ಡಿಎಚ್ಎಫ್ಎಲ್ ಹಗರಣ | ಬ್ಯಾಂಕ್ ಗಳಿಗೆ 34,000 ಕೋಟಿ ರೂ.ಗಳ ವಂಚನೆ: ಸಿಬಿಐನಿಂದ ಧೀರಜ್‌ ವಾಧ್ವಾನ್ ಬಂಧನ

Update: 2024-05-14 16:44 GMT

ಧೀರಜ್‌ ವಾಧ್ವಾನ್ | PC : ANI 

ಹೊಸದಿಲ್ಲಿ : ಹದಿನೇಳು ಬ್ಯಾಂಕುಗಳ ಒಕ್ಕೂಟಕ್ಕೆ 34,000 ಕೋಟಿ ರೂ.ಗಳ ವಂಚನೆಗೆ ಸಂಬಂಧಿಸಿದಂತೆ ಮಾಜಿ ಡಿಎಚ್ಎಫ್ಎಲ್ ನಿರ್ದೇಶಕ ಧೀರಜ್‌ ವಾಧ್ವಾನ್ ರನ್ನು ಸಿಬಿಐ ಸೋಮವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದೆ. 

ವಾಧ್ವಾನ್ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಪ್ರಕರಣದಲ್ಲಿ ಈ ಹಿಂದೆ 2022, ಜು.19ರಂದು ಧೀರಜ್‌ ಮತ್ತು ಅವರ ಸೋದರ ಕಪಿಲ ವಾಧ್ವಾನ್ ಅವರನ್ನು ಬಂಧಿಸಲಾಗಿತ್ತು. ಸಿಬಿಐ 2022, ಅ.15ರಂದು ವಾಧ್ವಾನ್ ಸೋದರರು ಸೇರಿದಂತೆ 75 ಸಂಸ್ಥೆಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅಪೂರ್ಣ ತನಿಖೆ ಮತ್ತು ಅಸಮರ್ಪಕ ದೋಷಾರೋಪ ಪಟ್ಟಿ ಕಾರಣದಿಂದಾಗಿ ವಿಶೇಷ ನ್ಯಾಯಾಲಯವು 2022, ಡಿ.13ರಂದು ಅವರಿಗೆ ‘ಕಾನೂನುಬದ್ಧ ’ಜಾಮೀನು’ ಮಂಜೂರು ಮಾಡಿದ್ದು, ದಿಲ್ಲಿ ಉಚ್ಛ ನ್ಯಾಯಾಲಯವು ಅದನ್ನು ಎತ್ತಿ ಹಿಡಿದಿತ್ತು.

ಇದನ್ನು ಪ್ರಶ್ನಿಸಿ ಸಿಬಿಐ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದು, ಅದು ಜಾಮೀನು ಆದೇಶಗಳನ್ನು ರದ್ದುಗೊಳಿಸಿತ್ತು.

ಈ ನಡುವೆ ವಾಧ್ವಾನ್ ಬೇರೊಂದು ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಂದ ಬಾಂಬೆ ಉಚ್ಛ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಈ ವರ್ಷದ ಮೇ 2ರಂದು ಜಾಮೀನನ್ನು ಕ್ರಮಬದ್ಧಗೊಳಿಸಿದ್ದ ಬಾಂಬೆ ಉಚ್ಛ ನ್ಯಾಯಾಲಯವು ಒಂದು ವಾರ ಕಾಲ ಸಿಬಿಐ ಬಂಧನದ ವಿರುದ್ಧ ರಕ್ಷಣೆಯನ್ನು ಒಂದು ವಾರ ವಿಸ್ತರಿಸಿತ್ತು. ಈ ಅವಧಿ ಮುಗಿದ ಬಳಿಕ ಸಿಬಿಐ ವಾಧ್ವಾನ್ರನ್ನು ಬಂಧಿಸಿದೆ.

ಪ್ರಸ್ತುತ ವಾಧ್ವಾನ್ ಸೋದರರು ಮತ್ತು ಇನ್ನೋರ್ವ ಆರೋಪಿ ಅಜಯ ನವಾಂದಾರ್ ನ್ಯಾಯಾಂಗ ಬಂಧನಲ್ಲಿದ್ದಾರೆ.

2010-18ರ ನಡುವೆ ಡಿಎಚ್ಎಫ್ಎಲ್ಗೆ 42,871 ಕೋಟಿ ರೂ.ಗಳ ಸಾಲಗಳನ್ನು ನೀಡಿದ್ದ 17 ಬ್ಯಾಂಕುಗಳ ಒಕ್ಕೂಟದ ನೇತೃತ್ವ ವಹಿಸಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ಸಿಬಿಐ ವಾಧ್ವಾನ್ ಸೋದರರು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.

ವಾಧ್ವಾನ್ ಸೋದರರ ಡಿಎಚ್ಎಫ್ಎಲ್ ಮೇ 2019ರ ಬಳಿಕ ಸಾಲ ಮರುಪಾವತಿಸದೆ ಬ್ಯಾಂಕುಗಳಿಗೆ 34,615 ಕೋಟಿ ರೂ.ಗಳನ್ನು ವಂಚಿಸಿದೆ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News