2021ರ ಕೆನಡಾ ಚುನಾವಣೆಯಲ್ಲಿ ಭಾರತವು ಆದ್ಯತೆಯ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸು ಒದಗಿಸಿತ್ತು: ವರದಿ

Update: 2024-05-04 10:34 GMT
2021ರ ಕೆನಡಾ ಚುನಾವಣೆಯಲ್ಲಿ ಭಾರತವು ಆದ್ಯತೆಯ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸು ಒದಗಿಸಿತ್ತು: ವರದಿ

PC : PTI 

  • whatsapp icon

ಹೊಸದಿಲ್ಲಿ: ಕೆನಡಾದಲ್ಲಿ 2021ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತವು ತನ್ನ ಏಜೆಂಟ್‌ಗಳ ಮೂಲಕ ಆದ್ಯತೆಯ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ಒದಗಿಸಲು ಪ್ರಯತ್ನಿಸಿದ್ದಿರಬಹುದು ಎಂದು ದೇಶದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ಬಹಿರಂಗ ವಿಚಾರಣೆಯ ಮಧ್ಯಂತರ ವರದಿಯು ಹೇಳಿದೆ.

ಶುಕ್ರವಾರ ಬಿಡುಗಡೆಗೊಂಡ ಕೆನಡಾದ ವಿದೇಶಿ ಹಸ್ತಕ್ಷೇಪ ಆಯೋಗದ ವರದಿಯು 2019 ಮತ್ತು 2021ರಲ್ಲಿ ದೇಶದ ಒಕ್ಕೂಟ ಚುನಾವಣಾ ಪ್ರಕ್ರಿಯೆಗಳಲ್ಲಿ ವಿದೇಶಗಳ ಹಸ್ತಕ್ಷೇಪದ ನಿದರ್ಶನಗಳನ್ನು ಪ್ರಸ್ತುತ ಪಡಿಸಿದೆ.

ಕೆಲವು ಪ್ರಕರಣಗಳಲ್ಲಿ ಕೆನಡಾದ ರಾಜಕಾರಣಿಗಳು ತಮಗೆ ಅರಿವಿಲ್ಲದೆ ಭಾರತೀಯ ಏಜೆಂಟ್‌ಗಳಿಂದ ‘ಅಕ್ರಮ ಹಣಕಾಸು ನೆರವು’ ಪಡೆದಿರಬಹುದು ಎಂದು ಹೇಳಿರುವ ವರದಿಯು, ಸೆಕ್ಯೂರಿಟಿ ಆ್ಯಂಡ್ ಇಂಟೆಲಿಜನ್ಸ್ ಥ್ರೆಟ್ಸ್ ಟು ಎಲೆಕ್ಷನ್ಸ್ ಟಾಸ್ಕ್‌ಫೋರ್ಸ್ (ಎಸ್‌ಐಟಿಇ) ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಕ್ಷೇತ್ರಗಳು ಮತ್ತು ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ವಿದೇಶಿ ಹಸ್ತಕ್ಷೇಪ ಚಟುವಟಿಕೆಗಳನ್ನು ಗಮನಿಸಿದೆ. ಇವುಗಳಲ್ಲಿ ಚೀನಾ ಸಿಂಹಪಾಲು ಹೊಂದಿದ್ದು, ಸ್ವಲ್ಪಮಟ್ಟಿಗೆ ಭಾರತ ಮತ್ತು ಪಾಕಿಸ್ತಾನದ ಕೈವಾಡ ಕಂಡು ಬಂದಿದೆ ಮತ್ತು ಇದನ್ನು ಏಜೆಂಟ್‌ಗಳ ಮೂಲಕ ನಡೆಸಲಾಗಿತ್ತು ಎಂದು ತಿಳಿಸಿದೆ. ಆದರೆ ಈ ಹಸ್ತಕ್ಷೇಪಗಳು ಕ್ರಿಮಿನಲ್ ತನಿಖೆಯನ್ನು ಅಗತ್ಯವಾಗಿಸುವ ಮಟ್ಟದಲ್ಲಿ ನಡೆದಿರಲಿಲ್ಲ ಎಂದು ಅದು ಹೇಳಿದೆ.

ದೇಶದಲ್ಲಿ ದಕ್ಷಿಣ ಏಶ್ಯನ್ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೆನಡಾದಲ್ಲಿ ಭಾರತವು ಹಿತಾಸಕ್ತಿಯನ್ನು ಹೊಂದಿದೆ. ಆ ದೇಶದಲ್ಲಿರುವ ಖಲಿಸ್ತಾನ್ ಬೆಂಬಲಿಗರ ವಿಷಯದಲ್ಲಿ ಕೆನಡಾದ ನಿಲುವನ್ನು ಭಾರತದ ಹಿತಾಸಕ್ತಿಗೆ ಅನುಗುಣವಾಗಿಸುವ ಉದ್ದೇಶವನ್ನು ಈ ಹಸ್ತಕ್ಷೇಪವು ಹೊಂದಿದೆ ಎಂದು ವರದಿಯು ಹೇಳಿದೆ.

