ಸ್ಪೀಕರ್ ಭೇಟಿಯಾಗಿ ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವ ಮರಳಿಸಲು ಒತ್ತಾಯಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್
ಹೊಸದಿಲ್ಲಿ: ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸುವ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಿಗೇ, ಲೋಕಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ರಾಹುಲ್ ಗಾಂಧಿ ಅಧೀರ್ ರಂಜನ್ ಚೌಧರಿ ಸ್ಪೀಕರ್ ಓಮ್ ಬಿರ್ಲಾರನ್ನು ಭೇಟಿಯಾಗಿ, ಕಾಂಗ್ರೆಸ್ ನಾಯಕನ ಲೋಕಸಭಾ ಸದಸ್ಯತ್ವವನ್ನು ಮರಳಿಸುವಂತೆ ಒತ್ತಾಯಿಸಿದರು.
ವಿಚಾರಣಾ ನ್ಯಾಯಾಲಯದ ತೀರ್ಪಿನ ಒಂದು ದಿನದ ಬಳಿಕ, ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಲಾಗಿತ್ತು. ಅವರು ಲೋಕಸಭೆಯಲ್ಲಿ ಕೇರಳದ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
‘‘ನಾನು ಸ್ಪೀಕರ್‌ರನ್ನು ಭೇಟಿಯಾಗಿ, ದೋಷಿ ಎಂದು ಹೇಳುವ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ, ಅವರ ಲೋಕಸಭಾ ಸದಸ್ಯತ್ವವನ್ನು ಮರಳಿಸುವಂತೆ ಒತ್ತಾಯಿಸಿದೆ. ಮುಂದಿನ ವಾರ ನಡೆಯಲಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತನಾಡಬೇಕೆಂದು ನಾವು ಬಯಸಿದ್ದೇವೆ’’ ಎಂದು ಚೌಧರಿ ಹೇಳಿದರು.
‘‘ನ್ಯಾಯಾಲಯ ಆದೇಶದ ಪ್ರತಿಯಾದರೂ ಬರಲಿ. ಅದರ ಬಳಿಕ ಕ್ರಮ ತೆಗೆದುಕೊಳ್ಳುವೆ. ನಾವು ಸೋಮವಾರ ಕುಳಿತು ಮಾತನಾಡಿ ನಿರ್ಧರಿಸುತ್ತೇವೆ ಎಂದು ಸ್ಪೀಕರ್ ಹೇಳಿದರು’’ ಎಂದು ಚೌಧರಿ ತಿಳಿಸಿದರು.