ಆರೆಸ್ಸೆಸ್ ಅಜೆಂಡಾವನ್ನು ಪೂರ್ಣಗೊಳಿಸುವುದು ನಮ್ಮ ಜವಾಬ್ದಾರಿ: ಕೇಂದ್ರ ಸಚಿವ ನಿತಿನ್ ಗಡ್ಕರಿ
ನಾಗಪುರ: ‘ನನಗೆ ವ್ಯಕ್ತಿಗತವಾಗಿ ಯಾವ ಅಜೆಂಡಾವು ಇಲ್ಲ. ಆರೆಸ್ಸೆಸ್ ಅದರ ಅಜೆಂಡಾವನ್ನು ನಮಗೆ ಹೇಳುತ್ತದೆ. ಅದನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, 2025ರಲ್ಲಿ ಆರೆಸ್ಸೆಸ್ಗೆ ನೂರು ವರ್ಷ ತುಂಬಲಿರುವ ಸಂದರ್ಭದಲ್ಲಿ ಬಗ್ಗೆ ನಿಮ್ಮ ಕಾರ್ಯಸೂಚಿ ಏನು ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
‘ಬಿಜೆಪಿಯು ಈಗ ಸಂಸತ್ನಲ್ಲಿ 288 ಸಂಖ್ಯಾಬಲ ಹೊಂದಿದೆ. ಇದನ್ನು ಉಳಿಸಿಕೊಳ್ಳುವುದರ ಜತೆಗೆ ದಕ್ಷಿಣ ಭಾರತದಿಂದ ಹೆಚ್ಚಿನ ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿ ಅವರ ಗುರಿಯಂತೆ 370 ಸ್ಥಾನಗಳನ್ನು ಗಳಿಸುತ್ತೇವೆ. ಈ ಬಾರಿ ನಾವು ದಕ್ಷಿಣದಲ್ಲಿ ಯಶಸ್ಸನ್ನು ಕಾಣಲಿದ್ದೇವೆ. ಮೋದಿ ಸರ್ಕಾರ ದಕ್ಷಿಣದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾಡಿದ ಕೆಲಸಕ್ಕೆ ಫಲ ಸಿಗುವ ಕಾಲ ಬಂದಿದೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯು ಚುನಾವಣಾ ಬಾಂಡ್ಗಳ ಮೂಲಕ ಹೆಚ್ಚಿನ ದೇಣಿಗೆ ಪಡೆದದ್ದು ಸಹಜ ಎಂದು ಗಡ್ಕರಿ ಅಭಿಪ್ರಾಯ ಪಟ್ಟರು. ‘ಟಿ.ವಿ ಮಾಧ್ಯಮದಲ್ಲಿಯೂ ಕೂಡ ಟಿಆರ್ಪಿ ಹೆಚ್ಚು ಇರುವವರಿಗೆ ಹೆಚ್ಚು ಜಾಹೀರಾತು ಸಿಗುತ್ತದೆ. ಟಿಆರ್ಪಿ ಕಡಿಮೆ ಇದ್ದರೆ ಕಡಿಮೆ ದರದ ಜಾಹೀರಾತು ಸಿಗುತ್ತದೆ. ಇಂದು ನಾವು ಆಡಳಿತ ನಡೆಸುತ್ತಿದ್ದೇವೆ. ಹಾಗಾಗಿ ನಮಗೆ ಹೆಚ್ಚು ದೇಣಿಗೆ ಸಿಕ್ಕಿದೆ. ನಾಳೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೆ, ಅದು ಹೆಚ್ಚು ದೇಣಿಗೆ ಪಡೆಯುತ್ತದೆ’ ಎಂದು ಬಿಜೆಪಿ ಚುನಾವಣಾ ಬಾಂಡ್ ಗಳ ಮೂಲಕ ಹೆಚ್ಚು ದೇಣಿಗೆ ಪಡೆದಿದ್ದನ್ನು ಅವರು ಸಮರ್ಥಿಸಿಕೊಂಡರು.