ಅಕ್ರಮ ಮರಳು ಗಣಿಗಾರಿಕೆ: ಲಾಲು ಪ್ರಸಾದ್ ಆಪ್ತ ಸಹಾಯಕನಿಗೆ ಸಿಬಿಐ ಸಮನ್ಸ್
ಪಾಟ್ನಾ: ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿ ಲಾಲು ಪ್ರಸಾದ್ ಅವರ ಆಪ್ತ ಸಹಾಯಕ ಹಾಗೂ ಮಾಜಿ ಶಾಸಕ ಅರುಣ್ ಯಾದವ್ ಗೆ ಸಿಬಿಐ ಶನಿವಾರ ಸಮನ್ಸ್ ಜಾರಿ ಮಾಡಿದೆ.
ಭೂಮಿಗಾಗಿ ಉದ್ಯೋಗ ಹಗರಣದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಹಾಗೂ ಅವರ ಪುತ್ರ, ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರಿಗೆ ಜಾರಿ ನಿರ್ದೇಶನಾಲಯ ಹೊಸ ಸಮನ್ಸ್ ಜಾರಿಗೊಳಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಭೋಜ್ಪುರ ಜಿಲ್ಲೆಯ ಆಗೀಆಂವ್ ಗ್ರಾಮದಲ್ಲಿರುವ ಯಾದವ್ ಅವರ ಪೂರ್ವಜರ ನಿವಾಸಕ್ಕೆ ಸಿಬಿಐ ತಂಡ ತಲುಪಿತು ಹಾಗೂ ಮನೆಯಲ್ಲಿದ್ದ ಅವರ ಪತ್ನಿ, ಆರ್ಜೆಡಿ ಶಾಸಕಿ ಕಿರಣ್ ದೇವಿ ಅವರಿಗೆ ನೋಟಿಸು ಹಸ್ತಾಂತರಿಸಿತು ಎಂದು ಮೂಲಗಳು ತಿಳಿಸಿವೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಹೆಸರು ಕೇಳಿ ಬಂದ ಬಳಿಕ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅರುಣ್ ಯಾದವ್ ಅವರಿಗೆ ಟಿಕೆಟ್ ನೀಡಲು ಆರ್ಜೆಡಿ ನಿರಾಕರಿಸಿತ್ತು.
ರಾಜ್ಯದ ಅರಾದಿಂದ ಪಾಟ್ನಾ ಜಿಲ್ಲೆಗಳ ವರೆಗೆ ವ್ಯಾಪಿಸಿಕೊಂಡಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪವನ್ನು ಯಾದವ್ ಎದುರಿಸುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಎಂಎಲ್ಸಿ ರಾಧಾ ಚರಣ್ ಸೇಠ್ ಅವರ ವಿರುದ್ಧ ಸಿಬಿಐ ಕ್ರಮ ತೆಗೆದುಕೊಂಡಾಗ ಯಾದವ್ ಅವರ ಹೆಸರು ಕೇಳಿ ಬಂದಿತ್ತು. ಸಿಬಿಐ ಯಾದವ್ ಅವರ ವಿರುದ್ಧ ಸಾಕ್ಷ್ಯ ಪತ್ತೆ ಮಾಡಿತ್ತು.