ಗುಜರಾತ್: ಆರನೇ ಕೊಲೆ ಪ್ರಕರಣವನ್ನು ಒಪ್ಪಿಕೊಂಡ ಸರಣಿ ಹಂತಕ

Update: 2024-12-04 09:20 GMT

PC : indiatoday.in

ವಲ್ಸಾದ್: ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾದ 'ಸರಣಿ ಹಂತಕ' ಜೂನ್‌ನಲ್ಲಿ ಆರನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ನವೆಂಬರ್ 14 ರಂದು ವಲ್ಸಾದ್ ಜಿಲ್ಲೆಯ ಉದ್ವಾಡ ರೈಲು ನಿಲ್ದಾಣದ ಬಳಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಶವ ಪತ್ತೆಯಾದ ಬಳಿಕ ಹರಿಯಾಣದ ರೋಹ್ಟಕ್ ಮೂಲದ ರಾಹುಲ್ ಜಾಟ್ ನನ್ನು ಬಂಧಿಸಿದ್ದು, ವಿಚಾರಣೆ ವೇಳೆ, ಯುವತಿಯ ಕೊಲೆ ಸೇರಿದಂತೆ ಈ ಹಿಂದೆ ನಾಲ್ಕು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ದೃಷ್ಟಿ ವಿಕಲಚೇತನ ಯುವಕನನ್ನು ಆರೋಪಿ ಹತ್ಯೆಗೈದಿದ್ದು, ಇದು ಆತ ನಡೆಸಿದ ಆರನೇ ಕೊಲೆ ಎಂದು ಈಗ ಆತ ಒಪ್ಪಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಕರಂರಾಜ್ ವಘೇಲಾ ತಿಳಿಸಿದ್ದಾರೆ.

ಜೂನ್ 8, 2024 ರಂದು ವಡೋದರಾದ ಪ್ರತಾಪ್‌ನಗರ ಹೋಗುವ ಸಂದರ್ಭದಲ್ಲಿ ಮಹಾರಾಷ್ಟ್ರದ ನಂದೂರ್‌ಬಾರ್‌ ಮೂಲದ ಫಯಾಜ್ ಅಹ್ಮದ್ ಶೇಖ್ ಎಂಬವರೊಂದಿಗೆ ಆರೋಪಿ ಸ್ನೇಹ ಬೆಳೆಸಿದ್ದಾನೆ. ನಂತರ ಅವರು ವಡೋದರಾ ಜಿಲ್ಲೆಯ ದಭೋಯ್‌ನಲ್ಲಿ ಇಳಿದರು. ಫಯಾಝ್‌ ನನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದು ಆರೋಪಿ ಕಬ್ಬಿಣದ ಸರಪಳಿಯಿಂದ ಫಯಾಝ್‌ ನ ಕತ್ತು ಹಿಸುಕಿ ಆತನಲ್ಲಿದ್ದ ಮೊಬೈಲ್ ಫೋನ್ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಎಸ್ಪಿ ವಘೇಲಾ ಹೇಳಿದ್ದಾರೆ.

ಇದರೊಂದಿಗೆ ನಾವು ಇನ್ನೂ ಒಂದು ಪತ್ತೆಯಾಗದ ಕೊಲೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ತೆಲಂಗಾಣದ ಸಿಕಂದರಾಬಾದ್ ಬಳಿ ರೈಲಿನಲ್ಲಿ ಮಹಿಳೆಯೊಬ್ಬರನ್ನು ದರೋಡೆ ಮಾಡಿ ಹತ್ಯೆಗೈದಿದ್ದ ಆರೋಪಿ, ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಸೋಲಾಪುರ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಪಶ್ಚಿಮ ಬಂಗಾಳದ ಹೌರಾ ರೈಲ್ವೇ ನಿಲ್ದಾಣದ ಬಳಿ ಕತಿಹಾರ್ ಎಕ್ಸ್‌ಪ್ರೆಸ್‌ನಲ್ಲಿ ವೃದ್ಧನೊಬ್ಬನನ್ನು ಇರಿದು ಕೊಂದಿದ್ದಾನೆ. ಕರ್ನಾಟಕದ ಮೂಲ್ಕಿ ಬಳಿ ಕೊಲೆಯಾದ ರೈಲು ಪ್ರಯಾಣಿಕನೂ ಆತನ ಬಲಿಪಶು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಟ್ರಕ್ ಕಳ್ಳತನ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ 2018-19 ಮತ್ತು 2024 ರಲ್ಲಿ ಆತ ಈಗಾಗಲೇ ಜೈಲು ಸೇರಿದ್ದ ಎಂದೂ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News