‘ಡಾನ’ ಚಂಡಮಾರುತ ಭೀತಿ | ಒಡಿಶಾದಲ್ಲಿ 11 ಲಕ್ಷ ಮಂದಿ ಸ್ಥಳಾಂತರ
ಹೊಸದಿಲ್ಲಿ : ‘ಡಾನ’ ಚಂಡಮಾರುತ ತೀರಕ್ಕೆ ಅಪ್ಪಳಿಸುವ ಗಂಟೆಗಳ ಮುನ್ನ ಭಾರತದ ಪೂರ್ವ ಕರಾವಳಿಯಲ್ಲಿ ಕನಿಷ್ಠ 11 ಲಕ್ಷ ಮಂದಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.
ಒಡಿಶಾದಲ್ಲಿ, 14 ಜಿಲ್ಲೆಗಳ ಸುಮಾರು 3,000 ಗ್ರಾಮಗಳಿಂದ ಜನರನ್ನು ಪರಿಹಾರ ಶಿಬಿರಗಳಿಗೆ ಸಾಗಿಸುವ ಕಾರ್ಯದಲ್ಲಿ ಒಡಿಶಾ ಸರಕಾರ ತೊಡಗಿಸಿಕೊಂಡಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಪರಿಹಾರ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಎಲ್ಲಾ ಶಾಸಕರಿಗೆ ಮನವಿ ಮಾಡಿದ್ದಾರೆ.
ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ, ಒಡಿಶಾ ಸರಕಾರವು ಕರಾವಳಿಯಲ್ಲಿರುವ ಶಾಲೆಗಳನ್ನು ಮುಚ್ಚಿದೆ. ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಪುರಿಗೆ ಹೋಗದಂತೆ ಯಾತ್ರಾರ್ಥಿಗಳಿಗೂ ಸೂಚನೆ ನೀಡಲಾಗಿದೆ.
‘ಡಾನ’ ಚಂಡಮಾರುತವು ಗಂಟೆಗೆ 120 ಕಿ.ಮೀ. ವೇಗದ ಗಾಳಿಯೊಂದಿಗೆ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಅವಧಿಯಲ್ಲಿ ಪುರಿ ಮತ್ತು ಸಾಗರ ದ್ವೀಪದ ನಡುವೆ ತೀರಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ.
‘ಡಾನ’ ಚಂಡಮಾರುತ ತೀರವನ್ನು ಸಮೀಪಿಸುತ್ತಿರುವಂತೆಯೇ, ಗುರುವಾರ ಬೆಳಗ್ಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಭಾರೀ ಮಳೆ ಸುರಿದಿದೆ.
► ಪಶ್ಚಿಮ ಬಂಗಾಳದಲ್ಲಿ 1.30 ಲಕ್ಷ ಜನರ ಸ್ಥಳಾಂತರ
‘ಡಾನ’ ಚಂಡಮಾರುತದ ಬೆದರಿಕೆಯ ಹಿನ್ನೆಲೆಯಲ್ಲಿ, ಸುಮಾರು 1,30,000 ಜನರನ್ನು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಿಂದ ಸ್ಥಳಾಂತರಿಸಲಾಗಿದೆ.
ಕೋಲ್ಕತಾ ವಿಮಾನ ನಿಲ್ದಾಣವನ್ನು ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಮುಚ್ಚಲಾಗಿದೆ.
ಅದೇ ವೇಳೆ, ಆಗ್ನೇಯ ರೈಲ್ವೇ ಮತ್ತು ಪೂರ್ವ ರೈಲ್ವೇಗಳು, ಚಂಡಮಾರುತದ ಹಿನ್ನೆಲೆಯಲ್ಲಿ ರೈಲುಗಳನ್ನು ರದ್ದುಪಡಿಸಿವೆ. ಹೌರಾ ಮತ್ತು ಕೋಲ್ಕತ ನಡುವೆ, ಹೂಗ್ಲಿ ನದಿಗೆ ಅಡ್ಡಲಾಗಿ ಸಂಚರಿಸುವ ತೆಪ್ಪ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮೇ ತಿಂಗಳಲ್ಲಿ, ಪ್ರಬಲ ಚಂಡಮಾರುತ ‘ರೆಮಲ್’ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಿತ್ತು. ಅದು ಪಶ್ಚಿಮ ಬಂಗಾಳ ಕರಾವಳಿಯಲ್ಲಿ ವಿನಾಶಗಳ ಸರಮಾಲೆಯನ್ನೇ ಸೃಷ್ಟಿಸಿತ್ತು. ಅಂದು ಕನಿಷ್ಠ ಮೂವರು ಮೃತಪಟ್ಟಿದ್ದರು ಮತ್ತು 2 ಲಕ್ಷಕ್ಕೂ ಅಧಿಕ ಜನರನ್ನು ತೆರವುಗೊಳಿಸಲಾಗಿತ್ತು.
► ‘ಡಾನ’ ಹೆಸರು ಕೊಟ್ಟವರು ಯಾರು?
ಬಂಗಾಳ ಕೊಲ್ಲಿಯಲ್ಲಿ ಹುಟ್ಟಿ ಭಾರತೀಯ ಪೂರ್ವ ಕರಾವಳಿಗೆ ಅಪ್ಪಳಿಸಲು ಸಿದ್ಧವಾಗಿ ನಿಂತಿರುವ ‘ಡಾನ’ ಚಂಡಮಾರುತಕ್ಕೆ ಆ ಹೆಸರು ಕೊಟ್ಟವರು ಯಾರು?
‘ಡಾನ’ ಎನ್ನುವುದು ಅರೇಬಿಕ್ ಪದವಾಗಿದ್ದು, ಅದರ ಅರ್ಥ ‘ಔದಾರ್ಯತೆ’. ‘ಡಾನ’ ಪದವು ಅರೇಬಿಕ್ ಸಂಸ್ಕೃತಿಯಲ್ಲಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ‘‘ಅತ್ಯಂತ ಪರಿಪೂರ್ಣ ಗಾತ್ರದ, ಅಮೂಲ್ಯ ಮತ್ತು ಸುಂದರ ಮುತ್ತು’’ ಎನ್ನುವ ಕಲ್ಪನೆಯನ್ನೂ ಅದು ನೀಡುತ್ತದೆ.
‘ಡಾನ’ ಹೆಸರನ್ನು ಖತರ್ ಸೂಚಿಸಿದೆ ಎಂದು ವಿಶ್ವ ಹವಾಮಾನ ಸಂಘಟನೆ (ಡಬ್ಲ್ಯುಎಮ್‌ಒ) ತಿಳಿಸಿದೆ.