ದಿಲ್ಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಗೃಹಲಕ್ಷ್ಮಿ’ ಮಾದರಿಯಲ್ಲಿ ‘ಪ್ಯಾರಿ ದೀದಿ ಯೋಜನೆ’: ಡಿ.ಕೆ. ಶಿವಕುಮಾರ್
ಹೊಸದಿಲ್ಲಿ: ಹೊಸದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ‘ಗೃಹಲಕ್ಷ್ಮಿ’ ಮಾದರಿಯಲ್ಲಿ ‘ಪ್ಯಾರಿ ದೀದಿ ಯೋಜನೆ’ ಮೂಲಕ ದಿಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2500ರೂ. ನೀಡುವ ಗ್ಯಾರಂಟಿ ಭರವಸೆಯನ್ನು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಸೋಮವಾರ ದಿಲ್ಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ‘ಪ್ಯಾರಿ ದೀದಿ ಯೋಜನೆ’ ಜಾರಿ ಮಾಡಿ ಮಹಿಳೆಯರಿಗೆ ಪ್ರತಿ ತಿಂಗಳು 2500ರೂ.ನೀಡಲಾಗುವುದು. ಉಳಿದ ಗ್ಯಾರಂಟಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ನಮ್ಮ ನಾಯಕರು ತಿಳಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನಾನಿಂದು ಇಲ್ಲಿ ಪ್ರಮುಖ ಯೋಜನೆಯ ಭರವಸೆ ನೀಡುತ್ತಿದ್ದೇನೆ. ನೂರು ವರ್ಷಗಳ ಹಿಂದೆ ಅಂದರೆ 1924ರ ಡಿ.26ರಂದು ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಅದರ ಶತಮಾನೋತ್ಸವವನ್ನು ನಾವು ಇತ್ತೀಚೆಗಷ್ಟೇ ಆಚರಿಸಿದ್ದೇವೆ. ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಾಗದಲ್ಲಿ ಇರುವ ಬಾವಿಯಲ್ಲಿನ ನೀರು ತೆಗೆದುಕೊಂಡು ಸಿದ್ದರಾಮಯ್ಯ ಸೇರಿದಂತೆ ನಮ್ಮ ಪಕ್ಷದ ನಾಯಕರು ಅಲ್ಲಿನ ಜಾಗವನ್ನು ಸ್ವಚ್ಛ ಮಾಡಿ ಕರ್ನಾಟಕ ರಾಜ್ಯವನ್ನು ಭ್ರಷ್ಟ ಸರಕಾರದಿಂದ ಮುಕ್ತಗೊಳಿಸುವ ಪಣತೊಟ್ಟೆವು. ಇದೇ ವೇಳೆ ನಮ್ಮ ಪಕ್ಷದ ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿಯನ್ನು ಘೋಷಣೆ ಮಾಡಲಾಯಿತು. ನಂತರ ಗೃಹಲಕ್ಷ್ಮಿ ಯೋಜನೆಯನ್ನು ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ಇದು ಕೇವಲ ಭರವಸೆಯಾಗಬಾರದು. ಈ ಯೋಜನೆ ಜಾರಿ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಬೇಕೆಂದು ಹೇಳಿದ್ದರು. ಹೀಗಾಗಿ ನಾನು ಹಾಗೂ ಸಿದ್ದರಾಮಯ್ಯ ಗ್ಯಾರಂಟಿ ಚೆಕ್‍ಗೆ ಸಹಿ ಹಾಕಿದೆವು. ನಂತರ ಸರಕಾರ ಬಂದ ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳ ಜಾರಿಗೆ ಅನುಮೋದನೆ ನೀಡಲಾಯಿತು ಎಂದರು.
ಮೊದಲ ಮೂರು ತಿಂಗಳಲ್ಲಿ ಎಲ್ಲ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಉಚಿತ ಸರಕಾರಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಡವರಿಗೆ 10ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ, ಪ್ರತಿ ಮನೆಗೆ 200ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದೆ ಎಂದರು ಹೇಳಿದರು.
