ರಾಜೀನಾಮೆಗೆ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರ ನಿರ್ಧಾರ
ಕೋಲ್ಕತಾ : ಕಲ್ಕತ್ತಾ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಅಭಿಜಿತ ಗಂಗೋಪಾಧ್ಯಾಯ ಅವರು ಮಾ.5ರಂದು ತಾನು ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ರವಿವಾರ ತಿಳಿಸಿದರು.
2022ರಲ್ಲಿ ನ್ಯಾ.ಗಂಗೋಪಾಧ್ಯಾಯ ಅವರು, ಪಶ್ಚಿಮ ಬಂಗಾಳದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಳಲ್ಲಿ ಅಕ್ರಮಗಳ ಆರೋಪ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದ್ದರು.
ತನ್ನ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರಿಗೆ ಕಳುಹಿಸುವುದಾಗಿ ರವಿವಾರ ತಿಳಿಸಿದ ನ್ಯಾ.ಗಂಗೋಪಾಧ್ಯಾಯ ಅವರು, ‘ಈ ದಿನಗಳಲ್ಲಿ ನ್ಯಾಯದಾನದ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ನನಗೆ ಪಟ್ಟಿ ಮಾಡಲಾಗಿರುವ ಎಲ್ಲ ಪ್ರಕರಣಗಳನ್ನು ತೆಗೆದುಹಾಕುತ್ತೇನೆ ಅಷ್ಟೇ ’ ಎಂದು ಹೇಳಿದರು.
ರಾಜೀನಾಮೆ ನೀಡಿದ ಬಳಿಕ ತಾನು ರಾಜಕೀಯವನ್ನು ಸೇರಲಿದ್ದೇನೆ ಎಂಬ ಊಹಾಪೋಹಗಳನ್ನೂ ನ್ಯಾ.ಗಂಗೋಪಾಧ್ಯಾಯ ತಳ್ಳಿಹಾಕಿದರು. ಅವರು ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ತಮ್ಲುಕ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹರಡಿಕೊಂಡಿವೆ. 2009-2014ರ ಅವಧಿಯಲ್ಲಿ ತಮ್ಲುಕ್ ಲೋಕಸಭಾ ಕ್ಷೇತ್ರವನ್ನು ಆಗ ಟಿಎಂಸಿ ನಾಯಕರಾಗಿದ್ದ ಸುವೇಂದು ಅಧಿಕಾರಿ ಅವರು ಪ್ರತಿನಿಧಿಸಿದ್ದರು. ಅಧಿಕಾರಿ 2020, ಡಿಸೆಂಬರ್ ನಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರಿದ್ದಾರೆ.
ತನ್ನ ರಾಜೀನಾಮೆ ಮತ್ತು ತನ್ನ ಮುಂದಿನ ಕ್ರಮಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಮಂಗಳವಾರ ಉತ್ತರಿಸುವುದಾಗಿ ನ್ಯಾ.ಗಂಗೋಪಾಧ್ಯಾಯ ತಿಳಿಸಿದರು.
ಕಳೆದ ವರ್ಷ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಬಾಕಿಯುಳಿದಿರುವ ಪ್ರಕರಣವೊಂದರ ಕುರಿತು ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಬಳಿಕ ನ್ಯಾ.ಗಂಗೋಪಾಧ್ಯಾಯ ಸರ್ವೋಚ್ಛ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಸಿಜೆಐ ಚಂದ್ರಚೂಡ್ ಅವರು ಪ್ರಕರಣವನ್ನು ಬೇರೆ ನ್ಯಾಯಾಧೀಶರಿಗೆ ಮರುನಿಯೋಜಿಸುವಂತೆ ಕಲ್ಕತ್ತಾ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಆದೇಶಿಸಿದ್ದರು.