ಅರವಿಂದ್ ಕೇಜ್ರಿವಾಲ್ ಜಾಮೀನಿಗೆ ತಡೆ: ಸರ್ವಾಧಿಕಾರ ಹೆಚ್ಚುತ್ತಿದೆ ಎಂದ ಸುನೀತಾ ಕೇಜ್ರಿವಾಲ್

Update: 2024-06-21 09:49 GMT

ಸುನೀತಾ ಕೇಜ್ರಿವಾಲ್ (PTI) 

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಂಜೂರಾಗಿರುವ ಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಮೇಲ್ಮನವಿ ಸಲ್ಲಿಸಿರುವ ನಡೆಯ ವಿರುದ್ಧ ಅವರ ಪತ್ನಿ ಸುನೀತಾ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

ವಿಚಾರಣಾ ನ್ಯಾಯಾಲಯವು ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿರುವ ಆದೇಶವನ್ನು ತಡೆ ಹಿಡಿಯಬೇಕು ಎಂದು ಜಾರಿ ನಿರ್ದೇಶನಾಲಯವು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ. ಜಾರಿ ನಿರ್ದೇಶನಾಲಯದ ಈ ಅರ್ಜಿಯ ವಿಚಾರಣೆಯನ್ನು ತಕ್ಷಣವೇ ನಡೆಸಲು ದಿಲ್ಲಿ ಹೈಕೋರ್ಟ್ ಸಮ್ಮತಿಸಿದೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರಾಗಿರುವ ಆದೇಶದ ಪ್ರತಿಯು ಅಪ್ಲೋಡ್ ಆಗುವುದಕ್ಕೂ ಮುಂಚೆಯೇ ಜಾರಿ ನಿರ್ದೇಶನಾಲಯವು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದೆ ಎಂಬುದರತ್ತ ಸುನೀತಾ ಕೇಜ್ರಿವಾಲ್ ಬೊಟ್ಟು ಮಾಡಿದ್ದಾರೆ. ಇದರೊಂದಿಗೆ ತಮ್ಮ ಪತಿಯನ್ನು ಕೇಂದ್ರ ಸರಕಾರ ಹಾಗೂ ಅದರ ಕೇಂದ್ರೀಯ ತನಿಖಾ ಸಂಸ್ಥೆಗಳು ಉಗ್ರಗಾಮಿಯಂತೆ ನಡೆಸಿಕೊಳ್ಳುತ್ತಿವೆ ಎಂದು ಹರಿಹಾಯ್ದಿದ್ದಾರೆ.

“ಅರವಿಂದ್ ಕೇಜ್ರಿವಾಲ್ ಉಗ್ರಗಾಮಿಯೇನೋ ಎಂಬಂತೆ ಪರಿಸ್ಥಿತಿ ಸೃಷ್ಟಿಯಾಗಿದೆ. ದೇಶದಲ್ಲಿ ಸರ್ವಾಧಿಕಾರ ಹೆಚ್ಚುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹೈಕೋರ್ಟ್ ನಿಂದ ಇನ್ನಷ್ಟೆ ನಿರ್ಧಾರ ಹೊರ ಬರಬೇಕಿದೆ. ಹೈಕೋರ್ಟ್ ನ್ಯಾಯ ನೀಡಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ” ಎಂದೂ ಅವರು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ಮಂಜೂರಾಗಿರುವ ಜಾಮೀನಿಗೆ ತಡೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ತುರ್ತು ಅರ್ಜಿಯ ವಿಚಾರಣೆ ನಡೆಸಲು ದಿಲ್ಲಿ ಹೈಕೋರ್ಟ್ ಸಮ್ಮತಿಸಿದೆ. ಅರವಿಂದ್ ಕೇಜ್ರಿವಾಲ್ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ವಿಕ್ರಮ್ ಚೌಧರಿ ವಾದಿಸುತ್ತಿದ್ದರೆ, ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‍.ವಿ.ರಾಜು ವಕಾಲತ್ತು ವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News