ, ಮೊಬೈಲ್ ಫೋನ್‌ಗಳನ್ನು ಖರೀದಿಸಲು ಚಿಲ್ಲರೆ ವ್ಯಾಪಾರಿಗಳ ಬದಲು ಫ್ಲಿಪ್‌ಕಾರ್ಟ್‌ ಮೊರೆ ಹೋಗುವಂತೆ ಗ್ರಾಹಕರನ್ನು ಗೊಂದಲಕ್ಕೆ ತಳ್ಳುತ್ತದೆ” ಎಂದು ಅದು ಹೇಳಿದೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊಬೈಲ್ ಫೋನ್‌ಗಳು ಲಭ್ಯವಿರುವ ಬೆಲೆಗೆ ಸಂಬಂಧಿಸಿದಂತೆ ಫ್ಲಿಪ್‌ಕಾರ್ಟ್ ಸಾರ್ವಜನಿಕರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು CAIT ಹೇಳಿದೆ. ಜಾಹೀರಾತು "ಸತ್ಯ ಮತ್ತು ಪ್ರಾಮಾಣಿಕ ಪ್ರಾತಿನಿಧ್ಯವನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ತಪ್ಪಾಗಿದೆ, ದುರುದ್ದೇಶಪೂರಿತ, ತಪ್ಪುದಾರಿಗೆಳೆಯುವ ಮತ್ತು ಕುತಂತ್ರದಿಂದ ಕೂಡಿದೆ" ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News