ಇಂಧನ ಕ್ಷೇತ್ರಕ್ಕೆ ಸಂಬಂಧಿಸಿ 4 ಒಪ್ಪಂದಗಳಿಗೆ ಭಾರತ - ಯುಎಇ ಸಹಿ

Update: 2024-09-09 15:59 GMT

 ಅಬುದಾಬಿಯ ಯುವರಾಜ ಶೇಕ್ ಖಾಲಿದ್ ಬಿನ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ , ಪ್ರಧಾನಿ ನರೇಂದ್ರ ಮೋದಿ | PC : PTI

ಹೊಸದಿಲ್ಲಿ : ಭಾರತ ಹಾಗೂ ಯುನೈಟಡ್ ಅರಬ್ ಎಮಿರೇಟ್ಸ್ ಬಾಂಧವ್ಯಕ್ಕೆ ಒತ್ತು ನೀಡಿ ಪ್ರಧಾನಿ ನರೇಂದ್ರ ಮೋದಿ ಅಬುದಾಬಿಯ ಯುವರಾಜ ಶೇಕ್ ಖಾಲಿದ್ ಬಿನ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭ ಇಂಧನ ಸಹಕಾರ ವಿಸ್ತರಣೆಯ 4 ಒಪ್ಪಂದಗಳಿಗೆ ಭಾರತ ಹಾಗೂ ಯುಎಇ ಸಹಿ ಹಾಕಿದೆ.

ಈ ನಾಲ್ಕು ಒಪ್ಪಂದಗಳಲ್ಲಿ ಒಂದು ಅಬುದಾಬಿ ನ್ಯಾಷನಲ್ ಆಯಿಲ್ ಕಂಪೆನಿ (ಎಡಿಎನ್‌ಒಸಿ) ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್, ಇನ್ನೊಂದು ಅಬುದಾಬಿ ನ್ಯಾಷನಲ್ ಆಯಿಲ್ ಕಂಪೆನಿ (ಎಡಿಎನ್‌ಒಸಿ) ಹಾಗೂ ಇಂಡಿಯಾ ಸ್ಟೆಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್) ನಡುವಿನ ದೀರ್ಘಾವಧಿ ಎಲ್‌ಎನ್‌ಐ ಪೂರೈಕೆಯ ಒಪ್ಪಂದ ಕೂಡ ಸೇರಿದೆ.

ಬರಾಖ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಕೂಡ ಎಮಿರೇಟ್ಸ್ ನ್ಯೂಕ್ಲಿಯರ್ ಎನರ್ಜಿ ಕಂಪೆನಿ (ಈಎನ್‌ಇಸಿ) ಹಾಗೂ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ನಾಲ್ಕನೇಯದ್ದು ಊರ್ಜ ಭಾರತ್ ಹಾಗೂ ಅಬುದಾಬಿ ನ್ಯಾಷನಲ್ ಆಯಿಲ್ ಕಂಪೆನಿ (ಎಡಿಎನ್‌ಒಸಿ)ಜಂಟಿಯಾಗಿ ನಡೆಸಲಿರುವ ಇಂಧನ ಉತ್ಪಾದನಾ ಉದ್ದಿಮೆಗೆ ರಿಯಾಯಾತಿ ನೀಡುವುದಕ್ಕೆ ಸಂಬಂಧಿಸಿದ್ದಾಗಿದೆ.

ಭಾರತದಲ್ಲಿ ಫುಡ್ ಪಾರ್ಕ್ ಆರಂಭಿಸಲು ಗುಜರಾತ್ ಸರಕಾರ ಹಾಗೂ ಅಬುಧಾಬಿ ಡೆವಲಪ್‌ಮೆಂಟಲ್ ಹೋಲ್ಡಿಂಗ್ ಕೆಂಪೆನಿ ಪಿಐಎಸ್‌ಸಿ ಪ್ರತ್ಯೇಕ ಒಪ್ಪಂದವೊಂದಕ್ಕೆ ಕೂಡ ಸಹಿ ಹಾಕಿವೆ.

ಸಮಗ್ರ ವ್ಯೆಹಾತ್ಮಕ ಬಾಂಧವ್ಯವನ್ನು ವೃದ್ಧಿಸುವ ಗುರಿಯೊಂದಿಗೆ ಭಾರತ ಹಾಗೂ ಯುಎಇ ನಡುವಿನ ಬಹುಮುಖಿ ಬಾಂಧವ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವರಾಜ ಎಐ ನಹ್ಯಾನ್ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News