ಮಾಸಿಕ 4-5 ಸಾವಿರ ರೂ.ಉಳಿತಾಯ: ಸರಕಾರವು ಯೋಜನೆಗಳಿಗಾಗಿ 56ಸಾವಿರ ಕೋಟಿ ರೂ. ಹಣವನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ. 1.22ಕೋಟಿ ಮಹಿಳೆಯರು ಪ್ರತಿತಿಂಗಳು 2ಸಾವಿರ ರೂ. ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ಬಡ-ಮಧ್ಯಮ ವರ್ಗದ ಕುಟುಂಬಗಳಲ್ಲಿ ಆರ್ಥಿಕ ಬದಲಾವಣೆ ತರಲಾಗಿದೆ. ಪ್ರತಿ ತಿಂಗಳು 4-5 ಸಾವಿರ ರೂ.ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಯೋಜನೆ ನಕಲು: ನಾವು ಈ ಯೋಜನೆ ಘೋಷಣೆ ಮಾಡಿದಾಗ, ಪ್ರಧಾನಿ ಮೋದಿ ಕರ್ನಾಟಕ ಸರಕಾರ ದಿವಾಳಿಯಾಗಲಿದೆ ಎಂದು ಹೇಳಿದ್ದರು. ನಂತರ ಮಹಾರಾಷ್ಟ್ರದಲ್ಲೂ ನಮ್ಮ ಯೋಜನೆ ವಿರುದ್ಧ ಅಪಪ್ರಚಾರ ಮಾಡಿದರು. ಅಂತಿಮವಾಗಿ ಎಲ್ಲ ರಾಜ್ಯಗಳ ಚುನಾವಣೆಯಲ್ಲೂ ಅವರೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ದಿಲ್ಲಿಯಲ್ಲಿ ಹೊಸ ಬದಲಾವಣೆ: ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. ಈ ಹೊಸ ವರ್ಷ ದಿಲ್ಲಿಯಲ್ಲಿ ಬದಲಾವಣೆಯನ್ನು ತರಲಿ. ನೀವೆಲ್ಲರೂ ಕಾಂಗ್ರೆಸ್ ಸರಕಾರ ಬರಲು ಸಹಾಯ ಮಾಡುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ತಲುಪುವುದು 10-15 ದಿನಗಳು ವಿಳಂಬವಾಗಬಹುದು. ಆದರೆ, ನಮ್ಮ ಯೋಜನೆ ನಿಲ್ಲುವುದಿಲ್ಲ. ದೇಶದಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಆರ್ಥಿಕತೆ ಹೊಂದಿರುವ ರಾಜ್ಯ. ನಾವು ದೇಶಕ್ಕೆ ಹೆಚ್ಚು ತೆರಿಗೆ ನೀಡುತ್ತಿದ್ದು, ನಮ್ಮ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ ಎಂದರು.
‘ಜನರಿಗೆ ಆರ್ಥಿಕ ಶಕ್ತಿ ತುಂಬುವುದು ಅಭಿವೃದ್ಧಿಯಲ್ಲವೇ? ಪ್ರತಿ ಕುಟುಂಬ, ಜನರು ಆರ್ಥಿಕವಾಗಿ ಸುಭದ್ರವಾಗುವುದು ಅಭಿವೃದ್ಧಿಯಲ್ಲವೇ? ವ್ಯಾಪಾರಿಗಳು, ಜನ ಸಾಮಾನ್ಯರ ಬಳಿ ಹಣ ಹರಿದಾಡುತ್ತಿದ್ದು, ಸಂತೋಷವಾಗಿದ್ದಾರೆ. ಇದು ಅಭಿವೃದ್ಧಿಯಲ್ಲವೇ? ಜನರಿಗೆ ವೈಯಕ್ತಿಕವಾಗಿ ಆರ್ಥಿಕ ಬಲ ತುಂಬುವುದು ನಮ್ಮ ಯೋಜನೆಗಳ ಉದ್ದೇಶ. ಜನರು ಶಕ್ತಿಶಾಲಿಯಾದರೆ ಅವರ ಕುಟುಂಬ ಶಕ್ತಿಶಾಲಿಯಾಗುತ್ತದೆ. ಕುಟುಂಬಗಳು ಶಕ್ತಿಶಾಲಿಯಾದರೆ ನಮ್ಮ ರಾಜ್ಯ ಶಕ್ತಿಶಾಲಿಯಾಗುತ್ತದೆ ಎಂದು ಅವರು ತಿಳಿಸಿದರು.
‘ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಕೆಲವು ಮಾನದಂಡಗಳಿವೆ. ಇಂಧನ ಬೆಲೆ ಏರಿಕೆಯಾದಾಗ ಟಿಕೆಟ್ ದರ ಏರಿಕೆಯಾಗುತ್ತದೆ. ಎಸ್.ಎಂ.ಕೃಷ್ಣರ ಕಾಲದಲ್ಲೇ ನಾವು ಇಂಧನೆ ಬೆಲೆ ಏರಿಕೆಯಾದರೆ ಟಿಕೆಟ್ ದರ ಏರಿಸಲು ತೀರ್ಮಾನಿಸಲಾಗಿತ್ತು. ಸಾರಿಗೆ ಸಂಸ್ಥೆಗಳು ತಮ್ಮದೇ ಸಾಮಥ್ರ್ಯಗಳ ಮೇಲೆ ನಡೆಯುತ್ತಿವೆ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