ಬಿಜೆಪಿ ನಾಯಕರನ್ನು ಸುಳ್ಳು ಪ್ರಯತ್ನಗಳಲ್ಲಿ ಸಿಲುಕಿಸಲು ಯತ್ನ : ಮಹಾರಾಷ್ಟ್ರದ ಮಾಜಿ ಗೃಹಸಚಿವ ದೇಶ್ ಮುಖ್ ವಿರುದ್ಧ ಸಿಬಿಐ ಪ್ರಕರಣ
ಹೊಸದಿಲ್ಲಿ : ತನ್ನ ಅಧಿಕಾರಾವಧಿಯಲ್ಲಿ ಬಿಜೆಪಿ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸಿದ್ದರು ಎಂಬ ಆರೋಪದಲ್ಲಿ ಸಿಬಿಐ ಬುಧವಾರ ಮಹಾರಾಷ್ಟ್ರದ ಮಾಜಿ ಗೃಹಸಚಿವ ಹಾಗೂ ಹಿರಿಯ ಎನ್‌ಸಿಪಿ ನಾಯಕ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಆದರೆ ಸಿಬಿಐ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿರುವ ದೇಶ್ ಮುಖ್,ತನ್ನ ವಿರುದ್ಧದ ಷಡ್ಯಂತ್ರಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.
ದೇಶ್ ಮುಖ್ ಈಗಾಗಲೇ ಭ್ರಷ್ಟಾಚಾರದ ಆರೋಪಗಳಲ್ಲಿ ಸಿಬಿಐ ತನಿಖೆಗೊಳಗಾಗಿದ್ದು, ಜಾರಿ ನಿರ್ದೇಶನಾಲಯವು ದಾಖಲಿಸಿರುವ ಪ್ರಕರಣವೊಂದನ್ನೂ ಎದುರಿಸುತ್ತಿದ್ದಾರೆ.
‘ಸಿಬಿಐ ನನ್ನ ವಿರುದ್ಧ ಇನ್ನೊಂದು ಆಧಾರರಹಿತ ಪ್ರಕರಣವನ್ನು ದಾಖಲಿಸಿದೆ. ಜನಾದೇಶವನ್ನು ನೋಡಿ ಫಡ್ನವೀಸ್ ಆತಂಕಗೊಂಡಿರುವುದರಿಂದ ನನ್ನ ವಿರುದ್ಧ ಈ ಷಡ್ಯಂತ್ರವು ಹುಟ್ಟಿಕೊಂಡಿದೆ. ಇಂತಹ ಬೆದರಿಕೆಗಳು ಮತ್ತು ಒತ್ತಡಗಳಿಗೆ ನಾನು ಹೆದರುವುದಿಲ್ಲ’ಎಂದು ದೇಶ್ ಮುಖ್ ಹೇಳಿದರು.