ಛತ್ತೀಸ್ ಗಢ | ‘ದೃಶ್ಯಂ’ ಚಿತ್ರ ನೋಡಿ ತನ್ನ ಪತ್ನಿಯನ್ನು ಕೊಂದ ವ್ಯಕ್ತಿ ಈಗ ಪೊಲೀಸರ ಅತಿಥಿ!
ಕವರ್ಧಾ (ಛತ್ತೀಸ್ ಗಢ): ಸಿನಿಮಾ ಮಾಧ್ಯಮ ಸಮಾಜದ ಮೇಲೆ ಗಾಢ ಪರಿಣಾಮ ಬೀರುವ ಸಶಕ್ತ ಮಾಧ್ಯಮ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಈ ಮಾತಿಗೆ ನಿದರ್ಶನವೆಂಬಂತೆ ‘ದೃಶ್ಯಂ’ ಚಿತ್ರ ನೋಡಿ ತನ್ನ ಪತ್ನಿಯನ್ನೇ ಹತ್ಯೆಗೈದಿರುವ ವ್ಯಕ್ತಿಯೊಬ್ಬ ಈಗ ಛತ್ತೀಸ್ ಗಢ ಪೊಲೀಸರ ಅತಿಥಿಯಾಗಿದ್ದಾನೆ.
ತನ್ನ 28 ವರ್ಷದ ಪತ್ನಿಯನ್ನು ತೊರೆದು ಹೋಗಿದ್ದ ವ್ಯಕ್ತಿಯೊಬ್ಬ, ಆಕೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ಪರಪುರುಷನೊಂದಿಗೆ ಸೇರಿ, ಆಕೆಯನ್ನು ಹತ್ಯೆಗೈದು, ಆಕೆಯ ಮೃತ ದೇಹವನ್ನು ಅರಣ್ಯದಲ್ಲಿ ಹೂತು ಹಾಕಿರುವ ಘಟನೆ ಛತ್ತೀಸ್ ಗಢದ ಕಬೀರ್ ಧಾಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಈ ಅಪರಾಧ ಕೃತ್ಯವನ್ನು ಕೈಗೊಳ್ಳುವುದಕ್ಕೂ ಮುನ್ನ, ಅವರಿಬ್ಬರೂ ಮೃತ ದೇಹವನ್ನು ಹೇಗೆ ಬಚ್ಚಿಡಬೇಕು ಹಾಗೂ ಬಂಧನದಿಂದ ಪಾರಾಗಬೇಕು ಎಂದು ಅರಿಯಲು ಬಾಲಿವುಡ್ ಸಿನಿಮಾವಾದ ‘ದೃಶ್ಯಂ’ ಅನ್ನು ವೀಕ್ಷಿಸಿದ್ದರು ಎಂದು ಅವರು ಹೇಳಿದ್ದಾರೆ.
ಈ ಘಟನೆಯು ಜುಲೈ 19ರಂದು ನಡೆದಿದ್ದು, ರವಿವಾರ ಇಬ್ಬರು ಆರೋಪಿಗಳಾದ ಪತ್ನಿಯಿಂದ ದೂರಾಗಿದ್ದ ಪತಿ ಲುಕೇಶ್ ಸಾಹು (29) ಹಾಗೂ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಪರಪುರುಷ ರಾಜಾ ರಾಮ್ ಸಾಹು (26) ಎಂಬುವವರನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.
ಜುಲೈ 22ರಂದು ಕಲ್ಯಾಣ್ ಪುರ್ ನಿವಾಸಿ ರಾಮ್ ಕಿಲಾವನ್ ಸಾಹು ಲೊಹಾರಾ ಪೊಲೀಸ್ ಠಾಣೆಯಲ್ಲಿ ತಮ್ಮ ಪುತ್ರಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಕಬೀರ್ ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಕ್ರಮ ಸಂಬಂಧದ ಶಂಕೆಯಲ್ಲಿ ಮಹಿಳೆಯ ಪತಿಯು ಮೂರು ವರ್ಷಗಳ ಹಿಂದೆ ಆಕೆಯನ್ನು ತೊರೆದಿದ್ದರಿಂದ, ಆಕೆ ಕಲ್ಯಾಣ್ ಪುರ್ ನಲ್ಲಿರುವ ತನ್ನ ತಂದೆಯ ಮನೆಗೆ ಸ್ಥಳಾಂತರಗೊಂಡಿದ್ದಳು.
ನ್ಯಾಯಾಲಯವೊಂದರ ಆದೇಶದ ಮೇರೆಗೆ ತನ್ನ ಪತ್ನಿ ಹಾಗೂ ಮೂರು ಮಕ್ಕಳ ಜೀವನ ನಿರ್ವಹಣೆಗೆ ಲುಕೇಶ್ ಸಾಹು ಮಾಸಿಕ ಜೀವನಾಂಶ ನೀಡುತ್ತಿದ್ದ ಎಂದು ಅವರು ಹೇಳಿದ್ದಾರೆ.
ಆಕೆಗೆ ಮಾಸಿಕ ಜೀವನಾಂಶ ನೀಡುವುದರಿಂದ ನಾನು ಸಾಲಗಾರನಾಗಿದ್ದೆ ಎಂದು ಲುಕೇಶ್ ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಕಲ್ಯಾಣ್ ಪುರ್ ಗೆ ಸ್ಥಳಾಂತರಗೊಂಡಿದ್ದ ಮಹಿಳೆಯು ಅದೇ ಗ್ರಾಮದ ರಾಜಾ ರಾಮ್ ಸಾಹು ಎಂಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದ್ದಳು.
