ಒಂದು ದಶಕದಲ್ಲಿ 5,600 ಹಾವುಗಳನ್ನು ರಕ್ಷಿಸಿದ ಹರಿಯಾಣ ವ್ಯಕ್ತಿ: ಹತ್ತು ಬಾರಿ ಹಾವುಗಳಿಂದ ಕಡಿತ
ಚಂಡೀಗಢ: ಹರಿಯಾಣದ ಫತೇಬಾದ್ ಜಿಲ್ಲೆಯ ನಿವಾಸಿಯಾದ 28 ವರ್ಷದ ವ್ಯಕ್ತಿಯೊಬ್ಬ ಕಳೆದ ಒಂದು ದಶಕದಲ್ಲಿ 5,600ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದು, ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಹತ್ತು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಭಟ್ಟು ಕಲನ್ ಗ್ರಾಮದ ನಿವಾಸಿಯಾದ ಪವನ್ ಜೋಗ್ಪಾಲ್, ತಾನು ಗ್ರಾಮೀಣ ಒಳನಾಡಿನಲ್ಲಿ ಮನೆಗಳನ್ನು ಪ್ರವೇಶಿಸುವ ಹಾವುಗಳನ್ನು ಕಳೆದ ಒಂದು ದಶಕದಿಂದ ರಕ್ಷಿಸುತ್ತಾ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಈವರೆಗೆ 5,600ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದು, ಈ ಕಾರ್ಯಾಚರಣೆಯ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದೇನೆ ಎಂದು ಜೋಗ್ಪಾಲ್ ಹೇಳಿಕೊಂಡಿದ್ದಾರೆ.
“ನಾನು ಇತ್ತೀಚೆಗೆ ಮರಿ ನಾಗರಹಾವನ್ನು ರಕ್ಷಿಸಿದ್ದು, ಫತೇಬಾದ್ ನಲ್ಲಿ ಆಯೋಜನೆಗೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಧ್ವಜಾರೋಹಣ ನಡೆಯಬೇಕಿದ್ದ ಬಯಲು ಪ್ರದೇಶದಲ್ಲಿ ಅದನ್ನು ಹಿಡಿಯಲಾಯಿತು” ಎಂದು ಜೋಗ್ಪಾಲ್ ತಿಳಿಸಿದ್ದಾರೆ.
ಹಲವಾರು ಪ್ರದೇಶಗಳು ಜಲಾವೃತಗೊಳ್ಳಲು ಕಾರಣವಾಗಿದ್ದ ಪ್ರವಾಹದ ಕಾರಣಕ್ಕೆ ಮರಗಳ ಮೇಲೆ ಆಶ್ರಯ ಪಡೆದಿದ್ದ ಹಲವಾರು ಹಾವುಗಳನ್ನು ನಾನು ರಕ್ಷಿಸಿದೆ ಎಂದೂ ಜೋಗ್ಪಾಲ್ ಹೇಳಿದ್ದಾರೆ.
ರಕ್ಷಿಸಲ್ಪಟ್ಟ ಹಾವುಗಳನ್ನು ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟು ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ.
“ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ನಾನು ಹಾವುಗಳನ್ನು ರಕ್ಷಿಸುತ್ತಾ ಬರುತ್ತಿದ್ದೇನೆ. ಅವುಗಳ ಪೈಕಿ ಬಹುತೇಕ ಹಾವುಗಳು ಗ್ರಾಮಸ್ಥರ ಮನೆಗಳಿಗೆ ಮತ್ತು ಹಿತ್ತಿಲುಗಳಿಗೆ ಪ್ರವೇಶಿಸಿದವಾಗಿರುತ್ತವೆ” ಎಂದು ಜೋಗ್ಪಾಲ್ ಹೇಳಿದ್ದಾರೆ.
“ನಾನು 17 ವರ್ಷ ವಯಸ್ಸಿನವನಾಗಿದ್ದಾಗ ನಮ್ಮ ಮನೆಗೆ ಹಾವೊಂದು ಪ್ರವೇಶಿಸಿತು. ನನ್ನ ಮನೆಯ ಬಳಿ ನೆರೆದಿದ್ದ ನೆರೆಹೊರೆಯವರು ಅದನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಆದರೆ, ನಾನು ಮಾತ್ರ ಅದನ್ನು ಕೊಲ್ಲಬೇಡಿ ಎಂದು ಅವರ ಮೇಲೆ ಒತ್ತಡ ಹೇರಿದೆ. ನಂತರ ನಾನು ಆ ಹಾವನ್ನು ರಕ್ಷಿಸಲು ಪ್ರಯತ್ನಿಸಿದೆ. ಆದರೆ, ಅಲ್ಲಿ ನೆರೆದಿದ್ದವರ ಪೈಕಿ ಒಬ್ಬರು ಆ ಹಾವನ್ನು ಬಡಿದು ಸಾಯಿಸಿದರು. ಈ ಘಟನೆಯು ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿತು. ಇದಾದ ನಂತರ ನಾನು ಡಿಸ್ಕವರಿ ವಾಹಿನಿಯನ್ನು ವೀಕ್ಷಿಸಲು ಶುರು ಮಾಡಿದೆ. ಮೊದಲು ನಾನು ಸಣ್ಣ ಹಾವುಗಳನ್ನು ರಕ್ಷಿಸಲು ಪ್ರಾರಂಭಿಸಿದೆ. ನಾನು ಹಾವುಗಳ ಕುರಿತು ಹಲವಾರು ಪುಸ್ತಕಗಳನ್ನು ಓದಿ, ಅವುಗಳಿಂದ ಜ್ಞಾನ ಸಂಪಾದಿಸಿದ್ದೇನೆ” ಎಂದು ತಾನು ಹೇಗೆ ಪೂರ್ಣಕಾಲಿಕ ಹಾವು ರಕ್ಷಕನಾಗಿ ಬದಲಾದೆ ಎಂಬುದರ ಕುರಿತು ಜೋಗ್ಪಾಲ್ ವಿವರಿಸಿದ್ದಾರೆ.
ಮೊದಲಿಗೆ ಮನೆಯನ್ನು ಪ್ರವೇಶಿಸಿದ್ದ ಹಾವನ್ನು ರಕ್ಷಿಸಲು ಮುಂದಾಗಿದ್ದ ಜೋಗ್ಪಾಲ್, ನಂತರ ಪೂರ್ಣಕಾಲಿಕ ಹಾವು ರಕ್ಷಕರಾಗಿ ಬದಲಾಗಿದ್ದು, ಇದುವರೆಗೆ 5,600ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ, ಹತ್ತಕ್ಕೂ ಹೆಚ್ಚು ಬಾರಿ ಹಾವುಗಳಿಂದ ಕಡಿಸಿಕೊಂಡಿದ್ದಾರೆ. ಸದ್ಯ ಹಾವು ರಕ್ಷಣೆಯನ್ನು ಪೂರ್ಣಕಾಲಿಕ ಉದ್ಯೋಗವಾಗಿಸಿಕೊಂಡಿರುವ ಜೋಗ್ಪಾಲ್, ತನ್ನೊಂದಿಗೆ ಇತರ ಮೂರು ಮಂದಿಯ ತಂಡವನ್ನು ಕಟ್ಟಿಕೊಂಡಿದ್ದಾರೆ.
ನಾನು ಹಾವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲೂ ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಪವನ್ ಜೋಗ್ಪಾಲ್.