ಪೂಜಾಸ್ಥಳಗಳ ಕಾಯ್ದೆ ಕುರಿತು ಚಂದ್ರಚೂಡ್ ಹೇಳಿಕೆ ಎಲ್ಲ ವಿವಾದಗಳಿಗೆ ಮೂಲ : ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್
ಹೊಸದಿಲ್ಲಿ : ಮೇ 2022ರಲ್ಲಿ ಪೂಜಾಸ್ಥಳಗಳ ಕಾಯ್ದೆ ಕುರಿತು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರ ಹೇಳಿಕೆಗಳು ಪೂಜಾಸ್ಥಳಗಳಿಗೆ ಸಂಬಂಧಿಸಿದ ಸರಣಿ ವಿವಾದಗಳಿಗೆ ಮೂಲವಾಗಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಪೂಜಾಸ್ಥಳಗಳ ಕಾಯ್ದೆಯು ಧಾರ್ಮಿಕ ಸ್ಥಳದ ಸ್ವರೂಪ ಬದಲಾವಣೆಯನ್ನು ನಿಷೇಧಿಸಿದ್ದರೂ, ಕೇವಲ ಸ್ಥಳವೊಂದರ ಧಾರ್ಮಿಕ ಲಕ್ಷಣವನ್ನು ಖಚಿತಪಡಿಸಿಕೊಳ್ಳುವುದು ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂದು ಚಂದ್ರಚೂಡ್ ಹೇಳಿದ್ದರು.
ಲೇಖಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ರಾಜ್ ಮೋಹನ್ ಗಾಂಧಿಯವರು ಸದನದಲ್ಲಿ ಪೂಜಾಸ್ಥಳಗಳ ಮಸೂದೆ ಕುರಿತು ಮಾಡಿದ್ದ ಭಾಷಣವನ್ನು ರಮೇಶ್ ಶನಿವಾರ ನೆನಪಿಸಿಕೊಂಡರು. ಇತಿಹಾಸದ ತಪ್ಪುಗಳನ್ನು ಸೇಡಿನ ಭಾವನೆಯೊಂದಿಗೆ ಸರಿಪಡಿಸಲು ಬಯಸುವವರು ಕೇವಲ ವಿನಾಶ ಮತ್ತು ಹೆಚ್ಚೆಚ್ಚು ವಿನಾಶವನ್ನುಂಟು ಮಾಡುತ್ತಾರೆ ಎನ್ನುವುದು ಹಿಂದು ಮಹಾಕಾವ್ಯ ಮಹಾಭಾರತದ ಪ್ರಮುಖ ಪಾಠವಾಗಿದೆ ಎಂದು ಗಾಂಧಿ ಆಗ ಹೇಳಿದ್ದರು.
ಗಾಂಧಿಯವರ ಭಾಷಣವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು, ಇತಿಹಾಸ ಮತ್ತು ರಾಜಕೀಯ ಕುರಿತಂತೆ ಶ್ರೇಷ್ಠ ಭಾಷಣವಾಗಿತ್ತು ಎಂದು ರಮೇಶ್ ಹೇಳಿದರು.
ಕಾಂಗ್ರೆಸ್ ಪೂಜಾಸ್ಥಳಗಳ ಕಾಯ್ದೆಗೆ ತಾನು ಬದ್ಧವಾಗಿದ್ದೇನೆ ಎಂದು ಶುಕ್ರವಾರ ಹೇಳಿತ್ತು. ಆಡಳಿತ ಬಿಜೆಪಿ ಈ ಕಾಯ್ದೆಯನ್ನು ನಿರ್ಲಜ್ಜವಾಗಿ ಉಲ್ಲಂಘಿಸುತ್ತಿದೆ ಎಂದು ಅದು ಆರೋಪಿಸಿತ್ತು.
ಕಳೆದ ವಾರ ರಾಜಸ್ಥಾನದ ಅಜ್ಮೇರ್ ದರ್ಗಾ ಮತ್ತು ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಶಾಹಿ ಜುಮಾ ಮಸೀದಿಯ ಮೇಲೆ ಹಕ್ಕು ಪ್ರತಿಪಾದಿಸಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಈ ಹೇಳಿಕೆ ಹೊರಬಿದ್ದಿತ್ತು.
13ನೇ ಶತಮಾನದಲ್ಲಿ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯವರ ದರ್ಗಾವನ್ನು ಶೈವ ದೇವಸ್ಥಾನವನ್ನು ನೆಲಸಮಗೊಳಿಸಿ ನಿರ್ಮಿಸಲಾಗಿತ್ತು ಎಂದು ಪ್ರತಿಪಾದಿಸಿರುವ ಅರ್ಜಿಯೊಂದನ್ನು ರಾಜಸ್ಥಾನದ ನ್ಯಾಯಾಲಯವೊಂದು ಬುಧವಾರ ವಿಚಾರಣೆಗೆ ಅಂಗೀಕರಿಸಿತ್ತು. ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಸಲ್ಲಿಸಿರುವ ಅರ್ಜಿಯಲ್ಲಿ ಅಜ್ಮೇರ್ ಶರೀಫ್ ದರ್ಗಾವನ್ನು ಭಗವಾನ್ ಶ್ರೀ ಸಂಕಟಮೋಚನ ಮಹಾದೇವ ವಿರಾಜಮಾನ್ ಮಂದಿರ ಎಂದು ಘೋಷಿಸುವಂತೆ ಕೋರಲಾಗಿದೆ.
ನ.19ರಂದು ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿಗೆ ಹಿಂದುಗಳ ಪ್ರವೇಶಕ್ಕೆ ಅವಕಾಶ ನೀಡಬೇಕು ಮತ್ತು ಅದರ ಸರ್ವೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸಿತ್ತು. 1526ರಲ್ಲಿ ಮುಘಲ್ ದೊರೆ ಬಾಬರ್ ಕಲ್ಕಿ ದೇವತೆಗೆ ಅರ್ಪಿತವಾಗಿದ್ದ ಶತಮಾನಗಳಷ್ಟು ಹಳೆಯ ಶ್ರೀ ಹರಿ ಹರ ದೇವಸ್ಥಾನವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಅರ್ಜಿದಾರರು ವಾದಿಸಿದ್ದಾರೆ.
ನ.24ರಂದು ಮಸೀದಿಯ ಸರ್ವೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದು ಐವರು ಯುವಕರು ಮೃತಪಟ್ಟಿದ್ದರು.