ಹರ್ಯಾಣ ಹಿಂಸಾಚಾರ: ಪರಿಸ್ಥಿತಿ ಅಂದಾಜಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ
ನೂಹ್: ಕಳೆದ ವಾರ ಕೋಮು ಹಿಂಸಾಚಾರ ಭುಗಿಲೆದ್ದ ನೂಹ್ ನ ಪರಿಸ್ಥಿತಿ ಅಂದಾಜಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಹರ್ಯಾಣದ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲ ಮಂಗಳವಾರ ಹೇಳಿದ್ದಾರೆ. ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ಜುಲೈ 31ರಂದು ಆಯೋಜಿಸಿದ್ದ ಮೆರವಣಿಗೆ ‘ಬ್ರಿಜ್ ಮಂಡಲ್ ಜಲಾಭಿಷೇಕ್ ಯಾತ್ರೆ’ ಸಂದರ್ಭ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಅನಂತರ ಅದು ಇತರ ಜಿಲ್ಲೆಗಳಿಗೂ ಹರಡಿತ್ತು.
ಈ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದರು. ಬಲಪಂಥೀಯ ಗುಂಪು ಗುರುಗ್ರಾಮದಲ್ಲಿ ದಾಂಧಲೆ ನಡೆಸಿತ್ತು. ಸೆಕ್ಟರ್ 57ರಲ್ಲಿ ಮಸೀದಿಯೊಂದಕ್ಕೆ ಬೆಂಕಿ ಹಚ್ಚಿತ್ತು. ಮಸೀದಿಯ ಸಹಾಯಕ ಧರ್ಮ ಗುರುವನ್ನು ಹತ್ಯೆಗೈದಿತ್ತು. ಮರುದಿನ ಸೆಕ್ಟರ್ 70ರಲ್ಲಿ ಹಲವು ಅಂಗಡಿಗಳು ಹಾಗೂ ಮುಸ್ಲಿಂ ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿತ್ತು.
‘‘ನೂಹ್ ನ ಪೊಲೀಸ್ ಅಧೀಕ್ಷಕ ಜುಲೈ 22ರಿಂದ ರಜೆಯಲ್ಲಿದ್ದರು’’ ಎಂದು ದುಷ್ಯಂತ್ ಚೌಟಾಲ ಹೇಳಿದ್ದಾರೆ. ‘‘ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗೆ ಪರಿಸ್ಥಿತಿಯನ್ನು ಸಮರ್ಪಕವಾಗಿ ಅಂದಾಜಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಮೆರವಣಿಗೆಗೆ ಅನುಮತಿ ನೀಡಿದ ಅಧಿಕಾರಿಗಳು ಕೂಡ ಪರಿಸ್ಥಿತಿಯನ್ನು ಸಮರ್ಪಕವಾಗಿ ಅಂದಾಜಿಸಿಲ್ಲ’’ ಎಂದು ಅವರು ಹೇಳಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯ ಬಗ್ಗೆ ಸಮರ್ಪಕ ಅಂದಾಜು ನೀಡುವಲ್ಲಿ ಆಯೋಜಕರು ವಿಫಲರಾದರು ಎಂದು ದುಷ್ಯಂತ್ ಚೌಟಾಲ ಅವರು ಮರು ಉಚ್ಚರಿಸಿದ್ದಾರೆ.
ಸುಮಾರು 3,200 ಜನರ ಮೆರವಣಿಗೆಗೆ ಅನುಮತಿ ನೀಡಲಾಗಿದ್ದು, ಅದರಂತೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ‘‘ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದರೆ, ಇನ್ನಷ್ಟು ಪಡೆಗಳನ್ನು ನಿಯೋಜಿಸಬಹುದಿತ್ತು. ಜನರ ಸಂಖ್ಯೆ ಬಗ್ಗೆ ನಿಖರ ಮಾಹಿತಿ ನೀಡುವುದು ಆಯೋಜಕರ ಜವಾಬ್ದಾರಿ’’ ಎಂದು ದುಶ್ಯಂತ ಚೌಟಾಲ ಹೇಳಿದ್ದಾರೆ.