ಮೃತ ಮಹಿಳೆಯು ಪದೇ ಪದೇ ಹಣ ನೀಡುವಂತೆ ಪೀಡಿಸುತ್ತಿದ್ದುದರಿಂದ ನಾನು ಬೇಸತ್ತು ಹೋಗಿದ್ದೆ. ನಾನಾಕೆಗೆ 1.5 ಲಕ್ಷ ರೂ. ನಗದು ಹಾಗೂ ನನ್ನ ಅಂಗಡಿಯಿಂದ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ನೀಡಿದ್ದೆ ಎಂದು ರಾಜಾ ರಾಮ್ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಪರಸ್ಪರ ಪರಿಚಯವಿದ್ದ ಇಬ್ಬರೂ, ಆ ಮಹಿಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಆಕೆಯನ್ನು ಹತ್ಯೆಗೈಯ್ಯಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾಂತ್ರಿಕ ಸಾಕ್ಷ್ಯಾಧಾರ, ಕರೆ ದಾಖಲೆಗಳು ಹಾಗೂ ಶಂಕಿತರ ವಿಚಾರಣೆಯ ಮೂಲಕ ಇಬ್ಬರು ಆರೋಪಿಗಳನ್ನು ಸುತ್ತುವರಿದಿರುವ ಪೊಲೀಸರು, ಅವರನ್ನು ಸೆರೆ ಹಿಡಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆ ಮಹಿಳೆಯನ್ನು ಹತ್ಯೆಗೈಯ್ಯಲು ಒಂದು ತಿಂಗಳಿನಿಂದ ಯೋಜನೆ ರೂಪಿಸಿದ್ದ ಅವರಿಬ್ಬರೂ, ಈ ನಡುವೆ ಅಜಯ್ ದೇವಗನ್ ನಾಯಕತ್ವದ ದೃಶ್ಯಂ ಚಿತ್ರವನ್ನು ವೀಕ್ಷಿಸಿದ್ದರು ಹಾಗೂ ಆಕೆಯನ್ನು ಹತ್ಯೆಗೈದು, ಬಂಧನದಿಂದ ತಪ್ಪಿಸಿಕೊಳ್ಳಲು ತಂತ್ರವೊಂದನ್ನು ಆ ಚಿತ್ರದಿಂದ ಕಲಿತುಕೊಂಡಿದ್ದರು ಎಂದು ಆರೋಪಿಗಳು ಪೊಲೀಸರೆದುರು ಬಾಯಿ ಬಿಟ್ಟಿದ್ದಾರೆ.
ಈ ಥ್ರಿಲ್ಲರ್ ಸಿನಿಮಾವನ್ನು ರಾಜಾ ರಾಮ್ ನಾಲ್ಕು ಬಾರಿ ವೀಕ್ಷಿಸಿದರೆ, ಲುಕೇಶ್ ಒಮ್ಮೆ ವೀಕ್ಷಿಸಿದ್ದ ಎಂದು ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಜುಲೈ 19ರಂದು ಆ ಮಹಿಳೆಗೆ ಕರೆ ಮಾಡಿರುವ ರಾಜಾ ರಾಮ್, ಆಕೆಯ ದ್ವಿಚಕ್ರ ವಾಹನದ ಮೇಲೆ ಘನಿಖುತ ಅರಣ್ಯಕ್ಕೆ ತೆರಳಿದ್ದಾನೆ. ಯೋಜನೆಯ ಪ್ರಕಾರ ಲುಕೇಶ್ ಕೂಡಾ ಅಲ್ಲಿಗೆ ತಲುಪಿದ್ದಾನೆ. ನಂತರ ಇಬ್ಬರೂ ಸೇರಿಕೊಂಡು, ಆಕೆ ತೊಟ್ಟಿದ್ದ ಸೀರೆಯಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಹತ್ಯೆಗೈದಿದ್ದಾರೆ ಎಂದು ಅವರು ಹೇಳಿದ್ದಾರೆ.
“ಆಕೆಯ ಮೃತ ದೇಹವನ್ನು ಕಣಿವೆಯ ಕೆಳಭಾಗದಲ್ಲಿ ಹೂತು ಹಾಕಿರುವ ಇಬ್ಬರೂ, ಆಕೆಯ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ಅನ್ನು ಕರ್ರನಾಲ ಬ್ಯಾರೇಜ್ ಗೆ ಎಸೆದಿದ್ದಾರೆ. ಆರೋಪಿಗಳು ಆಕೆಯ ಆಭರಣಗಳನ್ನು ಗ್ರಾಮದ ವಿದ್ಯುತ್ ಕಂಬದ ಅಡಿ ಅಡಗಿಸಿಟ್ಟಿದ್ದಾರೆ. ಆಕೆಯ ಮೃತ ದೇಹವನ್ನು ಹೂತು ಹಾಕಲು ಬಳಸಿದ್ದ ಕೃಷಿ ಸಲಕರಣೆಗಳನ್ನು ಸರಕಾರಿ ಶಾಲೆಯ ಬಳಿ ಇರುವ ನಾಲೆಯೊಂದರಲ್ಲಿ ಅವರು ಎಸೆದಿದ್ದಾರೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಪೊಲೀಸರು ಮೃತ ಮಹಿಳೆಯ ದೇಹ, ಆಕೆಯ ವಾಹನ, ಆಭರಣಗಳು ಹಾಗೂ ಅಪರಾಧ ಕೃತ್ಯದಲ್ಲಿ ಬಳಸಲಾಗಿದ್ದ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ. ತದನಂತರ, ಪೊಲೀಸರು ಆರೋಪಿಗಳನ್ನು ರವಿವಾರ ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.