ಉತ್ತರ, ವಾಯುವ್ಯ ಭಾರತದಲ್ಲಿ ಭಾರೀ ಮಳೆ | 28 ಮಂದಿ ಮೃತ್ಯು, ಹಲವರು ನಾಪತ್ತೆ

Update: 2024-08-12 15:18 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ಉತ್ತರ ಹಾಗೂ ವಾಯುವ್ಯ ಭಾರತದಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಭೂಕುಸಿತ ಸಂಭವಿಸಿವೆ, ಮನೆಗಳು ನಾಶವಾಗಿವೆ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಅಮರನಾಥ್ ಯಾತ್ರಾ ಪ್ರದೇಶದಲ್ಲಿ ಭಾರೀ ಮಳೆ ಸುರಿದ ಬಳಿಕ ವಾರ್ಷಿಕ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಆಡಳಿತ ತಿಳಿಸಿದೆ. ರಾಜಸ್ಥಾನದಲ್ಲಿ ಕಳೆದ ಎರಡು ದಿನಗಳಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.

ಹರ್ಯಾಣದಲ್ಲಿ ಸುರಿದ ಭಾರೀ ಮಳೆಯಿಂದ ಯಮುನಾನಗರ ಜಿಲ್ಲೆಯ ಕನುವಾಲಾ, ಬಾಮ್ನೋಲಿ, ಮಾಲಿಕ್ಪುರ, ಬಂಗಾರ್, ಲಾಲಾಹಡಿ ಹಾಗೂ ಮಂಕಾಪುರ ಗ್ರಾಮಗಳು ನೆರೆ ಪೀಡಿತವಾಗಿವೆ. ಖನುವಾಲಾ ಗ್ರಾಮದಿಂದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಪಂಜಾಬ್ನ ಹೋಸಿಯಾರಪುರದಲ್ಲಿ ರವಿವಾರ ಎಸ್ ಯು ವಿ ವಾಹನವೊಂದು ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಪರಿಣಾಮ ಅದರಲ್ಲಿದ್ದ ಒಂದೇ ಕುಟುಂಬದ 8 ಮಂದಿ ಸಹಿತ 9 ಮಂದಿ ಸಾವನ್ನಪ್ಪಿದ್ದಾರೆ.

ಕೇಂದ್ರ, ದಕ್ಷಿಣ, ವಾಯುವ್ಯ ಹಾಗೂ ಪೂರ್ವ ದಿಲ್ಲಿಗಳಲ್ಲಿ ಭಾರೀ ಮಳೆ ಸುರಿದಿರುವುದರಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ ಹಾಗೂ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ರೋಹಿನಿ ಸೆಕ್ಟರ್ 20ರ ಜಲಾವೃತ ಉದ್ಯಾನವನವೊಂದರಲ್ಲಿ ರವಿವಾರ 7 ವರ್ಷದ ಬಾಲಕ ಮುಳುಗಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಹಿಮಾಚಲಪ್ರದೇಶದಲ್ಲಿ ಉಂಟಾದ ನೆರೆ ಹಾಗೂ ಭೂಕುಸಿತದಿಂದ ಮೂವರು ಬಾಲಕಿಯರು ಮೃತಪಟ್ಟಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ. ಉತ್ತರಪ್ರದೇಶದ ಜಲೌನ್ನ ಕೊಚ್ ಪ್ರದೇಶದಲ್ಲಿ ಮನೆಯ ಛಾವಣಿ ಕುಸಿದು ಮಹಿಳೆ ಹಾಗೂ ಅವರ 7 ವರ್ಷದ ಪುತ್ರ ಸಾವನ್ನಪ್ಪಿದ್ದಾನೆ.

ರಾಜಸ್ಥಾನದ ಭರತ್ಪುರ ಜಿಲ್ಲೆಯ ಒಂದೇ ಗ್ರಾಮದ 7 ಮಂದಿ ಯುವಕರು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಲು ಹಾಗೂ ರೀಲ್ಸ್ ಮಾಡಲು ತೆರಳಿದ ಸಂದರ್ಭ ಮುಳುಗಿ ಮೃತಪಟ್ಟಿದ್ದಾರೆ.

ಘಟನೆ ಶ್ರೀನಗರ್ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಂಗಾಂಗ ನದಿ ಉಕ್ಕಿ ಹರಿಯುತ್ತಿತ್ತು. ಈ ನದಿಯಲ್ಲಿ 8 ಮಂದಿ ಯುವಕರು ಈಜಲು ತೆರಳಿದ್ದರು. ಅವರಲ್ಲಿ 7 ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ಓರ್ವ ಮಾತ್ರ ಬದುಕಿ ಉಳಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News