ವರದಿಯ ಪ್ರಕಾರ,ದಕ್ಷಿಣ ಏಶ್ಯನ್ ಸಮುದಾಯದ ಒಂದು ವರ್ಗವು ಭಾರತದ ಸ್ಥಿರತೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನೊಡ್ಡುವ ‘ಭಾರತ ವಿರೋಧಿ ಭಾವನೆ’ಯನ್ನು ಬೆಳೆಸುತ್ತಿದೆ ಎಂದು ಪರಿಗಣಿಸಲಾಗಿದೆ.

ಭಾರತವು ಕಾನೂನುಬದ್ಧ ಖಲಿಸ್ತಾನಿ ಪರ ರಾಜಕೀಯ ಪ್ರತಿಪಾದನೆ ಮತ್ತು ತುಲನಾತ್ಮಕವಾಗಿ ಸಣ್ಣ ಪ್ರಮಾಣದ ಕೆನಡಾ ಮೂಲದ ಖಲಿಸ್ತಾನಿ ಉಗ್ರವಾದದ ನಡುವೆ ಭೇದವೆಣಿಸುವುದಿಲ್ಲ. ಖಲಿಸ್ತಾನಿ ಪ್ರತ್ಯೇಕತಾವಾದದೊಂದಿಗೆ ಗುರುತಿಸಿಕೊಂಡಿರುವ ಯಾರೇ ಆದರೂ ಭಾರತಕ್ಕೆ ದೇಶದ್ರೋಹಕರ ಬೆದರಿಕೆಯೆಂದು ಅದು ಪರಿಗಣಿಸುತ್ತದೆ ಎಂದು ಹೇಳಿರುವ ವರದಿಯು,ಭಾರತದ ವಿದೇಶಿ ಹಸ್ತಕ್ಷೇಪವು ಇಂಡೋ-ಕೆನೆಡಿಯನ್ ಸಮುದಾಯಗಳಿಗೆ ಸೇರಿದವರನ್ನು ಗುರಿಯಾಗಿಸಿಕೊಂಡಿದೆ,ಆದರೆ ಇಂಡೋ-ಕೆನೆಡಿಯನ್ ಅಲ್ಲದ ಪ್ರಮುಖ ವ್ಯಕ್ತಿಗಳನ್ನು ಸಹ ಅದರ ವಿದೇಶಿ ಪ್ರಭಾವದ ಚಟುವಟಿಕೆಗಳಿಗೆ ಒಳಗಾಗಿಸಲಾಗುತ್ತಿದೆ ಎಂದಿದೆ.

ಈ ಚಟುವಟಿಕೆಗಳು ಕೆನಡಾದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿರದಿರಬಹುದು,ಆದರೂ ಅವು ಮಹತ್ವದ್ದಾಗಿವೆ ಎಂದು ವರದಿಯು ತಿಳಿಸಿದೆ.

ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಮೂವರು ಭಾರತೀಯ ಪ್ರಜೆಗಳನ್ನು ಕೆನಡಾ ಪೋಲಿಸರು ಬಂಧಿಸಿದ ದಿನವೇ ಈ ವರದಿಯು ಬಿಡುಗಡೆಗೊಂಡಿದೆ.

ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಕೆನೆಡಿಯನ್ ಮೌಂಟೆಡ್ ಪೋಲಿಸರು ಕರಣಪ್ರೀತ್ ಸಿಂಗ್,ಕಮಲಪ್ರೀತ್ ಸಿಂಗ್ ಮತ್ತು ಕರಣ ಬ್ರಾರ್ ಎನ್ನುವವರನ್ನು ಆಲ್ಬರ್ಟಾದ ಎಡ್ಮಂಟನ್‌ನಿಂದ ಬಂಧಿಸಿದ್ದಾರೆ. ಅವರ ಮೇಲೆ ಕೊಲೆ ಮತ್ತು ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ.

ಕಳೆದ ತಿಂಗಳು ಕೆನಡಾದ ಭದ್ರತಾ ಗುಪ್ತಚರ ಸೇವೆಯೂ 2019 ಮತ್ತು 2021ರ ಸಾರ್ವತ್ರಿಕ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸಲು ಭಾರತ ಮತ್ತು ಪಾಕಿಸ್ತಾನ ಸರಕಾರಗಳು ಪ್ರಯತ್ನಿಸಿದ್ದವು ಎಂದು ಆರೋಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News