ಚುನಾವಣಾ ಬಾಂಡ್ ಖರೀದಿಸಲು ಆರೆಸ್ಸೆಸ್‌ನ ವ್ಯಕ್ತಿಗೆ ರೂ. 2.5 ಕೋಟಿ ನೀಡಿದ್ದ ಮಾಜಿ ನ್ಯಾಯಾಧೀಶರಿಗೆ ವಂಚನೆ

Update: 2024-02-28 15:48 GMT

ಸಾಂದರ್ಭಿಕ ಚಿತ್ರ 

ಹೈದರಾಬಾದ್ : ತಮ್ಮ ಕುಟುಂಬಕ್ಕೆ ನೆರವು ಒದಗಿಸಲು ಆರೆಸ್ಸೆಸ್ ಸಂಘಟನೆಗೆ ಸೇರಿದವರು ಎಂದು ಹೇಳಲಾಗಿರುವ ಇಬ್ಬರು ವ್ಯಕ್ತಿಗಳಿಗೆ ಭಾರಿ ಮೊತ್ತದ ಹಣ ನೀಡಿದ ಹೈಕೋರ್ಟ್ ನ ಮಾಜಿ ನ್ಯಾಯಾಧೀಶರೊಬ್ಬರು ವಂಚನೆಗೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ ಹೈಕೋರ್ಟ್ ಹಾಗೂ ಮತ್ತೊಂದು ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನ್ಯಾಯಾಧೀಶರೊಬ್ಬರು ಬಿಜೆಪಿಗೆ ಚುನಾವಣಾ ಬಾಂಡ್ ಖರೀದಿಸುತ್ತಾರೆ ಎಂಬ ಭರವಸೆಯೊಂದಿಗೆ ರೂ. 2.5 ಕೋಟಿಯನ್ನು ಅವರಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ, ಅವರ ಮೊಮ್ಮಕ್ಕಳಿಗೆ ಅಮೆರಿಕಾದಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆಯು ದೊರೆತಿತ್ತು ಎನ್ನಲಾಗಿದೆ.

ಹೈದರಾಬಾದ್ ನಲ್ಲಿ ನೆಲೆಸಿರುವ ಅನಿಲ್ ಮತ್ತು ಶ್ರೀಧರ್ (ಹೆಸರು ಬದಲಿಸಲಾಗಿದೆ) ಎಂಬ ವ್ಯಕ್ತಿಗಳಿಗೆ ನಾನು ಹಣ ನೀಡಿದೆ ಎಂದು The News Minute ಸುದ್ದಿ ಸಂಸ್ಥೆಗೆ ತಿಳಿಸಿರುವ ನ್ಯಾಯಾಧೀಶರು, ನಾನು ಎರಡು ವರ್ಷಗಳಿಂದ ಆ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ಪೈಕಿ ನ್ಯಾಯಾಧೀಶರು ದೂರು ದಾಖಲಿಸಿರುವ ವ್ಯಕ್ತಿಯೊಬ್ಬರಿಗೆ ಜಾಗತಿಕ ಹಿಂದೂ ಕಾಂಗ್ರೆಸ್ ಸಂಘಟನೆಯೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ.

ನ್ಯಾಯಾಧೀಶರ ಪ್ರಕಾರ, ತಾವು ದೂರು ನೀಡಿರುವ ಅನಿಲ್ ಎಂಬ ವ್ಯಕ್ತಿಯು ತನ್ನ ಅಳಿಯನಿಗೆ ಪರಿಚಿತನಿದ್ದ. ಅವರು ನಾವು ಆರೆಸ್ಸೆಸ್ ನ ಪ್ರಮುಖ ನಾಯಕರು ಎಂಬಂತೆ ಬಿಂಬಿಸಿಕೊಂಡಿದ್ದರು. ನಾವು ಹಣದೊಂದಿಗೆ ಚುನಾವಣಾ ಬಾಂಡ್ ಗಳನ್ನು ಖರೀದಿಸಬಲ್ಲೆವು. ಅದಕ್ಕೆ ಪ್ರತಿಯಾಗಿ ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ನಿಮ್ಮ ಮೊಮ್ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡಬಲ್ಲೆವು ಎಂದು ಭರವಸೆ ನೀಡಿದ್ದರು ಎಂದು ಹೇಳಲಾಗಿದೆ.

