ಹರ್ಯಾಣ ಚುನಾವಣೆ ಮೈತ್ರಿ: 10 ಸ್ಥಾನಗಳಿಗೆ ಆಮ್ ಆದ್ಮಿ ಬಿಗಿಪಟ್ಟು
ಹೊಸದಿಲ್ಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಜತೆಗೆ ಸ್ಥಾನ ಹೊಂದಾಣಿಕೆ ಮಾತುಕತೆ ನಡೆಸುತ್ತಿದ್ದು, 10 ಸ್ಥಾನಗಳಿಗೆ ಬೇಡಿಕೆ ಮುಂದಿಟ್ಟಿದೆ. ಆದರೆ ಕಾಂಗ್ರೆಸ್ ಪಕ್ಷ ಏಳನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದು, ಚರ್ಚೆ ಮುಂದುವರಿದಿದೆ.
ಇಂಡಿಯಾ ಮೈತ್ರಿಕೂಟದ ಎರಡು ಪಕ್ಷಗಳು ಸ್ಥಾನ ಹೊಂದಾಣಿಕೆ ಕುರಿತಂತೆ ಬಿಗಿ ನಿಲುವು ಹೊಂದಿದ್ದು, ಒಮ್ಮತಕ್ಕೆ ಬರುವುದು ಸಾಧ್ಯವಾಗುತ್ತಿಲ್ಲ. ಮಂಗಳವಾರದವರೆಗೆ ಕಾಂಗ್ರೆಸ್ ಪಕ್ಷ 90 ಸ್ಥಾನಗಳ ಪೈಕಿ 66 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ರಾಘವ್ ಛಡ್ಡ ಈಗಾಗಲೇ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಜತೆಗೆ ಎರಡು ಸುತ್ತುಗಳ ಮಾತುಕತೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಮತ್ತೆ ಭೇಟಿ ಮಾಡಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.
"ಆಮ್ ಆದ್ಮಿ ಪಕ್ಷ 10 ಸ್ಥಾನಗಳಿಗೆ ಬೇಡಿಕೆ ಮುಂದಿಟ್ಟಿದ್ದು, 90 ಸ್ಥಾನಗಳ ಪೈಕಿ 7ನ್ನು ಬಿಟ್ಟುಕೊಡಲು ಕಾಂಗ್ರೆಸ್ ಮುಂದಾಗಿದೆ. ಆಮ್ ಆದ್ಮಿ ಎಲ್ಲ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಒಂದೊಂದು ಸ್ಥಾನಗಳನ್ನು ಕೇಳುತ್ತಿದೆ" ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಬಳಿಕ ಹೇಳಿಕೆ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ, ಮಾತುಕತೆ ಆರಂಭಿಕ ಹಂತದಲ್ಲಿದೆ. ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.