ಹಥ್ರಾಸ್ ಕಾಲ್ತುಳಿತ ಪ್ರಕರಣ: ಭಯಾನಕ ಚಿತ್ರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ; ನಾಪತ್ತೆಯಾದವರಿಗೆ ಮುಂದುವರಿದ ಶೋಧ
ಹೊಸದಿಲ್ಲಿ: ಗೊಂದಲ, ಚೀರಾಟ, ಭೀತಿ, ಅರಾಜಕತೆ.. ಉತ್ತರ ಪ್ರದೇಶದ ಹಥ್ರಾಸ್ ಎಂಬ ಪುಟ್ಟ ಗ್ರಾಮದಲ್ಲಿ ಸ್ವಯಂಘೋಷಿತ ದೇವಮಾನವ ಭೋಲೇ ಬಾಬಾ ಕಾರ್ಯಕ್ರಮದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಚಿತ್ರಣವನ್ನು ಪ್ರತ್ಯಕ್ಷದರ್ಶಿಯೊಬ್ಬರು ಬಿಚ್ಚಿಟ್ಟ ಬಗೆ ಇದು.
ತೀರಾ ಸನಿಹದಲ್ಲೇ ಸಾವು ನಮ್ಮ ಮುಂದಿದೆ ಎಂಬ ಕಲ್ಪನೆಯೂ ಇಲ್ಲದೇ ಇಕ್ಕಟ್ಟಿನ ಪ್ರದೇಶದಲ್ಲಿ ಭಾರಿ ಸಂಖ್ಯೆಯ ಭಕ್ತರು ಸೇರಿದ್ದರು. ಪುಲ್ರಾಯಿ ಗ್ರಾಮದಲ್ಲಿ ಆಯೋಜಿಸಿದ್ದ ಸತ್ಸಂಗ ಮುಕ್ತಾಯದ ಸಂದರ್ಭದಲ್ಲಿ ಭಕ್ತರು ಏಕಕಾಲಕ್ಕೆ ಹೊರಹೋಗಲು ಧಾವಿಸಿದ್ದು ದುರಂತಕ್ಕೆ ಕಾರಣವಾಗಿದೆ.
ದುರಂತದಲ್ಲಿ 120ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಇತರ ಹಲವು ಮಂದಿ ಗಾಯಗೊಂಡಿದ್ದಾರೆ. ನಿರ್ಗಮನ ದ್ವಾರದತ್ತ ಭಕ್ತರು ಪ್ರವಾಹದೋಪಾದಿಯಲ್ಲಿ ನುಗ್ಗಿದ್ದರಿಂದ ಒಬ್ಬರ ಹಿಂದೆ ಒಬ್ಬರು ನೆಲಕ್ಕೆ ಉರುಳಿದರು ಎಂದು ಪ್ರತ್ಯಕ್ಷದರ್ಶಿ ಶಕುಂತಲಾ ಘಟನೆಯ ಚಿತ್ರಣವನ್ನು ತೆರೆದಿಟ್ಟರು.
"ಕಾರ್ಯಕ್ರಮ ಮುಗಿದಾಗ ಎಲ್ಲರೂ ಹೊರಬರುವ ಧಾವಂತದಿಂದ ಗುಂಪುಗುಂಪಾಗಿ ಬಂದರು. ರಸ್ತೆ ಸಮತಟ್ಟು ಇರಲಿಲ್ಲ ಹಾಗೂ ಆಳವಾದ ಚರಂಡಿಯ ಮೇಲೆ ರಸ್ತೆ ನಿರ್ಮಿಸಲಾಗಿತ್ತು. ಜನ ಅದರೊಳಕ್ಕೆ ಒಬ್ಬೊಬ್ಬರಾಗಿ ಬಿದ್ದರು. ಕೆಲವು ಮಂದಿ ಕಾಲ್ತುಳಿತದಿಂದ ಜಜ್ಜಿಹೋದರು" ಎಂದು ವಿವರಿಸಿದರು.
ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಆಸ್ಪತ್ರೆಗಳಿಗೆ ಟ್ರಕ್ ಗಟ್ಟಲೆ ದೇಹಗಳು ಬರುತ್ತಿವೆ. ಹಲವು ಮಂದಿ ನಾಪತ್ತೆಯಾಗಿರುವ ತಮ್ಮ ಸಂಬಂಧಿಕರ ಹುಡುಕಾಟದಲ್ಲಿರುವುದು ಕಂಡುಬಂತು.
"ನಾನು ಬಡೂನ್ ಗ್ರಾಮದಿಂದ ಕುಟುಂಬದ ಜತೆ ಆಗಮಿಸಿದ್ದೆ. ನನ್ನ ತಮ್ಮನ ಪತ್ನಿ ಕಾಲ್ತುಳಿತದ ಬಳಿಕ ನಾಪತ್ತೆಯಾಗಿದ್ದಾಳೆ. ಹಲವು ಮಂದಿ ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಾನು ಮೈಕ್ ನಲ್ಲಿ ಕೂಗಿ ಹೇಳಿದರೂ, ಪ್ರಯೋಜನವಾಗಲಿಲ್ಲ" ಎಂದು ಸುರೇಶ್ ಎಂಬವರು ಹೇಳಿದರು. 20-25 ಮಂದಿಯ ಜತೆ ಸತ್ಸಂಗಕ್ಕೆ ಆಗಮಿಸಿದ್ದ ಮತ್ತೊಬ್ಬ ಮಹಿಳೆ ತನ್ನ 15 ವರ್ಷದ ಪುತ್ರಿಗಾಗಿ ಹುಡುಕಾಡುತ್ತಿದ್ದಾರೆ.
ಈ ಮಧ್ಯೆ ವೈದ್ಯಕೀಯ ನೆರವಿಗಾಗಿ ಎನ್ಡಿಆರ್ಎಫ್ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಘಟನೆ ಸಂಬಂಧ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ, ಎಲ್ಲ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.