ಬಾಕಿ ಪ್ರಕರಣಗಳ ವಿವರ ಹಂಚಿಕೆ: IRS ಅಧಿಕಾರಿ ಹಾಗೂ 6 ಲೆಕ್ಕಪರಿಶೋಧಕರ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು

Update: 2025-02-06 22:50 IST
ಬಾಕಿ ಪ್ರಕರಣಗಳ ವಿವರ ಹಂಚಿಕೆ: IRS ಅಧಿಕಾರಿ ಹಾಗೂ 6 ಲೆಕ್ಕಪರಿಶೋಧಕರ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು

Photo - PTI

  • whatsapp icon

ಹೊಸದಿಲ್ಲಿ: ಮೌಲ್ಯಮಾಪನ ವ್ಯವಸ್ಥೆಯನ್ನು ಬದಿಗಿರಿಸಿ, ಬಾಕಿ ಇರುವ ಮೌಲ್ಯಮಾಪನಗಳ ಸೂಕ್ಷ್ಮ ದತ್ತಾಂಶಗಳನ್ನು ಲೆಕ್ಕಪರಿಶೋಧಕರ ಗುಂಪೊಂದರೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಓರ್ವ IRS ಅಧಿಕಾರಿ ಹಾಗೂ ಆದಾಯ ತೆರಿಗೆ ಇಲಾಖೆಯ ಇನ್ನಿತರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ನಂತರ, ಗುರುವಾರ ದೇಶಾದ್ಯಂತ 18 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ, ಮುಂಬೈ, ಥಾಣೆ, ಪಶ್ಚಿಮ ಚಂಪಾರಣ್ (ಬಿಹಾರ), ಬೆಂಗಳೂರು, ಕೊಟ್ಟಾಯಂ (ಕೇರಳ) ಹಾಗೂ ಇನ್ನಿತರ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಿಬಿಐ, ದೋಷಾರೋಪಕ್ಕೆ ಪೂರಕವಾಗುವಂಥ ದಾಖಲೆಗಳು, ಬಾಕಿ ಪಾವತಿಯ ಸಾಕ್ಷ್ಯಾಧಾರಗಳು ಹಾಗೂ ಕೆಲವು ಡಿಜಿಟಲ್ ಇಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿತು ಎಂದು ಸಿಬಿಐ ಪ್ರಕಟನೆಯಲ್ಲಿ ತಿಳಿಸಿದೆ.

ಹೊಸದಿಲ್ಲಿಯ ಝಂದೇನ್ ವಾಲನ್ ಕಚೇರಿಯಲ್ಲಿ ನಿಯೋಜಿತರಾಗಿದ್ದ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ವಿಜಯೇಂದ್ರ ಆರ್., ಲೆಕ್ಕಪರಿಶೋಧಕ ದಿನೇಶ್ ಕುಮಾರ್ ಅಗರ್ವಾಲ್, ಆದಾಯ ತೆರಿಗೆ ನಿರೀಕ್ಷಕರಾದ ದಿನೇಶ್ ಕುಮಾರ್ ವರ್ಮ ಹಾಗೂ ಬಿನಾಯಕ್ ಶರ್ಮರೊಂದಿಗೆ ಇನ್ನೂ ಐದು ಮಂದಿ ಲೆಕ್ಕಪರಿಶೋಧಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.

ಶಿವರತನ್ ಮಂಗೇಲಾಲ್ ಸಿಂಗ್ರೋಡಿಯ, ಭವೇಶ್ ಪರ್ಶೋತ್ತಮ್ ಭಾಯಿ ರಖೋಲಿಯ, ಪ್ರತೀಕ್ ಲೆನಿನ್, ಮಲಿಕ್ ಗಿರೀಶ್ ಆನಂದ್ ಹಾಗೂ ಸುಶೀಲ್ ಕುಮಾರ್ ಪ್ರಕರಣ ದಾಖಲಾಗಿರುವ ಇನ್ನಿತರ ಲೆಕ್ಕ ಪರಿಶೋಧಕರಾಗಿದ್ದಾರೆ.

“ಇತ್ತೀಚೆಗೆ ತೆರಿಗೆ ಪಾವತಿದಾರರು ಹಾಗೂ ಆರ್ಥಿಕತೆಯ ಲಾಭಕ್ಕಾಗಿ ಸರಕಾರವು ನೇರ ತೆರಿಗೆ ಆಡಳಿತದಲ್ಲಿ ಸರಣಿ ಭವಿಷ್ಯದ ಸುಧಾರಣೆಗಳನ್ನು ಪರಿಚಯಿಸಿತ್ತು. “ಮುಖರಹಿತ ಮೌಲ್ಯಮಾಪನ ಯೋಜನೆ” ಅಂತಹ ಸುಧಾರಣೆಗಳ ಪೈಕಿ ಒಂದಾಗಿದ್ದು, ಈ ವ್ಯವಸ್ಥೆಯಡಿ ತೆರಿಗೆ ಪಾವತಿದಾರರು ಹಾಗೂ ತೆರಿಗೆ ಅಧಿಕಾರಿಗಳ ನಡುವೆ ಯಾವುದೇ ನೇರ ಸಂಪರ್ಕವಿರುವುದಿಲ್ಲ” ಎಂದು ಪತ್ರಿಕಾ ಪ್ರಕಟನೆಯಲ್ಲಿ ಸಿಬಿಐ ವಕ್ತಾರರು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ದೂರನ್ನು ಆಧರಿಸಿ ದಾಖಲಾಗಿದ್ದ ಪ್ರಾಥಮಿಕ ವಿಚಾರಣೆಯನ್ನು ಮುಕ್ತಾಯಗೊಳಿಸಿದ ನಂತರ, ಈ ಎಫ್ಐಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News