ರಾಹುಲ್ ಗಾಂಧಿಗೆ ಹುಂಡಿ ಹಣ ಉಡುಗೊರೆ ನೀಡಿ ಸುದ್ದಿಯಾಗಿದ್ದ ಮಕ್ಕಳ ಪೋಷಕರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ED ಕಿರುಕುಳ ಆರೋಪ
ಹೊಸದಿಲ್ಲಿ: ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ರಾಹುಲ್ ಗಾಂಧಿಗೆ ಹುಂಡಿ ಹಣವನ್ನು ಉಡುಗೊರೆಯಾಗಿ ನೀಡಿದ ಮಕ್ಕಳ ಪೋಷಕರು ಶುಕ್ರವಾರ ಬೆಳಿಗ್ಗೆ ಸೆಹೋರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ವಿವಾದವನ್ನು ಹುಟ್ಟುಹಾಕಿದ್ದು, ಜಾರಿ ನಿರ್ದೇಶನಾಲಯದ ಒತ್ತಡದಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಉದ್ಯಮಿ ಮನೋಜ್ ಪರ್ಮಾರ್ ಮತ್ತು ಅವರ ಪತ್ನಿ ನೇಹಾ ಅವರು ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಅವರ ಮಕ್ಕಳು ರಾಹುಲ್ ಗಾಂಧಿಗೆ ಹುಂಡಿಯ ಹಣವನ್ನು ಉಡುಗೊರೆಯಾಗಿ ನೀಡಿದಾಗ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಅವರು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಡಿಸೆಂಬರ್ 5ರಂದು, 2017ರ ಸಿಬಿಐ ಎಫ್ಐಆರ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಂದೋರ್ ಮತ್ತು ಸೆಹೋರ್ನಲ್ಲಿರುವ ಪರ್ಮಾರ್ ಗೆ ಸಂಬಂಧಿಸಿದ ನಾಲ್ಕು ಸ್ಥಳಗಳ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಬಳಿಕ ರಾಷ್ಟ್ರೀಕೃತ ಬ್ಯಾಂಕ್ ಗೆ 6 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಮಾರ್ ಅವರನ್ನು ಬಂಧಿಸಲಾಗಿತ್ತು.
ED ಅಧಿಕಾರಿಗಳ ಕಿರುಕುಳದಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿದ್ದು, ಮನೋಜ್ ಪರ್ಮಾರ್ ಅವರಿಗೆ ಯಾವುದೇ ಮಾನ್ಯ ಕಾರಣವಿಲ್ಲದೆ ಈಡಿ ಕಿರುಕುಳ ನೀಡಿದೆ. ಭಾರತ್ ಜೋಡೋ ಯಾತ್ರೆಯ ವೇಳೆ ಮನೋಜ್ ಅವರ ಮಕ್ಕಳು ರಾಹುಲ್ ಗಾಂಧಿಗೆ ಹುಂಡಿಯ ಹಣ ಉಡುಗೊರೆಯಾಗಿ ನೀಡಿದ್ದಾರೆ. ಅವರ ಮನೆ ಮೇಲೆ ಈಡಿ ಸಹಾಯಕ ನಿರ್ದೇಶಕ ಸಂಜೀತ್ ಕುಮಾರ್ ಸಾಹು ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಗೆ ಬೆಂಬಲಿಸಿದ್ದಕ್ಕೆ ಜಾರಿ ನಿರ್ದೇಶನಾಲಯ ಗುರಿ ಮಾಡಿದೆ ಎಂದು ಮನೋಜ್ ಹೇಳಿದ್ದಾರೆ. ನಾನು ಅವರಿಗೆ ಕಾನೂನು ಸಹಾಯವನ್ನು ಮಾಡಿದ್ದೇನೆ. ಆದರೆ ಇಂದು ಮನೋಜ್ ಮತ್ತು ಅವರ ಪತ್ನಿ ಪ್ರಾಣವನ್ನು ತೆಗೆದುಕೊಂಡಿರುವ ಆಘಾತಕಾರಿ ಸುದ್ದಿಯನ್ನು ತಿಳಿದುಕೊಂಡೆ, ಈ ಬಗ್ಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಿಂದ ನ್ಯಾಯಯುತ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಅಷ್ಟಾ ಪಟ್ಟಣದಲ್ಲಿ ಶುಕ್ರವಾರ ಉದ್ಯಮಿ ಮನೋಜ್ ಪರ್ಮಾರ್ ಮತ್ತು ಪತ್ನಿ ನೇಹಾ ಪರ್ಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳದಲ್ಲಿ ಆರು ಪುಟಗಳ ಡೆತ್ ನೋಟು ಸಿಕ್ಕಿತ್ತು. ಡೆತ್ ನೋಟ್ ನಲ್ಲಿ ಈಡಿ ಅಧಿಕಾರಿಗಳು ಕಿರುಕುಳ ಮತ್ತು ದೈಹಿಕ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಾರಿ ನಿರ್ದೇಶನಾಲಯ ಘಟನೆಯನ್ನು ದುರದೃಷ್ಟಕರ ಎಂದು ಹೇಳಿದ್ದು, ಆರೋಪವನ್ನು ನಿರಾಕರಿಸಿದೆ. ಎಸ್ಬಿಐನ ಇಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ಪರ್ಮಾರ್ ಅವರಿಗೆ ಸೇರಿದ ಸ್ಥಳದಲ್ಲಿ ಹುಡುಕಾಟ ನಡೆಸಲಾಗಿದೆ ಎಂದು ಹೇಳಿದೆ.