ಹಿಂಡೆನ್ ಬರ್ಗ್ ಬಂದ್ ಆಗಿದ್ದರ ಅರ್ಥ ಮೊದಾನಿಗೆ ಕ್ಲೀನ್ ಚಿಟ್ ಎಂದಲ್ಲ: ಕಾಂಗ್ರೆಸ್ ; ಬಿಜೆಪಿ ತಿರುಗೇಟು
ಹೊಸದಿಲ್ಲಿ: ಅದಾನಿ ಸಮೂಹದ ಕುರಿತು ಸ್ಪೋಟಕ ವರದಿಗಳನ್ನು ಮಾಡಿದ್ದ ಹಿಂಡೆನ್ ಬರ್ಗ್ ಸಂಸ್ಥೆ ಬಂದ್ ಆದ ಬೆನ್ನಿಗೇ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರ ಪ್ರಾರಂಭಗೊಂಡಿದೆ. ಹಿಂಡೆನ್ ಬರ್ಗ್ ಬಂದ್ ಆಗಿರುವುದರ ಅರ್ಥ ಮೊದಾನಿಗೆ ಕ್ಲೀನ್ ಚಿಟ್ ದೊರೆತಂತಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದರೆ, ಮುಚ್ಚಿ ಹೋಗಿರುವ ಹಿಂಡೆನ್ ಬರ್ಗ್ ಸಂಸ್ಥೆಯ ಗುತ್ತಿಗೆಯನ್ನು ಇದೀಗ ರಾಹುಲ್ ಗಾಂಧಿ ಪಡೆದಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ತಿರುಗೇಟು ನೀಡಿದೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಹಿಂಡೆನ್ ಬರ್ಗ್ ಮುಚ್ಚಿ ಹೋಗಿರುವುದು ಯಾವುದೇ ರೀತಿಯಲ್ಲೂ ಮೊದಾನಿಗೆ ಕ್ಲೀನ್ ಚಿಟ್ ಅಲ್ಲ ಹಾಗೂ ಈ ವಿಷಯವು ಹಿಂಡೆನ್ ಬರ್ಗ್ ಬಂದ್ ಆಗಿದ್ದಕ್ಕಿಂತ ಅಳವಾಗಿದೆ” ಎಂದು ಹೇಳಿದ್ದಾರೆ.
“ಈ ವಿಷಯವು ರಾಷ್ಟ್ರೀಯ ಹಿತಾಸಕ್ತಿಯ ವೆಚ್ಚದಲ್ಲಿ ಪ್ರಧಾನ ಮಂತ್ರಿಯ ಆಪ್ತ ಸ್ನೇಹಿತನನ್ನು ಶ್ರೀಮಂತನನ್ನಾಗಿಸಲು ಭಾರತದ ವಿದೇಶಿ ನೀತಿಗಳ ದುರ್ಬಳಕೆಗೆ ಸಂಬಂಧಿಸಿದ್ದಾಗಿದೆ. ಈ ವಿಷಯವು ವಿಮಾನ ನಿಲ್ದಾಣಗಳು, ಬಂದರುಗಳು, ರಕ್ಷಣೆ ಹಾಗೂ ಸಿಮೆಂಟ್ ಉದ್ಯಮ ವಲಯಗಳಲ್ಲಿ ಅದಾನಿಯು ಏಕಸ್ವಾಮ್ಯವನ್ನು ಸಾಧಿಸಲು ನೆರವು ನೀಡುವಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಭಾರತೀಯ ಉದ್ಯಮಿಗಳು ತಮ್ಮ ಮಹತ್ವದ ಸ್ವತ್ತುಗಳನ್ನು ಅದಾನಿಗೆ ಹಸ್ತಾಂತರಿಸಿರುವುದಕ್ಕೆ ಸಂಬಂಧಿಸಿದ್ದಾಗಿದೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಹಿರಿಯ ಸಂಸದ ರವಿ ಶಂಕರ್ ಪ್ರಸಾದ್, “ಕಾಂಗ್ರೆಸ್ ತನ್ನ ನೂತನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿದ ದಿನದಂದು ಹಿಂಡೆನ್ ಬರ್ಗ್ ತನ್ನ ಅಂಗಡಿಯ ಬಾಗಿಲು ಮುಚ್ಚಿಕೊಂಡಿದೆ. ಈಗೇನಾದರೂ ರಾಹುಲ್ ಗಾಂಧಿ ಈ ಅಂಗಡಿಯ ಗುತ್ತಿಗೆ ಪಡೆದಿದ್ದಾರೆಯೆ? ರಾಹುಲ್ ಗಾಂಧಿ ನಗರ ನಕ್ಸಲರ ಚಿಂತನಾ ಪ್ರಕ್ರಿಯೆಯ ಸಂಪೂರ್ಣ ಹಿಡಿತದಲ್ಲಿದ್ದಾರೆ” ಎಂದು ಆಪಾದಿಸಿದ್ದಾರೆ.
ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಕೋಟ್ಯಧಿಪತಿ ಹೂಡಿಕೆದಾರ ಜಾರ್ಜ್ ಸೊರೊಸ್ ಅವರ ಅಂಗಡಿಯೂ ಬಾಗಿಲು ಹಾಕಿಕೊಳ್ಳುವಂತೆ ಕಾಣುತ್ತಿದೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.