ಮುಸ್ಲಿಂ ಶಾಸಕಿ ದೇವಳಕ್ಕೆ ಭೇಟಿ ನೀಡಿದ ಬಳಿಕ ಗಂಗಾಜಲ ಸಿಂಪಡಿಸಿ ʼಶುದ್ಧೀಕರಿಸಿದʼ ಹಿಂದುತ್ವ ಕಾರ್ಯಕರ್ತರು!

Update: 2023-11-28 12:52 GMT

ಸಯ್ಯಿದಾ ಖಾತೂನ್‌ Image Source : X | @SyedAKashafQ 

ಲಕ್ನೌ: ಉತ್ತರ ಪ್ರದೇಶದ ದೊಮರಿಯಾಗಂಜ್‌ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕಿ ಸಯ್ಯಿದಾ ಖಾತೂನ್‌ ಅವರು ರವಿವಾರ ಸಿದ್ಧಾರ್ಥನಗರ ಜಿಲ್ಲೆಯ ಬಲ್ವಾ ಗ್ರಾಮದ ಸಮ್ಯ ಮಾತಾ ದೇವಸ್ಥಾನದಲ್ಲಿ ನಡೆದ ರಾಮ ಕಥಾಗೆ ಅಲ್ಲಿನ ಆಡಳಿತದ ಆಹ್ವಾನದ ಮೇರೆಗೆ ಹೋಗಿದ್ದರೆ ಮರುದಿನ ಹಿಂದುತ್ವ ಸಂಘಟನೆಗಳು ಮತ್ತು ಸ್ಥಳೀಯ ಪಂಚಾಯತ್‌ ಸದಸ್ಯರು ದೇವಸ್ಥಾನಕ್ಕೆ ಗಂಗಾಜಲ ಸಿಂಪಡಿಸಿ ʼಶುದ್ಧೀಕರಣʼ ನಡೆಸಿದ ಘಟನೆ ನಡೆದಿದೆ.

ಸೋಮವಾರ ಕೆಲ ಹಿಂದು ಸಂಘಟನೆಗಳ ಸದಸ್ಯರು ಹಾಗೂ ಸ್ಥಳೀಯ ಪಂಚಾಯತ್‌ ಅಧ್ಯಕ್ಷ ಮತ್ತು ಸದಸ್ಯರು ಅಲ್ಲಿಗೆ ಆಗಮಿಸಿ ಗಂಗಾಜಲ ಸಿಂಪಡಿಸಿ ಮಾಡಿ, ಹನುಮಾನ್‌ ಚಾಲೀಸ ಪಠಿಸಿ ನಂತರ ಖಾತೂನ್‌ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆಂದು ಹೇಳಲಾಗಿದೆ.

“ಜನರು ಭಕ್ತಿಯಿಂದ ಸಮ್ಯ ಮಾತಾ ಮಂದಿರಕ್ಕೆ ಬರುತ್ತಾರೆ. ಅದಕ್ಕೆ ಸ್ಥಳೀಯ ಶಾಸಕಿ ಅಗೌರವ ತೋರಿದ್ದಾರೆ. ಅವರು ಮಾಂಸಾಹಾರಿ. ಅವರ ಭೇಟಿಯಿಂದ ಸ್ಥಳದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ,” ಎಂದು ಬರ್‌ಹಿನಿ ಚಾಫ ನಗರ ಪಂಚಾಯತ್‌ ಅಧ್ಯಕ್ಷ ಧರ್ಮರಾಜ್‌ ವರ್ಮ ಹೇಳಿದ್ದಾರೆ.

ಈ ಘಟನೆ ಕುರಿತು ಯಾರು ಕೂಡ ದೂರು ನೀಡದೇ ಇರುವುದರಿಂದ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ, ದೂರು ಬಂದರೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಮ ಕಥಾ ಕಾರ್ಯಕ್ರಮಕ್ಕೆ ಸಮಿತಿ ರಚಿಸಲಾಗಿತ್ತು ಹಾಗೂ ಈ ಸಮಿತಿ ಮೂಲಕ ಶಾಸಕಿಯನ್ನು ಆಹ್ವಾನಿಸಲಾಗಿತ್ತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕಿ ತಾವು ಎಲ್ಲಾ ಧರ್ಮಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ. “ನಾನು ಓರ್ವ ಜನಪ್ರತಿನಿಧಿ. ದೇವಸ್ಥಾನವಿರಲಿ ಅಥವಾ ಮಸೀದಿಯಿರಲಿ, ಆಹ್ವಾನಿಸಿದರೆ ಖಂಡಿತಾ ಹೋಗುತ್ತೇನೆ.” ಎಂದರು. ತಮ್ಮ ಪಾಲಿನ ಶಾಸಕರ ಅಭಿವೃದ್ಧಿ ನಿಧಿಯಿಂದ ಹಲವು ದೇಗುಲಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News