ಹರ್ಯಾಣ | ಬೆಳೆ ಕೂಳೆ ದಹನ ; 14 ರೈತರ ಬಂಧನ
ಚಂಡಿಗಢ : ತಮ್ಮ ಹೊಲಗಳಲ್ಲಿ ಬೆಳೆ ಕೂಳೆ ದಹಿಸಿದ ಆರೋಪದಲ್ಲಿ ಕಳೆದ ಕೆಲವು ದಿನಗಳಲ್ಲಿ ಕೈಥಲ್ ಜಿಲ್ಲೆಯ 14 ರೈತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ಸೋಮವಾರ ತಿಳಿಸಿದ್ದಾರೆ.
ಹರ್ಯಾಣ ಹಾಗೂ ನೆರೆಯ ಪಂಜಾಬ್ನಲ್ಲಿ, ಮುಖ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ನ ಕೊಯ್ಲಿನ ಬಳಿಕ ಬೆಳೆ ಕೂಳೆ ದಹನ ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.
‘‘ಕಳೆದ ಕೆಲವು ದಿಗಳಲ್ಲಿ ಬೆಳೆ ಕೂಳೆ ದಹಿಸಿದ ಆರೋಪದಲ್ಲಿ 14 ರೈತರನ್ನು ಬಂಧಿಸಲಾಗಿದೆ. ಆದರೆ, ಅನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ’’ ಎಂದು ಕೈಥಲ್ನ ಪೊಲೀಸ್ ಉಪ ಅಧೀಕ್ಷಕ (ಪ್ರಧಾನ ಕಚೇರಿ) ಬಿರ್ಬಾನ್ ತಿಳಿಸಿದ್ದಾರೆ.
ಬೆಳೆ ಕೂಳೆ ದಹಿಸಿರುವ ಆರೋಪದ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯ್ದೆಯ ಸೆಕ್ಷನ್ ಹಾಗೂ ಇತರ ಕಾನೂನಿನ ಸಂಬಂಧಿತ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಾಣಿಪತ್ ಹಾಗೂ ಯಮುನಾನಗರ್ ಸೇರಿದಂತೆ ಇತರ ಕೆಲವು ಜಿಲ್ಲೆಗಳಲ್ಲಿ ಕೂಡ ಇತ್ತೀಚೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.