ಈ ಭರವಸೆಯನ್ನು ನಂಬಿದ 72 ವರ್ಷದ ನ್ಯಾಯಾಧೀಶರು ತಮ್ಮ ಪತ್ನಿ ಹಾಗೂ ತಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಂಡು, ಆ ಹಣವನ್ನು ಆ ಇಬ್ಬರು ವ್ಯಕ್ತಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ. ನಾನು ನೀಡಿದ ಪ್ರತಿ ಪೈಸೆಯು ಬಿಳಿ ಹಣವಾಗಿತ್ತು ಎಂದು ತಮ್ಮ ವಹಿವಾಟಿನ ಕುರಿತು ಅವರು ಉಲ್ಲೇಖಿಸಿದ್ದಾರೆ. ಅಲ್ಲಿಂದಾಚೆಗೆ ಚುನಾವಣಾ ಬಾಂಡ್ ಗಳನ್ನು ಪಡೆಯಲು ಹಾಗೂ ಆ ಇಬ್ಬರು ವ್ಯಕ್ತಿಗಳು ತಮ್ಮ ಭರವಸೆ ಈಡೇರಿಸುತ್ತಾರೆ ಎಂದು ಕಾದಿದ್ದಾರಾದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಕೊನೆಗೆ ಈ ಕುರಿತು ಫಿಲ್ಮ್ ನಗರ್ ಪೊಲೀಸ್ ಠಾಣೆಯಲ್ಲಿ ಆ ನಿವೃತ್ತ ನ್ಯಾಯಾಧೀಶರು ಅನಿಲ್ ಎಂಬ ವ್ಯಕ್ತಿಯ ವಿರುದ್ಧ ವಂಚನೆಯ ದೂರು ದಾಖಲಿಸಿದ್ದಾರೆ. ಈ ಕುರಿತು The News Minute ಸುದ್ದಿ ಸಂಸ್ಥೆಯು ಅನಿಲ್ ಅವರನ್ನು ಪ್ರಶ್ನಿಸಿದಾಗ, ಅವರು ಆ ಆರೋಪಗಳನ್ನು ಅಲ್ಲಗಳೆದಿದ್ದಾರೆ. “ದೂರು ಸುಳ್ಳಾಗಿದೆ. ನಾನೊಬ್ಬ ಸಣ್ಣ ವ್ಯಕ್ತಿ. ನನಗೆ ಆರೆಸ್ಸೆಸ್ ಅಥವಾ ಬಿಜೆಪಿಯೊಂದಿಗೆ ಯಾವುದೇ ಸಂಪರ್ಕವಿಲ್ಲ. ನಾವು ಹಣವನ್ನು ಎಂದಿಗೂ ಪಡೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ತನಗೆ ಮಾಜಿ ನ್ಯಾಯಾಧೀಶರ ಪರಿಚಯವಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. “ಎಲ್ಲರೂ ಎಲ್ಲರನ್ನೂ ಬಲ್ಲಂತೆ ನನಗೆ ನ್ಯಾಯಾಧೀಶರ ಪರಿಚಯವಿದೆ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಅನಿಲ್ ಅವರ ಲಿಂಕ್ಡ್ ಇನ್ ವ್ಯಕ್ತಿ ವಿವರದ ಪ್ರಕಾರ, ಆರೆಸ್ಸೆಸ್ ನೊಂದಿಗೆ ನಿಕಟವಾಗಿ ಕಾರ್ಯಾಚರಿಸುವ ವಿಶ್ವ ಹಿಂದೂ ಆರ್ಥಿಕ ವೇದಿಕೆಯ ಭಾಗವಾದ ವಿಶ್ವ ಹಿಂದೂ ಕಾಂಗ್ರೆಸ್ ಸಂಘಟನೆಯ ಸಮನ್ವಯಕಾರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಫಿಲ್ಮ್ ನಗರ್ ಠಾಣೆ ಪೊಲೀಸರು ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ವಿಶ್ವಾಸಘಾತುಕತನ), ಸೆಕ್ಷನ್420(ವಂಚನೆಯ ಕೆಲಸ)ದೊಂದಿಗೆ ಸೆಕ್ಷನ್ 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳಿಗೆ ಎಸಗುವ ವಂಚನೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದರು

ಆದರೆ, The News Minute ಸುದ್ದಿ ಸಂಸ್ಥೆಯಲ್ಲಿ ಈ ವರದಿ ಪ್ರಕಟವಾಗುತ್ತಿದ್ದಂತೆಯೆ, ನ್ಯಾಯಾಧೀಶರು ಪೊಲೀಸ್ ಠಾಣೆಯಿಂದ ತಮ್ಮ ದೂರನ್ನು ಹಿಂಪಡೆದಿದ್ದಾರೆ. ದೂರನ್ನು ಮುಕ್ತಾಯಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News