ತನ್ನ ರಾಯಭಾರಿ ‘ಆಸಕ್ತಿಯ ವ್ಯಕ್ತಿ’ ಎಂಬ ಕೆನಡಾದ ಆರೋಪಕ್ಕೆ ಭಾರತದ ಖಂಡನೆ

Update: 2024-10-14 14:56 GMT

PC : PTI 

ಹೊಸದಿಲ್ಲಿ : ಭಾರತೀಯ ರಾಯಭಾರಿಯನ್ನು ‘ಆಸಕ್ತಿಯ ವ್ಯಕ್ತಿ’ ಎಂದು ಸೂಚಿಸಿರುವ ತನಿಖೆ ಕುರಿತಂತೆ ಸೋಮವಾರ ಕೆನಡಾಕ್ಕೆ ಕಟು ಶಬ್ದಗಳಲ್ಲಿ ತಿರುಗೇಟು ನೀಡಿರುವ ಕೇಂದ್ರ ಸರಕಾರವು, ಅದನ್ನು ‘ಅಸಂಬದ್ಧ ಆರೋಪ’ ಎಂದು ಬಣ್ಣಿಸಿದ್ದು, ಅದು ತನ್ನ ಮತಬ್ಯಾಂಕ್‌ನ್ನು ಓಲೈಸಲು ಜಸ್ಟಿನ್ ಟ್ರುಡೋ ಸರಕಾರದ ರಾಜಕೀಯ ಕಾರ್ಯಸೂಚಿಯಾಗಿದೆ ಎಂದು ಹೇಳಿದೆ.

ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟರು ಭಾಗಿಯಾಗಿದ್ದರು ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಇತ್ತೀಚಿಗೆ ಕೆನಡಾ ನಿಜ್ಜರ್ ಹತ್ಯೆ ಕುರಿತು ತನ್ನ ತನಿಖೆಯಲ್ಲಿ ಭಾರತೀಯ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರನ್ನು ‘ಆಸಕ್ತಿಯ ವ್ಯಕ್ತಿ’ ಎಂದು ಹೆಸರಿಸಿದ ಬಳಿಕ ರಾಜತಾಂತ್ರಿಕ ವಿವಾದವು ಹೊಸ ತಿರುವನ್ನು ಪಡೆದುಕೊಂಡಿದೆ.

ಕೆನಡಾ ಆರೋಪಕ್ಕೆ ಸೋಮವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತವು, ಪದೇ ಪದೇ ಮನವಿಗಳನ್ನು ಮಾಡಿಕೊಂಡರೂ ಕೆನಡಾ ಸರಕಾರವು ನಿಜ್ಜರ್ ಹತ್ಯೆಯಲ್ಲಿ ತನ್ನ ಕೈವಾಡವಿತ್ತು ಎನ್ನುವುದರ ಕುರಿತು ಯಾವುದೇ ಸಾಕ್ಷ್ಯಾಧಾರವನ್ನು ಹಂಚಿಕೊಂಡಿಲ್ಲ ಎಂದು ಹೇಳಿದೆ. ಟ್ರುಡೋ ಆರೋಪ ರಾಜಕೀಯ ಲಾಭಕ್ಕಾಗಿ ಭಾರತಕ್ಕೆ ಕಳಂಕವನ್ನುಂಟು ಮಾಡುವ ಉದ್ದೇಶಪೂರ್ವಕ ಕಾರ್ಯತಂತ್ರವಾಗಿದೆ ಎಂದು ಬಣ್ಣಿಸಿದೆ.

‘ಕೆನಡಾದಲ್ಲಿ ತನಿಖೆಗೆ ಸಂಬಂಧಿಸಿದ ವಿಷಯದಲ್ಲಿ ಭಾರತೀಯ ರಾಯಭಾರಿ ಮತ್ತು ಇತರ ರಾಜತಾಂತ್ರಿಕರು ‘ಆಸಕ್ತಿಯ ವ್ಯಕ್ತಿಗಳು’ ಎಂದು ಸೂಚಿಸುವ ರಾಜತಾಂತ್ರಿಕ ಸಂವಹನವನ್ನು ನಾವು ನಿನ್ನೆ ಆ ದೇಶದಿಂದ ಸ್ವೀಕರಿಸಿದ್ದೇವೆ. ಈ ಅಸಂಬದ್ಧ ಆರೋಪವನ್ನು ಭಾರತ ಸರಕಾರವು ಬಲವಾಗಿ ತಿರಸ್ಕರಿಸುತ್ತದೆ. ಈ ಆರೋಪವನ್ನು ಟ್ರುಡೊ ಸರಕಾರದ ಮತಬ್ಯಾಂಕ್ ರಾಜಕಾರಣದ ಸುತ್ತ ಕೇಂದ್ರಿತವಾಗಿರುವ ರಾಜಕೀಯ ಕಾರ್ಯಸೂಚಿಯಾಗಿದೆ ಎಂದು ವ್ಯಾಖ್ಯಾನಿಸುತ್ತದೆ ’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News